ತೆರಿಗೆ ದುಡ್ಡಿಗೆ ಏಕಿಷ್ಟೊಂದು ಹಪಾಹಪಿ?

ಸಾಂದರ್ಭಿಕ ಚಿತ್ರ Photo: x.com/i/grok
ದೇಶದ ಜನರು ಬಳಸುವ ಟೆಲಿಕಾಂ ಡೇಟಾಕ್ಕೆ ತೆರಿಗೆ ವಿಧಿಸುವ ಮೂಲಕ ಸಂಪನ್ಮೂಲ ಸಂಗ್ರಹ ಸಾಧ್ಯವೇ ಎಂದು ಪರಿಶೀಲಿಸಿ, ಸೆಪ್ಟಂಬರ್ 30ರ ಒಳಗೆ ತಮಗೆ ತಿಳಿಸುವಂತೆ ಪ್ರಧಾನಮಂತ್ರಿಯವರ ಕಚೇರಿಯು ವರ್ಷಾರಂಭದಲ್ಲಿ ಟೆಲಿಕಾಂ ಇಲಾಖೆಗೆ (DoT) ಸೂಚಿಸಿತ್ತು. ಜನವರಿ 7ರಂದು ಪ್ರಧಾನ ಮಂತ್ರಿಯವರ ಅಧ್ಯಕ್ಷತೆಯಲ್ಲಿ ಟೆಲಿಕಾಂ ವಲಯದ ಕಾರ್ಯ ಪರಿಶೀಲನಾ ಸಭೆ ನಡೆದಾಗ ಈ ಪ್ರಸ್ತಾವ ಆಗಿತ್ತು. ರಚನಾತ್ಮಕ ಡಿಜಿಟಲ್ ಬಳಕೆಗೆ ಪ್ರೋತ್ಸಾಹ ಮತ್ತು ಅತಿಬಳಕೆಯ ವ್ಯಸನವನ್ನು ನಿರುತ್ಸಾಹಗೊಳಿಸುವ ನಿಟ್ಟಿನಲ್ಲಿ ಮಾತ್ರವಲ್ಲದೆ ಟೆಲಿಕಾಂ ಇಲಾಖೆಗೆ ಆದಾಯ ತರುವ ನಿಟ್ಟಿನಲ್ಲಿ ಈ ಸಾಧ್ಯತೆಯನ್ನು ಪರಿಶೀಲಿಸಲು ಹೇಳಲಾಗಿತ್ತು.
ಆದರೆ, ಈ ತೆರಿಗೆ ಪ್ರಸ್ತಾವವನ್ನು ಅನುಷ್ಠಾನಕ್ಕೆ ತರುವಲ್ಲಿ ಇರುವ ತೊಡಕುಗಳ ಕಾರಣಕ್ಕೆ, ಸದ್ಯಕ್ಕೆ ಈ ತೆರಿಗೆ ವಿಧಿಸುವಿಕೆ ಸಾಧ್ಯ ಆಗುವುದಿಲ್ಲ ಎಂದು ಟೆಲಿಕಾಂ ಇಲಾಖೆಯ ಅಧಿಕಾರಿಗಳು ಅಭಿಪ್ರಾಯಪಟ್ಟಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿ ಆಗಿದೆ. ಅನಗತ್ಯವಾಗಿ ಡೇಟಾಬಳಕೆ, ಅದರಲ್ಲೂ ಎಳೆಯ ಮಕ್ಕಳ ಡೇಟಾ ಬಳಕೆಗೆ ಇದರಿಂದ ಕಡಿವಾಣ ಬೀಳಬಹುದೆಂಬುದು ಸರಕಾರದ ಯೋಚನೆ ಆಗಿತ್ತಂತೆ. ಜಗತ್ತಿನಾದ್ಯಂತ ಬೇರೆ ದೇಶಗಳಲ್ಲಿ ಡಿಜಿಟಲ್ ಚಟುವಟಿಕೆಗಳು ಹಾಗೂ ಟೆಲಿಕಾಂ ಸೇವೆಗಳಿಗೆ ತೆರಿಗೆ ವಿಧಿಸಲಾಗುತ್ತಿದೆಯೇ ಹೊರತು, ಬಳಸಲಾದ ಡೇಟಾ ಆಧರಿಸಿ ತೆರಿಗೆ ಲೆಕ್ಕಾಚಾರದ ಪದ್ಧತಿ ಇಲ್ಲ. ಭಾರತದಲ್ಲಿ ಈಗಾಗಲೇ ಮೊಬೈಲ್ ಫೋನ್ಗಳ ರೀಚಾರ್ಜ್ ಮೇಲೆ ಶೇ. 18 ಜಿಎಸ್ಟಿ ವಿಧಿಸಲಾಗುತ್ತಿದೆ. ಇದಕ್ಕೆ ಹೊರತಾಗಿ ಬಳಸಲಾದ ಪ್ರತೀ ಜಿಬಿ ಡೇಟಾಕ್ಕೆ ತೆರಿಗೆ ವಿಧಿಸಲು ಹೊರಡುವುದು ದುಡ್ಡಿನ ಹಪಾಹಪಿಯಂತೆಯೇ ಕಾಣಿಸಲಿದೆ. ಸದ್ಯಕ್ಕೆ ಟೆಲಿಕಾಂ ಇಲಾಖೆಗೆ ಆದಾಯ ಮೂಲ ಇರುವುದು ಸ್ಪೆಕ್ಟ್ರಂ ಹರಾಜು ಮತ್ತು ಟೆಲಿಕಾಂ ಸೇವಾದಾತರ ಲೈಸೆನ್ಸ್ ಫೀ ಮೂಲಕ. ಅಲ್ಲಿ ಕೂಡ 2022ರಲ್ಲಿ 5ಜಿ ಸ್ಪೆಕ್ಟ್ರಂ ಹರಾಜಾದಾಗ 4.3 ಲಕ್ಷ ಕೋಟಿ ರೂ. ಆದಾಯ ಬಂದಿತ್ತು. ಆದರೆ, 2024ರ ಹರಾಜಿನ ವೇಳೆ ಅದು ಕೇವಲ 11,341 ಕೋಟಿ ರೂ.ಗಳಿಗೆ ಇಳಿದಿದೆ. ಟೆಲಿಕಾಂ ಇಲಾಖೆಗೆ 2026ನೇ ಸಾಲಿನಲ್ಲಿ 1.1 ಲಕ್ಷ ಕೋಟಿ ರೂ. ಸಂಗ್ರಹದ ಗುರಿ ನಿಡಲಾಗಿದ್ದು, ಅದು 2025 ಡಿಸೆಂಬರ್ ಹೊತ್ತಿಗೆ ಕೇವಲ 79,533 ಕೋಟಿ ರೂ. ಸಂಗ್ರಹಿಸಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ.
ಈ ಹಿನ್ನೆಲೆಯಲ್ಲಿ, ಸರಕಾರ ಟೆಲಿಕಾಂ ಇಲಾಖೆಯ ಮೂಲಕ ಆದಾಯ ಸಂಗ್ರಹಿಸಲು ಹೊರಟಿದೆ. 2026ನೇ ಹಣಕಾಸು ವರ್ಷದಲ್ಲಿ ದೇಶದ ಒಟ್ಟು ಮೊಬೈಲ್ ಡೇಟಾ ಬಳಕೆಯು ಅಂದಾಜು 28,500 ಕೋಟಿ ಜಿಬಿ ಆಗಿದ್ದು, ಪ್ರತೀ ಜಿಬಿ ಮೇಲೆ ಒಂದು ರೂಪಾಯಿ ತೆರಿಗೆ ವಿಧಿಸಿದರೂ, ಸರಕಾರಕ್ಕೆ ವಾರ್ಷಿಕ 28,500 ಕೋಟಿ ರೂ.ಗಳ ತೆರಿಗೆ ಆದಾಯ ಸಿಗಲಿದೆ. ಜನವರಿ 7ರ ಈ ಸಭೆಯಲ್ಲಿ ಟೆಲಿಕಾಂ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಪೆಮ್ಮಸಾನಿ ಚಂದ್ರಶೇಖರ್, ಸಂಪುಟ ಕಾರ್ಯದರ್ಶಿ ಟಿ.ವಿ. ಸೋಮನಾಥನ್, ಟೆಲಿಕಾಂ ಕಾರ್ಯದರ್ಶಿ, ನೀತಿ ಆಯೋಗದ ಮುಖ್ಯಸ್ಥರು ಹಾಜರಿದ್ದರು. ಟೆಲಿಕಾಂ ಉಪಕರಣಗಳ ಆಮದಿಗೆ ಕಡಿವಾಣ, ಟೆಲಿಕಾಂ ನೆಟ್ವರ್ಕ್ ಭದ್ರತೆ ಮತ್ತಿತರ ಸಂಗತಿಗಳನ್ನು ಸಭೆ ಚರ್ಚಿಸಿತ್ತು. ಜೊತೆಗೆ, ಬಿಎಸ್ಸೆನ್ನೆಲ್ ಸಿಬ್ಬಂದಿ ಮೇಲೆ ಸರಕಾರ ಮಾಡುವ ತಲಾವೆಚ್ಚ ಅದರ ಆದಾಯದ ಶೇ. 37 ಇದೆ. ಅದೇ, ಖಾಸಗಿ ವಲಯದ ಜಿಯೊ ಟೆಲಿಕಾಂನಲ್ಲಿ ತಲಾವೆಚ್ಚ ಅವರ ಆದಾಯದ ಕೇವಲ ಶೇ. 1.6 ಮತ್ತು ಭಾರ್ತಿ ಏರ್ಟೆಲ್ನಲ್ಲಿ ಅದು ಕೇವಲ ಶೇ. 1.9 ಇದೆ ಎಂಬ ವಾಸ್ತವಗಳೂ ಸಭೆಯಲ್ಲಿ ಚರ್ಚೆ ಆಗಿದ್ದವಂತೆ.
ಈಗೇನೋ ತಾಂತ್ರಿಕ ಕಾರಣಗಳಿಗಾಗಿ ಟೆಲಿಕಾಂ ಡೇಟಾ ಮೇಲೆ ತೆರಿಗೆ ಯೋಚನೆ ತಾತ್ಕಾಲಿಕವಾಗಿ ತಡೆಹಿಡಿಯಬಹುದು. ಅದು ಮುಂದೊಂದು ದಿನ ಯಾವುದೇ ಕ್ಷಣದಲ್ಲಿ ಸಕ್ರಿಯಗೊಂಡರೆ ಅಚ್ಚರಿ ಇಲ್ಲ. ದೇಶದ ಜನರ ಬದುಕು ದುಸ್ತರ ಆಗುತ್ತಿರುವ ಈ ಹಂತದಲ್ಲಿ ಹೀಗೆ ಎಲ್ಲಿ ಅವಕಾಶ ಸಿಗುತ್ತದೆಯೋ ಅಲ್ಲೆಲ್ಲ ತೆರಿಗೆ ವಿಧಿಸಿ ಆದಾಯ ಸಂಗ್ರಹಿಸುವ ಸರಕಾರವು ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಯನ್ನು ತಡೆಯುವ ಗೋಜಿಗೆ ಹೋಗುತ್ತಿಲ್ಲ. ನಿಜಕ್ಕೆಂದರೆ 2016ರಲ್ಲಿ ಜಿಯೊ ಉಚಿತ ಡೇಟಾದೊಂದಿಗೆ ತನ್ನ ಅಂಗಡಿ ತೆರೆದಾಗ, ಅದರ ಭರಪೂರ ಬಳಕೆ ಮಾಡಿಕೊಂಡದ್ದು ಹಾಲಿ ಸರಕಾರ. ಈಗ ವ್ಯಸನವಾಗಿರುವ ಆ ಡೇಟಾ ಬಳಕೆಗೆ, ಅದೇ ಸರಕಾರ ತೆರಿಗೆ ವಿಧಿಸಲು ಯೋಚಿಸುತ್ತಿರುವುದು ಪರಿಸ್ಥಿತಿಯ ವ್ಯಂಗ್ಯ. ಈಗ ವ್ಯಾಪಕ ಬಳಕೆಯಲ್ಲಿರುವ ಯುಪಿಐ ಪಾವತಿಗಳಿಗೂ ಶುಲ್ಕ ವಿಧಿಸುವ ಚರ್ಚೆ ಇನ್ನೂ ಚಾಲ್ತಿಯಲ್ಲಿದೆ. ಇದೇ ಹಾದಿಯಲ್ಲಿ ಮುಂದುವರಿದವರು, ನಾಳೆ ಉಸಿರಾಡುವ ಶುದ್ಧ ಗಾಳಿಗೂ ತೆರಿಗೆ ಎಂದರೆ ಅಚ್ಚರಿ ಇಲ್ಲ.
ಯಾವುದೇ ಪ್ರಜ್ಞಾವಂತ ಸರಕಾರ ಈವತ್ತಿನ ಸ್ಥಿತಿಯಲ್ಲಿ ಮಾಡಬೇಕಾಗಿರುವುದು ಅತಿ ಶ್ರೀಮಂತರಿಗೆ, ಲಾಭಬಡುಕ ಕಾರ್ಪೊರೇಟ್ಗಳಿಗೆ ತೆರಿಗೆ ವಿಧಿಸುವ ಮೂಲಕ ಸಂಪನ್ಮೂಲ ಕ್ರೋಡೀಕರಣದಲ್ಲಿ ಆಗಿರುವ ತಾರತಮ್ಯವನ್ನು ನೀಗಿಸುವ ಕೆಲಸ. ಅದರ ಬದಲು, ಅವರಿಗೆ ಬಗೆಬಗೆಯ ಸಬ್ಸಿಡಿಗಳು, ಪ್ರೋತ್ಸಾಹಗಳನ್ನು ಒದಗಿಸುತ್ತಾ, ದೈನಂದಿನ ಬದುಕು ದುಸ್ತರಗೊಂಡಿರುವ ಮಧ್ಯಮ ವರ್ಗದವರಿಗೆ ಮತ್ತು ಬಡವರಿಗೆ ಇನ್ನಷ್ಟು ತೆರಿಗೆ ಹೊರೆ ಹೇರಲು ಹಾದಿಗಳನ್ನು ಹುಡುಕುವುದು ಅನ್ಯಾಯ. ಜನಸಾಮಾನ್ಯರ ಸಂಪತ್ತನ್ನು ಕಿತ್ತು ಸಿರಿವಂತರ ಜೇಬುತುಂಬಿಸುವ ಗುತ್ತಿಗೆಯನ್ನೇನಾದರೂ ಸರಕಾರ ಪಡೆದಿದೆಯೆ? ಸರಕಾರಗಳು ಜನ ಕಲ್ಯಾಣ ಕಾರ್ಯಕ್ರಮಗಳ ಬದಲು ಚಕ್ರಬಡ್ಡಿ ವಸೂಲಿ ಮಾಡುವ ಲೇವಾದೇವಿಗಾರರಂತೆ ವರ್ತಿಸಲು ಹೊರಡಬಾರದು.






