ಕೇಂದ್ರ-ರಾಜ್ಯಗಳ ಸಂಬಂಧ ಹದಗೆಡಲು ಯಾರು ಕಾರಣ?

PC: PTI
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಭಾರತ ಎಂಬುದು ಒಂದು ಒಕ್ಕೂಟ ರಾಷ್ಟ್ರ. ಕೇಂದ್ರ ಸರಕಾರವೆಂದು ಬಳಕೆಯಲ್ಲಿ ಕರೆಯುತ್ತಿರುವುದು ವಾಸ್ತವವಾಗಿ, ಸಂವಿಧಾನಾತ್ಮಕವಾಗಿ ಒಕ್ಕೂಟ ಸರಕಾರವನ್ನು. ರಾಜ್ಯಗಳು ಮತ್ತು ಒಕ್ಕೂಟ ಸರಕಾರದ ನಡುವೆ ಯಾವುದೇ ವೈಮನಸ್ಸು ಉಂಟಾಗದಂತೆ ಎಚ್ಚರದಿಂದ ವರ್ತಿಸಬೇಕಾದುದು ಒಕ್ಕೂಟ ಸರಕಾರ ಮತ್ತು ರಾಜ್ಯ ಸರಕಾರಗಳ ಕರ್ತವ್ಯ. ಆದರೆ ಕಳೆದ ಹತ್ತು ವರ್ಷಗಳಿಂದ ಒಕ್ಕೂಟ ಮತ್ತು ರಾಜ್ಯ ಸರಕಾರಗಳ ನಡುವಿನ ಸಂಬಂಧ ಅಷ್ಟೊಂದು ಸೌಹಾರ್ದಯುತವಾಗಿಲ್ಲ. ಈ ಹಿನ್ನೆಲೆಯಲ್ಲಿ ನೀತಿ ಆಯೋಗದ ಆಡಳಿತ ಮಂಡಳಿಯ 10ನೇ ಸಭೆಯಲ್ಲಿ ಅಪರೂಪಕ್ಕೆ ಭಾಗವಹಿಸಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಆಡಿದ ಮಾತುಗಳು ಗಮನಾರ್ಹ. ‘‘ಕೇಂದ್ರ ಮತ್ತು ರಾಜ್ಯ ಸರಕಾರಗಳು ಒಂದು ತಂಡವಾಗಿ ಕೆಲಸ ಮಾಡಬೇಕು’’ ಎಂದು ಪ್ರಧಾನಿ ಮೋದಿಯವರು ಹೇಳಿದ್ದಾರೆ. ಈ ಮಾತು ಹೃದಯಾಂತರಾಳದಿಂದ ಬಂದಿದ್ದರೆ ಅದು ಸ್ವಾಗತಾರ್ಹ.ಆದರೆ ಕಾಟಾಚಾರದ ಹೇಳಿಕೆಯಾಗಿದ್ದರೆ ಪ್ರಯೋಜನವಿಲ್ಲ.
ನೀತಿ ಆಯೋಗದ ಆಡಳಿತ ಮಂಡಳಿ ಸಭೆಯಲ್ಲಿ ಇಂತಹ ಮಾತುಗಳನ್ನು ಆಡುವ ಮುನ್ನ ಪ್ರಧಾನ ಮಂತ್ರಿಗಳು ಮೊದಲು ಆತ್ಮಾವಲೋಕನ ಮಾಡಿಕೊಳ್ಳುವುದು ಅಗತ್ಯವಾಗಿದೆ. ಪ್ರಧಾನಿಯಾಗಿ ಅವರು, ಅವರ ಸರಕಾರ ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಿಗೆ ಸಂಬಂಧಿಸಿದಂತೆ ನಡೆದುಕೊಂಡ ರೀತಿ ಎಂಥದು?, ರಾಜ್ಯಪಾಲರುಗಳನ್ನು ಬಳಸಿಕೊಂಡು ಅಲ್ಲಿನ ಸರಕಾರಗಳಿಗೆ ನಿರಂತರವಾಗಿ ಕೊಡುತ್ತಿರುವ ಕಿರುಕುಳ, ಚುನಾಯಿತ ಸರಕಾರಗಳನ್ನು ಉರುಳಿಸಲು ಮಾಡುತ್ತಾ ಬಂದ ಕುತಂತ್ರ, ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಶಾಸಕರನ್ನು ಬೆದರಿಸಿ ಆಪರೇಷನ್ ಕಮಲ ಮಾಡಲು ನಡೆಸಿದ ಮಸಲತ್ತು ಇವೆಲ್ಲವುಗಳ ಹಿಂದೆ ಯಾರಿದ್ದಾರೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಒಂದೆಡೆ ಚುನಾಯಿತ ಸರಕಾರಗಳನ್ನು ಬುಡಮೇಲು ಮಾಡುತ್ತಾ ಮತ್ತೊಂದೆಡೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಒಟ್ಟಾಗಿ ಕೆಲಸ ಮಾಡಬೇಕೆಂದು ಹೇಳಿಕೆ ನೀಡುವುದು ಪ್ರಾಮಾಣಿಕವಾದುದೆ? ಎಂಬ ಸಂದೇಹ ಸಹಜವಾಗಿ ಬರುತ್ತದೆ.
ನೀತಿ ಆಯೋಗದ ಆಡಳಿತ ಮಂಡಳಿಯ 10ನೇ ಸಭೆಯಲ್ಲಿ ಕರ್ನಾಟಕ, ಕೇರಳ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳು ಭಾಗವಹಿಸಿರಲಿಲ್ಲ.ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧ ಸೌಹಾರ್ದಯುತವಾಗಿಲ್ಲ ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ. ಒಕ್ಕೂಟ ಸರಕಾರ ಮತ್ತು ರಾಜ್ಯ ಸರಕಾರಗಳ ನಡುವಿನ ಸಂಬಂಧ ಸುಧಾರಿಸಬೇಕಾದರೆ ಬಿಜೆಪಿಯೇತರ ರಾಜ್ಯ ಸರಕಾರಗಳ ಬಗ್ಗೆ ನಕಾರಾತ್ಮಕ ನೀತಿಯನ್ನು ಕೈಬಿಡುವುದು ಅವಶ್ಯವಾಗಿದೆ. ತೆರಿಗೆ ವರಮಾನದಲ್ಲಿ ರಾಜ್ಯಗಳ ಪಾಲನ್ನು ನ್ಯಾಯವಾಗಿ ಕೊಡಬೇಕು. ಕೇಂದ್ರ ಮತ್ತು ರಾಜ್ಯಗಳ ನಡುವೆ ಹಣಕಾಸು ಹಂಚಿಕೆಯ ಕುರಿತಂತೆ ಉಂಟಾಗಿರುವ ಬಿಕ್ಕಟ್ಟನ್ನು ಮೊದಲು ನಿವಾರಿಸಬೇಕು. ಹಿಂದಿಯನ್ನು ರಾಷ್ಟ್ರ ಭಾಷೆಯೆಂದು ಹೇರುವ ಅಸಾಂವಿಧಾನಿಕ ಮಸಲತ್ತಿಗೆ ದಕ್ಷಿಣದ ರಾಜ್ಯಗಳ ಸ್ಪಷ್ಟ ವಿರೋಧವಿದೆ. ಹಾಗಾಗಿ ಒಕ್ಕೂಟ ಸರಕಾರ ಹಿಂದಿ ಹೇರಿಕೆಯನ್ನು ಕೈ ಬಿಡಬೇಕು. ಚುನಾಯಿತ ಸರಕಾರಗಳನ್ನು ಉರುಳಿಸಲು ರಾಜ್ಯಪಾಲರುಗಳನ್ನು ದುರುಪಯೋಗ ಮಾಡಿಕೊಳ್ಳವುದನ್ನು ಕೈ ಬಿಡಬೇಕು. ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡುವುದನ್ನು ನಿಲ್ಲಿಸಬೇಕು. ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳನ್ನು ತಾರತಮ್ಯದಿಂದ ನೋಡುವುದನ್ನು ನಿಲ್ಲಿಸಬೇಕು.
ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧ ಹದಗೆಡಲು ಇನ್ನೊಂದು ಬಹುಮುಖ್ಯ ಕಾರಣ ಭಾರತದ ಬಹುತ್ವ ಸ್ವರೂಪವನ್ನು ಒಪ್ಪಿಕೊಳ್ಳದಿರುವ ಮೋದಿಯವರ ನೇತೃತ್ವದ ಸರಕಾರದ ಒಂದು ಬಹುದೊಡ್ಡ ಲೋಪ. ವೈವಿಧ್ಯತೆಯ ಈ ನೆಲದಲ್ಲಿ ಏಕರೂಪತೆಯನ್ನು ಹೇರಲು ಅಧಿಕಾರಕ್ಕೆ ಬಂದಾಗಿನಿಂದಲೂ ಸರಕಾರ ಯತ್ನಿಸುತ್ತಲೇ ಇದೆ. ಒಂದೇ ಭಾಷೆ, ಒಂದೇ ಧರ್ಮ, ಒಂದೇ ರೇಷನ್ ಕಾರ್ಡ್ ಹೀಗೆ ನಾನಾ ಕಸರತ್ತುಗಳನ್ನು ಮಾಡುತ್ತಾ ಬಹುತ್ವಕ್ಕೆ ಧಕ್ಕೆ ತರುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಇಂಥ ನಕಾರಾತ್ಮಕ ನೀತಿಯನ್ನು ಕೈ ಬಿಡದಿದ್ದರೆ, ಕೇಂದ್ರ ಮತ್ತು ರಾಜ್ಯಗಳ ನಡುವಿನ ದ್ವಿಪಕ್ಷೀಯ ಸಂಬಂಧ ಸುಧಾರಿಸಲು ಹೇಗೆ ಸಾಧ್ಯ? ನರೇಂದ್ರ ಮೋದಿಯವರ ನೇತೃತ್ವದ ಒಕ್ಕೂಟ ಸರಕಾರ ಈ ದೇಶವನ್ನು ತನ್ನ ಪಾಳೆಗಾರಿಕೆ ಎಂದು ಭಾವಿಸಿದಂತೆ ಕಾಣುತ್ತಿದೆ. ಇಂತಹ ಪಾಳೆಗಾರಿಕೆ ನೀತಿಯನ್ನು ಕೈ ಬಿಡಬೇಕು. ಇಲ್ಲಿ ವಿವಿಧ ರಾಜ್ಯಗಳು ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಹಾಗೂ ವಿಭಿನ್ನವಾಗಿವೆ. ಅವುಗಳ ಅಸ್ಮಿತೆಯನ್ನು ಗೌರವಿಸಿದರೆ ಮಾತ್ರ, ಕೇಂದ್ರ ಮತ್ತು ರಾಜ್ಯಗಳ ಸಂಬಂಧ ಸುಧಾರಿಸಲು ಸಾಧ್ಯ.
ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರದಲ್ಲಿ ಮತ್ತು ರಾಜ್ಯಗಳಲ್ಲಿ ಒಂದೇ ಪಕ್ಷದ ಸರಕಾರವಿರಬೇಕೆಂದು ಬಯಸುವುದು ಸರಿಯಲ್ಲ. ಆಯಾ ರಾಜ್ಯಗಳ ಭಾಷೆ, ಸಂಸ್ಕೃತಿ, ಆಹಾರ ಪದ್ಧತಿ ಮುಂತಾದವುಗಳನ್ನು ಆಧರಿಸಿ ಕೆಲವು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಅಧಿಕಾರಕ್ಕೆ ಬರುವುದು ಸಹಜ. ಇಂತಹ ಸನ್ನಿವೇಶದಲ್ಲಿ ಪರಸ್ಪರ ಹೊಂದಾಣಿಕೆ ಅನಿವಾರ್ಯವಾಗಿದೆ. ಪ್ರಧಾನಿಯವರಿಗೆ ಇಂತಹ ಹೊಂದಾಣಿಕೆ ಬೇಕಾಗಿದ್ದರೆ ಅವರು ಮತ್ತು ಅವರ ಸರಕಾರ ತಮ್ಮ ಯಜಮಾನಿಕೆಯ ನೀತಿಯನ್ನು ಕೈ ಬಿಡಬೇಕು. ಕೇವಲ ನೀತಿ ಆಯೋಗದ ಸಭೆಯಲ್ಲಿ ಹೇಳಿದರೆ ಮಾತ್ರ ಸಾಲದು. ಕಾರ್ಯರೂಪದಲ್ಲೂ ಇದು ಜಾರಿಗೆ ಬರಬೇಕು. ಜಿಎಸ್ಟಿ ಜಾರಿಗೆ ಬಂದ ನಂತರ ರಾಜ್ಯಗಳು ತೆರಿಗೆ ನಿರ್ಧರಿಸುವ ಅಧಿಕಾರವನ್ನು ಕಳೆದುಕೊಂಡಂತಾಗಿದೆ. ಈಗ ರಾಜ್ಯಗಳು ತೆರಿಗೆ ಸಂಗ್ರಹಿಸಿ ಕೇಂದ್ರಕ್ಕೆ ಕೊಡುವ ವಸೂಲಿ ಏಜೆಂಟರಂತಾಗಿವೆ. ರಾಜ್ಯಗಳ ಪಾಲಿನ ಹಣವನ್ನು ಬಿಡುಗಡೆ ಮಾಡಲು ಕೇಂದ್ರ ಸರಕಾರ ಸತಾಯಿಸುತ್ತಿದೆ.ಇಂಥ ಸನ್ನಿವೇಶದಲ್ಲಿ ಕೇಂದ್ರ-ರಾಜ್ಯಗಳ ಸಂಬಂಧ ಸುಧಾರಿಸಲು ಹೇಗೆ ಸಾಧ್ಯ?
ಪ್ರಧಾನ ಮಂತ್ರಿಗಳು ಹೇಳಿದಂತೆ ರಾಜ್ಯಗಳು ಮತ್ತು ಕೇಂದ್ರ ಒಂದು ತಂಡವಾಗಿ ಕೆಲಸ ಮಾಡಬೇಕೆಂದರೆ ತೆರಿಗೆ ವರಮಾನದಲ್ಲಿ ರಾಜ್ಯಗಳಿಗೆ ನ್ಯಾಯ ಸಮ್ಮತವಾದ ಪಾಲನ್ನು ನೀಡಬೇಕು. ತೆರಿಗೆ ವರಮಾನದಲ್ಲಿ ತಮಗೆ ಹೆಚ್ಚಿನ ಪಾಲು ಬೇಕೆಂದು ತಮಿಳುನಾಡು ಹಾಗೂ ಜಾರ್ಖಂಡ್ ಮುಖ್ಯಮಂತ್ರಿಗಳು ನೀತಿ ಆಯೋಗದ ಸಭೆಯಲ್ಲಿ ಆಗ್ರಹಪಡಿಸಿರುವುದು ಅನಿರೀಕ್ಷಿತವೇನಲ್ಲ. ಕೇಂದ್ರ ಮತ್ತು ರಾಜ್ಯಗಳ ನಡುವಿನ ಒಕ್ಕೂಟ ವ್ಯವಸ್ಥೆಯ ಸಂಬಂಧವು ಸೌಹಾರ್ದಯುತವಾಗಿರಬೇಕೆಂದರೆ ಕೇಂದ್ರದ ನೀತಿ ಮೊದಲು ಬದಲಾಗಬೇಕು.
ಕೇಂದ್ರ ಮತ್ತು ರಾಜ್ಯಗಳ ನಡುವಿನ ಅಪನಂಬಿಕೆಯಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುತ್ತದೆ. ಈ ಅಪನಂಬಿಕೆಗೆ ಕೇಂದ್ರ ಸರಕಾರವೇ ಕಾರಣ ಎಂದು ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳ ಆರೋಪವಾಗಿದೆ. ಹಣಕಾಸು ಹಂಚಿಕೆ ಮಾತ್ರವಲ್ಲ, ರಾಜ್ಯಪಾಲರ ಮೂಲಕ ರಾಜ್ಯ ಸರಕಾರಗಳಿಗೆ ಕಿರುಕುಳ ಕೊಡುವುದು, ತನಿಖಾ ಸಂಸ್ಥೆಗಳ ಮೂಲಕ ತೊಂದರೆ ಕೊಡುವುದು, ಪ್ರತಿಯೊಂದರಲ್ಲಿ ತಾರತಮ್ಯ ಇವೇ ಮುಂತಾದ ಕೇಂದ್ರ ಸರಕಾರದ ನಡೆಯಿಂದ ಸಂಬಂಧ ಹದಗೆಟ್ಟಿದೆ. ಇದನ್ನು ಸರಿಪಡಿಸಲು ಕೇಂದ್ರ ಸರಕಾರವೇ ಸಕಾರಾತ್ಮಕ ನಿಲುವನ್ನು ತಾಳಬೇಕಾಗಿದೆ.