ಆಟಕ್ಕೆ ಮುನ್ನವೇ ವಿಕೆಟ್ ಪತನ

ರಾಮಲಿಂಗಾ ರೆಡ್ಡಿ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಂಡ ಇನ್ನೇನು ಕಣಕ್ಕಿಳಿದು ಆಟಕ್ಕೆ ಶುರು ಹಚ್ಚಿಕೊಳ್ಳಬೇಕು ಎನ್ನುವಷ್ಟರಲ್ಲೇ ಒಬ್ಬ ಆಟಗಾರನ ಹಿಟ್ ವಿಕೆಟ್ ಆಗಿದೆ. ಖಾತೆ ಘೋಷಣೆಯಾದ ಬೆನ್ನಿಗೇ ರಾಮಲಿಂಗಾ ರೆಡ್ಡಿಯವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತಮ್ಮ ರಾಜೀನಾಮೆಗೆ ಕಾರಣರೂಪದಲ್ಲಿ ‘ಆತ್ಮಸಾಕ್ಷಿ’ಯನ್ನು ಬೇರೆ ಮುಂದೆ ತಂದಿದ್ದಾರೆ. ‘‘ಆತ್ಮಸಾಕ್ಷಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸಲು ನನ್ನಿಂದ ಸಾಧ್ಯವಿಲ್ಲ. ಆ ಕಾರಣದಿಂದ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದಿದ್ದೇನೆ’’ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ತನ್ನ ಆತ್ಮವು ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಬಯಸುತ್ತಿರುವುದರಿಂದಾಗಿ ಆತ್ಮ ಬಿಟ್ಟು ಬದುಕುವುದು ಸಾಧ್ಯವೇ ಇಲ್ಲ ಎನ್ನುವ ಕಾರಣಕ್ಕೆ ಅವರು ಈ ನಿರ್ಧಾರಕ್ಕೆ ಬಂದಿರಬೇಕು. ವಿಘ್ನಗಳನ್ನು ತಪ್ಪಿಸುವುದಕ್ಕಾಗಿ ನೂತನ ಮುಖ್ಯಮಂತ್ರಿಯ ಹಿಂದೆ ಮುಂದೆ ಓಡಾಡುತ್ತಿದ್ದ ವಾಸ್ತುಪ್ರವೀಣರೆಲ್ಲ, ಈ ‘ಆತ್ಮ’ಕ್ಕೆ ಶಾಂತಿಯನ್ನು ಕಲ್ಪಿಸುವಲ್ಲಿ ಹೇಗೆ ವಿಫಲರಾದರು ಎನ್ನುವುದನ್ನು ತನಿಖೆ ಮಾಡುವುದಕ್ಕೆ ಒಂದು ಸಿಟ್ ತಂಡವನ್ನು ನೇಮಿಸುವುದೇ ಉಚಿತ ಎಂದು ವಿರೋಧ ಪಕ್ಷದ ನಾಯಕರು ವ್ಯಂಗ್ಯವಾಡುವಂತಾಗಿದೆ. ಈ ರಾಜೀನಾಮೆ ಪ್ರಹಸನಕ್ಕೆ ಕಾರಣ ಏನೇ ಇರಲಿ, ನೂತನ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರ ಸರಕಾರಕ್ಕೆ ಇದು ತೀವ್ರ ಮುಜುಗರವನ್ನು ತಂದಿಟ್ಟಿದೆ. ಸರಕಾರದ ಪಾಲಿಗೆ ಇದು ಬಹುದೊಡ್ಡ ಹಿನ್ನಡೆಯಾಗಿದೆ.
ರಾಮಲಿಂಗಾ ರೆಡ್ಡಿ ರಾಜೀನಾಮೆಗೆ ಮುನ್ನ ಸಚಿವ ಕೆ. ಎಚ್. ಮುನಿಯಪ್ಪ ಕೂಡ ತಮ್ಮ ಖಾತೆಯ ಬಗ್ಗೆ ಅಸಮಾಧಾನ ಹೊಂದಿದ್ದರು. ‘‘ನಾನು ಎಂಟು ಬಾರಿ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಅತ್ಯಂತ ಹಿರಿಯ ನಾಯಕ. ಸಂಪುಟದಲ್ಲಿ ಶಿಷ್ಟಾಚಾರದಂತೆ ಹಿರಿತನದ ಆಧಾರದ ಮೇಲೆ ಖಾತೆಗಳನ್ನು ಹಂಚಿಕೆ ಮಾಡಬೇಕಾಗಿತ್ತು. ಸಾಮಾನ್ಯ ಜನರು, ಬಡವರು, ರೈತರಿಗೆ ಅನುಕೂಲ ಕಲ್ಪಿಸುವಂತಹ ಸಮಾಜ ಕಲ್ಯಾಣ ಅಥವಾ ಕೃಷಿ ಇಲಾಖೆಯ ಜವಾಬ್ದಾರಿ ನೀಡುವಂತೆ ಮೊದಲೇ ಕೇಳಿದ್ದೆ. ಆದರೆ ಖಾತೆಗಳ ಹಂಚಿಕೆಯಲ್ಲಿ ಸಮತೋಲನ ಕಾಯ್ದುಕೊಂಡಿಲ್ಲ’’ ಎಂದು ಅವರು ಮಾಧ್ಯಮಗಳ ಮುಂದೆ ತಮ್ಮೊಳಗಿನ ಅಸಮತೋಲನವನ್ನು ಹಂಚಿಕೊಂಡಿದ್ದಾರೆ. ರಾಹುಲ್ ಗಾಂಧಿಯವರು ನೇರವಾಗಿ ಮಾತುಕತೆ ನಡೆಸಿದ ಕಾರಣದಿಂದಾಗಿ ಅವರು ತಮ್ಮ ರಾಜೀನಾಮೆಯನ್ನು ಹಿಂದೆಗೆದುಕೊಂಡಿದ್ದಾರೆ ಎನ್ನುವ ಮಾತಿದೆ. ಇದೇ ಸಂದರ್ಭದಲ್ಲಿ ರಾಮಲಿಂಗಾ ರೆಡ್ಡಿಯವರ ರಾಜೀನಾಮೆಯನ್ನು ‘ಒಂದು ಎಚ್ಚರಿಕೆಯ ಗಂಟೆ’ ಎಂದು ಮಾಜಿ ಸಚಿವ ಎಚ್. ಕೆ. ಪಾಟೀಲ್ ಅವರೂ ತಮ್ಮ ಕಿರುಗಂಟೆಯನ್ನು ಆಡಿಸಿದ್ದಾರೆ. ಅಂದರೆ ಈ ಗಂಟೆ ಮುಂದಿನ ದಿನಗಳಲ್ಲಿ ಸರಕಾರಕ್ಕೆ ಮರಣಗಂಟೆಯಾಗಿ ಪರಿಣಮಿಸಬಹುದು ಎನ್ನುವ ಎಚ್ಚರಿಕೆಯ ಧ್ವನಿ ಅವರ ಮಾತಿನಲ್ಲಿದೆ. ಇದೇ ಸಂದರ್ಭದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರು ‘‘ಲೋಕೋಪಯೋಗಿ ಇಲಾಖೆಯ ಜವಾಬ್ದಾರಿಯನ್ನು ನನಗೆ ನೀಡಿದ್ದಾರೆ. ನನಗೆ ಯಾವುದೇ ನೋವೂ ಇಲ್ಲ, ಸಂತೋಷವೂ ಇಲ್ಲ’’ ಎಂದು ಅಡ್ಡಗೋಡೆಯ ಮೇಲೆ ದೀಪ ಇಟ್ಟಿದ್ದಾರೆ. ನೋವಿಲ್ಲ ಎನ್ನುವುದರ ಜೊತೆ ಜೊತೆಗೇ ಸಂತೋಷವೂ ಇಲ್ಲ ಎಂದಿರುವುದು ಸರಕಾರದ ಪಾಲಿಗೆ ಶುಭ ಶಕುನವಲ್ಲ. ಇದಕ್ಕೆ ಬೇಕಾದ ಶಾಂತಿ ಪರಿಹಾರವನ್ನೂ ಡಿಕೆಶಿಯವರು ಯೋಗ್ಯ ವಾಸ್ತುಪ್ರವೀಣರ ಮೂಲಕ ಕಂಡುಕೊಳ್ಳಬೇಕಾಗಿದೆ. ಇವೆಲ್ಲದರ ಜೊತೆಗೆ, ಸಚಿವ ಸ್ಥಾನ ಸಿಗಬಹುದು ಎಂದು ಭಾವಿಸಿರುವ ಹಲವು ಕಾಂಗ್ರೆಸ್ನ ಗಣ್ಯ ನಾಯಕರು ಸಚಿವ ಸ್ಥಾನದಿಂದ ವಂಚಿತರಾಗಿದ್ದಾರೆ. ಅವರ ಪರವಾಗಿ ಅವರ ಹಿಂಬಾಲಕರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಅತೃಪ್ತ ನಾಯಕರ ಒಳಗಿನ ಆತ್ಮ ಮತ್ತು ಸಾಕ್ಷಿಯ ಕತೆಯೇನು ಎನ್ನುವುದು ಇನ್ನಷ್ಟೇ ಬಹಿರಂಗವಾಗಬೇಕಾಗಿದೆ. ಅತೃಪ್ತ ಆತ್ಮಗಳೆಲ್ಲ ಒಂದೊಂದಾಗಿ ಎದ್ದು ಮಾತನಾಡತೊಡಗಿದರೆ, ಸರಕಾರ ಆರಂಭದಲ್ಲೇ ಇಕ್ಕಟ್ಟಿಗೆ ಸಿಲುಕಿಕೊಳ್ಳುವುದು ಖಚಿತ. ಆದುದರಿಂದ, ಈ ಭಿನ್ನಮತಗಳನ್ನು ಮೊದಲು ಬಗೆಹರಿಸಿಕೊಳ್ಳುವುದು ಮುಖ್ಯಮಂತ್ರಿಯ ಮುಂದಿರುವ ಬಹುದೊಡ್ಡ ಸವಾಲಾಗಿದೆ.
‘ಕೊಟ್ಟ ಕುದುರೆಯನ್ನು ಏರಲಾರದವ ವೀರನೂ ಅಲ್ಲ, ಶೂರನೂ ಅಲ್ಲ’ ಎನ್ನುವ ಮಾತಿದೆ. ಆದರೆ ಕೆಲವು ಸಚಿವರು ನಮಗೆ ಕುದುರೆಯೆಂದು ಕತ್ತೆಯನ್ನು ಕೊಡಲಾಗಿದೆ ಎಂದು ಆರೋಪಿಸತೊಡಗಿದ್ದಾರೆ. ಕತ್ತೆಯಾದರೂ ನಿರ್ಲಕ್ಷಿಸಲ್ಪಡಬೇಕಾದ ಪ್ರಾಣಿಯೇನೂ ಅಲ್ಲ. ಅದು ಕುದುರೆಗಿಂತಲೂ ಹೆಚ್ಚು ಶ್ರಮಜೀವಿ. ಒಬ್ಬ ಒಳ್ಳೆಯ ರಾಜಕಾರಣಿ, ಕೊಟ್ಟ ಕತ್ತೆಯನ್ನು ಕೂಡ ಸರಿದಾರಿಯಲ್ಲಿ ಬಳಸಿ ಅದನ್ನು ಕುದುರೆಯಷ್ಟೇ ಯೋಗ್ಯವನ್ನಾಗಿ ಮಾಡಬಲ್ಲ. ಹಾಗೆಯೇ ಕೆಟ್ಟ ರಾಜಕಾರಣಿಯ ಕೈಯಲ್ಲಿ ಕುದುರೆಯೂ ಬರಬರುತ್ತಾ ಕತ್ತೆಯಾಗಬಹುದು. ಸಿದ್ದರಾಮಯ್ಯ ಅವರ ಅವಧಿಯಲ್ಲಿ ರಾಮಲಿಂಗಾ ರೆಡ್ಡಿಯವರು ಸಾರಿಗೆ ಸಚಿವರಾಗಿದ್ದವರು. ಅಧಿಕಾರದಲ್ಲಿರುವವರೆಗೆ ಈ ಸಾರಿಗೆ ಇಲಾಖೆಗೆ ನ್ಯಾಯ ನೀಡುವ ಪ್ರಯತ್ನ ನಡೆಸಿದ್ದರು. ಸಾರಿಗೆ ಇಲಾಖೆ ಖಾತೆಯನ್ನು ನಿಭಾಯಿಸುವುದು ಸುಲಭದ ವಿಷಯವಾಗಿರಲಿಲ್ಲ. ಸರಕಾರ ಘೋಷಿಸಿದ ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖವಾದ ಶಕ್ತಿ ಯೋಜನೆಯನ್ನು ಜಾರಿಗೊಳಿಸಬೇಕಾದ ದೊಡ್ಡ ಹೊಣೆಗಾರಿಕೆ ರಾಮಲಿಂಗಾ ರೆಡ್ಡಿಯವರ ಮೇಲಿತ್ತು. ಸಾರಿಗೆ ಇಲಾಖೆಯ ಮೇಲೆ ಬೀಳುವ ಆರ್ಥಿಕ ಒತ್ತಡಗಳನ್ನು ನಿಭಾಯಿಸುತ್ತಾ, ಶಕ್ತಿ ಯೋಜನೆ ಹಳಿತಪ್ಪದಂತೆ ನೋಡಿಕೊಂಡ ಹೆಗ್ಗಳಿಕೆ ರೆಡ್ಡಿಯವರಿಗೇ ಸೇರಬೇಕು. ಈ ಹಿಂದೆ, ಸಿದ್ದರಾಮಯ್ಯ ಅವಧಿಯಲ್ಲಿ ಗೃಹ ಖಾತೆಗೂ ನ್ಯಾಯ ನೀಡಿದವರು. ಮುತ್ಸದ್ದಿತನದಿಂದ ಜವಾಬ್ದಾರಿಯನ್ನು ನಿಭಾಯಿಸಿದವರು. ಜಲಸಂಪನ್ಮೂಲ ಖಾತೆಯೆನ್ನುವುದು ನಿರ್ಲಕ್ಷಿಸಬಹುದಾದದ್ದೇನೂ ಅಲ್ಲ. ಜಲಸಂಪನ್ಮೂಲಕ್ಕೆ ಸಂಬಂಧಿಸಿ ನಾಡು ಭಾರೀ ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಅದನ್ನು ನಿಭಾಯಿಸುವುದಕ್ಕೆ ಮುತ್ಸದ್ದಿಯೊಬ್ಬನ ಅಗತ್ಯವಿದೆ ಎಂದು ಈ ಖಾತೆಯನ್ನು ರೆಡ್ಡಿಯವರಿಗೆ ಹಂಚಿರುವ ಸಾಧ್ಯತೆಯಿದೆ. ಆದರೆ ಅವರು ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಬಯಸಿದ್ದರು. ಆ ಖಾತೆಯನ್ನು ನಿಭಾಯಿಸುವ ಸಾಮರ್ಥ್ಯ ರೆಡ್ಡಿಯವರಿಗೆ ಇದೆ ಎನ್ನುವುದರಲ್ಲಿ ಅನುಮಾನವಿಲ್ಲ. ಖಾತೆ ಹಂಚಿಕೆಗೆ ಮುನ್ನವೇ ಈ ಬಗ್ಗೆ ಯಾವುದೇ ಭಿನ್ನಾಭಿಪ್ರಾಯ ತಲೆಯೆತ್ತದಂತೆ ಮುಖ್ಯಮಂತ್ರಿಯವರು ಕ್ರಮ ತೆಗೆದುಕೊಳ್ಳುವುದು ಅತ್ಯಗತ್ಯವಿತ್ತು. ಕುರ್ಚಿ ಯಾವ ಮೂಲೆಯಲ್ಲಿರಬೇಕು, ಟೇಬಲ್ ಯಾವ ಮೂಲೆಯಲ್ಲಿರಬೇಕು ಎಂದು ವಾಸ್ತುವಿಗೆ ಕೊಟ್ಟ ತಲೆಯನ್ನು ಯಾವ ಸಚಿವರಿಗೆ ಯಾವ ಖಾತೆಯನ್ನು ನೀಡಬೇಕು ಎನ್ನುವುದರ ಬಗ್ಗೆಯೂ ತುಸು ಗಮನ ಹರಿಸಿದ್ದಿದ್ದರೆ ಇಂದು ಈ ವಿಘ್ನ ಎದುರಾಗುತ್ತಿರಲಿಲ್ಲವೇನೋ.
ಈ ರಾಜೀನಾಮೆ ಎನ್ನುವುದು ಕೊರೋನ ವೈರಸ್ ಇದ್ದಂತೆ. ಅದು ಒಬ್ಬರಿಂದ ಒಬ್ಬರಿಗೆ ಹರಡುವುದಕ್ಕೆ ಹೆಚ್ಚು ಸಮಯ ಬೇಕಾಗಿಲ್ಲ. ಮುನಿಯಪ್ಪ ಮುನಿದ ಬೆನ್ನಿಗೇ ರಾಮಲಿಂಗಾ ರೆಡ್ಡಿಗೆ ಈ ವೈರಸ್ ಹರಡಿತು. ಇದೀಗ ಮುಂದಿನ ದಿನಗಳಲ್ಲಿ ಅದೆಷ್ಟು ಜನರು ಸರಕಾರದೊಳಗೆ ಈ ಸೋಂಕುಗಳನ್ನು ಅಂಟಿಸಿಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕು. ಸೋಂಕು ಉಲ್ಬಣಿಸುವ ಮುನ್ನವೇ ಸರಕಾರ ಲಸಿಕೆಯನ್ನು ಹಂಚಬೇಕಾಗಿದೆ. ಇಲ್ಲವಾದರೆ ಸರಕಾರದೊಳಗೆ ಅಘೋಷಿತ ಲಾಕ್ಡೌನ್ ವಿಧಿಸುವ ಪರಿಸ್ಥಿತಿ ನಿರ್ಮಾಣವಾಗಬಹುದು.






