ಸಿಇಟಿ ಪರೀಕ್ಷೆಯಲ್ಲಿ ಜನಿವಾರಕ್ಕೆ ಅಡ್ಡಿಯೇಕೆ?

ಸಾಂದರ್ಭಿಕ ಚಿತ್ರ | Photo: pexels
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ರಾಜ್ಯ ಸರಕಾರದ ಉಸ್ತುವಾರಿಯಲ್ಲಿ ನಡೆಯುವ ಸಿಇಟಿ ಪರೀಕ್ಷೆಯಲ್ಲಿ ಜನಿವಾರ ಮತ್ತೊಮ್ಮೆ ಸುದ್ದಿಯಾಗಿದೆ. ಕಳೆದ ವರ್ಷ ಎಪ್ರಿಲ್ ತಿಂಗಳಿನಲ್ಲಿ ಸಿಇಟಿ ಪರೀಕ್ಷಾ ಕೇಂದ್ರವೊಂದರಲ್ಲಿ ತಪಾಸಕರು ವಿದ್ಯಾರ್ಥಿಯೊಬ್ಬನ ಜನಿವಾರವನ್ನು ಕಳಚಲು ಆದೇಶ ನೀಡಿರುವುದು ಚರ್ಚೆ, ವಿವಾದಗಳಿಗೆ ಕಾರಣವಾಗಿತ್ತು. ಈ ಮೂಲಕ ವಿದ್ಯಾರ್ಥಿಯೊಬ್ಬನ ಧಾರ್ಮಿಕ ನಂಬಿಕೆಗೆ ಧಕ್ಕೆ ತರಲಾಗಿದೆ ಎಂದು ಬ್ರಾಹ್ಮಣ ಸಮಾಜದ ಮುಖಂಡರೂ ಸೇರಿದಂತೆ ಹಲವು ರಾಜಕೀಯ ನಾಯಕರು ತಕರಾರು ಎತ್ತಿದ್ದರು. ಸರಕಾರವೂ ತಕ್ಷಣ ಎಚ್ಚೆತ್ತು, ತಪಾಸಣಾ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮವನ್ನು ತೆಗೆದುಕೊಂಡಿತ್ತು. ಓರ್ವ ಸಚಿವರಂತೂ ಜನಿವಾರ ಸಂತ್ರಸ್ತ ವಿದ್ಯಾರ್ಥಿಗೆ ‘ಉಚಿತ ಸೀಟು’ ನೀಡುವ ಭರವಸೆಯನ್ನೇ ನೀಡಿ ಬಿಟ್ಟಿದ್ದರು. ಕಳೆದ ವರ್ಷ ಮೇ ತಿಂಗಳಲ್ಲಿ ಕೇಂದ್ರ ಸರಕಾರದ ಉಸ್ತುವಾರಿಯಲ್ಲಿ ನಡೆದ ನೀಟ್ ಪರೀಕ್ಷೆಯ ಸಂದರ್ಭದಲ್ಲಿ ಕಲಬುರಗಿಯಲ್ಲಿ ವಿದ್ಯಾರ್ಥಿಯೊಬ್ಬನ ಜನಿವಾರ ಕಳಚಿರುವುದನ್ನು ವಿವಿಧ ಸಂಘಟನೆಗಳು ಖಂಡಿಸಿದ್ದವು. ಇದರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ವಿವಿಧ ರಾಜಕೀಯ ಮುಖಂಡರು ಹೇಳಿಕೆಯನ್ನೂ ನೀಡಿದ್ದರು. ಇಷ್ಟಾದ ಬಳಿಕ ಇದೀಗ ಸಿಇಟಿ ಪರೀಕ್ಷೆಯಲ್ಲಿ ಮತ್ತೆ ರಾಜ್ಯದ ಹಲವು ಪರೀಕ್ಷಾ ಕೇಂದ್ರದಲ್ಲಿ ಜನಿವಾರ ಸದ್ದು ಮಾಡುತ್ತಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪರೀಕ್ಷೆಗೆ ಮುನ್ನ ತಪಾಸಣೆ ಮಾಡುವಾಗ ವಿದ್ಯಾರ್ಥಿಯು ಜನಿವಾರ ಧರಿಸಿರುವುದು ತಪಾಸಣಾ ಸಿಬ್ಬಂದಿಯ ಗಮನಕ್ಕೆ ಬಂದಿದ್ದು, ಅವರು ಅದನ್ನು ಕತ್ತರಿಸಿ ತೆಗೆದಿದ್ದಾರೆ ಎಂದು ಓರ್ವ ವಿದ್ಯಾರ್ಥಿ ಆರೋಪಿಸಿದ್ದಾನೆ. ಬೆಂಗಳೂರಿನಲ್ಲೂ ವಿದ್ಯಾರ್ಥಿಗಳ ಜನಿವಾರ ಕಳಚಿದ ಪ್ರಕರಣ ವರದಿಯಾಗಿದೆ. ಈ ಬಗ್ಗೆ ಬ್ರಾಹ್ಮಣ ಮುಖಂಡರು, ಬಿಜೆಪಿಯ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಪಾಸಣಾ ಸಿಬ್ಬಂದಿಯ ಮೇಲೆ ಕ್ರಮ ತೆಗೆದುಕೊಳ್ಳಲು ಒತ್ತಾಯಿಸಿದ್ದಾರೆ. ಬೆಂಗಳೂರಿನ ಪರೀಕ್ಷಾ ಕೇಂದ್ರದ ಮೂವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದ್ದರೆ, ಕಲಬುರಗಿಯ ಪರೀಕ್ಷಾ ಕೇಂದ್ರದ ಸಿಬ್ಬಂದಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
‘ಸಿಇಟಿ ಪರೀಕ್ಷೆಯ ಸಂದರ್ಭದಲ್ಲಿ ಜನಿವಾರ ಧರಿಸಿದರೆ ಪರೀಕ್ಷೆಗೆ ಹೇಗೆ ತೊಂದರೆಯಾಗುತ್ತದೆ? ಪರೀಕ್ಷಾ ಕೇಂದ್ರದೊಳಗೆ ಪ್ರವೇಶಿಸುವ ವಿದ್ಯಾರ್ಥಿಗಳ ಜನಿವಾರವನ್ನು ಕಳಚುವುದು ಧಾರ್ಮಿಕ ನಂಬಿಕೆಗೆ ಧಕ್ಕೆ ತಂದಂತಾಗುವುದಿಲ್ಲವೆ?’ ಎನ್ನುವ ಪ್ರಶ್ನೆಯನ್ನು ಹಲವರು ಕೇಳುತ್ತಿದ್ದಾರೆ. ಪ್ರಶ್ನೆಯೇನೋ ಸರಿಯಾದದ್ದೇ ಆಗಿದೆ. ಆದರೆ ಈ ಪ್ರಶ್ನೆಯನ್ನು ಯಾರಲ್ಲಿ ಕೇಳಬೇಕು ಎನ್ನುವ ವಿಷಯದಲ್ಲಿ ಯಾರಲ್ಲೂ ಸ್ಪಷ್ಟತೆಯಿಲ್ಲ. ಸಿಇಟಿ, ನೀಟ್ನಂತಹ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದೊಳಗೆ ಏನನ್ನು ಕೊಂಡೊಯ್ಯಬೇಕು, ಪರೀಕ್ಷೆಯಲ್ಲಿ ಪಾಲುಗೊಳ್ಳುವ ವಿದ್ಯಾರ್ಥಿ ಏನನ್ನು ಧರಿಸಬೇಕು, ಧರಿಸಬಾರದು ಎನ್ನುವುದನ್ನು ನಿರ್ಧರಿಸುವುದು ತಪಾಸಣಾ ಸಿಬ್ಬಂದಿಯಲ್ಲ ಎನ್ನುವುದು ನಮ್ಮ ರಾಜಕೀಯ ನಾಯಕರಿಗೆ ಮತ್ತು ಧಾರ್ಮಿಕ ಮುಖಂಡರಿಗೆ ಅರಿವಿರಬೇಕಾಗಿದೆ. ಅವರು ತಮಗೆ ಸರಕಾರ ನೀಡಿರುವ ಆದೇಶವನ್ನು ಪಾಲಿಸುತ್ತಾರಷ್ಟೇ. ಇಲ್ಲಿ ಜನಿವಾರವನ್ನಾಗಲಿ ಅಥವಾ ಇನ್ನಾವುದೇ ಧಾರ್ಮಿಕ ಸಂಕೇತಗಳನ್ನು ಕಳಚುವುದಕ್ಕೆ ಒತ್ತಾಯಿಸಿದ್ದರೆ ಅದಕ್ಕೆ ಹೊಣೆ ಮಾಡಬೇಕಾದುದು ಸ್ಥಳೀಯ ಕೇಂದ್ರದಲ್ಲಿರುವ ಸಿಬ್ಬಂದಿಯನ್ನಲ್ಲ. ಬದಲಿಗೆ, ಅಂತಹ ನಿಯಮಗಳನ್ನು ಮಾಡಿ ಆದೇಶ ಹೊರಡಿಸಿರುವ ಹಿರಿಯ ಅಧಿಕಾರಿಗಳನ್ನು. ಆದರೆ ಸರಕಾರ ತನ್ನನ್ನು ರಕ್ಷಿಸಿಕೊಳ್ಳುವ ಆತುರದಲ್ಲಿ ಅಮಾಯಕ ಸಿಬ್ಬಂದಿಯನ್ನು ಬಲಿಕೊಡಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ, ತನಗೆ ಮೇಲಧಿಕಾರಿಗಳಿಂದ ಸಿಕ್ಕಿದ ಆದೇಶವನ್ನು ಯಥಾವತ್ ಪಾಲಿಸಿದ ಸ್ಥಳೀಯ ಪರೀಕ್ಷಾ ಕೇಂದ್ರದ ಸಿಬ್ಬಂದಿಯ ಅಮಾನತನ್ನು ಸರಕಾರ ತಕ್ಷಣ ಹಿಂದೆಗೆದುಕೊಳ್ಳಬೇಕಾಗಿದೆ. ಅವರ ಮೇಲಿರುವ ಎಫ್ಐಆರ್ನ್ನು ಕೂಡ ಸರಕಾರ ರದ್ದುಗೊಳಿಸಬೇಕು.
ನೀಟ್, ಸಿಇಟಿಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳು ಜನಿವಾರ ಮಾತ್ರವಲ್ಲ ಇನ್ನೂ ಹಲವು ಸಂಕೇತಗಳು, ಆಭರಣಗಳನ್ನು ಧರಿಸಿ ಪರೀಕ್ಷೆ ಬರೆಯುವುದನ್ನು ನಿರಾಕರಿಸಲಾಗಿದೆ. ಕೇಂದ್ರ ಸರಕಾರದ ಪರೀಕ್ಷಾ ಪ್ರಾಧಿಕಾರಗಳ ನೀತಿಗಳು ಪರೀಕ್ಷಾ ಕೇಂದ್ರದೊಳಗೆ ಏನನ್ನು ಒಯ್ಯಬೇಕು, ಒಯ್ಯಬಾರದು ಎನ್ನುವ ನೀತಿಯನ್ನು ರೂಪಿಸುತ್ತದೆ. ಈ ಕಾನೂನು ಮತ್ತು ವಸ್ತ್ರಸಂಹಿತೆ ನಿಯಮಗಳು ಭಾರತದಾದ್ಯಂತ ಅನ್ವಯವಾಗುತ್ತದೆ. ನೀಟ್ ಪರೀಕ್ಷೆಯ ಉಸ್ತುವಾರಿ ಕೇಂದ್ರದ್ದಾಗಿದ್ದರೆ, ಸಿಇಟಿಯಂತಹ ಸ್ಪರ್ಧಾತ್ಮಕ ಪರೀಕ್ಷೆಯ ಉಸ್ತುವಾರಿ ರಾಜ್ಯದ್ದಾಗಿದೆ. ಆದರೆ ರಾಜ್ಯ ಸರಕಾರವೂ ಕೇಂದ್ರದ ಮಾರ್ಗ ಸೂಚಿಗಳನ್ನೇ ರಾಜ್ಯದ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಅಳವಡಿಸಿಕೊಂಡಿದೆ. ಉದ್ದ ಅಂಗಿ, ಜಾಕೆಟ್, ಕೋಟು, ಕೈದಾರ, ಜನಿವಾರ, ಬೂಟು, ಯಾವುದೇ ದಾರ, ವಾಚು, ಅಲಂಕಾರ, ದುಪ್ಪಟ, ಚೈನ್, ಕಿವಿಗೆಜ್ಜೆ, ಸರ, ಉಂಗುರಗಳನ್ನು ಈ ಮಾರ್ಗಸೂಚಿಗಳು ನಿಷೇಧಿಸುತ್ತವೆ. ಬರೀ ಜನಿವಾರ ಮಾತ್ರವಲ್ಲ, ವಿವಾಹಿತ ಮಹಿಳೆಯರು ಮಂಗಳಸೂತ್ರವನ್ನು ಧರಿಸಿ ಪರೀಕ್ಷೆಯನ್ನು ಎದುರಿಸುವುದಕ್ಕೂ ಅನುಮತಿಯಿಲ್ಲ. ತಪಾಸಣಾ ಸಿಬ್ಬಂದಿಯು ತಮ್ಮ ಮಾರ್ಗ ಸೂಚಿಗಳನ್ನು ಪಾಲಿಸಿದ್ದಾರೆಯೇ ಹೊರತು, ಯಾರದೇ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವ ಉದ್ದೇಶದಿಂದ ಕೃತ್ಯ ಎಸಗಿಲ್ಲ. ನಿಜಕ್ಕೂ ಸರಕಾರ ಕ್ರಮ ತೆಗೆದುಕೊಳ್ಳಬೇಕಾದುದು ಈ ಮಾರ್ಗಸೂಚಿಗಳನ್ನು ಸಿದ್ಧಪಡಿಸಿದ ಉನ್ನತ ಸ್ಥಾನದಲ್ಲಿ ಕುಳಿತ ಅಧಿಕಾರಿಗಳ ವಿರುದ್ಧ.
ಜನಿವಾರವನ್ನು ಕಳಚುವ ಮೂಲಕ ಧಾರ್ಮಿಕ ನಂಬಿಕೆಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸುವ ಬ್ರಾಹ್ಮಣ ಸಮಾಜದ ಮುಖಂಡರು ಮತ್ತು ಬಿಜೆಪಿ ನಾಯಕರು ‘ಹಿಜಾಬ್ ಪ್ರಕರಣ’ದಲ್ಲಿ ತಮ್ಮ ನಿಲುವು ಏನಿತ್ತು ಎನ್ನುವುದರ ಬಗ್ಗೆಯೂ ಈ ಸಂದರ್ಭದಲ್ಲಿ ಆತ್ಮವಿಮರ್ಶೆ ನಡೆಸಬೇಕು. ಹೆಣ್ಣು ಮಕ್ಕಳ ಸಬಲೀಕರಣದ ಮಾತನಾಡುವ ಸರಕಾರವೇ, ವಿದ್ಯಾರ್ಥಿನಿಯರ ಶಿರವಸ್ತ್ರ ದ ನೆಪವೊಡ್ಡಿ ಅವರನ್ನು ಶಾಲೆಯಿಂದ ಹೊರಹಾಕಿತು. ನೂರಾರು ವಿದ್ಯಾರ್ಥಿನಿಯರ ಶೈಕ್ಷಣಿಕ ಭವಿಷ್ಯ ಇದರಿಂದಾಗಿ ಅತಂತ್ರವಾಯಿತು. ಆಗ ಇದೇ ಮುಖಂಡರು ‘ನಿಮಗೆ ಶಿಕ್ಷಣ ಮುಖ್ಯವೋ ಹಿಜಾಬ್ ಮುಖ್ಯವೋ?’ ಎನ್ನುವ ಪ್ರಶ್ನೆಯನ್ನು ವಿದ್ಯಾರ್ಥಿನಿಯರ ಬಳಿ ಕೇಳಿದ್ದರು. ಶಾಲೆಗಳಿಗೆ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಪ್ರವೇಶಿಸಬಹುದೇ ಬೇಡವೇ ಎನ್ನುವ ವಿಚಾರ ಇದೀಗ ಕೋರ್ಟ್ಲ್ಲಿದೆ. ವಿದ್ಯಾರ್ಥಿನಿಯರ ಹಿಜಾಬ್ಗೆ ಅನ್ವಯಿಸುವ ನಿಯಮ, ಜನಿವಾರಕ್ಕೆ ಯಾಕೆ ಅನ್ವಯಿಸುವುದಿಲ್ಲ ಎನ್ನುವ ಪ್ರಶ್ನೆಯೂ ಈಗ ಎದ್ದಿದೆ. ಶಿಕ್ಷಣಕ್ಕಾಗಿ ಸಮವಸ್ತ್ರವೇ ಹೊರತು, ಸಮವಸ್ತ್ರಕ್ಕಾಗಿ ಶಿಕ್ಷಣವಲ್ಲ ಎನ್ನುವುದು ಯಾಕೆ ಈ ನಾಯಕರಿಗೆ ಅರ್ಥವಾಗಿಲ್ಲ. ಜನಿವಾರಕ್ಕೊಂದು ನಿಯಮ? ಹಿಜಾಬ್ಗೆ ಇನ್ನೊಂದು ನಿಯಮ ಎಷ್ಟು ಸರಿ? ಜನಿವಾರ ಧಾರಿಗಳಿಗೆ ಸರಕಾರದಿಂದ ಸಿಕ್ಕಿದ ಭರವಸೆ, ಹಿಜಾಬ್ ಅಥವಾ ತಲೆವಸ್ತ್ರ ಧರಿಸಿ ಶಿಕ್ಷಣ ಪಡೆಯ ಬಯಸುವ ನಾಡಿನ ಎಲ್ಲಾ ಹೆಣ್ಣುಮಕ್ಕಳಿಗೂ ಸಿಗಬೇಕಾಗಿದೆ.






