ಒಳಚರಂಡಿ ಸಾವುಗಳಿಗೆ ಕೊನೆ ಯಾವಾಗ?

PC: x.com/ambedkariteIND
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಮನುಷ್ಯರಿಂದ ಒಳಚರಂಡಿಗಳನ್ನು ಸ್ವಚ್ಛತೆ ಮಾಡಿಸುವ ಅತ್ಯಂತ ಅಮಾನವೀಯವಾದ ಸಮಸ್ಯೆ ಸ್ವಾತಂತ್ರ್ಯ ಬಂದು ಮುಕ್ಕಾಲು ಶತಮಾನವಾದರೂ ಕೊನೆಯಾಗಿಲ್ಲ. ಸರಕಾರ ಈ ಬಗ್ಗೆ ಏನೇ ಕಾನೂನನ್ನು ಮಾಡಿದರೂ ಹಾಗೂ ಸುಪ್ರೀಂ ಕೋರ್ಟ್ ಅನೇಕ ಸಲ ಎಚ್ಚರಿಕೆ ನೀಡಿದರೂ ಪ್ರಯೋಜನವಾಗಿಲ್ಲ. ಉಸಿರಾಡಲೂ ಗಾಳಿ ಸಿಗದ ಒಳಚರಂಡಿಗಳಿಗೆ ಸ್ವಚ್ಛತಾ ಕಾರ್ಮಿಕರನ್ನು ಇಳಿಸುವ ಕೆಟ್ಟ ಪದ್ಧತಿ ಇನ್ನೂ ಮುಂದುವರಿದಿದೆ. ಹೀಗಾಗಿ ಒಳಚರಂಡಿಯಲ್ಲಿ ಇಳಿದವರ ಅಂದರೆ ಕಾರ್ಮಿಕರ ದುರಂತ ಸಾವುಗಳು ಸಂಭವಿಸುತ್ತಲೇ ಇವೆ.
ಮನುಷ್ಯರನ್ನು ಒಳಚರಂಡಿಗೆ ಇಳಿಸುವ ಬದಲಾಗಿ ಒಳಚರಂಡಿ ಸ್ವಚ್ಛ ಮಾಡಲು ಅತ್ಯಾಧುನಿಕ ಯಂತ್ರಗಳನ್ನು ಬಳಸಿಕೊಳ್ಳಬೇಕೆಂದು ಸುಪ್ರೀಂ ಕೋರ್ಟ್ ಮತ್ತೆ ತಿಳಿಸಿದೆ. ಮನುಷ್ಯರಿಂದ ಒಳಚರಂಡಿಗಳ ಸ್ವಚ್ಛತೆ ಯಾವಾಗ ಮತ್ತು ಹೇಗೆ ಕೊನೆಗೊಳಿಸಲಾಗಿದೆ ಎಂಬುದರ ಕುರಿತು ಪ್ರಮಾಣ ಪತ್ರವನ್ನು ಫೆಬ್ರವರಿ 23ಕ್ಕಿಂತ ಮೊದಲು ಸುಪ್ರೀಂ ಕೋರ್ಟಿಗೆ ಸಲ್ಲಿಸಬೇಕೆಂದು ಎಲ್ಲ ರಾಜ್ಯಗಳಿಗೆ ಸೂಚನೆ ನೀಡಿದೆ.
ಸುಪ್ರೀಂ ಕೋರ್ಟ್ ಹಲವಾರು ಸಲ ರಾಜ್ಯ ಸರಕಾರಗಳಿಗೆ ಹಾಗೂ ದೇಶದ ಎಲ್ಲ ಮಹಾನಗರ ಪಾಲಿಕೆಗಳಿಗೆ ಈ ಕುರಿತು ಎಚ್ಚರಿಕೆ ನೀಡಿದರೂ ಪರಿಸ್ಥಿತಿ ಸುಧಾರಿಸಿಲ್ಲ. ಮನುಷ್ಯರನ್ನು ಒಳಚರಂಡಿಗೆ ಇಳಿಸುವ ಅನಿಷ್ಟ ಪದ್ಧತಿಯನ್ನು ಕೊನೆಗೊಳಿಸಲು ಆಗದೇ ಇರುವುದಕ್ಕೆ ಕಾರಣವೇನೆಂದು ಸುಪ್ರೀಂ ಕೋರ್ಟ್ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ತಾನು ಈ ಹಿಂದೆ ನೀಡಿರುವ ಆದೇಶಗಳನ್ನು ಯಾಕೆ ಜಾರಿಗೆ ತಂದಿಲ್ಲ ಎಂದು ಪ್ರಶ್ನಿಸಿದೆ.
ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ್ದರೂ ಕೂಡ ಕೋಲ್ಕತಾದಲ್ಲಿ ಒಳಚರಂಡಿಗೆ ಇಳಿದ ಮೂವರು ಇತ್ತೀಚೆಗೆ ಸಾವಿಗೀಡಾದರು. ಕೋಲ್ಕತಾದಲ್ಲಿ ಮಾತ್ರವಲ್ಲ ದೇಶದ ಬೇರೆ ಬೇರೆ ಕಡೆ ಇಂಥ ದುರ್ಘಟನೆಗಳು ಸಂಭವಿಸುತ್ತಲೇ ಇವೆ. ಎರಡು ವರ್ಷಗಳ ಹಿಂದೆ ಕಲಬುರಗಿಯಲ್ಲಿ ಹದಿನೆಂಟು ಅಡಿ ಆಳದ ಮ್ಯಾನ್ಹೋಲ್ಗೆ ಇಳಿದ ಇಬ್ಬರು ತರುಣ ಕಾರ್ಮಿಕರು ಉಸಿರುಗಟ್ಟಿ ಮರಣ ಹೊಂದಿದ್ದರು. ಇದಕ್ಕೆ ಯಾರು ಹೊಣೆ?
ಸುಪ್ರೀಂ ಕೋರ್ಟ್ ಹಾಗೂ ಇತರ ನ್ಯಾಯಾಲಯಗಳ ಸೂಚನೆಗಳು ಮತ್ತು ನಿರ್ದೇಶನಗಳು ಜಾರಿಯಲ್ಲಿ ಬರದಿರುವುದಕ್ಕೆ ಸಂಬಂಧಿಸಿದ ಅಧಿಕಾರಿಗಳು ಒಬ್ಬರ ಮೇಲೆ ಇನ್ನೊಬ್ಬರು ಆರೋಪ ಮಾಡಿ ಹೊಣೆಯನ್ನು ಜಾರಿಸಿಕೊಳ್ಳುತ್ತಿದ್ದಾರೆ. ಯಾವುದೇ ರಾಜ್ಯದ, ಯಾವುದೇ ನಗರದ ನೈರ್ಮಲ್ಯ ಎಂಬುದು ರಾಜ್ಯಗಳ ಅಧಿಕಾರ ವ್ಯಾಪ್ತಿಗೆ ಸೇರಿದ ವಿಷಯ. ಆದರೂ ಅಗತ್ಯದ ಕ್ರಮಕ್ಕಾಗಿ ರಾಜ್ಯ ಸರಕಾರಗಳ ಜೊತೆಗೆ ಸಭೆ ನಡೆಸುವುದಕ್ಕಾಗಿ ತಾನು ಸಮನ್ವಯಕಾರನಾಗಿ ಕೆಲಸ ಮಾಡುವುದಾಗಿ ಕೇಂದ್ರ ಸರಕಾರ ಕಳೆದ ಬಾರಿ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ಗೆ ತಿಳಿಸಿದೆ. ಆದರೆ ಯಾವುದೇ ಮಹಾನಗರ ಪಾಲಿಕೆ ಇದರ ಬಗ್ಗೆ ಆಸಕ್ತಿ ತೋರಿಸಿಲ್ಲ.
ಒಳಚರಂಡಿಗೆ ಇಳಿದು ಸ್ವಚ್ಛ ಮಾಡುವವರು ಯಾರೆಂದು ಎಲ್ಲರಿಗೂ ಗೊತ್ತಿರುವ ವಿಷಯ. ಸಾಮಾನ್ಯವಾಗಿ, ಬಹುತೇಕ ಪರಿಶಿಷ್ಟ ಜಾತಿಗೆ ಸೇರಿದವರು ಹಾಗೂ ಅತ್ಯಂತ ಹಿಂದುಳಿದವರು. ಭಾರತದ ಶೇ. 40 ಜಿಲ್ಲೆಗಳಲ್ಲಿ ಒಳಚರಂಡಿ ಸ್ವಚ್ಛ ಮಾಡುವ ಈ ಅತ್ಯಂತ ಹೊಲಸು ಪದ್ಧತಿ ಆಚರಣೆಯಲ್ಲಿದೆ. ಈ ರೀತಿ ಒಳಚರಂಡಿಗೆ ಇಳಿದು ಕೆಲಸ ಮಾಡುವವರ ಪರಿಸ್ಥಿತಿ ದಾರುಣವಾಗಿದೆ. 2019ನೇ ಇಸವಿಯಿಂದ ಒಳಚರಂಡಿಗೆ ಇಳಿದು ಕೆಲಸ ಮಾಡುವ ಸಂದರ್ಭದಲ್ಲಿ ವಿಷಕಾರಿ ಅನಿಲವನ್ನು ಸೇವಿಸಿ ವರ್ಷಕ್ಕೆ 75 ಮಂದಿ ಅಸು ನೀಗಿದ್ದಾರೆ.
ಒಳಚರಂಡಿ ಸ್ವಚ್ಛ ಮಾಡುವ ಪದ್ಧತಿಯನ್ನು ಹಾಗೂ ಅಪಾಯಕಾರಿ ರೀತಿಯಲ್ಲಿ ಈ ಕೆಲಸ ಮಾಡುವ ಪದ್ಧತಿಯ ಬಗ್ಗೆ ಕಾನೂನಿನಲ್ಲಿ ವಿಭಿನ್ನ ವ್ಯಾಖ್ಯಾನಗಳನ್ನು ನೀಡಲಾಗಿದೆ. ಈ ವಿವರಣೆಯನ್ನು ಉಪಯೋಗಿಸಿಕೊಂಡು ಕೆಲವು ರಾಜ್ಯ ಸರಕಾರಗಳು ತಮ್ಮ ರಾಜ್ಯದಲ್ಲಿ ಇಂತಹದು ಇಲ್ಲ ಎಂದು ಹೇಳುತ್ತಿವೆ.
ಮಹಾನಗರಗಳು ಸೇರಿದಂತೆ ಎಲ್ಲಾ ಕಡೆ ಆಧುನಿಕ ಯಂತ್ರಗಳ ಬಳಕೆಗೆ ಹಾಗೂ ಕಾರ್ಮಿಕರ ರಕ್ಷಣೆಗೆ ವಿಶೇಷ ಕ್ರಮಗಳನ್ನು ಕೈಗೊಳ್ಳಬೇಕೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿದರೂ ಯಾವುದೇ ರಾಜ್ಯ ಅದನ್ನು ಜಾರಿಗೆ ತಂದಿಲ್ಲ.ಒಳಚರಂಡಿ ಸ್ವಚ್ಛ ಮಾಡುವ ಸಂದರ್ಭದಲ್ಲಿ ಸಾವಿಗೀಡಾದ ಕಾರ್ಮಿಕನ ಹತ್ತಿರದ ಸಂಬಂಧಿಕರಿಗೆ ಪರಿಹಾರ ರೂಪದಲ್ಲಿ 30 ಲಕ್ಷ ರೂಪಾಯಿ ನೀಡಬೇಕೆಂದು ಸುಪ್ರೀಂ ಕೋರ್ಟ್ ಆದೇಶ ನೀಡುತ್ತಲೇ ಬಂದಿದೆ ಆದರೆ ಇದೂ ಕೂಡ ಪಾಲನೆಯಾಗಿಲ್ಲ.
ಕರ್ನಾಟಕ ರಾಜ್ಯದಲ್ಲಿ ಸುಮಾರು 7,500 ಮಂದಿ ಒಳಚರಂಡಿ ಸ್ವಚ್ಛ ಮಾಡುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಪೈಕಿ 1,600 ಮಂದಿ ಬೆಂಗಳೂರು ಮಹಾನಗರದ ವ್ಯಾಪ್ತಿಯಲ್ಲೇ ಇದ್ದಾರೆ ಎನ್ನಲಾಗುತ್ತಿದೆ. ಆದರೆ ಸ್ವಚ್ಛತಾ ಕಾರ್ಮಿಕರ ಸಂಘಟನೆ ಬೆಂಗಳೂರಿನಲ್ಲಿ ನಿಜವಾಗಿ ಇರುವ ಕಾರ್ಮಿಕರ ಸಂಖ್ಯೆ 25 ಸಾವಿರ ಎಂದು ಅಂದಾಜು ಮಾಡಿದೆ.
ಇಂತಹ ಸಾವುಗಳಾಗುತ್ತಿರುವ ಸಂಖ್ಯೆ ಬೆಂಗಳೂರಿನಲ್ಲಿ ಜಾಸ್ತಿ ಎಂದು ಹೇಳಲಾಗುತ್ತದೆ. ಕೆಲವು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಒಳಚರಂಡಿಗೆ ಇಳಿದು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಇಬ್ಬರು ಉಸಿರುಗಟ್ಟಿ ಅಸುನೀಗಿದ್ದರು. ಸರಕಾರ ಆದಷ್ಟು ಬೇಗ ಕ್ರಮಕೈಗೊಂಡು ಇಂತಹ ಸಾವುಗಳು ಸಂಭವಿಸದಂತೆ ಎಚ್ಚರ ವಹಿಸಲಿ.
ಕಾರ್ಮಿಕರನ್ನು ಒಳಚರಂಡಿಗೆ ಇಳಿಸಿ ಅವರಿಂದ ಸ್ವಚ್ಛ ಮಾಡಿಸುವುದು ಅತ್ಯಂತ ಅಮಾನವೀಯ. ಯುದ್ಧ ಭೂಮಿಗೆ ದೇಶದ ರಕ್ಷಣೆಗಾಗಿ ಯೋಧರು ಪ್ರಾಣದ ಹಂಗು ಹೋಗಿರುತ್ತಾರೆ. ಒಳಚರಂಡಿಗೆ ಇಳಿದು ಸ್ವಚ್ಛ ಮಾಡುವವರದು ಕೂಡ ಇದೇ ಪರಿಸ್ಥಿತಿ. ಈ ಕಾರ್ಮಿಕರು ಕೂಡ ಮೂಗಿಗೆ ಬಟ್ಟೆ ಕಟ್ಟಿಕೊಂಡು ಒಳಚರಂಡಿಗೆ ಇಳಿಯುವಾಗಲೂ ಕೂಡ ಜೀವದ ಮೇಲೆ ಆಸೆ ಬಿಟ್ಟು ಇಳಿದಿರುತ್ತಾರೆ. ಅವರೂ ಕೂಡ ಗಡಿ ಕಾಯುವ ನಮ್ಮ ಸೈನಿಕರಂತೆ ದೇಶಕ್ಕಾಗಿ ದುಡಿಯುತ್ತಾರೆ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ.
ಒಳಚರಂಡಿಯಲ್ಲಿ ಇಳಿದು ಕೆಲಸ ಮಾಡುವ ಕಾರ್ಮಿಕರು ಹಾಗೂ ನಮ್ಮ ಬೀದಿಗಳನ್ನು ಸ್ವಚ್ಛವಾಗಿಡುವ ಪೌರ ಕಾರ್ಮಿಕರಿಗೆ ಸೌಕರ್ಯಗಳನ್ನು ಮಾಡಿಕೊಡಲು ರಾಜಕೀಯ ಇಚ್ಛಾಶಕ್ತಿ ಬೇಕು. ಎಪ್ಪತ್ತರ ದಶಕದಲ್ಲಿ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಅವರ ಸಂಪುಟದಲ್ಲಿ ಪೌರಾಡಳಿತ ಸಚಿವರಾಗಿದ್ದ ಬಸವಲಿಂಗಪ್ಪನವರು ತಲೆ ಮೇಲೆ ಮಲ ಹೊರುವ ಪದ್ಧತಿಯನ್ನು ರದ್ದು ಗೊಳಿಸಿದ್ದರು. ಒಳಚರಂಡಿ ಸ್ವಚ್ಛತೆಯ ಬಗ್ಗೆಯೂ ಈಗ ಅಂತಹ ದಿಟ್ಟ ಕ್ರಮ ಕೈಗೊಳ್ಳಲು ಸರಕಾರ ಮುಂದಾಗಲಿ.







