ಏಕ ಪಕ್ಷೀಯ ಆಕ್ರಮಣಗಳಿಗೆ ಕೊನೆ ಎಂದು?

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕಳೆದ ವಾರ ಜೂನ್ 13 ರಂದು ಇಸ್ರೇಲ್ ಸರಕಾರವು ಇರಾನ್ ವಿರುದ್ಧ ಯುದ್ಧ ಸಾರಿದೆ. ಕಳೆದೊಂದು ವಾರದಿಂದ ಅದು ಸತತವಾಗಿ ಇರಾನ್ ನಾಗರಿಕರ ಮೇಲೆ ಬಾಂಬುಗಳ ಮಳೆ ಸುರಿಸುತ್ತಲೇ ಇದೆ. ಈ ಕ್ರಮಕ್ಕೆ ಅದು ಮುಂದೊಡ್ಡುತ್ತಿರುವ ಸಬೂಬುಗಳು ಸ್ವಾರಸ್ಯಕರವಾಗಿವೆ. 1. ಇರಾನ್ ಅಣ್ವಸ್ತ್ರ ತಯಾರಿಸುವ ತನ್ನ ಗುರಿಗೆ ತುಂಬಾ ಹತ್ತಿರ ತಲುಪಿಬಿಟ್ಟಿದೆ. ಒಂದುವೇಳೆ ಅದನ್ನು ಈಗಲೇ ತಡೆಯದಿದ್ದರೆ ಇಸ್ರೇಲ್‌ನ ಭದ್ರತೆಗೆ ಮಾತ್ರವಲ್ಲ ಸಂಪೂರ್ಣ ಕೊಲ್ಲಿ ಪ್ರದೇಶದ ಭದ್ರತೆಗೆ ಅಪಾಯವಿದೆ ಎಂಬುದು ಅದರ ಪ್ರಮುಖ ಸಬೂಬು. 2. ಇರಾನ್ ವಿವಿಧ ಭಯೋತ್ಪಾದಕ ಸಂಘಟನೆಗಳನ್ನು ಪೋಷಿಸುತ್ತಿದೆ. 3. ಇಂದಿನ ಇರಾನ್ ಸರಕಾರವು ಇರಾನ್ ಜನತೆಯ ನಡುವೆ ಜನಪ್ರಿಯವಾಗಿಲ್ಲ. ಅಲ್ಲಿ ಪ್ರಚಲಿತ ಸರಕಾರವನ್ನು ಕಿತ್ತೊಗೆದು ಬೇರೆಯೇ ಸರಕಾರವೊಂದನ್ನು ಸ್ಥಾಪಿಸುವ ಅಗತ್ಯವಿದೆ - ಇವು ಇಸ್ರೇಲ್ ಮುಂದಿಡುತ್ತಿರುವ ಇತರ ಸಬೂಬುಗಳು.
ಇಲ್ಲಿರುವ ವಿರೋಧಾಭಾಸಗಳ ಕಂತೆ, ದಿಗಿಲುಗೊಳಿಸುವಷ್ಟು ಬೃಹತ್ತಾಗಿದೆ. ಇರಾನ್‌ನ ಅಣ್ವಸ್ತ್ರ ಸಾಮರ್ಥ್ಯದ ಬಗ್ಗೆ ಕಳವಳ ಪ್ರಕಟಿಸುತ್ತಿರುವ ಇಸ್ರೇಲ್ ಸ್ವತಃ ತಾನೇ ಒಂದು ಅಣ್ವಸ್ತ್ರ ಸಜ್ಜಿತ ದೇಶವಾಗಿದೆ. ಇಸ್ರೇಲ್ ಸರಕಾರವು ಈ ವಿಷಯದಲ್ಲಿ ಉದ್ದೇಶಪೂರ್ವಕ ಅಸ್ಪಷ್ಟತೆಯ ನಿಲುವನ್ನು ಪಾಲಿಸುತ್ತಾ ಬಂದಿದ್ದು, ತನ್ನ ಬಳಿ ಅಣ್ವಸ್ತ್ರ ಗಳಿವೆ ಎಂಬುದನ್ನು ಅಧಿಕೃತವಾಗಿ ಒಪ್ಪಿಕೊಳ್ಳುತ್ತಿಲ್ಲ. ಆದರೆ ಅದರ ಬಳಿ ಸುಮಾರು 400 ರಷ್ಟು ಅಣ್ವಸ್ತ್ರಗಳಿವೆ ಎಂಬುದು ಜಗತ್ತಿಗೆಲ್ಲಾ ಗೊತ್ತಿದೆ. ಉತ್ತರ ಕೊರಿಯಾ, ಭಾರತ ಅಥವಾ ಪಾಕಿಸ್ತಾನಗಳು ಅಣ್ವಸ್ತ್ರ ಸಾಮರ್ಥ್ಯ ಬೆಳೆಸಿಕೊಳ್ಳುವುದಕ್ಕಿಂತ ಬಹಳ ವರ್ಷಗಳ ಮುನ್ನವೇ, ಅಂದರೆ 1967ಕ್ಕೆ ಮೊದಲೇ ಇಸ್ರೇಲ್ ಅಣ್ವಸ್ತ್ರಗಳನ್ನು ಬೆಳೆಸಿಕೊಂಡಿತ್ತೆಂಬ ಬಗ್ಗೆ ಯಾರಿಗೂ ಸಂದೇಹವಿಲ್ಲ.
‘ಇರಾನ್, ಅಣ್ವಸ್ತ್ರ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವ ಹಂತಕ್ಕೆ ತುಂಬಾ ಹತ್ತಿರವಾಗಿಬಿಟ್ಟಿದೆ’ ಎಂಬ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿಕೆ ಹೊಸದೇನೂ ಅಲ್ಲ. ಅವರು ಈ ಕರ್ಕಶ ರಾಗ ಆಲಾಪಿಸಲಾರಂಭಿಸಿ ಮೂರು ದಶಕಗಳಿಗಿಂತ ಹೆಚ್ಚಿನ ಅವಧಿ ಕಳೆದಿದೆ. 1992 ರಲ್ಲೇ ಅವರು, ಇನ್ನೇನು ಮೂರ್ನಾಲ್ಕು ವರ್ಷಗಳೊಳಗೆ ಇರಾನ್ ಪೂರ್ಣಪ್ರಮಾಣದ ಅಣ್ವಸ್ತ್ರ ಸಜ್ಜಿತ ದೇಶವಾಗಿ ಬೆಳೆಯಲಿದೆ ಎಂದು ಕೂಗು ಹಾಕಿದ್ದರು. 1995 ರಲ್ಲಿ ಭಯೋತ್ಪಾದನೆಯ ಕುರಿತು ತಾನು ಬರೆದ ಒಂದು ಪುಸ್ತಕದಲ್ಲೂ ಅವರು ಇದೇ ಮಾತನ್ನು ಒತ್ತಿ ಹೇಳಿದ್ದರು. ಆ ಬಳಿಕ ಬೇರೆ ಬೇರೆ ಸನ್ನಿವೇಶಗಳಲ್ಲಿ ವಿವಿಧ ಅಂತರ್‌ರಾಷ್ಟ್ರೀಯ ವೇದಿಕೆಗಳಲ್ಲಿ ಅವರು ಈ ಸುಳ್ಳನ್ನು ಪುನರಾವರ್ತಿಸಿದ್ದರು. ವಿಶೇಷವಾಗಿ, 2002 ರಲ್ಲಿ ಅಮೆರಿಕ ದುಷ್ಟಕೂಟವು ಇರಾಕ್ ಮೇಲೆ ಆಕ್ರಮಣಕ್ಕೆ ಸಜ್ಜ್ಜಾಗುತ್ತಿದ್ದ ಸಂದರ್ಭದಲ್ಲಿ ನೆತನ್ಯಾಹು, ಇರಾನ್ ಅಣ್ವಸ್ತ್ರ ತಯಾರಿಸುವ ಹಂತದಲ್ಲಿರುವುದರಿಂದ, ಇರಾಕ್ ಜೊತೆ ಇರಾನ್ ಮೇಲೂ ದಾಳಿ ನಡೆಸಬೇಕು ಮತ್ತು ಅಲ್ಲಿಯ ಸರಕಾರವನ್ನು ಬದಲಿಸಬೇಕೆಂದು ಅಮೆರಿಕದ ಸಂಸದ್ ಸದಸ್ಯರ ನಡುವೆ ತೀವ್ರ ಅಭಿಯಾನ ನಡೆಸಿದ್ದರು. ಆದರೆ ತಮ್ಮ ಆರೋಪದ ಪರವಾಗಿ ಯಾವುದೇ ಪುರಾವೆಯನ್ನು ಮುಂದಿಡಲು ಅವರಿಗೆ ಅಂದೂ ಸಾಧ್ಯವಾಗಿರಲಿಲ್ಲ, ಈತನಕವೂ ಸಾಧ್ಯವಾಗಿಲ್ಲ. ಮಾತ್ರವಲ್ಲ ಹಲವು ಜಾಗತಿಕ ಹಾಗೂ ಅಧಿಕೃತ ತನಿಖಾವರದಿಗಳು ಕೂಡ ಅವರ ಈ ಆರೋಪವನ್ನು ತಳ್ಳಿ ಹಾಕಿವೆ.
ಮೂರುದಿನಗಳ ಹಿಂದೆ (ಜೂನ್ 18) ಅಂತರ್‌ರಾಷ್ಟ್ರೀಯ ಅಣುಶಕ್ತಿ ಸಂಸ್ಥೆ (IAEA) ಮುಖ್ಯಸ್ಥ ರಾಫೇಲ್ ಗ್ರೋಸ್ಸಿ ಅವರು, ಪ್ರಖ್ಯಾತ ವಾರ್ತಾ ಸಂಸ್ಥೆ ಸಿಎನ್ನೆನ್‌ನ ಕ್ರಿಸ್ಟಿನಾ ಅಮಾನ್ ಪೋರ್ ಅವರಿಗೆ ನೀಡಿದ ಸಂದರ್ಶನದಲ್ಲಿ ಇರಾನ್, ಅಣ್ವಸ್ತ್ರ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ಶ್ರಮಿಸುತ್ತಿದೆ ಎಂಬುದಕ್ಕೆ ಯಾವುದೇ ಪುರಾವೆ ಈ ತನಕ ನಮ್ಮ ಸಂಸ್ಥೆಗೆ ಸಿಕ್ಕಿಲ್ಲ ಎಂದು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಈ ಮೂಲಕ ನೆತನ್ಯಾಹು ಅವರ ವಿಕಲಾಂಗ ಸುಳ್ಳು ಬಟ್ಟಬಯಲಾಗಿದೆ. ಸಾಲದ್ದಕ್ಕೆ ಕಳೆದ ವಾರವಷ್ಟೇ ಸಾಕ್ಷಾತ್ ಅಮೆರಿಕ ಸರಕಾರವು ಇರಾನ್‌ನ ಅಣು ಕಾರ್ಯಕ್ರಮಗಳು ಯಾವ ಹಂತದಲ್ಲಿವೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲು ನೇಮಿಸಿದ್ದ ಬೇಹುಗಾರಿಕಾ ಸಂಸ್ಥೆಗಳು ಕೂಡಾ ಇರಾನ್ ಅಣ್ವಸ್ತ್ರ ಸಜ್ಜಿತವಾಗಲು ಶ್ರಮಿಸುತ್ತಿದೆ ಎನ್ನುವುದಕ್ಕೆ ತಮಗೆ ಯಾವುದೇ ಪುರಾವೆ ದೊರಕಿಲ್ಲ ಎಂದು ಒಪ್ಪಿಕೊಂಡಿವೆ.
ಅಮೆರಿಕದ ರಾಷ್ಟ್ರೀಯ ಬೇಹುಗಾರಿಕಾ ಸಂಸ್ಥೆ (NI)ಯ ನಿರ್ದೇಶಕಿ ಟುಲ್ಸಿ ಗಬ್ಬಾರ್ಡ್ ಈವರ್ಷ ಮಾರ್ಚ್ ನಲ್ಲಿ ತಮ್ಮ ಬೇಹುಗಾರಿಕಾ ಮೂಲಗಳಿಂದ ಬಂದಿರುವ ವರದಿಗಳನ್ನು ಆಧರಿಸಿ ಅಮೆರಿಕದ ಸಂಸತ್ತಿನಲ್ಲಿ ಒಂದು ಸಾಕ್ಷಿ ಹೇಳಿಕೆಯನ್ನು ನೀಡಿದ್ದರು. ಅದರಲ್ಲಿ ಅವರು, ಇರಾನ್ ಯಾವುದೇ ತರದ ಅಣ್ವಸ್ತ್ರ ನಿರ್ಮಾಣದ ಚಟುವಟಿಕೆಯಲ್ಲಿ ತೊಡಗಿಲ್ಲ. 2003 ರಲ್ಲೇ ಇರಾನ್ ನ ಪರಮೋಚ್ಚ ನಾಯಕ ಅಲಿ ಖಾಮಿನೈ ಅವರು ಅಣ್ವಸ್ತ್ರ ಬೆಳವಣಿಗೆಗೆ ಸಂಬಂಧಿಸಿದ ಯಾವುದೇ ಚಟುವಟಿಕೆಗೆ ಅನುಮತಿ ನಿರಾಕರಿಸಿದ್ದಾರೆ ಎಂದು ತಿಳಿಸಿದ್ದರು. ಮೊನ್ನೆ ತಾನೇ ಅಮೆರಿಕ ಅಧ್ಯಕ್ಷ ಟ್ರಂಪ್, ಜಿ - 7 ಸಮ್ಮೇಳನವನ್ನು ಅರ್ಧದಲ್ಲೇ ಬಿಟ್ಟು ಶ್ವೇತ ಭವನಕ್ಕೆ ಮರಳಿದ ಬಳಿಕ ಅಲ್ಲಿ ತನ್ನ ದೇಶದ ಭದ್ರತಾ ಅಧಿಕಾರಿಗಳ ಜೊತೆ ಒಂದು ಸಮಾಲೋಚನಾ ಸಭೆ ನಡೆಸಿದರು. ಟುಲ್ಸಿ ಗಬ್ಬಾರ್ಡ್ ಆಸಭೆಯಲ್ಲಿ ಉಪಸ್ಥಿತರಿದ್ದರು. ಅಲ್ಲೂ ಇರಾನ್ ಬಳಿ ಯಾವುದೇ ಅಣ್ವಸ್ತ್ರ ಇಲ್ಲ ಎಂಬ ಅಭಿಪ್ರಾಯ ಪ್ರಕಟವಾಗಿತ್ತು. ಇಷ್ಟಾದ ಬಳಿಕವೂ ಚಂಚಲ ಟ್ರಂಪ್ ಇರಾನ್‌ಗೆ ಬುದ್ಧಿಕಲಿಸುವ ಮಾತುಗಳನ್ನೇ ಆಡುತ್ತಲಿದ್ದಾರಾದರೂ ಅಮೆರಿಕದ ಜನಾಭಿಪ್ರಾಯವು ಟ್ರಂಪ್‌ರ ಪರವಾಗಿರಲಿಲ್ಲ.
ಜಗತ್ತಿನ ಮುಂದೆ ಇರಾನ್‌ನ ಶಸ್ತ್ರಾಸ್ತ್ರಗಳ ಬಗ್ಗೆ ಚಿಂತೆ ಪ್ರಕಟಿಸುತ್ತಿರುವ ಇಸ್ರೇಲ್ ಸ್ವತಃ ಎಷ್ಟೊಂದು ಸಭ್ಯ ರಾಷ್ಟ್ರವೆಂದರೆ, ಅದು ಕಳೆದ ಸುಮಾರು 20 ತಿಂಗಳಿಂದ ಹಗಲಿರುಳೂ ಫೆಲೆಸ್ತೀನ್ ನಾಗರಿಕರ ಸಾಮೂಹಿಕ ಹತ್ಯಾಕಾಂಡದಲ್ಲಿ ನಿರತವಾಗಿದೆ. ಅದು ಮಾನವ ಹಕ್ಕುಗಳ ಸತತ ಉಲ್ಲಂಘನೆ ನಡೆಸಿದ್ದು ಎಡೆಬಿಡದೆ ಬೃಹತ್ ಯುದ್ಧಾಪರಾಧಗಳನ್ನು ಮಾಡುತ್ತಾ ಬಂದಿದೆ. ಫೆಲೆಸ್ತೀನ್ ನಲ್ಲಿ ಕಳೆದ 20 ತಿಂಗಳಲ್ಲಿ ಇಸ್ರೇಲ್, ಸಾವಿರಾರು ಎಳೆಯ ಮಕ್ಕಳು, ಪರಿಹಾರ ಕಾರ್ಯಕರ್ತರು ಮತ್ತು ಅಂತರ್‌ರಾಷ್ಟ್ರೀಯ ಸಹಾಯಕ ಸಂಸ್ಥೆಗಳಿಗೆ ಸೇರಿದ ವೈದ್ಯರು, ನರ್ಸ್ ಗಳ ಸಹಿತ 55 ಸಾವಿರಕ್ಕೂ ಹೆಚ್ಚು ಅಮಾಯಕ ನಾಗರಿಕರನ್ನುಕೊಂದು ಹಾಕಿದೆ. ನೂರಾರು ವಸತಿ ಕೇಂದ್ರಗಳನ್ನು, ಶಾಲೆಗಳನ್ನು ಮತ್ತು ಆಸ್ಪತ್ರೆಗಳನ್ನು ಧ್ವಂಸಗೊಳಿಸಿದೆ. ಹಸಿವು ಮತ್ತು ವ್ಯಾಧಿಗಳಿಂದ ನರಳುತ್ತಿರುವ ಯುದ್ಧಗ್ರಸ್ತ ನಿರಾಶ್ರಿತ ನಾಗರಿಕರಿಗೆ ಅನ್ನ, ನೀರು, ಔಷಧಿ ತಲುಪದಂತೆ ಅಮಾನುಷ ನಿರ್ಬಂಧಗಳನ್ನು ಹೇರಿದೆ. ಈ ಮೂಲಕ ಅದು ಯಾವುದೇ ಭಯೋತ್ಪಾದಕ ಸಂಘಟನೆಯು ಮಾಡಿಲ್ಲದ ಅಪರಾಧವನ್ನು ಮಾಡಿದ್ದು, ಭಯೋತ್ಪಾದನೆಯ ವಿರುದ್ಧ ಮಾತನಾಡುವ ತನ್ನ ಹಕ್ಕನ್ನು ಕಳೆದುಕೊಂಡಿದೆ. ಫೆಲೆಸ್ತೀನ್ ಮೇಲೆ ದಾಳಿ ನಿಲ್ಲಿಸಲು ವಿಶ್ವ ಸಂಸ್ಥೆ, ಜಗತ್ತಿನ ಹಲವು ಪ್ರಮುಖ ದೇಶಗಳು ಮತ್ತು ಅಂತರ್‌ರಾಷ್ಟ್ರೀಯ ಒಕ್ಕೂಟಗಳು ನೀಡಿದ ಕರೆಗಳನ್ನು ಮತ್ತು ಮನವಿಗಳನ್ನೆಲ್ಲಾ ಇಸ್ರೇಲ್ ತನ್ನ ಕಾಲಬುಡದಲ್ಲಿ ಹೊಸಕಿಹಾಕಿದೆ. ತನ್ನ ನೆರೆಹೊರೆಯ ಮತ್ತು ಕೊಲ್ಲಿ ಪ್ರದೇಶದ ದೇಶಗಳ ವಿರುದ್ಧ ಅತ್ಯಧಿಕ ಅಕ್ರಮ ಸೈನಿಕ ಕಾರ್ಯಾಚರಣೆಗಳನ್ನು ನಡೆಸಿದ ಪುಂಡುಕೋರ ದೇಶವೆಂಬ ಕುಖ್ಯಾತಿಯೂ ಇಸ್ರೇಲ್ ತಲೆಯ ಮೇಲಿದೆ. ಈ ಹಿನ್ನೆಲೆಯಲ್ಲಿ, ಇರಾನ್ ಮೇಲೆ ಅದು ನಡೆಸಿರುವ ದಾಳಿಯನ್ನು ಅದರ ಅಪರಾಧಿ ದುಸ್ಸಾಹಸಗಳ ಸರಮಾಲೆಯಲ್ಲಿ ತೀರಾ ಇತ್ತೀಚಿನ ದುಸ್ಸಾಹಸ ಎಂದು ಪರಿಗಣಿಸಲಾಗಿದೆ. ಇಂತಹ ಯುದ್ಧಕೋರ ಇಸ್ರೇಲ್ ನಡೆಸುತ್ತಿರುವ ಅಮಾನುಷ ಹಿಂಸಾಚಾರ ಮತ್ತು ಹತ್ಯಾಕಾಂಡವನ್ನು ತಡೆಯುವುದಕ್ಕೆ ವಿಶ್ವ ಸಂಸ್ಥೆಗಾಗಲಿ, ಜಗತ್ತಿಗೆಲ್ಲಾ ಬಗೆಬಗೆಯ ತತ್ವಾದರ್ಶಗಳನ್ನು ಬೋಧಿಸುತ್ತಿರುವ ಪಶ್ಚಿಮದ ಬಲಿಷ್ಠ ರಾಷ್ಟ್ರಗಳಿಗಾಗಲಿ ಸಾಧ್ಯವಾಗಿಲ್ಲ.
ಇರಾನ್ ಸರಕಾರವು ಇರಾನ್ ಜನತೆಯ ವಿಶ್ವಾಸವನ್ನು ಕಳೆದುಕೊಂಡಿದೆ ಎಂಬ ನೇತನ್ಯಾಹೂ ವಾದ ಹಾಸ್ಯಾಸ್ಪದವಾಗಿದೆ. ನಿಜವಾಗಿ ಸದ್ಯ ಇರಾನ್ ಸರಕಾರಕ್ಕೆ ದೇಶದೊಳಗೆ ಜನಪ್ರಿಯತೆಯ ತೀವ್ರಕೊರತೆ ಇದೆ ಎಂಬುದು ನಿಜ. ಆದರೆ ಅದೆಲ್ಲಾ ಇರಾನ್ ಸರಕಾರ ಮತ್ತು ಇರಾನ್ ಜನತೆಯ ಆಂತರಿಕ ಸಮಸ್ಯೆ. ಆ ಬಗ್ಗೆ ತಲೆಕೆಡಿಸಿಕೊಳ್ಳ ಬೇಕಾದ ಯಾವ ಅಗತ್ಯವೂ ನೇತನ್ಯಾಹೂ ಅಥವಾ ಅವರ ಇಸ್ರೇಲ್ ಸರ್ಕಾರಕ್ಕೆ ಖಂಡಿತ ಇಲ್ಲ. ನೆತನ್ಯಾಹು ಸ್ವತಃ ತನ್ನದೇ ಇಸ್ರೇಲ್ ದೇಶದಲ್ಲಿ ತನಗೆ ಮತ್ತು ತನ್ನ ಸರಕಾರಕ್ಕೆ ಯಾವ ಮಟ್ಟದ ಜನಮನ್ನಣೆ ಪ್ರಾಪ್ತವಿದೆ ಎಂಬ ಬಗ್ಗೆ ಚಿಂತಿಸಬೇಕಾದಂತಹ ಪರಿಸ್ಥಿತಿ ಇದೆ. ನೆತನ್ಯಾಹು ಇಸ್ರೇಲ್ ಜನತೆಯ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ ಎಂಬ ವದಂತಿಗಳು ಬಹುಕಾಲದಿಂದ ಚಲಾವಣೆಯಲ್ಲಿದ್ದುವು. ಫೆಲೆಸ್ತೀನ್ ನಲ್ಲಿ ಅವರು ನಡೆಸುತ್ತಿರುವ ನರಮೇಧದ ವಿರುದ್ಧ ಇಸ್ರೇಲ್ ನೊಳಗೆ ನಾಗರಿಕರ ಹಲವು ವಲಯಗಳಲ್ಲಿ ತೀವ್ರ ಅಸಮಾಧಾನವಿದೆ. ಅಲ್ಲಿ ಹಲವಾರು ಪ್ರತಿಭಟನಾ ಪ್ರದರ್ಶನಗಳು ಕೂಡಾ ನಡೆದಿವೆ. ಇತ್ತೀಚಿನ ಹಲವು ಸಮೀಕ್ಷೆ, ಅಧ್ಯಯನ ಮತ್ತು ಬೆಳವಣಿಗೆಗಳು ಇಸ್ರೇಲ್ ಜನತೆಯ ಈ ಅಸಮಾಧಾನವನ್ನು ಖಚಿತಪಡಿಸಿವೆ. ಕಳೆದ ಮಾರ್ಚ್ ನಲ್ಲಿ ಇಸ್ರೇಲ್ ನ ಒಂದು ಪ್ರಮುಖ ಟಿ.ವಿ. ಚಾನೆಲ್ (ಚಾನೆಲ್ - 12) ನಲ್ಲಿ ಪ್ರಸಾರವಾದ ಒಂದು ಸಮೀಕ್ಷೆಯಂತೂ ಈಕುರಿತಾದ ಎಲ್ಲ ಸಂಶಯಗಳನ್ನು ನಿವಾರಿಸಿ ಬಿಟ್ಟಿದೆ. ಸಮೀಕ್ಷೆಯಲ್ಲಿ ಜನರೊಡನೆ ನೀವು ನೆತನ್ಯಾಹು ನೇತೃತ್ವದ ಸರಕಾರವನ್ನು ನಂಬುತ್ತೀರಾ? ಎಂಬ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಉತ್ತರವಾಗಿ 70ಶೇ. ಮಂದಿ, ನಾವು ನಂಬುವುದಿಲ್ಲ ಎಂದುತ್ತರಿಸಿದ್ದಾರೆ. 27ಶೇ. ಮಂದಿ ಮಾತ್ರ ನಾವು ಅವರನ್ನು ನಂಬುತ್ತೇವೆ ಎಂದಿದ್ದಾರೆ. ಸ್ವತಃ ನೆತನ್ಯಾಹು ನೇತೃತ್ವದ ಸಮ್ಮಿಶ್ರ ಆಡಳಿತ ಒಕ್ಕೂಟದಲ್ಲಿರುವ 6 ಪಕ್ಷಗಳ ಮತದಾರರು ಹಾಗೂ ಬೆಂಬಲಿಗರನ್ನುದ್ದೇಶಿಸಿ ಸಮೀಕ್ಷಕರು ಇದೇ ಪ್ರಶ್ನೆಯನ್ನು ಕೇಳಿದಾಗ ಅವರಲ್ಲೂ 36ಶೇ. ಮಂದಿ ನಾವು ನಂಬುವುದಿಲ್ಲ ಎಂದೇ ಉತ್ತರಿಸಿದ್ದಾರೆ. ಈಹಿನ್ನೆಲೆಯಲ್ಲಿ, ನೆತನ್ಯಾಹು ತಮ್ಮ ಕೈಯಲ್ಲಿರುವ ಎಲ್ಲ ಹುದ್ದೆ ಮತ್ತು ಅಧಿಕಾರಗಳಿಗೆ ತಕ್ಷಣ ರಾಜೀನಾಮೆ ನೀಡಿ, ಜನಮನ್ನಣೆ ಇರುವ ಬೇರಾರಿಗಾದರೂ ಅಧಿಕಾರ ಹಸ್ತಾಂತರಿಸಬೇಕಾಗುತ್ತದೆ.
ನಿಜವಾಗಿ ಇರಾನ್ ಮೇಲೆ ನೇರ ದಾಳಿ ನಡೆಸುವುದು ಇಸ್ರೇಲ್‌ನ ಯೋಜನೆಯಲ್ಲಿರಲಿಲ್ಲ. ಈ ಹಿಂದೆ ಇರಾಕ್, ಲಿಬಿಯಾ, ಲೆಬನಾನ್ ಮತ್ತು ಸಿರಿಯಾಗಳ ಮೇಲೆ ನಡೆಸಿದಂತೆ, ಇರಾನ್ ಮೇಲೂ ಅಮೆರಿಕ ಮತ್ತಿತರ ರಾಷ್ಟ್ರಗಳ ಮೂಲಕ ದಾಳಿ ಮಾಡಿಸಿ ತನ್ನ ಮಂದಿನ ಸಂಭಾವ್ಯ ಅಪಾಯಗಳನ್ನು ಇತರರ ಖರ್ಚಿನಲ್ಲಿ ನಿವಾರಿಸುವುದು ಇಸ್ರೇಲ್‌ನ ಉದ್ದೇಶವಾಗಿತ್ತು. ಅದಕ್ಕಾಗಿ ಇಸ್ರೇಲ್ ಬಹುಕಾಲದಿಂದ ಅಮೆರಿಕ, ಬ್ರಿಟನ್, ಫ್ರಾನ್ಸ್ ಮತ್ತಿತರ ಮಿತ್ರದೇಶಗಳಲ್ಲಿ ಜನಾಭಿಪ್ರಾಯ ಮೂಡಿಸುವ ಮತ್ತು ವಿಶೇಷವಾಗಿ ಅಲ್ಲಿನ ರಾಜಕೀಯ ವಾತಾವರಣವನ್ನು ಪಕ್ವಗೊಳಿಸುವ ಅಭಿಯಾನದಲ್ಲಿ ನಿರತವಾಗಿತ್ತು. ತನ್ನ ಮೇಲೆ ದಾಳಿ ನಡೆಸುವಂತೆ ಇರಾನ್ ಅನ್ನು ಪ್ರಚೋದಿಸುವುದಕ್ಕೂ ಅದು ಸಾಕಷ್ಟು ಶ್ರಮಿಸಿತ್ತು. ಆದರೆ ಇರಾನ್, ಇಸ್ರೇಲ್ ಬಲೆಗೆ ಬೀಳಲಿಲ್ಲ. ಅತ್ತ ಪಶ್ಚಿಮದ ಸಮಾಜಗಳಲ್ಲಿ ಕೂಡಾ ಇಸ್ರೇಲ್ ವಿಷಯದಲ್ಲಿ ಸರಕಾರಗಳ ಧೋರಣೆ ಮತ್ತು ಜನಾಭಿಪ್ರಾಯದ ನಡುವೆ ಭಾರೀ ಅಂತರವಿದೆ. ಅಲ್ಲಿನ ಸರಕಾರಗಳಿಗೆ ಇಸ್ರೇಲ್ ಪರ ಒಲವಿದ್ದರೂ ಅಲ್ಲಿನ ಸಮಾಜಗಳಲ್ಲಿ, ಯುದ್ಧದಿಂದಾಗುವ ದೂರಗಾಮಿ ಆರ್ಥಿಕ ಹಿನ್ನಡೆಗಳ ಬಗ್ಗೆ ಸಾಕಷ್ಟು ಜಾಗೃತಿ ಇರುವುದರಿಂದ ಸಾಮಾನ್ಯ ಜನಾಭಿಪ್ರಾಯವು ಯಾವುದೇ ಯುದ್ಧಕ್ಕೆ ವಿರುದ್ಧವಾಗಿದೆ. ಈ ಮಧ್ಯೆ ಫೆಲೆಸ್ತೀನ್ ನಲ್ಲಿ ಇತ್ತೀಚೆಗೆ ಇಸ್ರೇಲ್ ಸರಕಾರವು ನಡೆಸಿದ ನರಮೇಧ ಮತ್ತು ಮೆರೆದ ವಿನಾಶದ ಬಗ್ಗೆ ಅಮೆರಿಕ ಮತ್ತು ಯುರೋಪ್ ಸಹಿತ ಪಶ್ಚಿಮದ ಸಮಾಜಗಳಲ್ಲಿ ಬಹಳಷ್ಟು ಆಕ್ರೋಶವಿದೆ. ಪ್ರಸ್ತುತ ಆಕ್ರೋಶವು ವಿವಿಧ ರೂಪಗಳಲ್ಲಿ ಪ್ರಕಟವಾಗುತ್ತಲೂ ಬಂದಿದೆ. ಒಂದುಕಾಲದಲ್ಲಿ ಪಶ್ಚಿಮ ದಲ್ಲಿ ದಟ್ಟವಾಗಿದ್ದ, ಏನೇ ಆಗಲಿ, ನಮ್ಮದೇ ಸೃಷ್ಟಿಯಾಗಿರುವ ಇಸ್ರೇಲ್ ಅನ್ನು ನಾವುಬೆಂಬಲಿಸಬೇಕು ಎಂಬ ಜನಾಭಿಪ್ರಾಯ ಈಗ ತಿರುಗಿ ನಿಂತಿದೆ. ಅತ್ತ ತನ್ನದೇ ದೇಶದೊಳಗೆ ತನ್ನ ಜನಪ್ರಿಯತೆ ದಿನಗಳೆದಂತೆ ಕುಸಿಯುತ್ತಿರುವುದನ್ನು ಕಂಡ ಬೆಂಜಮಿನ್ ನೆತನ್ಯಾಹು ಅವರು ತುಂಬಾ ಹತಾಶರಾಗಿ, ಇರಾನ್ ಮೇಲೆ ದಾಳಿ ನಡೆಸುವ ಮೂಲಕ ತನ್ನ ಜನಪ್ರಿಯತೆಯನ್ನು ಮರಳಿ ಪಡೆಯುವ ಶ್ರಮ ನಡೆಸಿದ್ದಾರೆ ಎಂಬ ಅಭಿಪ್ರಾಯ ಎಲ್ಲೆಡೆ ಕೇಳಿಬರುತ್ತಿದೆ. ಆದ್ದರಿಂದಲೇ ಹೆಚ್ಚಿನೆಲ್ಲಾ ದೇಶಗಳು ಇಸ್ರೇಲ್-ಇರಾನ್ ಘರ್ಷಣೆಯ ವಿಷಯದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿವೆ. ಆರಂಭದಲ್ಲಿ ಇಸ್ರೇಲ್ ಕಡೆಗೆ ವಾಲಿದ್ದಂತೆ ಕಂಡು ಬಂದಿದ್ದ ಹಲವು ದೇಶಗಳು ಇಸ್ರೇಲ್ ಅನ್ನು ಬೆಂಬಲಿಸುವ ಬದಲು ತಕ್ಷಣ ಯುದ್ಧ ನಿಲುಗಡೆಗೆ ಒಲವು ತೋರುತ್ತಿವೆ. ರಶ್ಯ, ಚೀನಾ, ತುರ್ಕಿಯ, ಜಿ - 7 ದೇಶಗಳು ಮತ್ತು ಯುರೋಪಿಯನ್ ಒಕ್ಕೂಟದ ದೇಶಗಳು, ಆರಂಭದಲ್ಲಿ ತಟಸ್ಥ ಅಥವಾ ಇಸ್ರೇಲ್ ಪರ ಧೋರಣೆ ತಾಳಿದಂತೆ ಕಂಡರೂ ಒಂದೇ ವಾರದಲ್ಲಿ ಇಸ್ರೇಲ್ ಪರ ಒಲವು ತೀವ್ರವಾಗಿ ಕುಸಿದಿದೆ. ಶಾಂತಿ ಮತ್ತು ಯುದ್ಧ ನಿಲುಗಡೆಗೆ ಆಗ್ರಹ ಹೆಚ್ಚುತ್ತಿದೆ. ಯಾವುದೇ ಬೇಜವಾಬ್ದಾರಿಯುತ ಕ್ರಮ ಕೈಗೊಳ್ಳದಂತೆ ರಶ್ಯ, ಚೀನಾ ಮತ್ತು ಯುರೋಪಿಯನ್ ಒಕ್ಕೂಟದ ದೇಶಗಳು ಟ್ರಂಪ್‌ರಿಗೆ ಎಚ್ಚರಿಕೆ ನೀಡತೊಡಗಿವೆ.
ಇಂತಹ ಸನ್ನಿವೇಶದಲ್ಲಿ ನಮ್ಮ ದೇಶವು ತನ್ನ ನಿಲುವನ್ನು ಪ್ರಕಟಿಸುವ ಮುನ್ನ ಸಾಕಷ್ಟು ಮುಂಜಾಗ್ರತೆ ವಹಿಸಬೇಕಾದುದು ಅನಿವಾರ್ಯವಾಗಿದೆ. ಇತ್ತೀಚೆಗೆ ವಿವಿಧಕಾರಣಗಳಿಂದಾಗಿ ಜಾಗತಿಕ ಮಟ್ಟದಲ್ಲಿ ಭಾರತದ ಇಮೇಜು ಬಹಳಷ್ಟು ಹಿನ್ನಡೆ ಕಂಡಿದೆ. ವಿಶೇಷವಾಗಿ ಭಾರತವು ತನ್ನ ಸಾಂಪ್ರದಾಯಿಕ, ಫೆಲೆಸ್ತೀನ್ ಪರ ನಿಲುವನ್ನು ಕೈಬಿಟ್ಟು ಇಸ್ರೇಲ್ ಅನ್ನು ಮೆಚ್ಚಿಸುವುದಕ್ಕೆ ನೀಡಿದ ಕೆಲವು ಹೇಳಿಕೆಗಳ ಬಗ್ಗೆ ದೇಶದ ಒಳಗೂ ಹೊರಗೂ ಬಹಳಷ್ಟು ಅಸಮಾಧಾನ ಪ್ರಕಟವಾಗಿದೆ. ಕಳೆದ ಹಲವಾರು ದಶಕಗಳಿಂದ ಭಾರತವು ಅಂತರ್‌ರಾಷ್ಟ್ರೀಯ ವಿಷಯಗಳಲ್ಲಿ ಲಾಭ-ನಷ್ಟಗಳ ಬದಲು ನ್ಯಾಯನಿಷ್ಠೆಯಿಂದ ಪ್ರೇರಿತ ಧೋರಣೆ ತಾಳುತ್ತಾ ಬಂದಿದೆ. ಶೀತಲ ಸಮರದ ದೀರ್ಘಾವಧಿಯಲ್ಲೂ ಭಾರತವು ಯಾವುದೇ ಒತ್ತಡಕ್ಕೆ ಮಣಿಯದೆ ಅಲಿಪ್ತ, ತಟಸ್ಥ ಹಾಗೂ ತನ್ನ ತತ್ವಾದರ್ಶಗಳಲ್ಲಿ ಅಧಿಷ್ಟಿತ ನೀತಿಗಳನ್ನೇ ಪಾಲಿಸುತ್ತಾ ಬಂದಿದೆ. ಈ ನಿಲುವು ಜಾಗತಿಕ ಸ್ತರದಲ್ಲಿ ಭಾರತದ ಗೌರವ ಮತ್ತು ವರ್ಚಸ್ಸನ್ನು ಹೆಚ್ಚಿಸಿದೆ. ಇಂದು ಕೂಡಾ ಭಾರತದ ಮುಂದಿರುವುದು ಅದೇ ಆಯ್ಕೆ. ಅಮೆರಿಕವನ್ನು ಮೆಚ್ಚಿಸಲಿಕ್ಕಾಗಿ ತನ್ನ ತತ್ವಾದರ್ಶಗಳನ್ನು ಬಲಿಕೊಡಬೇಕಾದ ಯಾವುದೇ ಅನಿವಾರ್ಯತೆ, ನೆರೆಯ ಪಾಕಿಸ್ತಾನಕ್ಕಿರುವಂತೆ ಭಾರತಕ್ಕಿಲ್ಲ. ಇದು ಭಾರತದ ಮಟ್ಟಿಗೆ ಸತ್ವ ಪರೀಕ್ಷೆಯ ಸಂದರ್ಭವಾಗಿದೆ. ನಮ್ಮ ಪಾಲಿಗೆ ಇರಾನ್ ಮತ್ತು ಇಸ್ರೇಲ್ ಎರಡೂ ಮಿತ್ರ ದೇಶಗಳು. ಆ ಪೈಕಿ ಯಾರು ಹೊಸ ಮಿತ್ರ ಮತ್ತು ಯಾರು ಹಳೆಯ ಮಿತ್ರ ಎಂಬುದಕ್ಕಿಂತ ಇಂದಿನ ನಿರ್ದಿಷ್ಟ ಸನ್ನಿವೇಶದಲ್ಲಿ ಯಾರು ತಪ್ಪಿತಸ್ಥರು ಮತ್ತು ಯಾರು ಬಲಿ ಪಶುಗಳು ಎಂಬುದನ್ನು ನೋಡಿ, ನ್ಯಾಯದ ಆಧಾರದಲ್ಲಿ ನಮ್ಮ ಧೋರಣೆಯನ್ನು ನಿರ್ಧರಿಸುವ ಅವಕಾಶ ನಮ್ಮ ಮುಂದಿದೆ.
ಅಮೆರಿಕದ ವಿಷಯದಲ್ಲಿ ನಾವು ಎಷ್ಟು ಎಚ್ಚರವಹಿಸುತ್ತಿರಬೇಕು ಎಂಬುದನ್ನು ತೀರಾ ಇತ್ತೀಚಿನ ಕೆಲವು ಬೆಳವಣಿಗೆಗಳು ನಮಗೆ ಚೆನ್ನಾಗಿ ಕಲಿಸಿಕೊಟ್ಟಿವೆ. ಪಹಲ್ಗಾಮ್ ದುರಂತದ ಬಳಿಕ ಪಾಕಿಸ್ತಾನವನ್ನು ದಂಡಿಸುವ ಕಾರ್ಯಾಚರಣೆಯಲ್ಲಿ ನಮ್ಮ ಜೊತೆ ನಿಲ್ಲಬೇಕಾಗಿದ್ದ ಅಮೆರಿಕ ಅಪರಾಧಿಯನ್ನು ಮತ್ತು ಸಂತ್ರಸ್ತನನ್ನು ಸಮಾನ ಸ್ತರದಲ್ಲಿ ನಿಲ್ಲಿಸಿ ಇಬ್ಬರೂ ತನ್ನ ಸಮಾನಮಿತ್ರರೆಂದು ಪದೇಪದೇ ಸಾರಿತು. ಯುದ್ಧ ನಿಲ್ಲಿಸಿದ ನಮ್ಮ ಔದಾರ್ಯದ ಶ್ರೇಯಸ್ಸನ್ನು ಕೂಡಾ ತಾನು ದೋಚಿಕೊಂಡಿತು. ಸಾಲದ್ದಕ್ಕೆ ಅಪರಾಧಿ ದೇಶದ ಮಿಲಿಟರಿ ಮುಖ್ಯಸ್ಥನನ್ನು ಕರೆದು ವಿಶೇಷ ಆತಿಥ್ಯ ನೀಡುವ ಮೂಲಕ ತನ್ನ ವಾಲಿಕೆ ಯಾವ ಕಡೆಗೆಂಬುದನ್ನು ಬಹಿರಂಗ ಪಡಿಸಿತು. ಇಂತಹ ಸನ್ನಿವೇಶದಲ್ಲಿ ಭಾರತ ಇಸ್ರೇಲ್ ಪರ ನಿಲ್ಲುವುದೆಂದರೆ ನೇರವಾಗಿ ಇಸ್ರೇಲ್ ನ ನಿಶ್ಶರ್ತ ಪೋಷಕ ದೇಶವಾಗಿರುವ ಅಮೆರಿಕ ಪರ ನಿಲ್ಲುವುದೆಂದೇ ಅರ್ಥ. ಆಮೂಲಕ ಅಮೆರಿಕದ ಎಲ್ಲ ಸರ್ವಾಧಿಕಾರಿ, ನವವಸಾಹತುಶಾಹಿ ಅಕ್ರಮ ಧೋರಣೆಗಳಿಗೆ ಮಾನ್ಯತೆ ನೀಡುವುದೆಂದೇ ಅರ್ಥ. ಈ ಸಂದರ್ಭದಲ್ಲಿ ಮೋದಿ ಸರಕಾರವು ಅಷ್ಟು ದೊಡ್ಡ ತಪ್ಪನ್ನು ಮಾಡಲಾರದು ಮತ್ತು ಒಂದು ಪಕ್ಷದ ಕಡೆಗೆ ವಾಲುವ ಬದಲು ಇರಾನ್ - ಇಸ್ರೇಲ್ ನಡುವೆ ಯುದ್ಧ ನಿಲುಗಡೆಗೆ, ಫೆಲೆಸ್ತೀನ್ ಜನತೆಯ ಮೂಲಭೂತ ಹಕ್ಕುಗಳ ಪುನಃಸ್ಥಾಪನೆಗೆ ಮತ್ತು ನ್ಯಾಯ ಮತ್ತು ಸಮಷ್ಟಿಹಿತದ ಆಧಾರದಲ್ಲಿ ಎಲ್ಲ ಬಿಕ್ಕಟ್ಟುಗಳ ಇತ್ಯರ್ಥಕ್ಕೆ ಆಗ್ರಹಿಸುವ ಮೂಲಕ ತನ್ನ ಸಾಂಪ್ರದಾಯಿಕ ಅಲಿಪ್ತತೆ ಹಾಗೂ ಹಿರಿಮೆಯನ್ನು ಎತ್ತಿಹಿಡಿಯುವುದೆಂದು ಆಶಿಸೋಣ.







