ರಸ್ತೆ ಅಪಘಾತದ ಸಾವುಗಳಿಗೆ ಕೊನೆ ಯಾವಾಗ?

ಸಾಂದರ್ಭಿಕ ಚಿತ್ರ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಇತ್ತೀಚೆಗೆ ಒಂದಾದ ಮೇಲೆ ಇನ್ನೊಂದರಂತೆ ರಸ್ತೆ ಅಪಘಾತಗಳು ಸಂಭವಿಸುತ್ತಲೇ ಇವೆ. ಜನರು ಸಾಯುತ್ತಲೇ ಇದ್ದಾರೆ. ಸರಕಾರ ಎಷ್ಟೇ ಕಟ್ಟುನಿಟ್ಟಿನ ಕಾನೂನುಗಳನ್ನು ಮಾಡಿದರೂ ಸುರಕ್ಷಾ ನಿಯಮಗಳ ಉಲ್ಲಂಘನೆ ಮಾಡಿ ವಾಹನಗಳನ್ನು ಓಡಿಸುತ್ತಿರುವುದರಿಂದ ದುರಂತಗಳು ಸಂಭವಿಸುತ್ತಲೇ ಇವೆ. ಕಳೆದ ವಾರ ತೆಲಂಗಾಣದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 19 ಜನ ಸಾವಿಗೀಡಾದರು. ರಾಜಸ್ಥಾನದಲ್ಲಿ ಎರಡು ಭೀಕರ ಅಪಘಾತಗಳಲ್ಲಿ 29 ಜನರು ಅಸು ನೀಗಿದರು.ಅನೇಕ ದುರಂತಗಳಿಗೆ ಮದ್ಯ ಸೇವನೆ ಮಾಡಿ ಅಡ್ಡಾದಿಡ್ಡಿ ವಾಹನವನ್ನು ಓಡಿಸುವುದೇ ಕಾರಣವಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ರಾತ್ರಿ ವೇಳೆ ಸಂಚರಿಸುವ ಸ್ಲೀಪರ್ ಬಸ್ಸುಗಳು ಇತ್ತೀಚೆಗೆ ಹೆಚ್ಚು ಅಪಘಾತಕ್ಕೀಡಾಗುತ್ತಿವೆ. ಅವುಗಳ ದುರಂತಕ್ಕೆ ಬೇರೆ ಹಲವಾರು ಕಾರಣಗಳಿವೆ. ಅಪಘಾತಗಳನ್ನು ತಪ್ಪಿಸಲು ಸರಕಾರವೇನೋ ರಾಷ್ಟ್ರೀಯ ಹೆದ್ದಾರಿಗಳನ್ನು ಹಾಗೂ ಇತರ ರಸ್ತೆಗಳನ್ನು ಏಕ ಮುಖ ಸಂಚಾರದ ರಸ್ತೆಗಳನ್ನಾಗಿ ಪರಿವರ್ತಿಸಿದ್ದರೂ ಅಪಘಾತಗಳು ಹೆಚ್ಚಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.
ಸರಕಾರ ಏನೇ ಹೇಳಲಿ ಜಾಗತಿಕ ಚಾಲನಾ ಶಿಕ್ಷಣ ಸಮಿತಿಯೊಂದು ನಡೆಸಿದ ಅಧ್ಯಯನದ ಪ್ರಕಾರ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಅಪಾಯಕಾರಿ ರಸ್ತೆಗಳನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ ನಾಲ್ಕನೆಯ ಸ್ಥಾನದಲ್ಲಿದೆ. ಅಧ್ಯಯನ ನಡೆಸಲಾದ ಐವತ್ತಾರು ದೇಶಗಳ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳಲ್ಲಿ ದಕ್ಷಿಣ ಆಫ್ರಿಕಾ, ಥಾಯ್ಲೆಂಡ್ ಮತ್ತು ಅಮೆರಿಕ ದೇಶಗಳಿವೆ. ಅತ್ಯಂತ ಸುರಕ್ಷಿತ ರಸ್ತೆಗಳನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ನಾರ್ವೆ ಮೊದಲ ಸ್ಥಾನದಲ್ಲಿ ಇದೆ. ಜಪಾನ್ ಹಾಗೂ ಸ್ವೀಡನ್ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿ ಇವೆ.
ಹೆಚ್ಚಿನ ರಸ್ತೆ ಅಪಘಾತಗಳಿಗೆ ವಾಹನ ಚಾಲಕರ ಲೋಪ ಅಥವಾ ಅಸುರಕ್ಷಿತ ರಸ್ತೆಗಳು ಕಾರಣಗಳಾಗಿವೆ. ನಮ್ಮ ಮಹಾನಗರಗಳ ಹಾಗೂ ಸಣ್ಣ ಪಟ್ಟಣಗಳ ರಸ್ತೆಗಳ ಕಿತ್ತು ಹೋದ ಡಾಂಬರು, ಅವೈಜ್ಞಾನಿಕ ಜಾಮರ್ಗಳು, ಅಸುರಕ್ಷಿತ ತಿರುವುಗಳು, ಪ್ರಾಣ ಘಾತುಕ ಗುಂಡಿಗಳು ಹೀಗೆ ಹಲವಾರು ಕಾರಣಗಳಿಂದ ಅಪಘಾತಗಳು ಸಂಭವಿಸುತ್ತವೆ. ಇವುಗಳ ಜೊತೆಗೆ ಸಂಚಾರಿ ನಿಯಮಗಳ ಉಲ್ಲಂಘನೆಯೂ ಒಂದು ಕಾರಣವಾಗಿದೆ.
ರಸ್ತೆ ಅಪಘಾತಗಳನ್ನು ತಡೆಯಲು ಯಾಕೆ ಸಾಧ್ಯವಾಗುತ್ತಿಲ್ಲವೆಂದರೆ ಸಂಚಾರ ಪೊಲೀಸ್ ಇಲಾಖೆಯಲ್ಲಿ ಇರುವ ವಿಪರೀತ ಲಂಚದ ಹಾವಳಿ. ಯಾವ ಚಾಲಕನೇ ತಪ್ಪು ಮಾಡಿದರೂ ಅದರಲ್ಲೂ ಪ್ರಭಾವಿಯಾಗಿದ್ದರೆ ಹಣ ತೆಗೆದುಕೊಂಡು ಬಿಟ್ಟು ಬಿಡಲಾಗುತ್ತಿದೆ. ಇದರಿಂದಾಗಿ ಅಮಾಯಕ ಜನರು ಸಾಯುತ್ತಿದ್ದಾರೆ. 2024ರಲ್ಲಿ ದೇಶದಲ್ಲಿ 1.68 ಲಕ್ಷ ಜನರು ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಪೈಕಿ 30 ಸಾವಿರ ಜನರು ಹೆಲ್ಮೆಟ್ ಧರಿಸದ ಕಾರಣಕ್ಕಾಗಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. 2023ರಲ್ಲಿ 1.8 ಲಕ್ಷ ಮಂದಿ ಅಪಘಾತದಲ್ಲಿ ಅಸು ನೀಗಿದ್ದರು.
ಅದರಲ್ಲೂ ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ದೇಶದಲ್ಲಿ ಅಗತ್ಯಕ್ಕಿಂತ ಹೆಚ್ಚು ವಾಹನಗಳಿರುವುದು ಅಪಘಾತಗಳಿಗೆ ಇನ್ನೊಂದು ಮುಖ್ಯ ಕಾರಣವಾಗಿದೆ. ಇಂದು ಮೂವರು ಸದಸ್ಯರನ್ನು ಹೊಂದಿರುವ ಒಂದು ಕುಟುಂಬದಲ್ಲಿ ನಾಲ್ಕು ಕಾರುಗಳು ಹಾಗೂ ಐದು ದ್ವಿಚಕ್ರ ವಾಹನಗಳು ಇರುತ್ತವೆ. ಐದಾರು ಜನರು ಕುಳಿತುಕೊಳ್ಳುವ ಒಂದು ದೊಡ್ಡ ವಾಹನದಲ್ಲಿ ಒಬ್ಬರೇ ರಸ್ತೆಯಲ್ಲಿ ಓಡಾಡುತ್ತಿರುತ್ತಾರೆ. ಬೆಂಗಳೂರಿನಂಥ ಒಂದೂವರೆ ಕೋಟಿ ಜನಸಂಖ್ಯೆ ಇರುವ ಮಹಾ ನಗರದಲ್ಲಿ ಇದರಿಂದ ವಾಹನಗಳ ದಟ್ಟಣೆ ಉಂಟಾಗಿ ಅಪಘಾತಗಳು ಸಂಭವಿಸುತ್ತವೆ.
ಹಾಗಾಗಿ ಅಪಘಾತಗಳನ್ನು ತಡೆಯಬೇಕೆಂದರೆ ಸರಕಾರ ಬರೀ ಕಾನೂನುಗಳನ್ನು ರಚಿಸಿದರೆ ಸಾಲದು, ವಾಹನಖರೀದಿ, ಮಾರಾಟದ ವಹಿವಾಟಿನ ಮೇಲೆ ನಿಯಂತ್ರಣ ಹೇರಬೇಕು. ಆಟೊಮೊಬೈಲ್ ಉದ್ದಿಮೆಗಳಿಗೆ ಪ್ರೋತ್ಸಾಹ ಕೊಡುವ ನೀತಿಗಿಂತ ಜನಸಾಮಾನ್ಯರ ಪ್ರಾಣ ರಕ್ಷಣೆ ಮುಖ್ಯ ಎಂಬುದನ್ನು ಸರಕಾರ ತಿಳಿದುಕೊಳ್ಳಬೇಕು. ಇದನ್ನು ನಿಯಂತ್ರಿಸಲು ಸಾರ್ವಜನಿಕ ಸಾರಿಗೆಯನ್ನು ಜನಪ್ರಿಯ ಗೊಳಿಸಬೇಕು. ಆಗ ಮಾತ್ರ ಅಪಘಾತಗಳನ್ನು ತಡೆಯಲು ಸಾಧ್ಯ.
ಖಾಸಗಿ ವಾಹನಗಳ ವಿಪರೀತ ಹೆಚ್ಚಳದಿಂದ ರಸ್ತೆ ಅಪಘಾತಗಳು ಮತ್ತು ಸಾವುಗಳು ಒಂದೆಡೆಯಾದರೆ ಇನ್ನೊಂದೆಡೆ ನಮ್ಮ ಮಹಾನಗರಗಳಲ್ಲಿ ಮಾತ್ರವಲ್ಲ, ಸಣ್ಣಪುಟ್ಟ ನಗರಗಳಲ್ಲೂ ವಿಪರೀತ ವಾಹನಗಳ ದಟ್ಟಣೆಯಿಂದಾಗಿ ತೀವ್ರ ಸ್ವರೂಪದ ವಾಯು ಮಾಲಿನ್ಯ ಉಂಟಾಗುತ್ತಿದೆ. ಉಸಿರಾಡಲು ಗಾಳಿಯೂ ಸಿಗದಂತಹ ಇಂದಿನ ಆತಂಕದ ದಿನಗಳಲ್ಲಿ ವಾಹನಗಳ ಓಡಾಟದ ದುಷ್ಪರಿಣಾಮದ ಬಗ್ಗೆ ಅಧ್ಯಯನ ನಡೆಸಿ ಕ್ರಮ ಕೈಗೊಳ್ಳಬೇಕಾಗಿದೆ. ವಾಯು ಮಾಲಿನ್ಯದಿಂದ ಪ್ರತಿವರ್ಷ ಜಗತ್ತಿನಲ್ಲಿ ಎಪ್ಪತ್ತು ಲಕ್ಷ ಜನರು ಸಾವಿಗೀಡಾಗುತ್ತಿದ್ದಾರೆ. ಇದರಲ್ಲಿ ಆಫ್ರಿಕಾ ಮತ್ತು ಏಶ್ಯದ ಜನರ ಸಂಖ್ಯೆ ಹೆಚ್ಚಾಗಿದೆ. ವಾಯುಮಾಲಿನ್ಯದ ಪರಿಣಾಮವಾಗಿ ಶ್ವಾಸಕೋಶದ ಕಾಯಿಲೆಗಳು ಹೆಚ್ಚಾಗುತ್ತಿವೆ. ಇದಕ್ಕೆ ಅತ್ಯಂತ ಜ್ವಲಂತ ಉದಾಹರಣೆಯೆಂದರೆ ದೇಶದ ರಾಜಧಾನಿ ದಿಲ್ಲಿಯಲ್ಲಿ ಉಸಿರಾಡುವ ಗಾಳಿಯೂ ಮಲಿನಗೊಂಡು ಆಗಾಗ ವಾಹನಗಳ ಸಂಚಾರದ ಮೇಲೆ ನಿರ್ಬಂಧವನ್ನು ಹೇರಬೇಕಾಗಿ ಬಂದಿದೆ. ಬೆಂಗಳೂರು ಕೂಡ ಇದಕ್ಕೆ ಹೊರತಾಗಿಲ್ಲ. ಬೆಂಗಳೂರು ದೇಶದ ಎರಡನೇ ಅತ್ಯಂತ ಕಲುಷಿತ ನಗರ ಎಂದು ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿ ಹೇಳಿದೆ.
ರಸ್ತೆ ಅಪಘಾತಗಳಿಗೆ ಇನ್ನೂ ಒಂದು ಕಾರಣವೆಂದರೆ ವಿಶ್ರಾಂತಿ ಇಲ್ಲದೇ ವಾಹನವನ್ನು ಚಾಲನೆ ಮಾಡುವುದು. ಅನೇಕ ವಾಹನಗಳಲ್ಲಿ ಚಾಲಕರು ಹಗಲೂ ರಾತ್ರಿ ಅವಿಶ್ರಾಂತವಾಗಿ ದುಡಿಯುವ ಪರಿಣಾಮವಾಗಿ ದುರಂತಗಳು ಸಂಭವಿಸುತ್ತವೆ. ಹೀಗಾಗದಂತೆ ನೋಡಿಕೊಳ್ಳುವಲ್ಲಿ ಸರಕಾರದ ಮಾತ್ರವಲ್ಲ, ಸಾರ್ವಜನಿಕರ ಪಾತ್ರವೂ ಮುಖ್ಯವಾಗಿದೆ.
ಇವೆಲ್ಲದರ ಜೊತೆಗೆ ರಸ್ತೆಗಳ ಗುಣಮಟ್ಟವನ್ನು ಸುಧಾರಿಸಲು ವಿಶೇಷ ಆದ್ಯತೆಯನ್ನು ನೀಡಬೇಕಾಗಿದೆ. ಅಭಿವೃದ್ಧಿಯಲ್ಲಿ ಮೇಲ್ಪಂಕ್ತಿಯಲ್ಲಿರಬೇಕಾದ ಬೆಂಗಳೂರಿನಂತಹ ನಗರಗಳು ರಸ್ತೆ ಗುಂಡಿಗಳಿಂದಾಗಿ ಮಾರಣಾಂತಿಕ ಸಾವುಗಳಿಗೆ ಕುಖ್ಯಾತಿ ಪಡೆಯುತ್ತಿರುವುದು ಹೆಗ್ಗಳಿಕೆಯೇ?
ಚಾಲಕರ, ಸಾರ್ವಜನಿಕರ ಜೀವ ಅಮೂಲ್ಯವಾಗಿದೆ. ಸರಕಾರ ಮತ್ತು ಸಾರ್ವಜನಿಕರು ಕೂಡಾ ಈ ಬಗ್ಗೆ ಸೂಕ್ತ ಎಚ್ಚರವನ್ನು ವಹಿಸಬೇಕಾಗಿದೆ.







