ಯಾರು ಯಾರನ್ನು ಕ್ಷಮಿಸಬೇಕು?

Photo : X@narendramodi
ನೀಟ್ ಅಕ್ರಮಗಳಿಗಾಗಿ ದೇಶದ ಯುವಜನರ ಕ್ಷಮೆ ಯಾಚಿಸಬೇಕಾಗಿದ್ದ ಪ್ರಧಾನಿ ನರೇಂದ್ರ ಮೋದಿಯವರೇ, ‘ದೇಶವನ್ನು ಕ್ಷಮಿಸಲು ಮುಂದಾಗಿರುವುದು’ ವರ್ತಮಾನದ ಅತಿ ದೊಡ್ಡ ವಿಡಂಬನೆಯಾಗಿದೆ. ಜಂತರ್ಮಂತರ್ನಲ್ಲಿ ಈ ದೇಶದ ಯುವಜನರ ಪ್ರತಿಭಟನೆಗೆ ಮಣಿದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡುವ ಸ್ಥಿತಿ ನಿರ್ಮಾಣವಾದ ದಿನದಿಂದ ಕೇಂದ್ರ ಸರಕಾರ, ಆ ಮುಖಭಂಗದಿಂದ ತನ್ನನ್ನು ತಾನು ರಕ್ಷಿಸುವುದಕ್ಕೆ ದಾರಿಗಳನ್ನು ಹುಡುಕುತ್ತಿದೆ. ಅದರ ಭಾಗವಾಗಿ ಇದೀಗ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಸಾಮಾಜಿಕ ಜಾಲತಾಣದಲ್ಲಿ ಬಂದು, ‘‘ಪ್ರತಿಭಟನಾ ನಿರತ ವಿದ್ಯಾರ್ಥಿಗಳು ನನ್ನನ್ನು ನಿಂದಿಸಿದ್ದಾರೆ’’ ಎಂದು ಮೊಸಳೆ ಕಣ್ಣೀರು ಸುರಿಸಿದ್ದಾರೆ. ಅಷ್ಟೇ ಅಲ್ಲ, ಅವರನ್ನು ನಾನು ಕ್ಷಮಿಸಿದ್ದೇನೆ ಎಂದು ಔದಾರ್ಯವನ್ನೂ ಮೆರೆದಿದ್ದಾರೆ. ಶುಕ್ರವಾರ ಇನ್ಸ್ಟಾಗ್ರಾಮ್ನಲ್ಲಿ ವೀಡಿಯೊ ಸಂದೇಶ ನೀಡಿರುವ ಪ್ರಧಾನಿ ಮೋದಿಯವರು, ‘‘ಜಂತರ್ ಮಂತರ್ನಲ್ಲಿ ನಡೆದ ಘಟನೆ ನನ್ನನ್ನು ತೀವ್ರವಾಗಿ ನೋಯಿಸಿದೆ. ದೇಶದ ವಿವಿಧ ಭಾಗಗಳಿಂದ ಬಂದ ಕೆಲ ವಿದ್ಯಾರ್ಥಿಗಳು ನನ್ನ ವಿರುದ್ಧ ಅತ್ಯಂತ ನಿಂದನೀಯ ಭಾಷೆಯನ್ನು ಬಳಸಿದರು. ಅವರು ನನ್ನನ್ನು ಮತ್ತು ನನ್ನ ದಿವಂಗತ ತಾಯಿಯ ವಿರುದ್ಧವೂ ನಿಂದನೀಯ ಪದಗಳನ್ನು ಬಳಸಿದರು. ನನ್ನನ್ನು ನಿಂದಿಸಿದವರನ್ನು ನಾನು ಕ್ಷಮಿಸಲು ಬಯಸುತ್ತೇನೆ. ನನ್ನ ಈ ನಿರ್ಧಾರವನ್ನು ಸಮಾಜವು ಒಪ್ಪಿಕೊಳ್ಳಬೇಕು ಎಂದು ವಿನಂತಿಸುತ್ತೇನೆ’’ ಎಂದು ಕೇಳಿಕೊಂಡರು. ‘‘ದಾರಿ ತಪ್ಪಿದವರನ್ನು ದೂರ ತಳ್ಳುವ ಬದಲು ಅವರನ್ನು ಸರಿದಾರಿಗೆ ತರಬೇಕು’’ ಎಂದೂ ಕೇಳಿಕೊಂಡರು.
ಈ ಹೊಸ ಪ್ರಹಸನದ ಉದ್ದೇಶ ದೇಶಕ್ಕೆ ಈಗಾಗಲೇ ಸ್ಪಷ್ಟವಾಗಿದೆ. ನೀಟ್ ಪರೀಕ್ಷೆ ಅಕ್ರಮಗಳ ವಿರುದ್ಧ ಈ ದೇಶದ ಯುವಜನತೆ ಸಂಘಟಿತವಾಗಿ ಎತ್ತಿದ ಧ್ವನಿಯನ್ನು ಅವರು ತಿರುಚಲು ಮುಂದಾಗಿದ್ದಾರೆ. ಕೇಂದ್ರ ಸಚಿವರು ರಾಜೀನಾಮೆ ನೀಡಲೇ ಬೇಕು ಎನ್ನುವಂತಹ ಅನಿವಾರ್ಯ ಸ್ಥಿತಿಯೊಂದನ್ನು ದೇಶದಲ್ಲಿ ನಿರ್ಮಾಣ ಮಾಡಿದ ಯುವ ಶಕ್ತಿಯ ಹೋರಾಟ ಅವರಲ್ಲಿ ಭೀತಿ ಮೂಡಿಸಿದೆ. ಆದುದರಿಂದಲೇ, ಅವರು ವಿಷಯಾಂತರ ಮಾಡಲು ಹೊರಟಿದ್ದಾರೆ. ದೇಶಾದ್ಯಂತ ಸರಕಾರದ ವಿರುದ್ಧ ಮೂಡಿರುವ ಆಕ್ರೋಶವನ್ನು ಎದುರಿಸುವ ಶಕ್ತಿಯಿಲ್ಲದೆ, ತನ್ನ ಮೇಲೆ ವೈಯಕ್ತಿಕ ದಾಳಿ ನಡೆದಿದೆ ಎಂದು ಹೇಳುತ್ತಾ ಜನರಿಂದ ಅನುಕಂಪ ಗಿಟ್ಟಿಸುವ ವ್ಯರ್ಥ ಪ್ರಯತ್ನ ಮಾಡಿ ನಗೆ ಪಾಟಲಿಗೀಡಾಗಿದ್ದಾರೆ. ಹಾಗೆಯೇ ಪ್ರತಿಭಟನೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಲಾಠಿ ಚಾರ್ಜ್ ನಡೆಸಿರುವುದು, ಪೆಲೆಟ್ ಗನ್ಗಳನ್ನು ಬಳಸಿರುವುದು, ರೈಫಲ್ ದಾಳಿಗಳು ನಡೆದಿರುವುದು ಭಾರೀ ಚರ್ಚೆಯ ವಿಷಯವಾಗುತ್ತಿವೆ. ಕೇಂದ್ರ ಸಚಿವರ ರಾಜೀನಾಮೆಯ ಬಳಿಕವೂ ವಿದ್ಯಾರ್ಥಿಗಳ ಮೇಲೆ ಸರಕಾರ ನಡೆಸಿದ ದೌರ್ಜನ್ಯಗಳನ್ನು ಜನರು ಮರೆತಿಲ್ಲ. ಅದಕ್ಕೆ ಸಂಬಂಧಿಸಿ ಗಂಭೀರ ತನಿಖೆ ನಡೆಯಬೇಕು ಎನ್ನುವ ಭಾರೀ ಒತ್ತಡಗಳು ಬರುತ್ತಿವೆ. ತನ್ನ ಸರಕಾರ ವಿದ್ಯಾರ್ಥಿಗಳ ವಿರುದ್ಧ ನಡೆಸಿದ ದಾಂಧಲೆಗಳನ್ನು ಸಮರ್ಥಿಸುವುದಕ್ಕಾಗಿಯೇ ಇದೀಗ ವಿದ್ಯಾರ್ಥಿಗಳನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಈ ಹಿಂದೆ ಪಂಚತಂತ್ರ ಕತೆಯಲ್ಲಿ ತೋಳವು ಮೊದಲು ಸುಳ್ಳು ನೆಪಗಳನ್ನು ಹೇಳಿ ಬಳಿಕ ಕುರಿ ಮರಿಯ ಮೇಲೆ ಹಾರಿತು. ಆದರೆ ಇಲ್ಲಿ, ಆಧುನಿಕ ತೋಳ ಕುರಿ ಮರಿಗಳ ಮೇಲೆ ದಾಳಿ ನಡೆಸಿದ ಬಳಿಕ ಅದಕ್ಕೆ ಸಮರ್ಥನೆಗಳನ್ನು ಇನ್ಸ್ಟಾಗ್ರಾಂ ಮೂಲಕ ನೀಡಲು ಮುಂದಾಗಿದೆ.
ನಿಜಕ್ಕೂ ಯಾರು ಯಾರನ್ನು ಮೊದಲು ನಿಂದಿಸಿದರು ಎನ್ನುವುದನ್ನು ದೇಶವೂ ಗಮನಿಸಿದೆ. ನೀಟ್ ಅಕ್ರಮಗಳ ವಿರುದ್ಧ ವಿದ್ಯಾರ್ಥಿಗಳು ಜಂತರ್ಮಂತರ್ನಲ್ಲಿ ಸಂಘಟಿತರಾಗ ತೊಡಗಿದಾಗ, ಅವರನ್ನು ದೇಶದ್ರೋಹಿಗಳು ಎಂದು ನಿಂದಿಸಿದವರು ಯಾರು? ಪ್ರತಿಭಟನಾಕಾರರನ್ನು ವಿದೇಶಿ ಸಂಚುಕೋರರು, ಉಗ್ರಗಾಮಿಗಳು, ವಿದೇಶಿ ಶಕ್ತಿಗಳಿಂದ ಪ್ರೇರಣೆ ಪಡೆದವರು, ನಕ್ಸಲೈಟ್ಗಳು, ಚೀನಾದ ಬೆಂಬಲಿಗರು ಎಂದೆಲ್ಲ ಕರೆದು ಅವರನ್ನು ಅವಮಾನಿಸಿರುವುದು ಸ್ವತಃ ಪ್ರಧಾನಿ ಮೋದಿಯವರ ಸಹೋದ್ಯೋಗಿಗಳೇ ಆಗಿದ್ದಾರೆ. ತಾನು ಮಾಡಿದ ನಿಂದನೆಗಳು ಎಲ್ಲಿ ತನಗೆ ತಿರುಗು ಬಾಣವಾಗಬಹುದೋ ಎಂದು ಹೆದರಿ, ಇದೀಗ ನಿಂದನೆಯ ಗೂಬೆಯನ್ನು ವಿದ್ಯಾರ್ಥಿಗಳ ತಲೆಗೆ ಕಟ್ಟಲು ಮುಂದಾಗಿದ್ದಾರೆ. ಪ್ರಧಾನ್ ರಾಜೀನಾಮೆಯ ಬಳಿಕ ಈ ದೇಶದ ಪ್ರಧಾನಿಯವರು, ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ‘ಭಯೋತ್ಪಾದಕರು’ ಎಂದು ನಿಂದಿಸಿರುವುದಕ್ಕಾಗಿ ಮತ್ತು ಅವರ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯಗಳಿಗಾಗಿ ಕ್ಷಮೆಯಾಚಿಸಬೇಕಾಗಿತ್ತು. ಎಲ್ಲಿ ತಾನು ಕ್ಷಮೆಯಾಚಿಸಬೇಕಾಗುತ್ತದೋ ಎನ್ನುವ ಭಯದಿಂದಲೇ, ಇದೀಗ ಅವರೇ ವಿದ್ಯಾರ್ಥಿಗಳನ್ನು ಕ್ಷಮಿಸಲು ಮುಂದಾಗಿದ್ದಾರೆ.
‘‘ದಾರಿ ತಪ್ಪಿದವರನ್ನು ದೂರ ತಳ್ಳುವ ಬದಲು ಅವರನ್ನು ಸರಿದಾರಿಗೆ ತರಬೇಕು’’ ಎಂಬ ಪ್ರಧಾನಿಯ ಈ ಮಾತಿನಲ್ಲಿ ಸತ್ಯವಿದೆ. ಸರಕಾರ ದಾರಿ ತಪ್ಪಿತ್ತು ಮತ್ತು ಈ ದೇಶದ ಹೊಸ ತಲೆಮಾರಿನ ಯುವಕರು, ವಿದ್ಯಾರ್ಥಿಗಳು ಸಂಘಟಿತರಾಗಿ ದಾರಿ ತಪ್ಪಿದ ಸರಕಾರವನ್ನು ಸರಿದಾರಿಗೆ ತರುವ ಸಣ್ಣದೊಂದು ಪ್ರಯತ್ನವನ್ನು ಮಾಡಿದ್ದಾರೆ. ಅದಕ್ಕಾಗಿ ಈ ದೇಶದ ಯುವಕರಿಗೆ ಪ್ರಧಾನಿ ನರೇಂದ್ರ ಮೋದಿ ಕೃತಜ್ಞರಾಗಬೇಕು. ಉಳಿದಂತೆ, ತನ್ನದೇ ಪಕ್ಷದೊಳಗಿರುವ ನಾಯಕರು ಸಾರ್ವಜನಿಕ ಭಾಷಣಗಳಲ್ಲಿ ಬಳಸುತ್ತಿರುವ ನಿಂದನೀಯ ಪದಗಳು, ದ್ವೇಷದ ಮಾತುಗಳಿಗಾಗಿ ಪ್ರಧಾನಿಯವರು ದೇಶದ ಮುಂದೆ ಸಾವಿರ ಬಾರಿ ಕ್ಷ ಮೆ ಕೇಳಿದರೂ ಸಾಕಾಗದು. ಈ ಹಿಂದೆ ಲೋಕಸಭಾ ಚುನಾವಣಾ ಭಾಷಣದ ಸಂದರ್ಭದಲ್ಲಿ ಒಂದು ಸಮುದಾಯದ ವಿರುದ್ಧ ಇದೇ ಪ್ರಧಾನಿಯವರು ಎಂತಹ ಭಾಷೆಯನ್ನು ಬಳಸಿದ್ದರು ಎನ್ನುವುದನ್ನು ದೇಶ ಮರೆತಿಲ್ಲ. ಹಾಗೆಯೇ ರಾಹುಲ್ ಗಾಂಧಿ, ನೆಹರೂ, ಮನಮೋಹನ್ ಸಿಂಗ್ರಂತಹ ನಾಯಕರ ವಿರುದ್ಧ್ದ ತನ್ನ ಸಹೋದ್ಯೋಗಿಗಳು ಬಳಸಿದ, ಬಳಸುತ್ತಿರುವ ಭಾಷೆ ಇಂದಿನ ಯುವಕರಿಗೆ ಯಾವ ರೀತಿಯಲ್ಲಿ ಮಾದರಿ ಎನ್ನುವುದನ್ನು ಪ್ರಧಾನಿ ಮೋದಿಯವರೇ ದೇಶಕ್ಕೆ ಸ್ಪಷ್ಟಪಡಿಸಬೇಕು. ‘‘ಗೋಲಿಮಾರೋ ಸಾಲೋಂಕೋ’ ಎಂದು ಸಾರ್ವಜನಿಕವಾಗಿ ಕರೆ ನೀಡಿದ ದಿಲ್ಲಿ ಗಲಭೆಗೆ ಕಾರಣನಾದ ಬಿಜೆಪಿ ನಾಯಕ, ಮೋದಿ ಸರಕಾರದಲ್ಲಿ ಉನ್ನತ ಸ್ಥಾನವನ್ನು ಪಡೆದುಕೊಳ್ಳುತ್ತಾರೆ. ಇಂತಹ ಭಾಷೆಯನ್ನು ಬಳಸಿದ ಸಾಲು ಸಾಲು ನಾಯಕರನ್ನು ಎಡಬಲದಲ್ಲಿ ಇಟ್ಟುಕೊಂಡ ಪ್ರಧಾನಿಯವರು, ದೇಶದ ಯುವಕರನ್ನು, ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಘೋಷಿಸುವುದು ವಿಪರ್ಯಾಸವಲ್ಲದೆ ಇನ್ನೇನು? ನೀಟ್ ಅಕ್ರಮಗಳಿಗಾಗಿ, ಅದನ್ನು ವಿರೋಧಿಸಿ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಸಿರುವುದಕ್ಕಾಗಿ, ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿರುವುದಕ್ಕಾಗಿ ಪ್ರಧಾನಿ ಈ ದೇಶದ ಕ್ಷಮೆಯನ್ನು ಯಾಚಿಸಬೇಕು. ಕ್ಷಮಿಸಬೇಕೋ, ಬೇಡವೋ ಎನ್ನುವುದನ್ನು ಯುವಜನರೇ ತೀರ್ಮಾನಿಸುತ್ತಾರೆ. ಹಾಗೆಯೇ ಸುಳ್ಳು ಆರೋಪಗಳಲ್ಲಿ ಬಂಧಿಸಲ್ಪಟ್ಟ ಎಲ್ಲ ಪ್ರತಿಭಟನಾಕಾರರನ್ನು ಬಿಡುಗಡೆ ಮಾಡಲು ತಕ್ಷಣ ಆದೇಶ ನೀಡಬೇಕು. ಇದುವೇ ತನ್ನ ತಪ್ಪುಗಳಿಗೆ ಪ್ರಧಾನಿ ಮಾಡಬಹುದಾದ ಅತ್ಯುತ್ತಮ ಪ್ರಾಯಶ್ಚಿತವಾಗಿದೆ.






