ವರದಕ್ಷಿಣೆ ಎನ್ನುವ ದರೋಡೆಗೆ ಕಡಿವಾಣ ಬೀಳುವುದು ಎಂದು?

ಸಾಂದರ್ಭಿಕ ಚಿತ್ರ (AI)
ಮಧ್ಯ ಪ್ರದೇಶದ ಭೋಪಾಲ್ ನಿವಾಸಿ ತ್ವಿಶಾ ಶರ್ಮಾ ಅವರ ಆತ್ಮಹತ್ಯೆ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆಯೇ ದೇಶದಲ್ಲಿ ವರದಕ್ಷಿಣೆಯ ವಿರುದ್ಧದ ಆಕ್ರೋಶ ಮತ್ತೆ ಮುನ್ನೆಲೆಗೆ ಬಂದಿದೆ. ತ್ವಿಶಾ ಶರ್ಮಾ ಪ್ರಕರಣದ ಆರೋಪಿ ಒಬ್ಬ ನ್ಯಾಯವಾದಿಯಾಗಿರುವುದು ಇನ್ನೊಂದು ವಿಪರ್ಯಾಸವಾಗಿದೆ. ತ್ವಿಶಾ ಶರ್ಮಾ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಹತ್ತು ದಿನಗಳ ಬಳಿಕ ಆರೋಪಿ ಸಮರ್ಥ್ ಸಿಂಗ್ನನ್ನು ಪೊಲೀಸರು ಬಂಧಿಸಿದ್ದಾರೆ. ಈವರೆಗೆ ಭಾರತದಲ್ಲಿ ಗ್ರಾಮೀಣ ಪ್ರದೇಶವನ್ನು ಅಥವಾ ಅನಕ್ಷರಸ್ಥರನ್ನು ಗುರಿಯಾಗಿಸಿಕೊಂಡು ವರದಕ್ಷಿಣೆ ಪಿಡುಗು ಚರ್ಚೆಯಾಗುತ್ತಿತ್ತು. ಆದರೆ ಇತ್ತೀಚೆಗೆ ಬೆಳಕಿಗೆ ಬಂದ ಹಲವು ವರದಕ್ಷಿಣೆ ಸಾವು ಪ್ರಕರಣಗಳನ್ನು ಅವಲೋಕಿಸಿದರೆ, ವರದಕ್ಷಿಣೆಯೆನ್ನುವುದು ಹತ್ತು ಹಲವು ರೂಪಗಳಲ್ಲಿ ನಮ್ಮ ಕುಟುಂಬ ವ್ಯವಸ್ಥೆಯನ್ನು ಇನ್ನಷ್ಟು ಬಲವಾಗಿ ಸುತ್ತಿಕೊಳ್ಳುತ್ತಿರುವುದು ಕಂಡು ಬರುತ್ತದೆ. ವಿದ್ಯೆ, ಕಾನೂನಿನ ಕೊರತೆಯೇ ವರದಕ್ಷಿಣೆಗೆ ಕಾರಣ ಎಂದು ಈ ಹಿಂದೆ ಭಾವಿಸಲಾಗಿತ್ತು. ಆದರೆ ಇತ್ತೀಚೆಗೆ ವರದಕ್ಷಿಣೆ ಹೆಸರಿನಲ್ಲಿ ಕಿರುಕುಳಗಳು ಮೇಲ್ಮಧ್ಯಮ, ಸುಶಿಕ್ಷಿತ ಕುಟುಂಬಗಳಲ್ಲೇ ಹೆಚ್ಚಾಗುತ್ತಿದೆ. ಇತ್ತೀಚೆಗೆ ಬೆಂಗಳೂರಿನ ತಲಘಟ್ಟ ಪುರದಲ್ಲಿ ವರದಕ್ಷಿಣೆ ಕಿರುಕುಳದಿಂದ ನೊಂದು ಸಾಫ್ಟ್ ವೇರ್ ಇಂಜಿನಿಯರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇಲ್ಲಿ ಗಂಡ-ಹೆಂಡತಿ ಪ್ರೀತಿಸಿ ಕುಟುಂಬದ ಸಮ್ಮತಿಯೊಂದಿಗೆ ಮದುವೆಯಾಗಿದ್ದರು. ಇಬ್ಬರೂ ವಿದ್ಯಾವಂತರಾಗಿದ್ದು ಪತ್ನಿ ಕೈ ತುಂಬಾ ವೇತನವಿರುವ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದರು. ಸಣ್ಣ ಮಗು ಬೇರೆ ಇತ್ತು. ಇಷ್ಟಾದರೂ ಆಕೆ ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಯಿತು. ಇದೀಗ ಪತಿ ಮತ್ತು ಆತನ ಕುಟುಂಬದ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ದಾಖಲಾಗಿದೆ. ಕಾನೂನನ್ನು ಬಿಗಿ ಗೊಳಿಸುವ ಮೂಲಕ ವರದಕ್ಷಿಣೆ ಪಿಡುಗನ್ನು ಇಲ್ಲವಾಗಿಸಬಹುದು ಎನ್ನುವ ತರ್ಕವೂ ತ್ವಿಶಾ ಪ್ರಕರಣದಲ್ಲಿ ನೆಲೆ ಕಳೆದುಕೊಂಡಿದೆ. ಯಾಕೆಂದರೆ, ತ್ವಿಶಾ ಪ್ರಕರಣದಲ್ಲಿ ಆರೋಪಿ ಕಾನೂನು ಪುಸ್ತಕವನ್ನು ಓದಿದ್ದ ಒಬ್ಬ ನ್ಯಾಯವಾದಿಯಾಗಿದ್ದ. ಕಳೆದ ಕೆಲವೇ ದಿನಗಳಲ್ಲಿ ನಾಲ್ಕು ಮಂದಿ ಮಹಿಳೆಯರು ವರದಕ್ಷಿಣೆ ಕಿರುಕುಳದಿಂದ ಮೃತಪಟ್ಟಿದ್ದಾರೆ. ಇವರೆಲ್ಲರೂ ನಗರ ಪ್ರದೇಶಕ್ಕೆ ಸೇರಿದವರು. ಮೇಲ್ಮಧ್ಯಮ ಕುಟುಂಬದಿಂದ ಬಂದವರು.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ನೀಡಿದ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ 2024ರಲ್ಲಿ 5,737 ವರದಕ್ಷಿಣೆ ಸಾವುಗಳು ದಾಖಲಾಗಿವೆ. ಈ ದೇಶದಲ್ಲಿ ಪ್ರತಿ ದಿನ ಸರಾಸರಿ 16 ಮಹಿಳೆಯರು ವರದಕ್ಷಿಣೆಯ ಹೆಸರಿನಲ್ಲಿ ಕೊಲೆಯಾಗುತ್ತಿದ್ದಾರೆ ಅಥವಾ ಆತ್ಮಹತ್ಯೆಗೆ ಬಲಿಯಾಗುತ್ತಿದ್ದಾರೆ. 2024ರ ಅಂಕಿಅಂಶಗಳ ಪ್ರಕಾರ ರಾಮ ಹುಟ್ಟಿದ ನೆಲವೆಂದು ನಂಬಲಾಗಿರುವ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ವರದಕ್ಷಿಣೆ ಸಾವುಗಳು ಸಂಭವಿಸಿವೆ. ಭಾರತದ ವರದಕ್ಷಿಣೆ ಸಾವುಗಳ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಸಾವುಗಳು ಸಂಭವಿಸುತ್ತಿರುವುದು ಉತ್ತರ ಪ್ರದೇಶದಲ್ಲಿ. ಆನಂತರದ ಸ್ಥಾನದಲ್ಲಿ ಬಿಹಾರವಿದೆ. 2023ರಲ್ಲಿ ಭಾರತದಲ್ಲಿ 15,489 ಪ್ರಕರಣಗಳು ದಾಖಲಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಅತಿ ಹೆಚ್ಚು ವರದಕ್ಷಿಣೆ ಪ್ರಕರಣಗಳು ದಾಖಲಾಗಿರುವ ವರ್ಷ ಇದಾಗಿದೆ. ರಸ್ತೆಯಲ್ಲಿ ನಡೆಯುವ ಅಪರಾಧಕ್ಕಿಂತಲೂ ವರದಕ್ಷಿಣೆ ಕಿರುಕುಳ, ಸಾವುಗಳು ಹೆಚ್ಚು ಆತಂಕಕಾರಿಯಾಗಿದೆ. ರಸ್ತೆಯಲ್ಲಿ ಅಪರಾಧ ಎಸಗುವವರು ಅಪರಾಧ ಹಿನ್ನೆಲೆಯವರೇ ಆಗಿರುತ್ತಾರೆ. ಅಲ್ಲಿ ನಡೆಯುವ ಅಪರಾಧಗಳನ್ನು ದರೋಡೆ, ಹಲ್ಲೆ, ಹತ್ಯೆಗಳೆಂದು ನಾವು ಸ್ಪಷ್ಟವಾಗಿ ಗುರುತಿಸಬಹುದು. ಆದರೆ ಕುಟುಂಬ ವ್ಯವಸ್ಥೆಯೊಳಗೆ ಸಜ್ಜನ ಮುಖವಾಡದಲ್ಲಿ ನಡೆಯುವ ಈ ದರೋಡೆಗಳನ್ನು ‘ವರದಕ್ಷಿಣೆ’ ಎನ್ನುವ ಘನ ಹೆಸರಿನಲ್ಲಿ ಗುರುತಿಸುತ್ತಾ ಬಂದಿದ್ದೇವೆ. ಈ ದರೋಡೆಯಲ್ಲಿ ಭಾಗಿಯಾಗುವ ಮಂದಿ ಸಮಾಜದಲ್ಲಿ ಗಣ್ಯರ ವೇಷದಲ್ಲಿರುತ್ತಾರೆ. ಗಂಡನ ತಾಯಿ, ತಂದೆ, ಸೋದರ, ಸೋದರಿ, ಎಲ್ಲರ ಭಾಗೀದಾರಿಕೆಯೊಂದಿಗೆ ಈ ಅಪರಾಧ ನಡೆಯುತ್ತದೆ ಮತ್ತು ಈ ದರೋಡೆಯನ್ನು ಅವರು ತಮ್ಮ ಹಕ್ಕು ಎಂದು ತಿಳಿದುಕೊಂಡಿರುತ್ತಾರೆ. ಈ ದರೋಡೆಗೆ ಸಮಾಜವೂ ಮೌನ ಸಮ್ಮತಿಯನ್ನು ನೀಡುತ್ತಿರುತ್ತದೆ.
ದಾಂಪತ್ಯ ಎರಡು ಮನಸ್ಸುಗಳ ಬೆಸುಗೆ. ನಮ್ಮ ಸಮಾಜದಲ್ಲಿ ಮದುವೆಯೆಂದರೆ ಎರಡು ಕುಟುಂಬಗಳ ಬೆಸುಗೆಯೂ ಹೌದು. ಅದನ್ನು ನಾವು ಹಣ, ಚಿನ್ನ, ಕಾರುಗಳ ಮೂಲಕ ಬೆಸೆಯಲು ಹೊರಟಾಗ ನಡೆಯುವ ದುರಂತಗಳು ಇವು. ಅನೇಕ ಸಂದರ್ಭದಲ್ಲಿ ಗಂಡ ಹೆಂಡಿರ ಅಥವಾ ಎರಡು ಕುಟುಂಬಗಳ ನಡುವಿನ ವೈಮನಸ್ಯ ಅಂತಿಮವಾಗಿ ವರದಕ್ಷಿಣೆ ಕಿರುಕುಳ ದೂರಿಗೆ ಕಾರಣವಾಗುವುದೂ ಇದೆ. ಅಂದರೆ, ವರದಕ್ಷಿಣೆ ವಿರುದ್ಧದ ಕಾನೂನಿನ ದುರಪಯೋಗ ಕೂಡ ನಡೆಯುವುದಿದೆ. ವರದಕ್ಷಿಣೆಗೆ ಕೇವಲ ಹಣದ ದಾಹವಷ್ಟೇ ಕಾರಣವಲ್ಲ. ಕುಟುಂಬ ವ್ಯವಸ್ಥೆಯ ಮೌಲ್ಯಗಳ ಕುಸಿತವೂ ಕಾರಣ. ಸಾಧಾರಣವಾಗಿ, ‘ಲಿವಿಂಗ್ ಟುಗೆದರ್’ ‘ಪ್ರೇಮ ವಿವಾಹ’ಗಳ ದುರಂತಗಳನ್ನು ಮುಂದಿಟ್ಟುಕೊಂಡು ಮಾಧ್ಯಮಗಳು ಸಾಕಷ್ಟು ಚರ್ಚೆ ಮಾಡುತ್ತವೆ. ಫ್ರಿಜ್ನೊಳಗೆ ಸಿಕ್ಕಿದ ಮೃತದೇಹಗಳನ್ನು ಮುಂದಿಟ್ಟುಕೊಂಡು ಸಾಮಾಜಿಕ ಮೌಲ್ಯಗಳು ಕುಸಿದ ಬಗ್ಗೆಯೂ ಚರ್ಚೆಯಾಗುತ್ತದೆ. ಆದರೆ ಸಾಂಪ್ರದಾಯಿಕವಾಗಿ, ಧಾರ್ಮಿಕ ವಿಧಿ ವಿಧಾನಗಳ ಮೂಲಕ ಎರಡು ಕುಟುಂಬಗಳ ಪೂರ್ಣ ಸಮ್ಮತಿಯೊಂದಿಗೆ ನಡೆದ ಮದುವೆಗಳು ಬಳಿಕ ಅಪರಾಧಗಳಲ್ಲಿ ಕೊನೆಯಾಗುವುದರ ಬಗ್ಗೆ ನಮ್ಮ ಸಮಾಜ ಕಣ್ಣಿದ್ದೂ ಕುರುಡಾಗಿದೆ. ಇಂದು ರಸ್ತೆಯಲ್ಲಿ ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯಗಳಿಗಿಂತ ಹೆಚ್ಚಾಗಿ ಕುಟುಂಬ ವ್ಯವಸ್ಥೆಯೊಳಗೆ ‘ತಮ್ಮವರು’ ಎಂದು ಕರೆಸಿಕೊಂಡವರಿಂದಲೇ ನಡೆಯುತ್ತದೆ. ಗಂಡನ ಮನೆಗೆ ತೆರಳಿದ ಹೆಣ್ಣು ಆ ಮನೆಯ ಅವಿಭಾಜ್ಯ ಅಂಗವಾಗುವಷ್ಟರಲ್ಲಿ ಅವಳು ದೈಹಿಕ, ಮಾನಸಿಕವಾದ ಹಲವು ಅಂಗಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಹತ್ತು ಹಲವು ಅವಮಾನಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ ಮತ್ತು ಸಹಿಸಿಕೊಳ್ಳುವುದು ಅವಳ ಕರ್ತವ್ಯ ಎಂದು ನಮ್ಮ ಸಮಾಜವೂ ಅವಳಿಗೆ ಪದೇ ಪದೇ ನೆನಪಿಸಿ ಕೊಡುತ್ತದೆ. ಇದೇ ಸಂದರ್ಭದಲ್ಲಿ ವರದಕ್ಷಿಣೆ ಕಿರುಕುಳವನ್ನು ಮಾನಸಿಕವಾಗಿ ಸಹಿಸಿಕೊಂಡು ಜೀವನ ದೂಡುತ್ತಿರುವ ಸಾವಿರಾರು ಹೆಣ್ಣು ಮಕ್ಕಳ ಕತೆ ಮಾಧ್ಯಮಗಳಲ್ಲಿ ಚರ್ಚೆಯಾಗುವುದೇ ಇಲ್ಲ. ಚರ್ಚೆಯಾಗಬೇಕಾದರೆ ಆಕೆ ಅಂತಿಮವಾಗಿ ನೇಣಿನ ಕುಣಿಕೆಗೆ ಬಲಿಯಾಗಬೇಕು. ಅಲ್ಲಿಯವರೆಗೆ ಹೆಣ್ಣು ಹೆತ್ತವರಿಗೂ ಆಕೆಯ ಸಮಸ್ಯೆ ಪರಿಹರಿಸಬೇಕಾದ ಸಮಸ್ಯೆ ಎಂದು ಅನ್ನಿಸುವುದೇ ಇಲ್ಲ. ‘ಹೊಂದಿಕೊಂಡು ಹೋಗು’ ಎಂದು ಪರೋಕ್ಷವಾಗಿ ದೌರ್ಜನ್ಯಗಳಿಗೆ ಹೆಣ್ಣಿನ ಪೋಷಕರೂ ಸಮ್ಮತಿಯನ್ನು ನೀಡುತ್ತಾರೆ.
ವಿಪರ್ಯಾಸವೆಂದರೆ, ಸುಶಿಕ್ಷಿತ, ಸ್ವಾವಲಂಬಿ ಹೆಣ್ಣು ಕೂಡ ವರದಕ್ಷಿಣೆ ಕಿರುಕುಳಗಳಿಗೆ ಬಲಿಯಾಗುತ್ತಿರುವುದು. ಇಂದು ಹೆಣ್ಣು ಉದ್ಯೋಗಿಯಾಗಿದ್ದರೂ ಆಕೆಗೆ ಗಂಡನ ಮನೆಯಲ್ಲಿ ಸರಿಯಾದ ಸ್ಥಾನಮಾನ ಸಿಗಬೇಕಾದರೆ ಅದಕ್ಕೆ ಬೇಕಾದ ಶುಲ್ಕವನ್ನು ಪಾವತಿಸಲೇಬೇಕು. ಇಂತಹ ಸಂದರ್ಭದಲ್ಲಿ ಕಠಿಣ ಕಾನೂನುಗಳಿದ್ದರೂ ಅದು ಆಕೆಯ ನೆರವಿಗೆ ಬರುವುದಿಲ್ಲ. ಮೊದಲು ಹೆಣ್ಣಿನ ಕುರಿತಂತೆ ಇರುವ ಮನಸ್ಥಿತಿಯನ್ನು ಸಮಾಜ ಬದಲಿಸಬೇಕಾಗಿದೆ. ಹಾಗೆಯೇ, ಹೆಣ್ಣಿನ ಬದುಕು ಪತಿಯಿಲ್ಲದೆ ಪೂರ್ತಿಯಾಗುವುದಿಲ್ಲ ಎನ್ನುವ ಅಂಶ ಆಕೆಯ ‘ಬ್ಲ್ಯಾಕ್ಮೇಲ್’ಗೆ ಕಾರಣವಾಗಬಾರದು. ಕುಟುಂಬ ಜೀವನದ ಎಲ್ಲ ಮೌಲ್ಯಗಳನ್ನು ಎತ್ತಿ ಹಿಡಿಯಬಲ್ಲವನು, ತನ್ನ ಸಂಗಾತಿಗೆ ಪ್ರತಿ ಹೆಜ್ಜೆ
ಯಲ್ಲೂ ಆತ್ಮವಿಶ್ವಾಸ ತುಂಬಬಲ್ಲವನು ಪತಿ. ಅಂತಹ ಗುಣಗಳು ಆತನಲ್ಲಿಲ್ಲದೆ ಇದ್ದಾಗ, ಆತ ತನ್ನ ಕುಟುಂಬದ ಜೊತೆ ಸೇರಿ ತನ್ನನ್ನು ವರದಕ್ಷಿಣೆಗಾಗಿ ಬ್ಲ್ಯಾಕ್ಮೇಲ್ ಮಾಡುತ್ತಾನೆ ಎಂದಾಗ ಆತನನ್ನು ತಿರಸ್ಕರಿಸುವ ಎದೆಗಾರಿಕೆ ಮಹಿಳೆಗೂ ಬೇಕಾಗುತ್ತದೆ. ಹೆಣ್ಣಿನ ಪೋಷಕರು ಅಂತಹ ಆತ್ಮವಿಶ್ವಾಸ, ಎದೆಗಾರಿಕೆಯ ಜೊತೆಗೇ ಆಕೆಯನ್ನು ಬೆಳೆಸಬೇಕಾಗುತ್ತದೆ. ಮದುವೆ ಮಾಡಿಕೊಡುವ ಸಂದರ್ಭದಲ್ಲಿ ಪತಿಯ ಮನೆಯಲ್ಲಿ ಹೇಗೆ ಬಾಳಬೇಕು ಎನ್ನುವುದನ್ನು ಹೇಳಿಕೊಟ್ಟ ಹಾಗೆಯೇ, ತನ್ನ ಆತ್ಮಗೌರವಕ್ಕೆ ಕುಂದು ಬಂದಾಗ ಅದನ್ನು ಹೇಗೆ ಪ್ರತಿರೋಧಿಸಿ ನಿಲ್ಲಬೇಕು ಎನ್ನುವುದನ್ನೂ ಕಲಿಸಿಕೊಡಬೇಕು. ‘ಕೊಟ್ಟ ಹೆಣ್ಣು ಕುಲದ ಹೊರಗೆ’ ಎನ್ನುವ ಮಾತನ್ನು ತಿದ್ದಿ, ನಿನ್ನ ಎಲ್ಲ ನೋವು, ಸಂಕಟಗಳ ಜೊತೆಗೆ ಎಂದೆಂದಿಗೂ ನಾವಿದ್ದೇವೆ ಎನ್ನುವ ಭರವಸೆಯನ್ನು ಆಕೆಯ ಉಡಿಯಲ್ಲಿ ತುಂಬಿ ಆಕೆಯನ್ನು ಕಳುಹಿಸಿ ಕೊಡಬೇಕು. ಪತಿಯ ಕುಟುಂಬದಲ್ಲಿ ವರದಕ್ಷಿಣೆಗಾಗಿ ಮಾನಸಿಕ, ದೈಹಿಕ ಕಿರುಕುಳ ತೀವ್ರವಾದಾಗ, ಅದರ ವಿರುದ್ಧ ಪ್ರತಿಭಟಿಸಿ, ಅವರ ವಿರುದ್ಧ ಈಗಾಗಲೇ ಇರುವ ಕಠಿಣ ಕಾನೂನನ್ನು ಬಳಸಬೇಕು. ಆಗ ಮಾತ್ರ ಹೆಣ್ಣಿನ ಸ್ವಾವಲಂಬಿತನಕ್ಕೆ ಅರ್ಥ ಬರುತ್ತದೆ. ಹೆಣ್ಣಿನ ಕುರಿತಂತೆ ಸಮಾಜಕ್ಕಿರುವ ಮನಸ್ಥಿತಿ ಬದಲಾದಾಗ ಮಾತ್ರ ಕುಟುಂಬ ವ್ಯವಸ್ಥೆಯನ್ನು ಕಿತ್ತುತಿನ್ನುತ್ತಿರುವ ವರದಕ್ಷಿಣೆ ಪಿಡುಗು ಶಾಶ್ವತವಾಗಿ ಅಳಿಯಬಹುದು.






