ನ್ಯಾಯದಾನ ವಿಳಂಬಕ್ಕೆ ಯಾರು ಹೊಣೆ?

ಸಾಂದರ್ಭಿಕ ಚಿತ್ರ (AI)
ದೇಶದಲ್ಲಿ ಕೆಳ ಹಂತದ ನ್ಯಾಯಾಲಯಗಳಿಂದ ಹಿಡಿದು ಸರ್ವೋಚ್ಚ ನ್ಯಾಯಾಲಯದ ವರೆಗೆ ಸಾವಿರಾರು ಪ್ರಕರಣಗಳು ವಿಚಾರಣೆಯ ಹಂತದಲ್ಲಿ ಬಾಕಿ ಉಳಿದಿವೆ. ಸರ್ವೋಚ್ಚ ನ್ಯಾಯಾಲಯವೊಂದರಲ್ಲೇ 93 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ವಿಚಾರಣೆಗಾಗಿ ಕಾದಿವೆ. ಇದಕ್ಕೆ ನ್ಯಾಯಾಧೀಶರ ಕೊರತೆ ಬಹುಮುಖ್ಯ ಕಾರಣಗಳಲ್ಲೊಂದಾಗಿದೆ. ಈ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಸಂಖ್ಯೆಯನ್ನು 34ರಿಂದ 38ಕ್ಕೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. 2019ರಲ್ಲಿ ನ್ಯಾಯಾಧೀಶರ ಸಂಖ್ಯೆಯನ್ನು 31ರಿಂದ 34ಕ್ಕೆ ಹೆಚ್ಚಿಸಲಾಗಿತ್ತು. ನ್ಯಾಯಾಧೀಶರ ನೇಮಕಾತಿ ನಂತರವೂ ವಿಚಾರಣೆಯ ಹಂತದಲ್ಲಿ ಇರುವ ಪ್ರಕರಣಗಳ ಸಂಖ್ಯೆ ಶೇ. 50ರಷ್ಟು ಹೆಚ್ಚಾಗಿದೆ.
ನ್ಯಾಯಾಲಯದಲ್ಲಿರುವ ಪ್ರಕರಣಗಳು ಬಾಕಿ ಉಳಿಯಲು ನ್ಯಾಯಾಧೀಶರ ಸಂಖ್ಯೆ ಕಡಿಮೆ ಇರುವುದೊಂದೇ ಕಾರಣವಲ್ಲ. ಇಡೀ ನ್ಯಾಯಾಲಯಗಳ ವ್ಯವಸ್ಥೆಯ ಮೂಲಭೂತ ಬದಲಾವಣೆ ಅಗತ್ಯವಾಗಿದೆ. ಸುಪ್ರೀಂ ಕೋರ್ಟ್ನಲ್ಲಿ ಪ್ರಕರಣವೊಂದು ಇತ್ಯರ್ಥವಾಗಲು ಕನಿಷ್ಠ ಒಂದರಿಂದ ಮೂರು ವರ್ಷಗಳು ಬೇಕಾಗುತ್ತವೆ. ಹಲವು ಪ್ರಕರಣಗಳು 13-14 ವರ್ಷಗಳಿಗಿಂದ ವಿಚಾರಣೆಯಿಲ್ಲದೆ ಉಳಿದಿವೆ.
ವಾಸ್ತವ ಸಂಗತಿಯೆಂದರೆ ಸರ್ವೋಚ್ಚ ನ್ಯಾಯಾಲಯಕ್ಕೆ ಮಂಜೂರಾಗಿರುವ ನ್ಯಾಯಾಧೀಶರನ್ನು ಸಂಪೂರ್ಣವಾಗಿ ಭರ್ತಿ ಮಾಡಿಕೊಳ್ಳಲು ಈ ವರೆಗೆ ಆಗಿಲ್ಲ. ಇದಕ್ಕೆ ಹಲವಾರು ಕಾರಣಗಳಿವೆ. ಉಳಿದವುಗಳಿಗಿಂತ ಮುಖ್ಯ ಕಾರಣವೆಂದರೆ, ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯಾಧೀಶರ ಸಮಿತಿಯ( ಕೊಲಿಜಿಯಂ) ಜೊತೆಗಿನ ಭಿನ್ನಾಭಿಪ್ರಾಯಗಳಿಂದಾಗಿ ಹೊಸ ನ್ಯಾಯಾಧೀಶರನ್ನು ನೇಮಕ ಮಾಡಲು ನರೇಂದ್ರ ಮೋದಿಯವರ ಕೇಂದ್ರ ಸರಕಾರ ಬೇಕಂತಲೇ ವಿಳಂಬ ಮಾಡುತ್ತಿರುವುದಾಗಿದೆ.ಕೇಂದ್ರ ಸರಕಾರದ ಈ ನಕಾರಾತ್ಮಕ ನೀತಿಯಿಂದಾಗಿ ತಾನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಒಪ್ಪಿಕೊಳ್ಳುವ ಪ್ರಕರಣಗಳ ವಿಚಾರದಲ್ಲಿ ನ್ಯಾಯಾಲಯ ಹಿಂದೆ ಮುಂದೆ ನೋಡಬೇಕಾಗಿ ಬಂದಿದೆ. ಹಲವು ಪ್ರಕರಣಗಳು ಸರ್ವೋಚ್ಚ ನ್ಯಾಯಾಲಯ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕಾದಷ್ಟು ಗಂಭೀರವಾಗಿ ಇರುವುದಿಲ್ಲ ಎಂಬ ಅಭಿಪ್ರಾಯವೂ ಇದೆ.
ವಿಚಾರಣೆಯ ಹಂತದಲ್ಲಿ ಇರುವ ಪ್ರಕರಣಗಳ ಇತ್ಯರ್ಥಕ್ಕೆ ನ್ಯಾಯಾಧೀಶರ ಸಂಖ್ಯೆಯನ್ನು ಹೆಚ್ಚಿಸುವ ಜೊತೆಗೆ ಹೊಸ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕೆಂಬ ಸಲಹೆಗಳು ಬಂದಿವೆ. ಉದಾಹರಣೆಗೆ ಡಿಜಿಟಲ್ ಇ-ಫೈಲಿಂಗ್ ವ್ಯವಸ್ಥೆಯನ್ನು ಹೆಚ್ಚು ಬಳಸಿಕೊಳ್ಳಬಹುದಾಗಿದೆ. ಇದರಿಂದ ಸಮಯ ವ್ಯಯವಾಗುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ. ವಾದ, ಪ್ರತಿವಾದಗಳನ್ನು ಕೇಳಲು ಸಮಯ ಮಿತಿಯನ್ನು ನಿಗದಿ ಪಡಿಸುವುದು ಅಗತ್ಯವಾಗಿದೆ. ಅನಗತ್ಯದ ಸಣ್ಣಪುಟ್ಟ ಪ್ರಕರಣಗಳನ್ನು ನ್ಯಾಯಾಲಯಕ್ಕೆ ತರದೆ, ಹೊಸ ತಂತ್ರಜ್ಞಾನ ಬಳಸಿ ಬಗೆಹರಿಸಿಕೊಳ್ಳಬಹುದಾಗಿದೆ. ವಾಸ್ತವವಾಗಿ ಸರ್ವೋಚ್ಚ ನ್ಯಾಯಾಲಯ ಸೇರಿದಂತೆ ಎಲ್ಲ ನ್ಯಾಯಾಲಯಗಳಲ್ಲಿ ಸರಕಾರದ ಮೊಕದ್ದಮೆಗಳ ಸಂಖ್ಯೆ ದೊಡ್ಡದಿದೆ. ಅನೇಕ ಪ್ರಕರಣಗಳಲ್ಲಿ ನ್ಯಾಯಾಲಯದ ಮಧ್ಯ ಪ್ರವೇಶವೂ ಅಗತ್ಯವಿರುವುದಿಲ್ಲ.
ಸರ್ವೋಚ್ಚ ನ್ಯಾಯಾಲಯದ ಪರಿಸ್ಥಿತಿ ಇದಾದರೆ ದೇಶದ ಕೆಳ ಹಂತದ ನ್ಯಾಯಾಲಯಗಳ ಸ್ಥಿತಿ ಭಿನ್ನವಾಗಿಯೇನೂ ಇಲ್ಲ. ಕೆಳ ಹಂತದ ನ್ಯಾಯಾಲಯಗಳಲ್ಲಿ ನ್ಯಾಯದಾನ ಸಕಾಲಕ್ಕೆ ಒದಗುವುದೇ ಇಲ್ಲ. ನ್ಯಾಯದಾನದ ವಿಳಂಬ ಸಾಮಾನ್ಯವಾಗಿದೆ. ಹೈಕೋರ್ಟ್ಗಳಲ್ಲಿ 57 ಲಕ್ಷಕ್ಕಿಂತ ಹೆಚ್ಚು ಪ್ರಕರಣಗಳು ಬಾಕಿ ಉಳಿದಿವೆ. ಜಿಲ್ಲಾ ಮತ್ತು ಇತರ ಅಧೀನ ನ್ಯಾಯಾಲಯಗಳಲ್ಲಿ ಬಾಕಿ ಉಳಿದ ಪ್ರಕರಣಗಳ ಸಂಖ್ಯೆ 4.3 ಕೋಟಿಗಿಂತ ಜಾಸ್ತಿ ಇದೆ. ಹೀಗಿರುವುದರಿಂದ ನ್ಯಾಯದ ನಿರೀಕ್ಷೆಯಲ್ಲಿ ಇರುವವರಿಗೆ ಬದುಕಿರುವಾಗ ನ್ಯಾಯ ಸಿಗುವುದು ಸುಲಭವಲ್ಲ. ಹೀಗಾಗಿ ಅನೇಕ ಜನರ ಆಯುಷ್ಯವೆಲ್ಲ ನ್ಯಾಯಾಲಯಗಳಿಗೆ ಎಡತಾಕುವುದರಲ್ಲೇ ಕಳೆದುಹೋಗುತ್ತದೆ.
ನ್ಯಾಯಾಲಯಗಳಲ್ಲಿ ಪ್ರಕರಣಗಳ ವಿಚಾರಣೆ ಈಗಿನ ವೇಗದಲ್ಲಿ ನಡೆದರೆ 300 ವರ್ಷಕ್ಕಿಂತ ಹೆಚ್ಚು ವರ್ಷಗಳು ಬೇಕಾಗಬಹುದು ಎಂದು ಅಂದಾಜು ಮಾಡಲಾಗಿದೆ. ವಿಶೇಷವಾಗಿ ಕೆಳ ಹಂತದ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳು ಜನಸಾಮಾನ್ಯರನ್ನು ಹೆಚ್ಚು ಬಾಧಿಸುತ್ತವೆ. ಆದ್ಯತೆಯ ಮೇಲೆ ಇಂತಹ ಪ್ರಕರಣಗಳನ್ನು ಇತ್ಯರ್ಥ ಮಾಡಬೇಕಾಗಿದೆ.
ಅತ್ಯಂತ ಆತಂಕದ ಮತ್ತು ವಿಷಾದದ ಸಂಗತಿಯೆಂದರೆ ವಕೀಲರನ್ನು ನೇಮಿಸಿಕೊಂಡು ಜಾಮೀನು ಪಡೆಯುವ ಸಾಮರ್ಥ್ಯವಿಲ್ಲದ ಲಕ್ಷಾಂತರ ಮಂದಿ ವಿಚಾರಣಾಧೀನ ಕೈದಿಗಳಾಗಿ ದೇಶದ ಹಲವಾರು ಜೈಲುಗಳಲ್ಲಿ ಯಾತನೆ ಪಡುತ್ತಿದ್ದಾರೆ. ಮಾನವ ಹಕ್ಕುಗಳ ಪರ ಹೋರಾಟಗಾರರು ಕೂಡ ಸೆರೆಮನೆಗಳಲ್ಲಿ ಇದ್ದಾರೆ. ಹೀಗಾಗಿ ನ್ಯಾಯ ವಂಚಿತ ಜನರಿಗೆ ನ್ಯಾಯವನ್ನು ನೀಡಲು ಕೆಳ ಹಂತದ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರ ಸಂಖ್ಯೆಯನ್ನು ಹೆಚ್ಚಿಸುವುದು ತುರ್ತು ಅಗತ್ಯವಾಗಿದೆ. ಜನಸಾಮಾನ್ಯರಿಗೆ ನ್ಯಾಯದಾನ ಮಾಡುವುದು ವಿಳಂಬವಾದರೆ ಅವರು ವ್ಯವಸ್ಥೆಯ ಮೇಲೆ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ. ಹಾಗಾಗದಂತೆ ಸರಕಾರ ಎಚ್ಚರ ವಹಿಸಬೇಕು.
ಕೆಳಹಂತದ ನ್ಯಾಯಾಲಯಗಳಿಂದ ಹಿಡಿದು ಸರ್ವೋಚ್ಚ ನ್ಯಾಯಾಲಯದವರೆಗೆ ಖಾಲಿ ಉಳಿದಿರುವ ಹುದ್ದೆಗಳ ಭರ್ತಿಗೆ ಹಾಗೂ ಅಗತ್ಯವಿರುವ ನ್ಯಾಯಾಧೀಶರ ನೇಮಕದ ವಿಷಯದಲ್ಲಿ ಇನ್ನು ವಿಳಂಬವಾಗಬಾರದು. ಕೇಂದ್ರ ಸರಕಾರ ಇದನ್ನು ಪ್ರತಿಷ್ಠೆಯ ವಿಷಯವನ್ನಾಗಿ ಮಾಡಿಕೊಳ್ಳಬಾರದು. ಜನಸಾಮಾನ್ಯರಿಗೆ ನ್ಯಾಯ ಒದಗಿಸುವುದು ಸರಕಾರದ ಮೊದಲ ಆದ್ಯತೆ ಆಗಬೇಕು. ಜೊತೆಗೆ ನ್ಯಾಯಾಲಯದ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರುವುದು ಕೂಡ ಅಗತ್ಯವಾಗಿದೆ.






