Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಗಂಗಾನದಿಯಲ್ಲಿ ತೇಲುತ್ತಿರುವ...

ಗಂಗಾನದಿಯಲ್ಲಿ ತೇಲುತ್ತಿರುವ ಪ್ರಶ್ನೆಗಳಿಗೆ ಮೋಕ್ಷವೆಂದು?

ವಾರ್ತಾಭಾರತಿವಾರ್ತಾಭಾರತಿ27 Feb 2025 8:15 AM IST
share
ಗಂಗಾನದಿಯಲ್ಲಿ ತೇಲುತ್ತಿರುವ ಪ್ರಶ್ನೆಗಳಿಗೆ ಮೋಕ್ಷವೆಂದು?

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಹಲವು ದಾಖಲೆಗಳ ಹೆಸರಿನಲ್ಲಿ ಮಾಧ್ಯಮಗಳಲ್ಲಿ ಸುದ್ದಿಯಾದ ಪ್ರಯಾಗ ರಾಜ್‌ನ ಮಹಾ ಕುಂಭಮೇಳ ಇನ್ನೊಂದು ಮಹಾ ದಾಖಲೆಯೊಂದಿಗೇ ಮುಕ್ತಾಯಗೊಂಡಿತು. ಸೋಮವಾರದಂದು ನಾಲ್ಕು ವಲಯಗಳಲ್ಲಿ ಸುಮಾರು 15,000 ಪೌರ ಕಾರ್ಮಿಕರು ಸ್ವಚ್ಛತಾ ಅಭಿಯಾನದಲ್ಲಿ ಪಾಲುಗೊಂಡರು. ಇದನ್ನು ಜಗತ್ತಿನಲ್ಲೇ ದಾಖಲೆಯಾಗಿಸುವ ಪ್ರಯತ್ನವನ್ನು ಸ್ಥಳೀಯ ಜಿಲ್ಲಾಡಳಿತ ಮಾಡಿತು. ಈ ಸಂದರ್ಭದಲ್ಲಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್‌ರೆಕಾರ್ಡ್ಸ್ ಮೇಲ್ವಿಚಾರಣೆ ತಂಡದವರೂ ಭಾಗವಹಿಸಿದ್ದು, ಪೌರಕಾರ್ಮಿಕರ ತಲೆ ಎಣಿಕೆಯನ್ನು ಮಾಡಲಾಗಿದೆಯಂತೆ. 2019ರಂದು ನಡೆದ ಕುಂಭಮೇಳದಲ್ಲಿ ಸುಮಾರು 10,000 ಕಾರ್ಮಿಕರು ಭಾಗವಹಿಸಿದ್ದರೆ, ಈ ಬಾರಿ 15,000 ಕಾರ್ಮಿಕರು ಭಾಗವಹಿಸುವ ಮೂಲಕ ಅಂದಿನ ಕುಂಭಮೇಳದ ದಾಖಲೆಯನ್ನು ಈ ಬಾರಿಯ ಕುಂಭಮೇಳ ಮುರಿದಿದೆ ಎಂದು ಮಾಧ್ಯಮಗಳು ಬಣ್ಣಿಸುತ್ತಿವೆ. ಇಷ್ಟೊಂದು ಪ್ರಮಾಣದಲ್ಲಿ ಕಾರ್ಮಿಕರು ಭಾಗವಹಿಸಿದರೂ, ಕುಂಭಮೇಳದ ಮಲ, ಮೂತ್ರಗಳನ್ನು ಬಾಚುವುದರಲ್ಲಿ ಅವರು ಪೂರ್ಣವಾಗಿ ಯಶಸ್ವಿಯಾಗಿದ್ದಾರೆಯೇ ಎನ್ನುವುದರ ವಿವರ ಇನ್ನೂ ಹೊರ ಬಂದಿಲ್ಲ. ಯಾಕೆಂದರೆ, ಶುಚಿತ್ವದಲ್ಲಾಗಿರುವ ಅವ್ಯವಸ್ಥೆ, ಮಾಲಿನ್ಯದ ಕಾರಣಕ್ಕಾಗಿಯೇ ಇತ್ತೀಚಿನ ದಿನಗಳಲ್ಲಿ ಕುಂಭಮೇಳ ಹೆಚ್ಚು ಚರ್ಚೆಯಲ್ಲಿತ್ತು. ಇದೀಗ ಆ ಚರ್ಚೆಯನ್ನು ವಿಷಯಾಂತರ ಗೊಳಿಸುವುದಕ್ಕಾಗಿಯೇ 15,000 ಕಾರ್ಮಿಕರನ್ನು ಉತ್ತರ ಪ್ರದೇಶ ಸರಕಾರ ಗುರಾಣಿಯಾಗಿ ಬಳಸುತ್ತಿದೆ.

2019ರಲ್ಲಿ ಪ್ರಯಾಗರಾಜ್ ಕುಂಭಮೇಳದಲ್ಲಿ ಶೌಚಾಲಯಗಳ ಶುಚಿತ್ವದಲ್ಲಿ ಭಾಗವಹಿಸಿದ ಸಾವಿರಾರು ಕಾರ್ಮಿಕರ ಯೋಗಕ್ಷೇಮಗಳ ಬಗ್ಗೆ ಮಾಧ್ಯಗಳು ಚರ್ಚೆ ಮಾಡಲು ಶುರು ಹಚ್ಚಿದಂತೆಯೇ, ಪ್ರಧಾನಿ ಮೋದಿಯವರು ಏಕಾಏಕಿ ಐವರು ಕಾರ್ಮಿಕರ ಪಾದವನ್ನು ತೊಳೆದು ಮಾಧ್ಯಮಗಳಲ್ಲಿ ಸುದ್ದಿಯಾಗಿ ಮೆರೆದರು. ಪ್ರಧಾನಿ ಮೋದಿಯವರು ಕಾರ್ಮಿಕರ ಪಾದಗಳನ್ನು ತೊಳೆದ ಚಿತ್ರಗಳು ಮಾಧ್ಯಮಗಳಲ್ಲಿ ಕಂಗೊಳಿಸತೊಡಗಿದಂತೆಯೇ ಕುಂಭಮೇಳದಲ್ಲಿರುವ ಎಲ್ಲ್ಲ ಅಶುಚಿತ್ವಗಳೂ ಬದಿಗೆ ಸರಿದವು. ಕುಂಭಮೇಳದ ಮಲಮೂತ್ರವನ್ನು ಬಾಚಿ ಶುಚಿಗೊಳಿಸಿದ ಕಾರ್ಮಿಕರನ್ನು ಕೊಂಡಾಡುವ ಬದಲು, ಕಾರ್ಮಿಕರ ಪಾದ ತೊಳೆದ ಪ್ರಧಾನಿಯನ್ನೇ ಮಾಧ್ಯಮಗಳು ಹಾಡಿ ಹೊಗಳತೊಡಗಿದವು. ಈ ಬಾರಿ ಈ ಹಿಂದಿಗಿಂತ 5,000 ಕಾರ್ಮಿಕರು ಹೆಚ್ಚುವರಿಯಾಗಿ ಭಾಗವಹಿಸಿದ್ದರೂ ಪ್ರಧಾನಿ ಮೋದಿಯವರು ಕೃತಜ್ಞತಾ ಪೂರ್ವಕವಾಗಿ ಕಾರ್ಮಿಕರ ಪಾದತೊಳೆಯುವುದಕ್ಕೆ ಮುಂದಾಗಿಲ್ಲ. ಯಾಕೆಂದರೆ ಈ ಹಿಂದೆ ಲೋಕಸಭಾ ಚುನಾವಣೆ ಹತ್ತಿರವಿತ್ತು. ಈ ಬಾರಿ ಚುನಾವಣೆ ಇಲ್ಲ. ಮಾತ್ರವಲ್ಲ, ಇಡೀ ಗಂಗಾನದಿಯ ಮಾಲಿನ್ಯಕ್ಕಾಗಿ ಸರಕಾರ ತೀವ್ರ ಟೀಕೆಗೊಳಗಾಗಿದೆ. ಈಗಾಗಲೇ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಗಂಗೆಯ ನೀರು ಕುಡಿಯುವುದಕ್ಕಾಗಲಿ, ಸ್ನಾನ ಮಾಡುವುದಕ್ಕಾಗಲಿ ಅರ್ಹವಲ್ಲ, ಅದರಲ್ಲಿ ದೊಡ್ಡ ಪ್ರಮಾಣದಲ್ಲಿ ಮಲದ ಅಂಶಗಳು ಸೇರಿಕೊಂಡಿವೆ ಎಂದು ವರದಿ ನೀಡಿದೆ. ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಕುಂಭಮೇಳದ ಶೌಚಾಲಯಗಳ ಅವ್ಯವಸ್ಥೆಯ ಬಗ್ಗೆ ಜಿಲ್ಲಾಡಳಿತವನ್ನು ತರಾಟೆಗೆ ತೆಗೆದುಕೊಂಡಿದೆ. ಶೌಚಾಲಯಗಳ ವ್ಯವಸ್ಥೆ ಇಲ್ಲದೇ ಇರುವ ಕಾರಣ, ಗಂಗಾನದಿಯ ದಡದಲ್ಲೇ ದೊಡ್ಡ ಸಂಖ್ಯೆಯ ಭಕ್ತರು ಶೌಚ ಮಾಡುತ್ತಿರುವುದನ್ನು ನ್ಯಾಯ ಮಂಡಳಿಯು ಉಲ್ಲೇಖಿಸಿತ್ತು. ಇದೇ ಸಂದರ್ಭದಲ್ಲಿ ಗಂಗಾನದಿಯ ನೀರು ಸ್ನಾನ ಮಾಡುವುದಕ್ಕೆ ಅನರ್ಹವಾಗಿರುವುದನ್ನು ಯಾತ್ರಿಕರಿಂದ ಮುಚ್ಚಿಟ್ಟಿರುವುದರ ಬಗ್ಗೆಯೂ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಗಂಗಾ ನದಿಯನ್ನು ಶುಚೀಕರಿಸುವುದಕ್ಕಾಗಿಯೇ ತಾನು ಪ್ರಧಾನಿಯಾಗಿ ಬಂದಿದ್ದೇನೆ ಎಂದು 2015ರಲ್ಲಿ ಪ್ರಧಾನಿ ಘೋಷಿಸಿದ್ದರು. ನಮಾಮಿ ಗಂಗಾ ಯೋಜನೆಯನ್ನು ಘೋಷಣೆ ಮಾಡಿ ಅದಕ್ಕಾಗಿ 30,000 ಕೋಟಿ ರೂಪಾಯಿಯನ್ನು ವ್ಯಯಿಸಿ, ಆಧುನಿಕ ಭಗೀರಥರೆಂದು ಮಾಧ್ಯಮಗಳಿಂದ ಪ್ರಶಂಸೆಗೆ ಒಳಗಾಗಿದ್ದರು. ಆದರೆ ಅದೇ ಪ್ರಧಾನಿ ‘ಗಂಗೆಯ ನೀರು ಸ್ನಾನಕ್ಕೆ ಅರ್ಹವಾಗಿಲ್ಲ’ ಎನ್ನುವ ಇತ್ತೀಚೆಗೆ ಮಾಲಿನ್ಯ ನಿಯಂತ್ರಣ ಮಂಡಳಿಯ ಆರೋಪಕ್ಕೆ ಈವರೆಗೆ ಪ್ರತಿಕ್ರಿಯಿಸಿಲ್ಲ. ಬಹುಶಃ ಈ ಎಲ್ಲ ಕಾರಣಗಳಿಂದಲೇ, ಈ ಬಾರಿ ಶುಚಿತ್ವ ಕಾರ್ಮಿಕರ ಹತ್ತಿರವೂ ಅವರು ಸುಳಿದಿಲ್ಲ. ಪೋಟೋ ಹೊಡೆಸಿಕೊಂಡಿಲ್ಲ.

2019ರಲ್ಲಿ ಪ್ರಧಾನಿ ಮೋದಿಯವರಿಂದ ಪಾದವನ್ನು ತೊಳೆಸಿಕೊಂಡು ಪುನೀತರಾಗಿದ್ದ ಐವರು ಕಾರ್ಮಿಕರು ಆ ಬಳಿಕ ಮಾಧ್ಯಮಗಳಲ್ಲಿ ತಮ್ಮ ಸಂಕಟಗಳನ್ನು ತೋಡಿಕೊಂಡಿದ್ದರು. ಇಂಡಿಯನ್ ಎಕ್ಸ್‌ಪ್ರೆಸ್ ಈ ಕಾರ್ಮಿಕರ ಹೇಳಿಕೆಗಳನ್ನು ದಾಖಲಿಸಿತ್ತು. ಕಾರ್ಮಿಕರಲ್ಲಿ ಒಬ್ಬರಾಗಿದ್ದ ಹೊರಿ ಎಂಬವರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾ ‘‘ಇದು ನಮಗೆ ಅನಿರೀಕ್ಷಿತವಾಗಿತ್ತು. ಪಾದ ತೊಳೆದುದಕ್ಕಾಗಿ ಪ್ರಧಾನಿಗೆ ನಾನು ಕೃತಜ್ಞ. ಆದರೆ ನಮಗೆ ಈ ಕೆಲಸ ನಿರ್ವಹಿಸಲು ಇಷ್ಟವಿಲ್ಲ. ಬೇರೇನಾದರೂ ಕೆಲಸವನ್ನು ನಮಗೆ ಕೊಟ್ಟಿದ್ದರೆ ಅನುಕೂಲವಾಗುತ್ತಿತ್ತು’’ ಎಂದು ಅಲವತ್ತುಕೊಂಡಿದ್ದರು. ಅವರು ಒಟ್ಟು ನಾಲ್ಕು ಬಾರಿ ಕುಂಭಮೇಳದಲ್ಲಿ ಯಾತ್ರಿಕರ ಮಲಮೂತ್ರವನ್ನು ಬಾಚಿದ್ದರು. ಈ ಬಾರಿಯ ಕುಂಭಮೇಳದಲ್ಲಿ ಅವರೆಲ್ಲಿದ್ದಾರೆ ಎನ್ನುವುದರ ಸುಳಿವೇ ಇಲ್ಲ. ಪ್ರಧಾನಿ ಪಾದ ತೊಳೆದ ಇನ್ನೋರ್ವ ಕಾರ್ಮಿಕ ಪ್ಯಾರೇಲಾಲ್. ಅವರು ಅದನ್ನು ನೆನಪಿಸಿಕೊಳ್ಳುತ್ತಾ ‘‘ಇದರಿಂದ ನಮಗೆ ವಿಶೇಷ ಅನುಕೂಲವೇನೂ ಆಗಲಿಲ್ಲ. ನಮಗೆ ಸಿಗುವ ದಿನದ ಕೂಲಿ 300 ರೂಪಾಯಿ. ವೇತನ ಹೆಚ್ಚಿಸಬೇಕು ಎನ್ನುವ ನಮ್ಮ ಆಗ್ರಹವನ್ನು ಯಾರೂ ಪರಿಶೀಲಿಸಲೇ ಇಲ್ಲ’’ ಎಂದು ಹೇಳಿಕೊಂಡಿದ್ದರು.

ಎಲ್ಲ ಕುಂಭಮೇಳಗಳಲ್ಲೂ ಮಲಮೂತ್ರಗಳನ್ನು ಬಾಚುವ ಶುಚಿತ್ವ ಕಾರ್ಯವನ್ನು ನಿರ್ದಿಷ್ಟ ಜಾತಿಯವರೇ ಮಾಡಿಕೊಂಡು ಬಂದಿದ್ದಾರೆ. ಈ ಬಾರಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಎಲ್ಲ ಜಾತಿ ವರ್ಗಗಳು ಸಂಘಟಿತವಾಗಿ, ಸ್ವಯಂಸೇವಕರಾಗಿ ಶುಚಿತ್ವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಿದ್ದರೆ ಅದು ಖಂಡಿತ ಗಿನ್ನೆಸ್ ದಾಖಲೆಗೆ ಅರ್ಹವಾಗಿ ಬಿಡುತ್ತಿತ್ತು. ಭೌತಿಕ ಮಾಲಿನ್ಯಗಳ ಜೊತೆಗೆ ಜಾತಿ ಅಸಮಾನತೆಯ ಮಾಲಿನ್ಯವನ್ನೂ ತೊಳೆದ ಹೆಗ್ಗಳಿಕೆಗೆ ಪಾತ್ರವಾಗಿ ಬಿಡುತ್ತಿತ್ತು. ಮಹಾತ್ಮಾಗಾಂಧೀಜಿ ತಾನು ಭಾಗವಹಿಸಿದ ಕಾಂಗ್ರೆಸ್‌ನ ಮೊದಲ ಸಮಾವೇಶದಲ್ಲಿ ಅಲ್ಲಿನ ಶೌಚಾಲಯಗಳ ಸ್ಥಿತಿಯನ್ನು ಕಂಡು ಮರುಗಿ, ಅದನ್ನು ಶುಚಿಗೊಳಿಸುವ ಕಾರ್ಯದ ನೇತೃತ್ವವನ್ನು ತಾನೇ ವಹಿಸಿಕೊಂಡಿದ್ದರಂತೆ. 2016ರಂದು ಗಾಂಧಿಜಯಂತಿಯಂದೇ ದೇಶಾದ್ಯಂತ ‘ಸ್ವಚ್ಛತಾ ಆಂದೋಲನ’ಕ್ಕೆ ಚಾಲನೆ ನೀಡಿದ್ದ ಪ್ರಧಾನಿ ಮೋದಿಯವರು, ಸೋಮವಾರ ಸರ್ವ ಜಾತಿಯ ಜನರನ್ನು ಒಂದಾಗಿಸಿ ಆ ಆಂದೋಲನಕ್ಕೆ ಕುಂಭಮೇಳದಲ್ಲಿ ಮರುಚಾಲನೆ ನೀಡುವ ಅವಕಾಶವಿತ್ತು ಕುಂಭಮೇಳ ಇದೀಗ ಮುಗಿದಿದೆ. ಆದರೆ, ದಾಖಲೆಯ 15,000 ಪೌರ ಕಾರ್ಮಿಕರು ಗಂಗೆಯ ತಟವನ್ನು ಶುದ್ಧಿಗೊಳಿಸಲು ವಿಫಲರಾಗಿದ್ದಾರೆ ಎನ್ನುವ ಸುದ್ದಿಯನ್ನು ಮಾತ್ರ ಮಾಧ್ಯಮಗಳು ಮರೆ ಮಾಚುತ್ತಿವೆ.

ಪ್ರಧಾನಿ ಮೋದಿಯವರು ಉತ್ತರಿಸಲೇ ಬೇಕಾದ ಹಲವು ಪ್ರಶ್ನೆಗಳು ಗಂಗಾನದಿಯಲ್ಲಿ ತೇಲುತ್ತಿವೆ. ನಮಾಮಿ ಗಂಗಾ ಯೋಜನೆ ಘೋಷಿಸಿ, ಅದಕ್ಕಾಗಿ 30,000 ಕೋಟಿ ರೂಪಾಯಿಗೂ ಅಧಿಕ ಹಣ ವೆಚ್ಚ ಮಾಡಿದ ಬಳಿಕವೂ ಮಾಲಿನ್ಯ ನಿಯಂತ್ರಣ ಮಂಡಳಿ ಗಂಗೆಯ ನೀರು ಕುಡಿಯುವುದಕ್ಕೆ, ಸ್ನಾನಕ್ಕೆ ಅಯೋಗ್ಯ ಎಂದು ಹೇಳಿದೆ. ಇದಕ್ಕೆ ಯಾರು ಹೊಣೆ? ನಮಾಮಿ ಯೋಜನೆಯಲ್ಲಿ ಭಾರೀ ಅವ್ಯವಹಾರಗಳು ನಡೆದಿವೆ, ಗಂಗೆಯ ಹೆಸರಿನಲ್ಲಿ ಗುಜರಾತ್‌ನ ಬೃಹತ್ ಉದ್ಯಮಿಗಳು, ರಾಜಕಾರಣಿಗಳು ಹಣವನ್ನು ನುಂಗಿ ಹಾಕಿದ್ದಾರೆ ಎನ್ನುವ ಆರೋಪಗಳಲ್ಲಿ ಸತ್ಯವಿದೆಯೆ? ಕುಂಭಮೇಳದ ಕಾಲ್ತುಳಿತದಲ್ಲಿ ಸತ್ತವರು ಬರಿ 30 ಜನ ಎಂದು ಸರಕಾರ ಹೇಳುತ್ತಿದೆ. ವಿರೋಧ ಪಕ್ಷಗಳು ನೂರಾರು ಜನರು ಸತ್ತಿದ್ದಾರೆ, ಅವರ ಹೆಣಗಳನ್ನು ಗಂಗಾನದಿಗೆ ಎಸೆಯಲಾಗಿದೆ ಎಂದು ಆರೋಪಿಸುತ್ತಿವೆ. ಇದೇ ಸಂದರ್ಭದಲ್ಲಿ ಪಿಯುಸಿಎಲ್ ಕೂಡ ಮೃತರ ಸಂಖ್ಯೆಯ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿದೆ. ಕುಂಭಮೇಳದಲ್ಲಿ ಸಾವಿರಾರು ಜನರು ನಾಪತ್ತೆಯಾಗಿರುವ ದೂರುಗಳು ಬರುತ್ತಿದ್ದು, ಅವರೆಲ್ಲರು ಏನಾದರು ಎನ್ನುವುದರ ಬಗ್ಗೆ ತನಿಖೆ ನಡೆಯಬೇಕು ಎಂದು ಪಿಯುಸಿಎಲ್ ಒತ್ತಾಯಿಸುತ್ತಿದೆ. ಸರಕಾರ ತನಿಖೆ ನಡೆಸಿ, ಭಕ್ತಾದಿಗಳಿಗೆ ನ್ಯಾಯ ನೀಡುತ್ತದೆಯೆ? ಕುಂಭಮೇಳದಿಂದಾಗಿ ಸಂಪೂರ್ಣ ಗಬ್ಬೆದ್ದಿರುವ ಗಂಗಾನದಿಯನ್ನು ಮತ್ತೆ ಶುದ್ಧೀಕರಣಗೊಳಿಸಲು ಸರಕಾರ ಮತ್ತೊಮ್ಮೆ ನಮಾಮಿ ಗಂಗಾ ಯೋಜನೆಯನ್ನು ಅನುಷ್ಠಾನಗೊಳಿಸಲಿದೆಯೆ? ಪ್ರಧಾನಿ ಮೋದಿಯವರು ಈ ಬಗ್ಗೆ ಇನ್ನಾದರೂ ಮೌನ ಮುರಿಯಬೇಕು. ಗಂಗೆಯಲ್ಲಿ ತೇಲುತ್ತಿರುವ ಪ್ರಶ್ನೆಗಳ ಹೆಣಗಳನ್ನು ಎತ್ತಿ, ಅವುಗಳಿಗೆ ಮೋಕ್ಷವನ್ನು ನೀಡಬೇಕು. ಆಗ ಮಾತ್ರ ಕುಂಭಮೇಳ ಸರ್ವ ಸಂಪನ್ನವಾಗುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X