ದಲಿತರಿಗೆ ಆರೆಸ್ಸೆಸ್ ವಿಷಯ ಯಾಕೆ ಬೇಡ?

ಸಾಂದರ್ಭಿಕ ಚಿತ್ರ Photo: chatgpt
‘‘ಆರೆಸ್ಸೆಸ್ ಯಾಕೆ ನೋಂದಣಿ ಮಾಡಿಕೊಂಡಿಲ್ಲ? ಆರೆಸ್ಸೆಸ್ ತನ್ನ ದೇಣಿಗೆಯ ಲೆಕ್ಕ ಪತ್ರಗಳನ್ನು ಸರಕಾರದ ಮುಂದಿಟ್ಟಿದೆಯೆ?’’ ಎನ್ನುವ ಪ್ರಶ್ನೆ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ಪ್ರಶ್ನೆಯನ್ನು ನೇರವಾಗಿ ಎದುರಿಸಲಾಗದ ಆರೆಸ್ಸೆಸ್ ಎಂದಿನಂತೆ ಜಾತಿ, ಧರ್ಮವನ್ನು ಮುಂದಿಟ್ಟು ಪ್ರಶ್ನೆ ಕೇಳಿದವರನ್ನೇ ಕಟಕಟೆಯಲ್ಲಿ ನಿಲ್ಲಿಸುವ ಪ್ರಯತ್ನ ನಡೆಸುತ್ತಿದೆ. ರಾಜ್ಯ ಗೃಹ ಸಚಿವರು ಬರೆದ ಪತ್ರಕ್ಕೆ ಸ್ಪಷ್ಟ ಉತ್ತರ ನೀಡಲು ಸಾಧ್ಯವಾಗದ ಮೋಹನ್ ಭಾಗವತ್, ‘‘ಹಿಂದೂ ಧರ್ಮವೂ ನೋಂದಣಿಯಾಗಿಲ್ಲ. ನೋಂದಣಿಯಾಗದ ಹಲವು ವಿಷಯಗಳು ಇವೆ’’ ಎಂದು ಜಾರಿಕೊಂಡರು. ಇದೀಗ ಗೃಹ ಸಚಿವರ ಜಾತಿಯನ್ನು ಮುಂದೆ ತಂದು ಪ್ರಶ್ನೆಯನ್ನು ನಗಣ್ಯ ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ. ಅದಕ್ಕಾಗಿ ಅವರು ಬಿಜೆಪಿಯೊಳಗೇ ಇರುವ ದಲಿತ ಮುಖಂಡನೊಬ್ಬನನ್ನು ಬಳಸಿಕೊಂಡಿದ್ದಾರೆ. ತನಗೆ ಅಪಾಯ ಎದುರಾದಾಗ ಶೂದ್ರ, ದಲಿತರನ್ನು ಗುರಾಣಿಯನ್ನಾಗಿ ಬಳಸುವುದು ಆರೆಸ್ಸೆಸ್ನ ಬಹು ಹಿಂದಿನ ತಂತ್ರ. ಅದರ ಭಾಗವಾಗಿಯೇ ಗೃಹ ಸಚಿವ ಪ್ರಿಯಾಂಕ್ ಖರ್ಗೆಯ ವಿರುದ್ಧ ಆರೆಸ್ಸೆಸ್, ಬಿಜೆಪಿಯೊಳಗಿನ ದಲಿತ ಮುಖಂಡ ರಮೇಶ್ ಜಿಗಜಿಣಗಿಯನ್ನು ಬಳಸಿಕೊಳ್ಳಲು ಮುಂದಾಗಿದೆ. ‘‘ಆರೆಸ್ಸೆಸ್ನ ವಿಷಯ ದಲಿತ ಮನುಷ್ಯನಿಗೆ ಯಾಕೆ ಬೇಕು?’’ ಎನ್ನುವ ಪ್ರಶ್ನೆಯನ್ನು ಪ್ರಿಯಾಂಕ್ ಖರ್ಗೆಯವರಿಗೆ ಜಿಗಜಿಣಗಿ ಕೇಳಿದ್ದಾರೆ. ‘‘ಆರೆಸ್ಸೆಸ್ ತಂಟೆಗೆ ಬಂದವರು ಇದುವರೆಗೆ ಯಾರೂ ಉಳಿದಿಲ್ಲ’’ ಎಂದು ಎಚ್ಚರಿಸಿರುವ ಅವರು, ‘‘ಆರೆಸ್ಸೆಸನ್ನು ನೋಂದಾಯಿಸಿ ಏನು ಮಾಡುತ್ತೀರಿ? ಸಚಿವರ ಕೆಲಸ ಅದಲ್ಲ. ಆರೆಸ್ಸೆಸ್ ಕೆಲಸ ಏನು ಎನ್ನುವುದನ್ನು ಜನರು ಕೇಳಿದರೆ ಹೇಳುತ್ತಾರೆ’’ ಎಂದು ಆರೆಸ್ಸೆಸನ್ನು ಸಮರ್ಥಿಸಿಕೊಂಡಿದ್ದಾರೆ.
ಮುಖ್ಯವಾಗಿ ಪ್ರಿಯಾಂಕ್ ಖರ್ಗೆಯವರು ಯಾವುದೇ ದಲಿತ ಸಂಘಟನೆಯ ಮುಖಂಡರಾಗಿ ಆರೆಸ್ಸೆಸ್ಗೆ ಈ ಪ್ರಶ್ನೆಯನ್ನು ಕೇಳಿಲ್ಲ. ಆದುದರಿಂದ ದಲಿತರಿಗೆ ಆರೆಸ್ಸೆಸ್ ವಿಷಯ ಯಾಕೆ ಎನ್ನುವ ಪ್ರಶ್ನೆಯೇ ಬರುವುದಿಲ್ಲ. ಪ್ರಿಯಾಂಕ್ ಖರ್ಗೆ ಈ ರಾಜ್ಯದ ಗೃಹ ಸಚಿವರು. ಆರೆಸ್ಸೆಸ್ ಈ ರಾಜ್ಯದಲ್ಲಿ ಪ್ರತೀ ವರ್ಷ ಹಲವು ಬೈಠಕ್ಗಳನ್ನು, ಸಮಾವೇಶಗಳನ್ನು ಹಮ್ಮಿಕೊಳ್ಳುತ್ತದೆ. ರಾಜ್ಯದ ಭದ್ರತೆಯ ಹೊಣೆಗಾರಿಕೆ ಖರ್ಗೆಯವರ ಮೇಲಿರುವುದರಿಂದ, ಅವರು ಸಚಿವರ ಕೆಲಸವನ್ನೇ ಮಾಡಿದ್ದಾರೆ. ನಾಳೆ ಆರೆಸ್ಸೆಸ್ನ ಯಾವುದೇ ಸಮಾವೇಶಕ್ಕೆ, ಬೈಠಕ್ಗಳಿಗೆ ರಾಜ್ಯ ಸರಕಾರ ಅನುಮತಿಯನ್ನು ನೀಡಬೇಕಾದರೆ ಅದು ಈ ಸಂವಿಧಾನಕ್ಕೆ ಬದ್ಧವಾಗಿ ತನ್ನನ್ನು ದಾಖಲಿಸಿಕೊಂಡಿದೆಯೇ ಎನ್ನುವುದನ್ನು ಪರಿಶೀಲಿಸಬೇಕಾಗುತ್ತದೆ. ಕಾರ್ಯಕ್ರಮಗಳ ಹೆಸರಿನಲ್ಲಿ ಅದು ಸಂಗ್ರಹಿಸುವ ದೇಣಿಗೆಗಳಿಗೆ ಸಂಬಂಧಿಸಿ ಸರಕಾರಕ್ಕೆ ಅಧಿಕೃತ ಲೆಕ್ಕಪತ್ರಗಳನ್ನು ಒದಗಿಸುತ್ತಿದೆಯೇ ಎನ್ನುವುದನ್ನು ಗಮನಿಸಬೇಕಾಗುತ್ತದೆ. ಈ ದೇಶದ ಕಾನೂನಿಗನುಗುಣವಾಗಿ ಒಂದು ಬೃಹತ್ ಸಂಘಟನೆ ನೋಂದಣಿಯನ್ನು ಮಾಡಿಲ್ಲ ಮತ್ತು ಅದು ತನ್ನ ಲೆಕ್ಕಪತ್ರಗಳನ್ನು ಮುಚ್ಚಿಡುತ್ತದೆ ಎಂದಾದರೆ ಅದರ ಬಗ್ಗೆ ತನಿಖೆ ನಡೆಸುವುದು ಅತ್ಯಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಿಯಾಂಕ್ ಖರ್ಗೆ ಕೇಳಿದ ಪ್ರಶ್ನೆ ವೈಯಕ್ತಿಕವಾದುದಲ್ಲ ಎನ್ನುವುದನ್ನು ಜಿಗಜಿಣಗಿ ಗಮನಿಸಬೇಕಾಗಿದೆ. ಅದು ಈ ನಾಡಿನ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ್ದು. ಇದೇ ಸಂದರ್ಭದಲ್ಲಿ ‘‘ಆರೆಸ್ಸೆಸ್ ತಂಟೆಗೆ ಬಂದವರು ಇದುವರೆಗೆ ಯಾರೂ ಉಳಿದಿಲ್ಲ’’ ಎನ್ನುವ ಎಚ್ಚರಿಕೆಯ ಮಾತನ್ನು ಗೃಹ ಸಚಿವರು ಗಂಭೀರವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಈ ಎಚ್ಚರಿಕೆಯ ಅರ್ಥವೇನು? ಪರೋಕ್ಷವಾಗಿ ಇದು ಗೃಹಸಚಿವರಿಗೆ ಒಡ್ಡಿದ ಬೆದರಿಕೆಯಾಗಿದೆ. ಈ ದೇಶದ ಸಂವಿಧಾನಕ್ಕೆ ಬದ್ಧರಾಗಿ ಕಾರ್ಯಾಚರಣೆ ಮಾಡಿ ಎಂದು ಕೇಳಿದವರಿಗೆ ಈ ರೀತಿಯ ಬೆದರಿಕೆಯನ್ನು ಒಡ್ಡಿ ಬಾಯಿ ಮುಚ್ಚಿಸಲು ನೋಡುತ್ತಿರುವುದು ಆರೆಸ್ಸೆಸ್ನ ಕುರಿತಂತೆ ಇನ್ನಷ್ಟು ಸಂಶಯಗಳನ್ನು ಹುಟ್ಟಿಸಿ ಹಾಕಿದೆ.
ಇದೇ ಸಂದರ್ಭದಲ್ಲಿ ‘‘ದಲಿತ ಮನುಷ್ಯನಿಗೆ ಆರೆಸ್ಸೆಸ್ ವಿಷಯ ಯಾಕೆ ಬೇಕು?’’ ಎಂಬ ಜಿಗಜಿಣಗಿ ಪ್ರಶ್ನೆಯೂ ಪೂರ್ಣವಾಗಿ ತಿರಸ್ಕರಿಸುವಂತಹದ್ದಲ್ಲ. ‘‘ದಲಿತ ಮನುಷ್ಯನಿಗೆ ಆರೆಸ್ಸೆಸ್ ವಿಷಯ ಯಾಕೆ ಬೇಡ?’’ ಎಂದು ಪ್ರತಿಯಾಗಿ ಅವರನ್ನೇ ಜನತೆ ಕೇಳಬೇಕಾಗಿದೆ. ಅವರ ಪ್ರಶ್ನೆಯನ್ನು ಹಲವು ರೀತಿಯಲ್ಲಿ ಅರ್ಥಮಾಡಿಕೊಳ್ಳಬಹುದು. ಆರೆಸ್ಸೆಸ್ನ ಸಮಸ್ಯೆ ದಲಿತರದ್ದಲ್ಲ, ಮುಸ್ಲಿಮರದ್ದು. ಇದರ ಬಗ್ಗೆ ನೀವು ಯಾಕೆ ತಲೆಕೆಡಿಸುತ್ತೀರಿ? ಎನ್ನುವ ಧ್ವನಿ ಅವರ ಪ್ರಶ್ನೆಯಲ್ಲಿದೆ. ಅಥವಾ ಆರೆಸ್ಸೆಸ್ನ್ನು ಪ್ರಶ್ನಿಸಲು ದಲಿತರಿಗೆ ಯೋಗ್ಯತೆಯಿಲ್ಲ ಎಂದು ಸ್ವಯಂ ಒಪ್ಪಿಕೊಂಡಿರುವ ಸಾಧ್ಯತೆಯೂ ಇದೆ. ಆರೆಸ್ಸೆಸ್ ಹೊರಟಿರುವುದು ಹಿಂದುತ್ವವಾದಿ, ಬ್ರಾಹ್ಮಣ್ಯವಾದಿ ದೇಶವೊಂದನ್ನು ಕಟ್ಟುವುದಕ್ಕೆ. ಅಂತಹ ದೇಶದಲ್ಲಿ ದಲಿತರ ಸ್ಥಾನಮಾನ ಎಲ್ಲಿರುತ್ತದೆ ಎನ್ನುವುದನ್ನು ಜಿಗಜಿಣಗಿಯವರಿಗೆ ಪ್ರತ್ಯೇಕ ವಿವರಿಸಬೇಕಾಗಿದೆ. ಆರಸ್ಸೆಸ್ನ ಆದರ್ಶವಾಗಿರುವ ಗೋಳ್ವಾಲ್ಕರ್ರಂತಹ ನಾಯಕರು ಜಾತಿ ವ್ಯವಸ್ಥೆಯ ಬಗ್ಗೆ ಯಾವ ನಿಲುವನ್ನು ಹೊಂದಿದ್ದರು ಎನ್ನುವುದು ಅವರಿಗೆ ತಿಳಿಯದ ವಿಷಯವೇನೂ ಅಲ್ಲ. ‘‘ಬಿಜೆಪಿ, ಆರೆಸ್ಸೆಸ್ನ ಜೊತೆಗಿದ್ದೂ ನಾನು ಸಂಸದನಾಗಿಲ್ಲವೆ?’’ ಎಂದು ಅವರು ಕೇಳಬಹುದು. ಆದರೆ ಅವರು ಸಂಸದರಾಗಿದ್ದು ಸಂವಿಧಾನದ ಬಲದಿಂದ. ಅನಿವಾರ್ಯ ಎನ್ನುವ ಕಾರಣಕ್ಕಾಗಿ ಬಿಜೆಪಿ ಮತ್ತು ಆರೆಸ್ಸೆಸ್ ಜಿಗಜಿಣಗಿಯವರಂತಹ ದಲಿತ ಸಮುದಾಯದಿಂದ ಬಂದ ನಾಯಕರನ್ನು ಒಪ್ಪಿಕೊಂಡಿದೆ. ಸಂವಿಧಾನ ಅಸ್ತಿತ್ವದಲ್ಲಿಲ್ಲದೇ ಇರುತ್ತಿದ್ದರೆ ಜಿಗಜಿಣಗಿ ಸಂಸದರಾಗುವುದು, ಬಿಜೆಪಿಯಲ್ಲಿ ನಾಯಕರಾಗಿರುವುದು ಸಾಧ್ಯವಿರುತ್ತಿರಲಿಲ್ಲ. ಅಂತಹ ಸಂವಿಧಾನದ ವಿರುದ್ಧ ಆರೆಸ್ಸೆಸ್ ಸಂಚು ಮಾಡುತ್ತಿದೆ. ಅಂದರೆ ಅದು ಪರೋಕ್ಷವಾಗಿ ದಲಿತರ ವಿರುದ್ಧ ಮಾಡುತ್ತಿರುವ ಸಂಚೇ ಆಗಿದೆ. ಈ ಕಾರಣಕ್ಕಾಗಿ ದಲಿತರೇ ಮುಂಚೂಣಿಯಲ್ಲಿ ನಿಂತು ಆರೆಸ್ಸೆಸನ್ನು ಪ್ರಶ್ನಿಸಬೇಕಾಗಿದೆ.
ಇಂದಿಗೂ ರಮೇಶ್ ಜಿಗಜಿಣಗಿ ಯಾವುದೇ ದೇವಸ್ಥಾನದ ಒಳಗೆ ಹೋಗಿ ಪ್ರಸಾದ ಸ್ವೀಕರಿಸುವುದಿಲ್ಲ. ಈ ಹಿಂದೆ ಅವರು ದೇವಸ್ಥಾನದೊಳಗೆ ಕಾಲಿಟ್ಟದ್ದು ವಿವಾದದ ವಿಷಯವಾಗಿತ್ತು. ಈ ಸಂದರ್ಭದಲ್ಲಿ ‘‘ನಾನು ದೇವಸ್ಥಾನ ಪ್ರವೇಶ ಮಾಡುವುದರಿಂದ ಯಾರಿಗಾದರೂ ನೋವಾಗುತ್ತದೆ ಎಂದಾದರೆ ದೇವಸ್ಥಾನದ ಹೊರಗೇ ನಿಂತು ಪ್ರಸಾದ ತೆಗೆದುಕೊಳ್ಳುತ್ತೇನೆ’’ ಎಂದು ಹೇಳಿಕೆ ನೀಡಿದ್ದರು. ಈ ಸಂದರ್ಭದಲ್ಲಿ ಜಿಗಜಿಣಗಿಯವರ ನೆರವಿಗೆ ಯಾವುದೇ ಆರೆಸ್ಸೆಸ್ ಮುಖಂಡರು ಬಂದಿರಲಿಲ್ಲ. ಯಾಕೆಂದರೆ, ಜಿಗಜಿಣಗಿ ದೇವಸ್ಥಾನದೊಳಗೆ ಪ್ರವೇಶಿಸುವುದು ಆರೆಸ್ಸೆಸ್ಗೂ ಸಮ್ಮತ ವಿಷಯವಲ್ಲ. ಕೇಂದ್ರದಲ್ಲಿ ಸಚಿವ ಸ್ಥಾನತಪ್ಪಿದಾಗ ಸುದ್ದಿಗಾರರೊಂದಿಗೆ ಮಾತನಾಡುತ್ತ ‘‘ದಕ್ಷಿಣ ಭಾರತದಲ್ಲಿ ದಲಿತನಾಗಿ ನಾನೊಬ್ಬನೇ ಏಳು ಬಾರಿ ಸಂಸದನಾಗಿ ಗೆದ್ದು ಬಂದಿರುವುದು. ಕೇಂದ್ರದಲ್ಲಿ ಈ ಬಾರಿ ಎಲ್ಲ ಮೇಲ್ಜಾತಿಯವರೇ ಸಚಿವರಾಗಿದ್ದಾರೆ. ದಲಿತರು ಬಿಜೆಪಿಗೆ ಮತ ಹಾಕಿಲ್ಲವೆ? ದಲಿತ ಎನ್ನುವ ಕಾರಣಕ್ಕೆ ನನಗೆ ಸಚಿವ ಸ್ಥಾನವನ್ನು ನೀಡಲಿಲ್ಲವೆ?’’ ಎನ್ನುವ ಪ್ರಶ್ನೆಯನ್ನು ಕೇಳಿದ್ದರು. ಆರೆಸ್ಸೆಸ್ ಮತ್ತು ಬಿಜೆಪಿ ಆಳದಲ್ಲಿ ದಲಿತರ ಕುರಿತಂತೆ ಯಾವ ಮನಸ್ಥಿತಿಯನ್ನು ಹೊಂದಿದೆ ಎನ್ನುವುದು ಸ್ವತಃ ಜಿಗಜಿಣಗಿಯವರಿಗೇ ಗೊತ್ತಿದೆ. ಆರೆಸ್ಸೆಸ್ ನೋಂದಣಿಯಾಗಬೇಕು ಎನ್ನುವುದು ದಲಿತ- ಬ್ರಾಹ್ಮಣ ಜಾತಿಗಳಿಗೆ ಸಂಬಂಧಿಸಿದ್ದಲ್ಲ. ಹಿಂದೂ-ಮುಸ್ಲಿಮ್ ಕೂಡ ಅಲ್ಲ. ಅದು ಈ ದೇಶದ ಸಂವಿಧಾನಕ್ಕೆ ಸಂಬಂಧಿಸಿದ್ದು. ತನ್ನನ್ನು ತಾನು ದೇಶಪ್ರೇಮಿ ಎಂದು ಬಿಂಬಿಸಿಕೊಳ್ಳುವ ಆರೆಸ್ಸೆಸ್, ತಕ್ಷಣ ತನ್ನ ಸಂಘಟನೆಯನ್ನು ನೋಂದಣಿ ಮಾಡಿಸಿಕೊಂಡು, ದೇಣಿಗೆಗಳ ವಿವರಗಳನ್ನು ಸರಕಾರಕ್ಕೆ ಒಪ್ಪಿಸಿ ತನ್ನ ದೇಶಪ್ರೇಮವನ್ನು ಸಾಬೀತುಪಡಿಸಬೇಕಾಗಿದೆ.






