ಸಾಕ್ಷರತೆಯಲ್ಲಿ ಉತ್ತರ ಭಾರತ ಯಾಕೆ ಹಿಂದುಳಿದಿದೆ?

PC: istockphoto
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಭಾರತದ ಇತ್ತೀಚಿನ ಸಾಕ್ಷರತೆಯ ಪ್ರಮಾಣದ ಬಗ್ಗೆ ಪಿಎಲ್ಎಫ್ಎಸ್(ಪೀರಿಯೋಡಿಕ್ ಲೇಬರ್ ಫೋರ್ಸ್ ಸರ್ವೇ) ನಡೆಸಿದ 2023-24ರ ಸಮೀಕ್ಷೆಯ ವಿವರ ಹೊರ ಬಿದ್ದಿದ್ದು, ಮಿಜೋರಾಂ ಗರಿಷ್ಠ ಸಾಕ್ಷರತೆಯನ್ನು ಸಾಧಿಸಿದ ರಾಜ್ಯವಾಗಿ ಗುರುತಿಸಲ್ಪಟ್ಟಿದೆ. ಮಿಜೋರಾಂ ಶೇ.98.2ರಷ್ಟು ಸಾಕ್ಷರತೆಯನ್ನು ಸಾಧಿಸಿದ್ದರೆ, ಲಕ್ಷದ್ವೀಪ ಶೇ. 97.3, ಕೇರಳ ಶೇ. 95.3, ತ್ರಿಪುರಾ ಶೇ 93.7, ಗೋವಾ 93.6ರಷ್ಟು ಗರಿಷ್ಠ ಸಾಕ್ಷರತೆಯನ್ನು ಸಾಧಿಸಿದ ರಾಜ್ಯಗಳು ಎಂದು ಗುರುತಿಸಲ್ಪಟ್ಟಿವೆ. ಭಾರತದ ಒಟ್ಟಾರೆ ಸಾಕ್ಷರತೆಯ ಪ್ರಮಾಣ ಶೇ. 80.9 ಎಂದು ಹೇಳಲಾಗಿದೆ. ಏಳು ವರ್ಷಕ್ಕಿಂತ ಮೇಲ್ಪಟ್ಟ ಪುರುಷರಲ್ಲಿ ಶೇ. 87.2ರಷ್ಟು ಸಾಕ್ಷರತೆಯಿದ್ದರೆ, ಮಹಿಳೆಯರಲ್ಲಿ ಇದು 74.6ರಷ್ಟಿದೆ. ಇದೇ ಸಂದರ್ಭದಲ್ಲಿ ಅತ್ಯಂತ ಕಡಿಮೆ ಸಾಕ್ಷರತೆಯನ್ನು ಹೊಂದಿದ ರಾಜ್ಯವಾಗಿ ಬಿಹಾರ ಗುರುತಿಸಿಕೊಂಡಿದೆ. ಇದರ ಬೆನ್ನಿಗೇ ಮಧ್ಯಪ್ರದೇಶ, ರಾಜಸ್ಥಾನಗಳಿವೆ. ನಗರವಾಸಿಗಳಲ್ಲಿ ಸಾಕ್ಷರತೆಯ ಪ್ರಮಾಣ ಹೆಚ್ಚಿದ್ದು, ಗ್ರಾಮೀಣ ಪ್ರದೇಶದಲ್ಲಿ ಕಡಿಮೆಯಿರುವುದನ್ನು ಸಮೀಕ್ಷೆ ಹೇಳುತ್ತದೆ. ಈ ಸಾಕ್ಷರತೆಯ ಅಂತರದ ಜೊತೆ ಜೊತೆಗೇ ಅಭಿವೃದ್ಧಿಯ ಅಂತರಗಳೂ ಬಹಿರಂಗವಾಗುತ್ತವೆ.
ಅತಿ ಹೆಚ್ಚು ಸಾಕ್ಷರತೆಯುಳ್ಳ ತ್ರಿಪುರಾ, ಕೇರಳದಂತಹ ರಾಜ್ಯಗಳ ಸಾಕ್ಷರತೆಯ ಹಿಂದೆ ಎಡಪಂಥೀಯ ಪ್ರಭಾವವನ್ನು ನಾವು ಈ ಸಂದರ್ಭದಲ್ಲಿ ಮರೆಯುವಂತಿಲ್ಲ. ಒಂದು ಕಾಲದಲ್ಲಿ, ಇಡೀ ದೇಶದಲ್ಲೇ ಸಾಕ್ಷರತೆಗಾಗಿ ಕೇರಳ ಗುರುತಿಸಲ್ಪಟ್ಟಿತು. ಸಾಕ್ಷರತಾ ಆಂದೋಲನ ಅತ್ಯಂತ ಯಶಸ್ವಿಯಾಗಿ ಅನುಷ್ಠಾನಗೊಂಡದ್ದು ಕೇರಳದಲ್ಲಿ. ಅಭಿವೃದ್ಧಿ, ಆರೋಗ್ಯ, ಉನ್ನತ ಶಿಕ್ಷಣ ಇತ್ಯಾದಿಗಳಲ್ಲೂ ಕೇರಳ ದೇಶದಲ್ಲಿ ಗುರುತಿಸಲ್ಪಟ್ಟಿದೆ. ಈಶಾನ್ಯ ಭಾರತ ಮತ್ತು ದಕ್ಷಿಣ ಭಾರತದ ರಾಜ್ಯಗಳಿಗೆ ಹೋಲಿಸಿದರೆ ಉತ್ತರ ಭಾರತ ಸಾಕ್ಷರತೆಯಲ್ಲಿ ಹಿಂದೆ ಉಳಿದಿದೆ. ಕೇಂದ್ರ ಸರಕಾರ ಅತ್ಯಧಿಕ ಅನುದಾನಗಳನ್ನು ಉತ್ತರ ಭಾರತದ ಈ ಪ್ರಮುಖ ರಾಜ್ಯಗಳಿಗೆ ನೀಡುತ್ತಾ ಬಂದಿದೆಯಾದರೂ ಯಾಕೆ ಇವುಗಳು ಸಾಕ್ಷರತೆಯಲ್ಲಿ ಈ ಮಟ್ಟಿಗೆ ಹಿಂದುಳಿದಿದೆ ಎನ್ನುವುದನ್ನು ಚರ್ಚಿಸಲು ಇದು ಸರಿಯಾದ ಸಂದರ್ಭವಾಗಿದೆ. ಇಂದು ಉತ್ತರ ಪ್ರದೇಶ ಅಯೋಧ್ಯೆ ಮತ್ತು ರಾಮಮಂದಿರದ ಕಾರಣದಿಂದ ದೇಶದಲ್ಲಿ ಸುದ್ದಿಯಲ್ಲಿದೆ. ಪ್ರಯಾಗ ರಾಜ್, ಕುಂಭಮೇಳ ಇತ್ಯಾದಿಗಳಿಂದ ಉತ್ತರ ಪ್ರದೇಶದ ಸಾಕ್ಷರತೆಯನ್ನು ಮೇಲೆತ್ತಲು ಸಾಧ್ಯವಾಗಿಲ್ಲ. ಅಪರಾಧ ಪ್ರಕರಣಗಳಿಗಾಗಿ ಉತ್ತರ ಪ್ರದೇಶ ಕುಖ್ಯಾತಿಯನ್ನು ಪಡೆಯುತ್ತಿದೆ. ಸಾಕ್ಷರತೆಯಲ್ಲಿ ಕೊನೆಯ ಸಾಲಿನಲ್ಲಿ ಸ್ಥಾನ ಪಡೆದಿರುವ ರಾಜಸ್ಥಾನ ಇಂದು ಗುರುತಿಸುತ್ತಿರುವುದು ಗುಂಪು ಥಳಿತ, ನಕಲಿ ಗೋರಕ್ಷಕರು, ಜಾತಿ ದೌರ್ಜನ್ಯಗಳಿಗಾಗಿ. ಮಧ್ಯಪ್ರದೇಶವನ್ನು ಬಿಜೆಪಿ ನಿರಂತರವಾಗಿ ಆಳುತ್ತಾ ಬರುತ್ತಿದೆಯಾದರೂ, ಈ ರಾಜ್ಯದ ಸಾಕ್ಷರತೆಯನ್ನು ಉತ್ತಮ ಪಡಿಸುವುದಕ್ಕೆ ಸಾಧ್ಯವಾಗಿಲ್ಲ. ಆದಿವಾಸಿಗಳ ಮೇಲೆ ದೌರ್ಜನ್ಯ, ಅಸ್ಪಶ್ಯತೆ ಇತ್ಯಾದಿಗಳಿಗಾಗಿಯೇ ಈ ರಾಜ್ಯ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ.
ಸಾಕ್ಷರತೆಯು ದಕ್ಷಿಣ ಭಾರತದ ರಾಜ್ಯಗಳನ್ನು ಉತ್ತರ ಭಾರತದಿಂದ ಪ್ರತ್ಯೇಕಿಸಿದೆ. ಉತ್ತರ ಭಾರತೀಯರ ಹಿಂದಿಯನ್ನು ದಕ್ಷಿಣದ ರಾಜ್ಯಗಳ ಮೇಲೆ ಹೇರಲು ಮುಂದಾಗುತ್ತಿರುವ ಕೇಂದ್ರ ಸರಕಾರ ಇದನ್ನು ಗಮನಿಸಬೇಕಾಗಿದೆ. ಉತ್ತರ ಭಾರತ ಭಾವನಾತ್ಮಕ ರಾಜಕೀಯದ ಬಲಿಪಶುವಾಗಿದೆ. ಅದು ಧರ್ಮ, ಹಿಂದುತ್ವ, ಮಂದಿರದ ಅಮಲಲ್ಲಿ ಬಿದ್ದಿದೆ. ಜನಸಾಮಾನ್ಯರು ಕಟ್ಟುವ ತೆರಿಗೆಯನ್ನು ಮಂದಿರ, ಕುಂಭಮೇಳ, ಪ್ರತಿಮೆಗಳಿಗಾಗಿ ಅಲ್ಲಿ ನ ಸರಕಾರ ವ್ಯಯ ಮಾಡುತ್ತಿದೆ. ಇತ್ತೀಚೆಗೆ ಮಹಾರಾಷ್ಟ್ರ ಸರಕಾರ ಸುಮಾರು 3,000 ಕೋಟಿ ರೂಪಾಯಿಗಳ ಯೋಜನೆಗೆ ಅನುಮೋದನೆ ನೀಡಿತು. ವಿಪರ್ಯಾಸವೆಂದರೆ, ಈ ಅನುಮೋದನೆ ರಾಜ್ಯದ ದೇವಾಲಯ ಮತ್ತು ಸ್ಮಾರಕಗಳ ಪುನರುಜ್ಜೀವನಕ್ಕೆ ಸಂಬಂಧಿಸಿದ್ದಾಗಿತ್ತು. ಏಳು ಯಾತ್ರಾ ಸ್ಥಳಗಳನ್ನು ಅಭಿವೃದ್ಧಿ ಪಡಿಸುವುದಕ್ಕಾಗಿ ಈ ರಾಜ್ಯವು ಸುಮಾರು 5,500 ಕೋಟಿ ರೂಪಾಯಿ ವೆಚ್ಚ ಮಾಡಲಿದೆ. ಕೇಂದ್ರ ಸರಕಾರ ಅತ್ಯಧಿಕ ಅನುದಾನಗಳನ್ನು ಉತ್ತರ ರಾಜ್ಯಗಳಿಗೆ ನೀಡುತ್ತಾ ಬಂದಿದ್ದರೂ ಅದು ಅಭಿವೃದ್ಧಿಯ ಕಡೆಗೆ ಸಾಗದೇ ಇರುವುದಕ್ಕೆ ಇದು ಮುಖ್ಯ ಕಾರಣವಾಗಿದೆ. ದಕ್ಷಿಣ ಭಾರತೀಯರು ಕಟ್ಟುತ್ತಿರುವ ತೆರಿಗೆಯನ್ನು ಉತ್ತರ ಭಾರತಕ್ಕೆ ಹಂಚಲಾಗುತ್ತಿದೆ ಎನ್ನುವ ವ್ಯಾಪಕ ಆಕ್ರೋಶವನ್ನು ದಕ್ಷಿಣದ ರಾಜ್ಯಗಳು ವ್ಯಕ್ತಪಡಿಸುತ್ತಾ ಬಂದಿವೆ. ಆದರೆ ಒಕ್ಕೂಟ ವ್ಯವಸ್ಥೆಯನ್ನು ಮುಂದಿಟ್ಟುಕೊಂಡು ವಿತ್ತ ಸಚಿವರು ಕೇಂದ್ರ ಸರಕಾರದ ಮಲತಾಯಿ ಧೋರಣೆಯನ್ನು ಸಮರ್ಥಿಸಿದರು. ಆದರೆ ಇಷ್ಟು ಪ್ರಮಾಣದಲ್ಲಿ ಅನುದಾನಗಳನ್ನು ಉತ್ತರ ಭಾರತಕ್ಕೆ ನೀಡುತ್ತಾ ಬಂದರೂ ಅದು ಯಾಕೆ ಸದ್ಬಳಕೆಯಾಗುತ್ತಿಲ್ಲ? ಎನ್ನುವ ಪ್ರಶ್ನೆಗೆ ಉತ್ತರಿಸುವುದು ಕೇಂದ್ರ ಸರಕಾರದ ಕರ್ತವ್ಯವಾಗಿದೆ. ಅಭಿವೃದ್ಧಿ, ಆರೋಗ್ಯ, ಶಿಕ್ಷಣಗಳಿಗೆ ಅದು ಬಳಕೆ ಮಾಡುವ ಹಣವೆಷ್ಟು ಎನ್ನುವುದಾದರೂ ಈ ಸಂದರ್ಭದಲ್ಲಿ ಚರ್ಚೆಯಾಗಬೇಕಾಗಿದೆ. ದಕ್ಷಿಣ ಭಾರತದ ರಾಜ್ಯಗಳಿಗೆ ಹೋಲಿಸಿದರೆ ರಾಜಸ್ಥಾನ, ಬಿಹಾರ, ಮಧ್ಯಪ್ರದೇಶದಂತಹ ರಾಜ್ಯಗಳು ಯಾಕೆ ಸಾಕ್ಷರತೆ, ಆರೋಗ್ಯ, ಉನ್ನತ ಶಿಕ್ಷಣ ಕ್ಷೇತ್ರಗಳಲ್ಲಿ ಹಿಂದುಳಿಯುತ್ತಿವೆ ಎನ್ನುವ ಪ್ರಶ್ನೆ ಮುನ್ನೆಲೆಗೆ ಬರಬೇಕಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಸಾಕ್ಷರತೆಯಲ್ಲಿ ಹಿಂದುಳಿದಿರುವ ಎಲ್ಲ ರಾಜ್ಯಗಳು ಹಿಂದುತ್ವದ ಹೆಸರಿನಲ್ಲಿ ನಡೆಸುವ ಕ್ರಿಮಿನಲ್ ಚಟುವಟಿಕೆಗಳಿಗೆ, ಗುಂಪು ಹತ್ಯೆಗಳಿಗೆ, ಜಾತಿ ದೌರ್ಜನ್ಯಗಳಿಗೆ ಕುಖ್ಯಾತವಾಗಿವೆ. ಇಂತಹ ಸಂದರ್ಭದಲ್ಲಿ ದಕ್ಷಿಣದ ರಾಜ್ಯಗಳು ಅನುದಾನ ನೀಡುವಿಕೆಯಲ್ಲಿ ತಮಗಾಗುವ ಅನ್ಯಾಯದ ಬಗ್ಗೆ ಯಾಕೆ ಧ್ವನಿಯೆತ್ತಬಾರದು? ಎನ್ನುವ ಪ್ರಶ್ನೆ ಏಳುತ್ತದೆ.
ಇತ್ತೀಚೆಗೆ ಜನಸಂಖ್ಯೆಯ ಆಧಾರದಲ್ಲಿ ಕ್ಷೇತ್ರ ಮರು ವಿಂಗಡಣೆಯ ವಿರುದ್ಧವೂ ದಕ್ಷಿಣದ ರಾಜ್ಯಗಳು ಆಕ್ಷೇಪಗಳನ್ನು ಎತ್ತಿವೆ. ದೇಶ ಕುಟುಂಬ ಯೋಜನೆಯನ್ನು ಘೋಷಣೆ ಮಾಡಿದಾಗ ದಕ್ಷಿಣದ ರಾಜ್ಯಗಳು ಅದನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದವು. ಸಾಕ್ಷರತೆ ಮತ್ತು ಜನಸಂಖ್ಯೆಯ ಇಳಿಕೆಯ ನಡುವೆ ಪರಸ್ಪರ ಸಂಬಂಧವಿದೆ. ಸಾಕ್ಷರತೆಯ ಕುರಿತಂತೆ ಜಾಗೃತಿಯನ್ನು ಹೊಂದಿರುವ ರಾಜ್ಯಗಳು ಕುಟುಂಬ ಯೋಜನೆಯ ಬಗ್ಗೆಯೂ ಹೆಚ್ಚು ಜಾಗೃತಿಯನ್ನು ಹೊಂದಿವೆ. ಪರಿಣಾಮವಾಗಿ ದಕ್ಷಿಣದ ರಾಜ್ಯಗಳಲ್ಲಿ ಜನಸಂಖ್ಯೆ ನಿಯಂತ್ರಣದಲ್ಲಿವೆ. ಇದೇ ಸಂದರ್ಭದಲ್ಲಿ ಕುಟುಂಬ ಯೋಜನೆಯನ್ನು ನಿರ್ಲಕ್ಷಿಸಿದ ಉತ್ತರ ಭಾರತ ಕಳೆದ ಮೂರು ದಶಕಗಳಿಂದ ಜನಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ. ಇದೀಗ ಜನಸಂಖ್ಯೆಯ ಆಧಾರದಲ್ಲಿ ಕ್ಷೇತ್ರವನ್ನು ಮರು ವಿಂಗಡನೆ ಮಾಡಿದ್ದೇ ಆದರೆ, ಉತ್ತರ ಭಾರತ ಹೆಚ್ಚು ರಾಜಕೀಯ ಪ್ರಾತಿನಿಧ್ಯವನ್ನು ಪಡೆಯುತ್ತದೆ. ಇದು ಉತ್ತರಭಾರತ ದಕ್ಷಿಣದ ಮೇಲೆ ಇನ್ನಷ್ಟು ನಿಯಂತ್ರಣವನ್ನು ಸಾಧಿಸಲು ಕಾರಣವಾಗುತ್ತದೆ. ಕುಟುಂಬ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದಕ್ಕಾಗಿ ದಕ್ಷಿಣದ ರಾಜ್ಯಗಳಿಗೆ ಶಿಕ್ಷೆಯೇ ಎಂದು ಕೇಂದ್ರ ಸರಕಾರವನ್ನು ಕೇಳುವಂತಾಗಿದೆ.
ಉತ್ತರ ಭಾರತದ ರಾಜ್ಯಗಳು ಸಾಕ್ಷರತೆಯೂ ಸೇರಿದಂತೆ ಅಭಿವೃದ್ಧಿ ವಿಷಯದಲ್ಲಿ ಯಾಕೆ ಹಿಂದುಳಿದಿವೆ? ಎನ್ನುವುದನ್ನು ಚರ್ಚಿಸುವುದಕ್ಕೆ ಇದು ಸರಿಯಾದ ಸಮಯವಾಗಿದೆ. ದಕ್ಷಿಣದ ರಾಜ್ಯಗಳಿಗೆ ಯಾವ ರೀತಿಯಲ್ಲೂ ಮಾದರಿಯಲ್ಲದ ಉತ್ತರ ಪ್ರದೇಶ, ಗುಜರಾತ್ನಂತಹ ರಾಜ್ಯಗಳನ್ನು ಕರ್ನಾಟಕಕ್ಕೆ ಮಾದರಿಯಾಗಿಸಲು ಹೊರಡುವ ನಮ್ಮದೇ ರಾಜ್ಯದ ಬಿಜೆಪಿ ನಾಯಕರು ಕೂಡ ಇನ್ನಾದರೂ ಪ್ರಜ್ಞಾವಂತರಾಗಬೇಕಾಗಿದೆ. ಕರ್ನಾಟಕದ ಪರವಾಗಿ ಕೇಂದ್ರದಲ್ಲಿ ಧ್ವನಿಯೆತ್ತಲು ಈ ನಾಯಕರು ಯಾವ ಕಾರಣಕ್ಕೂ ಹಿಂಜರಿಕೆಯನ್ನು ಪ್ರದರ್ಶಿಸಬಾರದು.