ಆರೆಸ್ಸೆಸ್ ಗ್ರಹಣದಿಂದ ಕರಾವಳಿಯ ಕಾಂಗ್ರೆಸ್ ಮುಕ್ತವಾಗುವುದೆಂದು?

PC: PTI
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
‘‘ದೇಶ, ಸಂವಿಧಾನ, ಪ್ರಜಾಸತ್ತೆಯ ಬಗ್ಗೆ ಆರೆಸ್ಸೆಸ್ಗಿರುವ ಬದ್ಧತೆ’ಯ ಕುರಿತಂತೆ ಸಚಿವ ಪ್ರಿಯಾಂಕ್ ಖರ್ಗೆಯವರು ಗಂಭೀರ ಪ್ರಶ್ನೆಗಳನ್ನು ಎತ್ತಿರುವ ಬೆನ್ನಿಗೇ, ಕರಾವಳಿಯಲ್ಲಿ ಆರೆಸ್ಸೆಸ್ ಜೊತೆಗೆ ಅನೈತಿಕ ಸಂಬಂಧವನ್ನು ಇಟ್ಟುಕೊಂಡಿರುವ ಕಾಂಗ್ರೆಸ್ನಾಯಕರ ಹೆಸರುಗಳು ಚರ್ಚೆಗೊಳಗಾಗುತ್ತಿವೆ. ಕರಾವಳಿಯಲ್ಲಿ ಬಿಜೆಪಿ ತನ್ನ ಬೇರನ್ನು ಆಳಕ್ಕಿಳಿಸಲು ಆರೆಸ್ಸೆಸ್ ಜೊತೆಗೆ ಕಾಂಗ್ರೆಸ್ ನಾಯಕರು ಹೊಂದಿರುವ ಮೃದು ನಿಲುವು ಕಾರಣ ಎಂದು ಹಲವು ಹಿರಿಯ ಪತ್ರಕರ್ತರು, ಕಾಂಗ್ರೆಸ್ನ ಹಿರಿಯ ಮುಖಂಡರು ಆರೋಪಿಸುತ್ತಿದ್ದಾರೆ. ಧರ್ಮ, ದೇಶಭಕ್ತಿಯನ್ನು ಮುಂದಿಟ್ಟು ಆರೆಸ್ಸೆಸ್ ಹೇಗೆ ಕಾಂಗ್ರೆಸ್ ನಾಯಕರನ್ನೂ ತಾನು ತೋಡಿದ ಖೆಡ್ಡಾಕ್ಕೆ ಕೆಡವುತ್ತಾ ಬಂದಿದೆ ಎನ್ನುವುದನ್ನು ಚರ್ಚಿಸಲು ಇದು ಸರಿಯಾದ ಸಂದರ್ಭವಾಗಿದೆ. ನೋಂದಣಿಯಾಗದ ದೇಶದ ಅತಿ ದೊಡ್ಡ ಸರಕಾರೇತರ ಸಂಸ್ಥೆಯೊಂದು ತನ್ನ ಆರ್ಥಿಕ ವ್ಯವಹಾರಗಳನ್ನು ಹೇಗೆ ನಿಭಾಯಿಸುತ್ತಾ ಬಂದಿದೆ? ಎಂಬ ಸಚಿವ ಖರ್ಗೆ ಅವರ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗದೇ ಆರೆಸ್ಸೆಸ್ ಮತ್ತು ಬಿಜೆಪಿಯ ಹಿರಿಯ ಮುಖಂಡರು ತಡವರಿಸುತ್ತಿದ್ದಾರೆ. ಇಂತಹದೊಂದು ಪ್ರಶ್ನೆಯನ್ನು ಕೇಳುವುದಕ್ಕೆ ಕಾಂಗ್ರೆಸ್ ಪಕ್ಷವು ಇಷ್ಟು ತಡ ಮಾಡಿದ್ದು ಯಾಕೆ ? ಎನ್ನುವ ಪ್ರಶ್ನೆಯೂ ಇದರ ಜೊತೆ ಜೊತೆಗೇ ಎದ್ದಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗಲೇ ಕಾಂಗ್ರೆಸ್ ಈ ಪ್ರಶ್ನೆಯನ್ನು ಕೇಳಿದ್ದರೆ, ಇಂದು ಆರೆಸ್ಸೆಸ್ ಸಂಘಟನೆಯ ಹಲವು ಮುಖಂಡರು ಆರ್ಥಿಕ ಅಕ್ರಮಗಳ ಹೆಸರಿನಲ್ಲಿ ಜೈಲು ಸೇರಿರುತ್ತಿದ್ದರು. ಆದರೆ ಆಗ ಧೈರ್ಯವನ್ನು ಪ್ರದರ್ಶಿಸದೆ, ಆರೆಸ್ಸೆಸ್ನ ಜೊತೆಗೆ ಮೃದು ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಕಾಂಗ್ರೆಸ್ ಪಕ್ಷ ತನ್ನ ಪಾದ ಬುಡಕ್ಕೆ ತಾನೇ ಚಪ್ಪಡಿ ಕಲ್ಲು ಎಳೆದುಕೊಂಡಿತು. ಆರೆಸ್ಸೆಸ್ ತೋಡಿರುವ ಹಳ್ಳಕ್ಕೆ ಬಿದ್ದಿರುವ ಕಾಂಗ್ರೆಸ್ ನಾಯಕರನ್ನು ಮೊದಲು ಮೇಲೆತ್ತುವ ಕೆಲಸವಾಗದೇ ಆ ಸಂಘಟನೆಯ ವಿರುದ್ಧ ಅದೆಷ್ಟು ಹೇಳಿಕೆಗಳನ್ನು ನೀಡಿದರೂ ಗಾಳಿಯೊಂದಿಗೆ ಗುದ್ದಾಡಿದಂತೆ ಎನ್ನುವುದು ಕಾಂಗ್ರೆಸ್ ನಾಯಕರಿಗೆ ಇನ್ನಾದರೂ ಅರ್ಥವಾಗಬೇಕಾಗಿದೆ. ಆರೆಸ್ಸೆಸ್ ಯಾಕೆ ಹಿಂದೂ ಧರ್ಮವನ್ನು ಪ್ರತಿನಿಧಿಸುವುದಿಲ್ಲ? ಆರೆಸ್ಸೆಸ್ ಹೇಗೆ ಈ ದೇಶದ ಸಂವಿಧಾನಕ್ಕೆ ಮಾರಕವಾಗಿದೆ? ಆರೆಸ್ಸೆಸ್ ಹೇಗೆ ದೇಶವಿರೋಧಿಯಾಗಿದೆ ಎನ್ನುವುದನ್ನು ವಿವರಿಸುವ ಕೆಲಸ ಕಾಂಗ್ರೆಸ್ನೊಳಗೆ ಕರಾವಳಿಯಿಂದಲೇ ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಆರೆಸ್ಸೆಸ್ನೊಂದಿಗೆ ಅನೈತಿಕ ಸಂಬಂಧವನ್ನು ಇಟ್ಟುಕೊಂಡಿರುವ ಕಾಂಗ್ರೆಸ್ ನಾಯಕರಿಗೆ ಬಲವಾದ ಎಚ್ಚರಿಕೆಯನ್ನು ಹೈಕಮಾಂಡ್ ನೀಡಬೇಕಾಗಿದೆ ಮಾತ್ರವಲ್ಲ, ಆರೆಸ್ಸೆಸ್ ಜೊತೆಗೆ ನೇರ, ಪರೋಕ್ಷ ಸಂಬಂಧ ಇಟ್ಟುಕೊಂಡ ನಾಯಕರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡುವುದನ್ನು ಇನ್ನಾದರೂ ನಿಲ್ಲಿಸಬೇಕಾಗಿದೆ.
ಆರೆಸ್ಸೆಸ್ ಧಾರ್ಮಿಕ, ಸಾಮಾಜಿಕ ಅಥವಾ ಸಾಂಸ್ಕೃತಿಕ ಸಂಘಟನೆಯಲ್ಲ, ಅದೊಂದು ರಾಜಕೀಯ ಸಂಘಟನೆ ಎನ್ನುವುದನ್ನು ಮೊದಲು ಕರಾವಳಿಯ ಕೆಲವು ಕಾಂಗ್ರೆಸ್ ನಾಯಕರಿಗೆ ಅರ್ಥ ಮಾಡಿಸಿಕೊಡಬೇಕಾಗಿದೆ. ಬಿಜೆಪಿ ಅದರ ರಾಜಕೀಯ ಮುಖ. ಸಂವಿಧಾನದ ಆಶಯಗಳ ಜೊತೆಗೆ ಭಿನ್ನಾಭಿಪ್ರಾಯವಿರುವ ಒಂದು ತತ್ವ ಸಿದ್ಧಾಂತದ ತಳಹದಿಯಲ್ಲಿ ಆರಸ್ಸೆಸ್ ಸಂಘಟಿತವಾಗಿದೆ. ಅದರೊಂದಿಗೆ ಮಾಡಿಕೊಳ್ಳುವ ಯಾವುದೇ ಹೊಂದಾಣಿಕೆಯ ಅಂತಿಮ ಲಾಭವನ್ನು ಬಿಜೆಪಿಯೇ ತನ್ನದಾಗಿಸಿಕೊಳ್ಳುತ್ತದೆ. ಆರೆಸ್ಸೆಸ್ನೊಳಗಿರುವ ಯಾವುದೇ ನಾಯಕರು ಹಿಂದೂ ಧರ್ಮದೊಳಗಿರುವ ಅಸ್ಪಶ್ಯತೆ, ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿದವರಲ್ಲ. ಗೋಳ್ವಾಲ್ಕರ್ ಸೇರಿದಂತೆ ಆರೆಸ್ಸೆಸ್ ಮುಖಂಡರು ಜಾತಿ ವ್ಯವಸ್ಥೆಯನ್ನು ಸಮರ್ಥಿಸಿಕೊಂಡು ಬಂದವರು. ಸ್ವಾಮಿ ವಿವೇಕಾನಂದ, ಮಹಾತ್ಮಾಗಾಂಧೀಜಿ, ನಾರಾಯಣ ಗುರುಗಳಂತಹ ಹಿಂದೂ ನಾಯಕರು ಜಾತಿ ವ್ಯವಸ್ಥೆಯ ವಿರುದ್ಧ, ಅಸ್ಪಶ್ಯತೆಯ ವಿರುದ್ಧ ಹೋರಾಡುತ್ತಾ ಹಿಂದೂ ಧರ್ಮದಲ್ಲಿ ಸುಧಾರಣೆಯನ್ನು ತಂದರು. ತಳಸ್ತರದ ಹಿಂದೂಗಳ ಶಿಕ್ಷಣ, ಆರೋಗ್ಯ, ಅಭಿವೃದ್ಧಿಯ ಬಗ್ಗೆ ಯೋಚನೆಗಳನ್ನು ಮಾಡಿದರು. ಆರೆಸ್ಸೆಸ್ ಮುಖಂಡರು ಅಸ್ಪಶ್ಯತೆಯನ್ನು , ಜಾತೀಯತೆಯನ್ನು ಖಂಡಿಸಿದ ಒಂದೇ ಒಂದು ಉದಾಹರಣೆಯಿಲ್ಲ. ಆರೆಸ್ಸೆಸ್ ಹಿಂದುತ್ವದ ಹೆಸರಿನಲ್ಲಿ ಬ್ರಾಹ್ಮಣ್ಯದ ಶ್ರೇಷ್ಠತೆಯನ್ನು ಉಳಿಸುವುದಕ್ಕಾಗಿಯೇ ಸಂಘಟಿತವಾಗಿರುವ ಸಂಘಟನೆಯಾಗಿದೆ. ಆರೆಸ್ಸೆಸ್ ಜೊತೆಗೆ ಪರೋಕ್ಷವಾಗಿಯಾಗಲಿ, ನೇರವಾಗಿಯಾಗಲಿ ಕೈಜೋಡಿಸುವ ಮೂಲಕ ಕಾಂಗ್ರೆಸ್ ಪಕ್ಷವು ಕರಾವಳಿಯಲ್ಲಾಗಲಿ, ದೇಶದ ಯಾವುದೇ ಮೂಲೆಯಲ್ಲಾಗಲಿ ಒಂದೇ ಒಂದು ಮತವನ್ನು ತನ್ನ ಜೋಳಿಗೆಯೊಳಗೆ ತುಂಬಿಕೊಳ್ಳಲು ಸಾಧ್ಯವಿಲ್ಲ. ಆರೆಸ್ಸೆಸ್ ಈ ದೇಶದ ಬಹುಸಂಖ್ಯಾತ ಹಿಂದೂಗಳನ್ನು ಪ್ರತಿನಿಧಿಸುವುದಿಲ್ಲ ಎನ್ನುವುದು ಅರ್ಥವಾದ ದಿನ ಕರಾವಳಿ ಕಾಂಗ್ರೆಸ್ಗೆ ಕವಿದ ಗ್ರಹಣ ಮುಕ್ತಾಯವಾಗುತ್ತದೆ. ಸ್ವಾಮಿ ವಿವೇಕಾನಂದ, ಗಾಂಧೀಜಿ, ನಾರಾಯಣ ಗುರುಗಳು ಪ್ರತಿಪಾದಿಸಿರುವ ಹಿಂದೂ ಧರ್ಮದ ಚಿಂತನೆಗಳ ಮಾರ್ಗದರ್ಶನದಲ್ಲಿ ಮುನ್ನಡೆದಾಗ ಮಾತ್ರ ಕರಾವಳಿಯ ಕಾಂಗ್ರೆಸ್ ನಾಯಕರಿಗೆ ಆರೆಸ್ಸೆಸ್ನ್ನು ಎದುರಿಸುವ ಸ್ಪಷ್ಟ ದಾರಿಯೊಂದು ತೆರೆದುಕೊಳ್ಳಬಹುದು.
ಹಿಂದೂಧರ್ಮವನ್ನು ಆರೆಸ್ಸೆಸ್ ಪ್ರತಿನಿಧಿಸುತ್ತದೆ ಎನ್ನುವ ತಪ್ಪು ತಿಳುವಳಿಕೆಯೇ, ಇಂದು ಕರಾವಳಿ ಕಾಂಗ್ರೆಸ್ನ ಹಲವು ಮುಖಂಡರು ಸಂದರ್ಭ ಬಂದಾಗ ಆರೆಸ್ಸೆಸ್ ಮತ್ತು ಅದರ ಸೋದರ ಸಂಘಟನೆಗಳೊಂದಿಗೆ ಮೃದುವಾಗಿ ಗುರುತಿಸಿಕೊಳ್ಳಲು ಮುಖ್ಯ ಕಾರಣ. ಈ ಹಿಂದೆ ಆರೆಸ್ಸೆಸ್ನೊಂದಿಗೆ ಗುರುತಿಸಿಕೊಂಡಿದ್ದ ಹಲವು ನಾಯಕರಿಗೆ ಕರಾವಳಿಯಲ್ಲಿ ಕಾಂಗ್ರೆಸ್ ಟಿಕೆಟ್ ನೀಡಿದೆ. ಆರೆಸ್ಸೆಸ್ ಸೇರಿದಂತೆ ಸಂಘಪರಿವಾರದಿಂದ ಹೊರ ಬಂದಿರುವ ಈ ನಾಯಕರು, ಮಾನಸಿಕವಾಗಿ ಇನ್ನೂ ಅದರ ಗುಲಾಮರಾಗಿಯೇ ಇದ್ದಾರೆ ಎನ್ನುವುದು ಕಹಿ ಸತ್ಯವಾಗಿದೆ. ವಿಶ್ವ ಹಿಂದೂ ಪರಿಷತ್ನ ರಾಜ್ಯ ಮುಖಂಡರೊಬ್ಬರು ಪುತ್ತೂರಿಗೆ ಬಂದಾಗ ಕಾಂಗ್ರೆಸ್ನ ಶಾಸಕರೊಬ್ಬರು ಅವರ ಪಾದಕ್ಕೆ ಬಿದ್ದು ನಮಸ್ಕರಿಸಿದರು. ಅಲ್ಲಿನ ಕಚೇರಿಗೂ ಭೇಟಿ ನೀಡಿದರು. ಆದರೆ ಆ ಕಚೇರಿಯ ರಾಜಕೀಯ ಅಜೆಂಡಾ ಏನು ಎನ್ನುವುದು ಎಲ್ಲರಿಗೂ ಗೊತ್ತಿರುವುದೇ ಆಗಿದೆ. ಶಾಸಕರು ಪಾದಕ್ಕೆ ಬಿದ್ದರು ಎಂದು ಒಬ್ಬನೇ ಒಬ್ಬ ಅಲ್ಲಿರುವ ಕಾರ್ಯಕರ್ತ ಕಾಂಗ್ರೆಸ್ಗೆ ಮತ ನೀಡುವುದಿಲ್ಲ. ಶಾಸಕರ ಈ ಕೃತ್ಯದಿಂದ ಕಾಂಗ್ರೆಸ್ ಒಂದಿಷ್ಟು ಮತಗಳನ್ನು ಕಳೆದುಕೊಂಡಿದೆಯೇ ಹೊರತು ಪಡೆದುಕೊಂಡಿಲ್ಲ. ಆರೆಸ್ಸೆಸ್ನಿಂದ ಹೊರ ಬಂದ ಹಲವು ನಾಯಕರು ಕಾಂಗ್ರೆಸ್ ಸ್ವೀಕರಿಸಿದ್ದಾರೆ. ಆದರೆ ಅವರಲ್ಲಿ ಆರೆಸ್ಸೆಸ್ ವಿರುದ್ಧ ಸ್ಪಷ್ಟ ಹೇಳಿಕೆಗಳನ್ನು ನೀಡಲು ಎಷ್ಟು ಮಂದಿ ಸಿದ್ಧರಿದ್ದಾರೆ? ಬದಲಿಗೆ, ಮಾನಸಿಕವಾಗಿ ನಾನಿನ್ನೂ ಆರೆಸ್ಸೆಸ್ ಎಂದು ಹೆಮ್ಮೆಯಿಂದಲೇ ಹೇಳುತ್ತಾ ಕಾಂಗ್ರೆಸ್ನೊಳಗಿನ ಸಕಲ ಸವಲತ್ತುಗಳನ್ನು ಅನುಭವಿಸುತ್ತಿದ್ದಾರೆ. ಇಂದಿಗೂ ‘ಊಟ ಕೌರವರಲ್ಲಿ, ಪಕ್ಷ ಪಾಂಡವರಲ್ಲಿ’ ಎಂಬಂತೆ ಕಾಂಗ್ರೆಸ್ನೊಳಗಿದ್ದೇ ಆರೆಸ್ಸೆಸಿಗನಾಗಿ ಗುರುತಿಸಿಕೊಳ್ಳುತ್ತಿರುವ ನಾಯಕರ ದಂಡು ದೊಡ್ಡದಿದೆ. ಕರಾವಳಿಯಲ್ಲಿ ಬಿಜೆಪಿಗೆ ಗೆಲುವು ಸುಲಭವಾಗುತ್ತಿರುವುದು ಕಾಂಗ್ರೆಸ್ನೊಳಗಿರುವ ಈ ಮಾನಸಿಕ ಆರೆಸ್ಸೆಸ್ ಗುಲಾಮರಿಂದ.
ಇಂದು ಶಾಲಾ ಕಾಲೇಜುಗಳಲ್ಲಿ ಎನ್ಎಸ್ಎಸ್, ಎನ್ಸಿಸಿ, ಸ್ಕೌಟ್ನಂತಹ ಸಂಘಟನೆಗಳಿಗೆ ಪ್ರೋತ್ಸಾಹ ನೀಡಬೇಕು ಮಾತ್ರವಲ್ಲ, ಆ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣಕ್ಕೆ ಕಾಂಗ್ರೆಸ್ ನಾಯಕರು ಹೆಚ್ಚು ಹೆಚ್ಚು ಪ್ರೋತ್ಸಾಹಗಳನ್ನು ನೀಡಬೇಕು. ಆರೆಸ್ಸೆಸ್ ಸ್ಥಾಪಕರೆಂದು ಗುರುತಿಸಿಕೊಂಡವರು ಜಾತಿ ವ್ಯವಸ್ಥೆಯನ್ನು ಸಮರ್ಥಿಸಿಕೊಂಡು ನೀಡಿದ ಹೇಳಿಕೆಗಳ ಬಗ್ಗೆ , ಸಂವಿಧಾನದ ವಿರುದ್ಧ, ರಾಷ್ಟ್ರ ಧ್ವಜದ ವಿರುದ್ಧ ವ್ಯಕ್ತಪಡಿಸಿದ ಅಸಮಾಧಾನಗಳ ಬಗ್ಗೆ ಯುವಕರಲ್ಲಿ ಜಾಗೃತಿಯನ್ನು ಮೂಡಿಸಿ ಅದರ ಜೊತೆಗೆ ಅಂತರ ಕಾಪಾಡಿಕೊಳ್ಳುವಂತೆ ಮಾಡಬೇಕು. ಆರೆಸ್ಸೆಸ್ ಪ್ರತಿಪಾದಿಸುವ ಹಿಂದೂ ಧರ್ಮವು ಸ್ವಾಮಿ ವಿವೇಕಾನಂದರ, ನಾರಾಯಣಗುರುಗಳು ಪ್ರತಿಪಾದಿಸಿದ ಹಿಂದೂ ಧರ್ಮವಲ್ಲ ಎನ್ನುವುದನ್ನು ಯುವಕರಿಗೆ ತಿಳಿಸಿಕೊಡಬೇಕು. ಇದರ ಜೊತೆಜೊತೆಗೇ ಆರೆಸ್ಸೆಸ್ನ ಆರ್ಥಿಕ ಅವ್ಯವಹಾರಗಳನ್ನು ಜನರ ಮುಂದಿಟ್ಟು ಅದರ ಮುಖವಾಡವನ್ನು ಬಯಲು ಮಾಡಬೇಕು. ಹಿಂದೂ ಧರ್ಮದ ಮರೆಯಲ್ಲಿ ರಕ್ಷಣೆ ಪಡೆಯುತ್ತಿರುವ ಸಂಘಪರಿವಾರದ ಕ್ರಿಮಿನಲ್ಗಳು, ರೌಡಿ ಶೀಟರ್ಗಳ
ಮೇಲೆ ಕ್ರಮ ತೆಗೆದುಕೊಳ್ಳಲು ಹಿಂಜರಿಯಬಾರದು. ನೀಲಿ ನರಿಯ ಕತೆಯೊಂದು ಪಂಚತಂತ್ರದಲ್ಲಿ ಬರುತ್ತದೆ. ಆರೆಸ್ಸೆಸ್ ಎನ್ನುವುದು ಕೇಸರಿ ಬಣ್ಣದ ನರಿ. ಜೋರು ಮಳೆ ಸುರಿದಾಗ ಈ ನರಿಯ ನಿಜ ಬಣ್ಣ ಬಯಲಾಗುತ್ತದೆ. ಈ ನರಿಗೆ ಮೋಸ ಹೋದ ಕರಾವಳಿ ಕಾಂಗ್ರೆಸ್ ನಾಯಕರು ಎಚ್ಚೆತ್ತುಕೊಳ್ಳುವುದಕ್ಕೆ ಇದು ಸಕಾಲ.







