ನ್ಯಾಯಾಂಗಕ್ಕೂ ಉತ್ತರದಾಯಿತ್ವ ಬೇಕೆಂಬ ಸ್ಥಿತಿ ಬಂದಿರುವುದು ಯಾಕೆ?

ಸುಪ್ರೀಂ ಕೋರ್ಟ್ |Photo Credit : PTI
ನ್ಯಾಯಾಂಗದ ಉನ್ನತಾಧಿಕಾರಿಗಳ ಚೇಂಬರುಗಳ ಒಳಗಿನ ಗದ್ದಲಗಳು ದಿನಕಳೆದಂತೆ ಹೆಚ್ಚುಹೆಚ್ಚು ಧ್ವನಿಗೂಡಿಸಿಕೊಂಡು ಹಾದಿಬೀದಿಗಳಲ್ಲಿ ಕೇಳಿಸತೊಡಗಿರುವುದು ಒಳ್ಳೆಯ ಬೆಳವಣಿಗೆಯಂತೂ ಅಲ್ಲ. ಸಾರ್ವಜನಿಕ ಚರ್ಚೆಯ ಅಂಗಣಕ್ಕೆ ಈ ವಿಚಾರಗಳು ತಲುಪಿದಾಗ ಅವು ಪಡೆದುಕೊಳ್ಳುವ ತಿರುವುಗಳೆಲ್ಲ ರಾಜಕೀಯ ಲೇಪನಗಳನ್ನು ಪಡೆಯುವುದು ಸಹಜ. ಇಂತಹ ಚರ್ಚೆಗಳಿಗೆ ಸಾರ್ವಜನಿಕರ ದೃಷ್ಟಿ ತಾಗದಂತೆ ಮುಸುಕು ತೊಡಿಸಲು ಪ್ರಯತ್ನಿಸಿದಂತೆಲ್ಲ ಅವು ಹೆಚ್ಚು ಹೆಚ್ಚು ಸಾರ್ವಜನಿಕವಾಗತೊಡಗುತ್ತದೆ ಮತ್ತು ಹಾನಿ ಆಗಬಾರದಲ್ಲೇ ಹಾನಿಗಳೂ ಸಂಭವಿಸುತ್ತವೆ. ಇದು ನಮ್ಮ ನ್ಯಾಯಾಂಗ ವ್ಯವಸ್ಥೆಯ ಇಂದಿನ ದುರಂತ.
ಹೆಚ್ಚಿನಂಶ ಮೂಗು ಒತ್ತಿ ಬಾಯಿ ಕಳೆಯಿಸಿದ ಬಳಿಕ, ಸುಪ್ರೀಂ ಕೋರ್ಟ್ ನ ಕೊಲಿಜಿಯಂ ಇತ್ತೀಚೆಗೆ (ಆಗಸ್ಟ್ 30) ಛತ್ತೀಸ್ಗಡದ ಹೈಕೋರ್ಟ್ ನ್ಯಾಯಮೂರ್ತಿ ಸಂಜಯ್ ಕುಮಾರ್ ಅಗರವಾಲ್ ಅವರನ್ನು ರಾಜಸ್ಥಾನ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಬೇಕೆಂದು ಶಿಫಾರಸು ಮಾಡಿದೆ. ರಾಜಸ್ಥಾನದಲ್ಲಿ ಹಾಲಿ ಪ್ರಭಾರ ಮುಖ್ಯ ನ್ಯಾಯಮೂರ್ತಿ ಸಂಜೀವ್ ಪ್ರಕಾಶ್ ಶರ್ಮಾ ಅವರ ಮೇಲೆ ‘ಭ್ರಷ್ಟಾಚಾರ’ ಮತ್ತು ‘ಸ್ವಜನ ಪಕ್ಷಪಾತ’ದ ಬಲವಾದ ದೂರುಗಳು ಬಂದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಈ ತೀರ್ಮಾನ ತೆಗೆದುಕೊಂಡಂತಿದೆ. ಈ ದೂರನ್ನು ದೇಶದ ಮುಖ್ಯನ್ಯಾಯಮೂರ್ತಿಗಳಿಗೆ (ಸಿಜೆಐ) ಅಧಿಕೃತವಾಗಿ ಕೊಟ್ಟಿರುವುದು ಬೇರಾರೂ ಅಲ್ಲ - ಸ್ವತಃ ಸುಪ್ರೀಂಕೋರ್ಟ್ನಲ್ಲಿ ನ್ಯಾಯಮೂರ್ತಿ ಆಗಿರುವ ನ್ಯಾ. ಸಂದೀಪ್ ಮೆಹ್ತಾ.
ಸುಪ್ರೀಂಕೋರ್ಟ್ನ ಸಿಜೆಐ ಸೂರ್ಯಕಾಂತ್ ಅವರಿಗೆ ಆಗಸ್ಟ್ ತಿಂಗಳ 02, 10 ಮತ್ತು 17ರಂದು- ಹೀಗೆ ಒಟ್ಟು ಮೂರು ಪತ್ರಗಳನ್ನು ಬೆನ್ನುಬೆನ್ನಿಗೆ ಬರೆದಿದ್ದ ನ್ಯಾ. ಮೆಹ್ತಾ, ನ್ಯಾ. ಶರ್ಮಾ ಅವರನ್ನು ತಕ್ಷಣ ರಾಜಸ್ಥಾನದಿಂದ ವರ್ಗಾಯಿಸಬೇಕು, ಅವರು ಅಲ್ಲಿ ತನ್ನ ಅಧಿಕಾರ ದುರ್ಬಳಕೆ ಮಾಡಿಕೊಂಡು, ಆಯ್ದ ಪ್ರಕರಣಗಳನ್ನು ತನ್ನ ಬೆಂಚಿಗೆ ತರಿಸಿಕೊಂಡಿದ್ದಾರೆ ಮತ್ತು ತಮಗೆ ಬೇಕೆನ್ನಿಸಿದವರಿಗೆ ಉಪಕಾರ ಮಾಡಿದ್ದಾರೆ, ಎದುರಾಡಿದವರಿಗೆ ಕಿರುಕುಳ ನೀಡುವ ಬೆದರಿಕೆ ಹಾಕಿದ್ದಾರೆ, ಜುಲೈ 31ರಂದು ತಮಗೆ ಬೇಕೆನ್ನಿಸಿದ ವಕೀಲರಿಗೆಲ್ಲ ‘ಸೀನಿಯರ್ ವಕೀಲರು’ ದರ್ಜೆ ನೀಡಿ ಆದೇಶ ಹೊರಡಿಸಿ, ಉಳಿದವರಿಂದ ಆಕ್ಷೇಪ ಬಂದ ಬಳಿಕ ಹಿಂದೆ ಸರಿದಿದ್ದಾರೆ ಎಂದು ಆಪಾದಿಸಿದ್ದರು. ಇಲ್ಲಿ ಆಪಾದನೆ ಮಾಡಿರುವವರು ಸುಪ್ರೀಂಕೋರ್ಟ್ನ ಹಾಲಿ ನ್ಯಾಯಾಧೀಶರು ಹಾಗೂ ಆಪಾದಿತರು ರಾಜ್ಯವೊಂದರ ಹೈಕೋರ್ಟ್ ನ ಪ್ರಭಾರ ಮುಖ್ಯನ್ಯಾಯಾಧೀಶರು ಎಂಬುದು ಪ್ರಕರಣದ ಗಾಂಭೀರ್ಯವನ್ನು ಎತ್ತಿ ತೋರಿಸುತ್ತದೆ. ದುರದೃಷ್ಟವಶಾತ್ ದೇಶದ ಮಾಧ್ಯಮಗಳಿಗೆ ಇದೊಂದು ಮಹತ್ವದ ಸುದ್ದಿ ಅನ್ನಿಸುತ್ತಿಲ್ಲ. ಹಾಗಾಗಿ, ಈ ಸುದ್ದಿ ಹೆಚ್ಚು ಸದ್ದು ಮಾಡಿಲ್ಲ. ರಾಜಸ್ಥಾನದ ಜೈಪುರ, ಜೋಧ್ಪುರಗಳಲ್ಲಿ ವಕೀಲರು ಹೈಕೋರ್ಟ್ನ ಪ್ರಭಾರ ಮುಖ್ಯ ನ್ಯಾಯಮೂರ್ತಿ ವಿರುದ್ಧ ಪ್ರತಿಭಟನೆಗಳನ್ನೂ ಹಮ್ಮಿಕೊಂಡಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವುದಾಗಿ ಹೇಳಿದ ಸಿಜೆಐ ಸೂರ್ಯಕಾಂತ್, ಮತ್ತವರ ಕೊಲಿಜಿಯಂ ಸದಸ್ಯರಾದ ನ್ಯಾ. ವಿಕ್ರಮ್ನಾಥ್, ನ್ಯಾ. ಬಿ.ವಿ. ನಾಗರತ್ನಾ ಕೊನೆಗೂ ರಾಜಸ್ಥಾನ ಹೈಕೋರ್ಟ್ ಗೆ ಹೊಸ ನ್ಯಾಯಮೂರ್ತಿಗಳನ್ನು ಶಿಫಾರಸು ಮಾಡಿದ್ದಾರೆ. ಕಳೆದ 10 ತಿಂಗಳುಗಳಿಂದ ಪ್ರಭಾರ ಮುಖ್ಯ ನ್ಯಾಯಮೂರ್ತಿ ಆಗಿದ್ದ ನ್ಯಾ.ಶರ್ಮಾ ಅವರು ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಆಗಸ್ಟ್ 30ರಿಂದ ತಮ್ಮ ನ್ಯಾಯಾಂಗ ಕರ್ತವ್ಯಗಳಲ್ಲಿ ಪಾಲ್ಗೊಳ್ಳುತ್ತಿಲ್ಲ. ಆದರೆ, ಅವರು ಹೇಳಿಕೆಯೊಂದರಲ್ಲಿ ಈ ಎಲ್ಲ ಆಪಾದನೆಗಳನ್ನು ನಿರಾಕರಿಸಿದ್ದು, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯವರ ಆಪಾದನೆಗಳಿಗೆ ವೈಯಕ್ತಿಕ ದ್ವೇಷ ಕಾರಣ ಎಂದಿರುವುದನ್ನು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಈ ಎಲ್ಲ ಬೆಳವಣಿಗೆಗಳು, ನ್ಯಾಯಾಂಗದಲ್ಲಿ ಎಲ್ಲವೂ ಸುಸೂತ್ರವಾಗಿಲ್ಲ ಎಂಬುದಕ್ಕೆ ಇತ್ತೀಚೆಗಿನ ಉದಾಹರಣೆಗಳು. 2017ರಲ್ಲಿ ಜಸ್ಟಿಸ್ ಕರ್ಣನ್ ಅವರಿಗೆ ಸುಪ್ರೀಂಕೋರ್ಟ್ ಜೈಲು ಶಿಕ್ಷೆ ವಿಧಿಸಿದ ಪ್ರಕರಣ; 2018 ಜನವರಿಯಲ್ಲಿ ಸುಪ್ರೀಂಕೋರ್ಟ್ನ ನಾಲ್ವರು ನ್ಯಾಯಾಧೀಶರು ಪತ್ರಿಕಾಗೋಷ್ಠಿ ಕರೆದು ನ್ಯಾಯಾಂಗ ಆಡಳಿತ ವ್ಯವಸ್ಥೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು; ದಿಲ್ಲಿ ಹೈಕೋರ್ಟ್ನ ನ್ಯಾ. ಯಶವಂತ್ ವರ್ಮಾ ಅವರ ಅಧಿಕೃತ ನಿವಾಸದಲ್ಲಿ ಅರೆಸುಟ್ಟ ಕರೆನ್ಸಿಗಳು ಸಿಕ್ಕಿದ್ದು; ವಿವಿಧ ಹೈಕೋರ್ಟ್ ಗಳ ನ್ಯಾಯಮೂರ್ತಿಗಳಾದ ನ್ಯಾ. ಅಖಿಲ್ ಖುರೇಷಿ, ನ್ಯಾ. ಎಸ್. ಮುರಳೀಧರ್, ನ್ಯಾ.ಅತುಲ್ ಶ್ರೀಧರನ್ ಇವರ ವರ್ಗಾವಣೆಗಳಿಗೆ ಸಂಬಂಧಿಸಿದಂತೆ ಎದ್ದ ವಿವಾದಗಳು... ಇವನ್ನೆಲ್ಲ ಒಟ್ಟಂದದಲ್ಲಿ ನೋಡಿದಾಗ, ನ್ಯಾಯಾಂಗದ ಕುರಿತ ವಿಶ್ವಾಸಕ್ಕೆ ಸತತವಾಗಿ ಒಳಗಿನಿಂದಲೇ ಮುಕ್ಕಾಗುತ್ತಿರುವುದು ಎದ್ದು ಕಾಣಿಸುತ್ತಿದೆ.
2026ರ ಎಪ್ರಿಲ್ನಲ್ಲಿ ಭಾರತ ಸರಕಾರವು ನ್ಯಾಯಾಂಗದಲ್ಲಿ ನ್ಯಾಯದಾನದ ವಿಳಂಬದ ಅಂಕಿಸಂಖ್ಯೆಗಳನ್ನು ಸಂಸತ್ತಿಗೆ ನೀಡಿ, ಸುಪ್ರೀಂ ಕೋರ್ಟ್ನಲ್ಲಿ 93,000 ಪ್ರಕರಣಗಳು, ಹೈಕೋರ್ಟ್ಗಳಲ್ಲಿ 64.01 ಲಕ್ಷ ಪ್ರಕರಣಗಳು ಮತ್ತು ಕೆಳಕೋರ್ಟ್ಗಳಲ್ಲಿ ಒಟ್ಟು 4.95 ಕೋಟಿ ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ ಎಂದು ವಿವರಿಸಿದೆ.
ನ್ಯಾಯಾಂಗ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸದಿದ್ದಾಗ, ಅದಕ್ಕೆ ಕಾರಣಗಳನ್ನು ಸಕಾಲದಲ್ಲಿ ಪತ್ತೆ ಹಚ್ಚಿ ಹುಳುಕುಗಳನ್ನು ನಿವಾರಿಸದಿದ್ದರೆ, ಮತ್ತೆ ಮತ್ತೆ ಅನಗತ್ಯ ವಿವಾದಗಳೇ ಸುದ್ದಿ ಮಾಡುತ್ತಿರುತ್ತವೆ. ಈಗ ಆಗಿರುವುದೂ ಅದೇ. ನ್ಯಾಯಾಂಗದ ಸ್ವಾತಂತ್ರ್ಯದ ಹೊರತಾಗಿಯೂ, ಅದರ ಆಡಳಿತಾತ್ಮಕ ಅಂಶಗಳ ಉತ್ತರದಾಯಿತ್ವವನ್ನು ಖಚಿತಪಡಿಸಿಕೊಳ್ಳುವುದಕ್ಕೆ ಕಂಟ್ರೋಲರ್ ಮತ್ತು ಆಡಿಟರ್ ಜನರಲ್(ಸಿಎಜಿ)ಯಂತಹ ವ್ಯವಸ್ಥೆಯೊಂದರ ಮೂಲಕ ನ್ಯಾಯಾಂಗದ ಆಡಳಿತ ವ್ಯವಸ್ಥೆಗೆ ಕನ್ನಡಿ ಹಿಡಿಯುವುದಕ್ಕೆ ಸಮಯ ಒದಗಿಬಂದಿದೆ.
ನ್ಯಾಯಾಂಗದ ಸ್ವಾತಂತ್ರ್ಯ ಮತ್ತು ತೀರ್ಮಾನಗಳು ಪ್ರಶ್ನಾತೀತವಾದರೂ, ಅದರ ಆಡಳಿತ ವ್ಯವಸ್ಥೆ, ಖಾಲಿ ಹುದ್ದೆಗಳು, ಮೂಲಸೌಕರ್ಯ, ಪ್ರಕರಣಗಳ ನಿರ್ವಹಣಾ ವ್ಯವಸ್ಥೆ, ಡಿಜಿಟಲೈಸೇಷನ್, ಸುಧಾರಣಾ ಕ್ರಮಗಳು... ಇತ್ಯಾದಿಗಳನ್ನೆಲ್ಲ ಅವು ಸಂಪೂರ್ಣವಾಗಿ ನಿಯಂತ್ರಣ ತಪ್ಪುವ ಮುನ್ನ ಉತ್ತರದಾಯಿತ್ವದ ಚೌಕಟ್ಟಿನ ಒಳಗೆ ತರುವುದಕ್ಕೆ ಇದು ಸಕಾಲ.






