ಇವರಿಗೆ ಏಕೆ ಈ ವಿಶೇಷ ಸೌಲಭ್ಯ?

ಬೆಂಗಳೂರಿನ ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿ ವ್ಯಕ್ತಿಯೊಬ್ಬರು ಪ್ರತಿಭಟನೆ ನಡೆಸಿರುವುದು. (ಫೈಲ್ ಫೋಟೊ)
ರಾಷ್ಟ್ರಪತಿಗಳು, ಪ್ರಧಾನ ಮಂತ್ರಿಗಳು, ರಾಜ್ಯಗಳ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳು ಸೇರಿದಂತೆ ಹಲವರನ್ನು ಅತಿಗಣ್ಯ ವ್ಯಕ್ತಿಗಳೆಂದು ಕರೆಯಲಾಗುತ್ತದೆ. ಇಂತಹ ಅತಿಗಣ್ಯ ವ್ಯಕ್ತಿಗಳು ಸರಕಾರದಿಂದ ಉಳಿದವರಿಗಿಲ್ಲದ ವಿಶೇಷ ಸೌಲಭ್ಯಗಳನ್ನು ಪಡೆಯುತ್ತಾರೆ. ಅನೂಚಾನವಾಗಿ ನಡೆದು ಕೊಂಡು ಬಂದ ಸಂಪ್ರದಾಯದಂತೆ ಈ ಅತಿಗಣ್ಯರು ತಮ್ಮ ಬಂಗಲೆಗಳಿಂದ ಹೊರಗೆ ಹೊರಟರೆ ಅವರ ಮತ್ತು ಅವರ ಬೆಂಗಾವಲು ವಾಹನಗಳಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ಜೀರೋ ಟ್ರಾಫಿಕ್ ಸೌಕರ್ಯ ಕಲ್ಪಿಸಲಾಗುತ್ತದೆ. ಇವರು ಹೊರಟ ದಾರಿಯಲ್ಲಿ ಬೇರಾವ ವಾಹನ ಸಂಚರಿಸಲು ಅವಕಾಶ ಇಲ್ಲ. ಉಳಿದ ಸಾರ್ವಜನಿಕರ ವಾಹನಗಳು ನಿಂತಲ್ಲೇ ನಿಲ್ಲಬೇಕಾಗುತ್ತದೆ. ಆಸ್ಪತ್ರೆ, ಶಾಲೆ-ಕಾಲೇಜುಗಳು ಸೇರಿದಂತೆ ಎಲ್ಲ ಕಡೆ ತುರ್ತಾಗಿ ಹೋಗಬೇಕಾದವರು ಯಾತನೆಯನ್ನು ಅನುಭವಿಸುತ್ತಾ ನಡು ರಸ್ತೆಯಲ್ಲೇ ನಿಲ್ಲಬೇಕಾಗುತ್ತದೆ.
ಈ ಅಧ್ವಾನಕ್ಕೆ ಇತ್ತೀಚಿನ ಉದಾಹರಣೆ ಅಂದರೆ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಮತ್ತು ಅವರ ಬೆಂಗಾವಲು ವಾಹನಗಳ ಸಂಚಾರಕ್ಕೆ ಯಾವುದೇ ಅಡ್ಡಿ ಉಂಟಾಗಬಾರದೆಂದು ಬೆಂಗಳೂರಿನ ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಇತರ ವಾಹನಗಳ ಸಂಚಾರಕ್ಕೆ ಅವಕಾಶ ನೀಡದೆ ಸ್ಥಗಿತಗೊಳಿಸಿರುವುದರ ಪರಿಣಾಮವಾಗಿ ತೊಂದರೆಗೆ ಒಳಗಾದ ವ್ಯಕ್ತಿಯೊಬ್ಬರು ನಡುರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಇದು ಬಹುತೇಕ ಎಲ್ಲರ ಗಮನವನ್ನು ಸೆಳೆಯಿತು. ತನ್ನ ಪತ್ನಿ ಗರ್ಭಿಣಿ, ಆಕೆಗೆ ತೊಂದರೆಯಾಗುತ್ತಿದೆ ಎಂದು ರಸ್ತೆಯಲ್ಲಿ ಪ್ರತಿಭಟನೆಯನ್ನು ನಡೆಸಿದ ಆ ವ್ಯಕ್ತಿ ಹೇಳಿದರು. ಆದರೆ ಇದು ಸತ್ಯವಲ್ಲ ಎಂದು ಪೊಲೀಸರು ನಂತರ ಹೇಳಿದರು. ಆದರೆ ಆತ ಏನೇ ಹೇಳಿರಲಿ ಈ ಘಟನೆಗೆ ಜನರಿಂದ ಬಂದ ಪ್ರತಿಕ್ರಿಯೆಯನ್ನು ತಳ್ಳಿ ಹಾಕಲು ಆಗುವುದಿಲ್ಲ. ಕೇವಲ ಕೆಲವು ಅತಿ ಗಣ್ಯರ ಸುಗಮ ಸಂಚಾರಕ್ಕಾಗಿ ಸಾವಿರಾರು ಜನಸಾಮಾನ್ಯರಿಗೆ ತೊಂದರೆ ಉಂಟು ಮಾಡುವುದು ಸರಿಯಲ್ಲ. ವಾಸ್ತವವಾಗಿ ರಾಜ್ಯಪಾಲರು ವೈದ್ಯಕೀಯ ತುರ್ತು ಕರೆ, ಪ್ರಾಕೃತಿಕ ವಿಕೋಪ ಅಥವಾ ಅಧಿಕೃತ ಸರಕಾರಿ ಕಾರ್ಯಕ್ರಮಕ್ಕಾಗಿ ಸಂಚರಿಸುತ್ತಿರಲಿಲ್ಲ. ಸದರಿ ವಿಮಾನ ನಿಲ್ದಾಣದಲ್ಲಿ ಇಳಿದು ಎಂದಿನಂತೆ ಲೋಕ ಭವನಕ್ಕೆ ತೆರಳುತ್ತಿದ್ದರು.
ವಾಸ್ತವ ಸಂಗತಿ ಇದಾಗಿದ್ದರೂ ಜನಸಾಮಾನ್ಯರು ರಸ್ತೆಯಲ್ಲಿ ತುಂಬಾ ಹೊತ್ತು ಕಾದು ನಿಲ್ಲಬೇಕಾಯಿತು. ರಾಜ್ಯಪಾಲರ ಸುರಕ್ಷತೆಗೆ ಬೆದರಿಕೆಯೇನೂ ಬಂದಿರಲಿಲ್ಲ. ಅವರಿಗೆ ಲಭ್ಯವಾದ ಭದ್ರತಾ ಸೌಕರ್ಯ ಅವರು ಅನುಭವಿಸುತ್ತಿರುವ ಹುದ್ದೆಯ ಕಾರಣದಿಂದಾಗಿ ದೊರಕಿದೆ. ಅದು ವ್ಯಕ್ತಿಯ ಕಾರಣಕ್ಕಾಗಿ ನೀಡಲಾದ ಭದ್ರತೆ ಅಲ್ಲ. ಅದಕ್ಕಾಗಿ ಉಳಿದವರ ವಾಹನಗಳನ್ನು ತಡೆದು ನಿಲ್ಲಿಸಿ ಜನಸಾಮಾನ್ಯರಿಗೆ ತೊಂದರೆ ಕೊಡಬಾರದಿತ್ತು.
ಇದು ರಾಜ್ಯಪಾಲರಿಗೆ ಸಂಬಂಧಿಸಿದ ವಿಷಯ ಮಾತ್ರವಲ್ಲ, ಸರಕಾರದ ಅತಿಗಣ್ಯ ವ್ಯಕ್ತಿಗಳು ಎಲ್ಲಿಯೇ ಪ್ರವಾಸ ಮಾಡಲಿ ಅವರು ಸಂಚರಿಸುವ ರಸ್ತೆಗಳಲ್ಲಿ ಇತರ ನಾಗರಿಕರು ಸಂಚರಿಸದಂತೆ ನಿರ್ಬಂಧ ಹೇರುವುದು, ಆ ರಸ್ತೆಯನ್ನು ಸಂಪರ್ಕಿಸುವ ಇತರ ರಸ್ತೆಗಳನ್ನು ಸ್ಥಗಿತಗೊಳಿಸುವುದು ಸರಿಯಲ್ಲ. ಬೆಂಗಳೂರಿನ ಕೆಂಪೇಗೌಡ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆ ಸಾಗುವ ರಸ್ತೆಗಳನ್ನು ಬಂದ್ ಮಾಡುವುದರ ಪರಿಣಾಮ ಮತ್ತು ತೊಂದರೆ ಬೆಂಗಳೂರು ನಾಗರಿಕರ ಅನುಭವಕ್ಕೆ ಆಗಾಗ ಬಂದಿದೆ. ಅತಿಗಣ್ಯ ವ್ಯಕ್ತಿಗಳ ಬೆಂಗಾವಲು ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ವಿಮಾನ ನಿಲ್ದಾಣ ರಸ್ತೆಯನ್ನು ಬಂದ್ ಮಾಡಿದ ಪರಿಣಾಮವಾಗಿ ಅನೇಕ ಬಾರಿ ಜನಸಾಮಾನ್ಯರು ವಿಮಾನ ಮತ್ತು ರೈಲು ತಪ್ಪಿಸಿಕೊಂಡ ಉದಾಹರಣೆಗಳಿವೆ. ಹಾಗಾಗಿಯೇ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಜನಸಾಮಾನ್ಯರಿಗೆ ಆಗುವ ತೊಂದರೆಗಳನ್ನು ಗಮನಿಸಿ ಜೀರೋ ಟ್ರಾಫಿಕ್ ಸೌಕರ್ಯ ತಮಗೆ ಬೇಡ ಎಂದು ಹೇಳಿದ್ದರು.ಒಂದು ಸಿಗ್ನಲ್ನಿಂದ ಇನ್ನೊಂದು ಸಿಗ್ನಲ್ ನಡುವೆ ಪೊಲೀಸರು ಸಮನ್ವಯ ಸಾಧಿಸಿ ಮುಖ್ಯಮಂತ್ರಿಗಳ ವಾಹನಕ್ಕೆ ಅನುಕೂಲ ಮಾಡಿಕೊಟ್ಟು ಇಡೀ ರಸ್ತೆಯನ್ನು ಬಂದ್ ಮಾಡುವ ಸಮಸ್ಯೆಯನ್ನು ಪರಿಹರಿಸಿದ್ದರು.
ವಾಸ್ತವವಾಗಿ ರಾಜ್ಯವೊಂದರಲ್ಲಿ ರಾಜ್ಯಪಾಲರು, ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರಿಗೆ ಮಾತ್ರ ಅಧಿಕೃತವಾಗಿ ಜೀರೋ ಟ್ರಾಫಿಕ್ ಸೌಲಭ್ಯಗಳನ್ನು ಒದಗಿಸಲು ಅವಕಾಶವಿದೆ. ಹೀಗಿದ್ದರೂ ಬೆಂಗಾವಲು ವಾಹನಗಳು ಹಾಗೂ ಪೊಲೀಸ್ ವಾಹನಗಳಿಗೆ ಭದ್ರತೆಯ ಹೆಸರಿನಲ್ಲಿ ಹಲವಾರು ಮಂದಿ ಜನಪ್ರತಿನಿಧಿಗಳಿಗೆ ವಿಶೇಷ ಸೌಕರ್ಯ ನೀಡಲಾಗಿದೆ. ಹೆಸರು ಭದ್ರತೆಯದಾದರೂ ಒಣ ಪ್ರತಿಷ್ಠೆಯ ಸಲುವಾಗಿ ಅನಗತ್ಯವಾಗಿ ನೀಡಲಾಗುತ್ತಿದೆ. ಈ ‘ಅತಿ ಗಣ್ಯ’ ವ್ಯಕ್ತಿಗಳ ಸಂಚಾರದಿಂದಾಗಿ ಜನಸಾಮಾನ್ಯರಿಗೆ ಅನಗತ್ಯ ತೊಂದರೆಯಾಗುತ್ತಿರುವ ಬಗ್ಗೆ ನ್ಯಾಯಾಲಯಗಳು ಆಗಾಗ ಆಕ್ರೋಶವನ್ನು ವ್ಯಕ್ತಪಡಿಸುತ್ತಲೇ ಇವೆ.
ಅತಿಗಣ್ಯ ವ್ಯಕ್ತಿಗಳ ವಾಹನಗಳ ಸಂಚಾರಕ್ಕಾಗಿ ನಿತ್ಯ ಸಾವಿರಾರು ಜನರು ಓಡಾಡುವ ರಸ್ತೆಗಳನ್ನು ಬಂದ್ ಮಾಡುವುದು ಬ್ರಿಟಿಷರ ಕಾಲದ ಸಂಪ್ರದಾಯ. ವಸಾಹತುಶಾಹಿ ಯುಗ ಮುಗಿದ ನಂತರವೂ ಇದು ಮುಂದುವರಿಯುತ್ತಿರುವುದು ಸರಿಯಲ್ಲ. ಇಂತಹ ವಸಾಹತು ಕಾಲದ ಪದ್ಧತಿಯನ್ನು ಕೊನೆಗಾಣಿಸಲು ನಮ್ಮ ರಾಜಕೀಯ ಮತ್ತು ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ತರುವುದು ಅಗತ್ಯವಾಗಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳೆಂದರೆ ಜನರ ಸೇವಕರು, ಜನರಿಂದ ಚುನಾಯಿತರಾಗಿ ಬಂದವರು ಜನ ಸಾಮಾನ್ಯರಿಗಿಲ್ಲದ ವಿಶೇಷ ಸೌಲಭ್ಯಗಳನ್ನು ಪಡೆಯಬಾರದು. ತಾವು ಜನಸೇವಕರೆಂದು ಆಗಾಗ ಹೇಳಿಕೊಳ್ಳುವವರು ತಮ್ಮನ್ನು ಚುನಾಯಿಸಿದ ಜನರಿಗೆ ತೊಂದರೆಯಾಗದಂತೆ ನಡೆದು ಕೊಳ್ಳಬೇಕು. ಸಂಚಾರ ದಟ್ಟಣೆಯ ತೊಂದರೆಯನ್ನು ಇವರೂ ಅನುಭವಿಸಬೇಕು.
ಬೆಂಗಳೂರಿನ ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿ ವ್ಯಕ್ತಿಯೊಬ್ಬ ನಡೆಸಿರುವ ಪ್ರತಿಭಟನೆ ಬರೀ ಆತನ ಅಸಮಾಧಾನವಲ್ಲ, ಜನಸಾಮಾನ್ಯರಲ್ಲಿ ಒಳಗೊಳಗೆ ಕುದಿಯುತ್ತಿರುವ ಅಸಹನೆಯ ಸಂಕೇತವಾಗಿದೆ. ಜನಸಾಮಾನ್ಯರು ನಿತ್ಯ ಅನುಭವಿಸುತ್ತಿರುವ ಸಂಚಾರ ದಟ್ಟಣೆಯ ಕಿರಿಕಿರಿಯನ್ನು ಅಧಿಕಾರದಲ್ಲಿ ಇರುವವರು ಅರ್ಥ ಮಾಡಿಕೊಂಡು ಅವರ ಭಾವನೆಗಳಿಗೆ ಸ್ಪಂದಿಸಬೇಕಾಗಿದೆ.






