ಹೊಸ ನಿಯಮ ಆರೆಸ್ಸೆಸ್ನ ವಿದೇಶಿ ದೇಣಿಗೆಗಳಿಗೆ ಅನ್ವಯವಾಗುವುದೇ?

Photo: fb.com/thenewsnow
ಇಡೀ ದೇಶ ‘ಆರೆಸ್ಸೆಸ್ನ ವಿದೇಶಿ ದೇಣಿಗೆಗಳ’ ಲೆಕ್ಕ ಕೇಳುತ್ತಿರುವಾಗಲೇ ಇತ್ತ ಎನ್ಜಿಒಗಳ ಚಟುವಟಿಕೆ ಮೇಲಿನ ಹಿಡಿತವನ್ನು ಇನ್ನಷ್ಟು ಬಲಗೊಳಿಸಲು ಕೇಂದ್ರ ಸರಕಾರಕ್ಕೆ ಅವಕಾಶ ಕಲ್ಪಿಸುವ ‘ವಿದೇಶಿ ದೇಣಿಗೆ ನಿಯಂತ್ರಣ ತಿದ್ದುಪಡಿ ನಿಯಮಗಳು-2026’ನ್ನು ಗೆಜೆಟ್ನಲ್ಲಿ ಪ್ರಕಟಿಸಲಾಗಿದೆ. ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ರೂಪಿಸಿರುವ ಹೊಸ ನಿಯಮಗಳ ಪ್ರಕಾರ, ಇನ್ನು ಮುಂದೆ ಎನ್ಜಿಒಗಳು ವಿದೇಶಗಳಿಂದ ಪಡೆಯುವ ದೇಣಿಗೆಯು ಧಾರ್ಮಿಕ, ಸಾಂಸ್ಕೃತಿಕ, ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಉದ್ದೇಶದ 105 ಚಟುವಟಿಕೆಗಳಿಗಷ್ಟೇ ಸೀಮಿತವಾಗಲಿದೆಯಂತೆ. ವಿದೇಶಿ ದೇಣಿಗೆಗಳನ್ನು ಪಡೆಯಲು ಅನುಮತಿಸಲಾದ 105 ಕಾರ್ಯಚಟುವಟಿಕೆಗಳ ಪಟ್ಟಿಯಿಂದ ಮಾತ್ರ ಇನ್ನು ಮುಂದೆ ಎನ್ಜಿಒಗಳು ತಮ್ಮ ಚಟುವಟಿಕೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಅಂದರೆ, ಯಾವ ಪ್ರಕಾರಗಳಿಗೆ ದೇಣಿಗೆಗಳನ್ನು ಸಂಗ್ರಹಿಸಬಹುದು ಎನ್ನುವುದನ್ನು ಸರಕಾರವೇ ಸೂಚಿಸುತ್ತದೆ. ಇದೇ ಸಂದರ್ಭದಲ್ಲಿ ಧಾರ್ಮಿಕ ಉದ್ದೇಶಗಳ ಅಡಿಯಲ್ಲಿ ಮೂರು ಚಟುವಟಿಕೆಗಳನ್ನು ಅಂದರೆ ಧಾರ್ಮಿಕ ತತ್ವಗಳ ದಾಖಲೀಕರಣ ಮತ್ತು ಸಂರಕ್ಷಣೆಯಲ್ಲಿ ತೊಡಗಿರುವ ಸಂಸ್ಥೆಗಳ ನಿರ್ವಹಣೆ, ಧಾರ್ಮಿಕ ಶಿಕ್ಷಣ ನೀಡುವುದು ಹಾಗೂ ಸ್ಥಳೀಯ ಸಂರಕ್ಷಣೆಯ ಕೆಲಸವನ್ನು ಮತಾಂತರವನ್ನು ಹೊರತು ಪಡಿಸಿ ಕೈಗೊಳ್ಳಬಹುದು ಎಂದು ನಿಯಮ ಹೇಳುತ್ತದೆ.
ಪ್ರತೀ ಎನ್ಜಿಒ ತನ್ನ ಪರವಾನಿಗೆ ರದ್ದಾಗುವುದನ್ನು ತಪ್ಪಿಸಬೇಕಾದರೆ ಎರಡು ಹಣಕಾಸು ವರ್ಷಗಳಲ್ಲಿ ನಿಗದಿತ ಉದ್ದೇಶ ಚಟುವಟಿಕೆಗಳಿಗಾಗಿ ಕನಿಷ್ಠ 10 ಲಕ್ಷ ರೂ. ಖರ್ಚು ಮಾಡಿರಬೇಕು. ವಿದೇಶಿ ದೇಣಿಗೆ ಸಂಗ್ರಹಿಸಲು ಪರವಾನಿಗೆ ಪಡೆಯಲು ಬಯಸುವ ಎನ್ಜಿಒಗಳು ಹಣವನ್ನು ಯಾವ ಉದ್ದೇಶಕ್ಕೆ ಖರ್ಚು ಮಾಡಲಾಗುವುದು ಮತ್ತು ಯಾವ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿ ಖರ್ಚು ಮಾಡಲಾಗುವುದು ಎಂಬುದನ್ನು ಸ್ಪಷ್ಟವಾಗಿ ತಿಳಿಸಬೇಕು. ಈಗಾಗಲೇ ಎಫ್ಸಿಆರ್ಎ ಪರವಾನಿಗೆ ಹೊಂದಿರುವ ಎನ್ಜಿಒಗಳು ತಮ್ಮ ಕಾರ್ಯಚಟುವಟಿಕೆಗಳ ವಿವರಗಳನ್ನು ಕೇಂದ್ರ ಸರಕಾರಕ್ಕೆ ಒಂದು ವರ್ಷದೊಳಗೆ ಕಡ್ಡಾಯವಾಗಿ ತಿಳಿಸಬೇಕು. ಭಾರತ ಮೂಲದವರನ್ನು ಹೊರತು ಪಡಿಸಿ ಬೇರೆ ದೇಶದ ಪ್ರಜೆಗಳನ್ನು ಪ್ರಮುಖ ಕಾರ್ಯನಿರ್ವಾಹಕರು ಅಥವಾ ಮುಖ್ಯಸ್ಥರನ್ನಾಗಿ ಹೊಂದಿರುವ ಯಾವುದೇ ಸಂಸ್ಥೆಗೆ ವಿದೇಶಿ ದೇಣಿಗೆ ಪಡೆಯಲು ಅನುಮತಿಯಿಲ್ಲ. ಆದರೆ ವಿಶೇಷ ಸಂದರ್ಭದಲ್ಲಿ ಮಾತ್ರ ಕೇಂದ್ರ ಸರಕಾರ ಅನುಮತಿ ನೀಡಬಹುದಂತೆ. ಹೀಗೆ ಹತ್ತು ಹಲವು ಕಠಿಣ ನಿಬಂಧನೆಗಳನ್ನು ಹೊಸ ನಿಯಮಾವಳಿಗಳು ಹೊಂದಿವೆ.
ವಿದೇಶಿ ದೇಣಿಗೆ ನಿಯಮವನ್ನು ಸರಕಾರ ಬಿಗಿ ಗೊಳಿಸುವ ನೆಪದಲ್ಲಿ ಈಗಾಗಲೇ ಸಾವಿರಾರು ಸರಕಾರೇತರ ಸಂಸ್ಥೆಗಳನ್ನು ಮುಚ್ಚಿಸಿದೆ. ಅಷ್ಟೇ ಅಲ್ಲ, ಸುಮಾರು 20,000ಕ್ಕೂ ಅಧಿಕ ಸರಕಾರೇತರ ಸಂಸ್ಥೆಗಳ ವಿದೇಶಿ ಧನ ಸಹಾಯ ಪಡೆಯುವ ಪರವಾನಿಗೆಯನ್ನು ರದ್ದುಗೊಳಿಸಿದೆ. ಅಂದರೆ ಆ ಸಂಸ್ಥೆಗಳ ಆರ್ಥಿಕ ರೆಕ್ಕೆ ಪುಕ್ಕಗಳನ್ನು ಕತ್ತರಿಸಿ ಹಾಕಿದೆ. ವಿದೇಶಿ ದೇಣಿಗೆ ಪಡೆಯಲಾಗದೆ ಹಲವು ಸರಕಾರೇತರ ಸಂಸ್ಥೆಗಳು ತಮ್ಮ ಸಾಮಾಜಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸಿವೆ. ಅಂತಹ ಸಂಘಟನೆಗಳಲ್ಲಿ ಗ್ರೀನ್ಪೀಸ್, ಸೇವ್ ದಿ ಚಿಲ್ಡ್ರನ್, ಆ್ಯಮ್ನೆಸ್ಟಿ ಇಂಟರ್ನ್ಯಾಶನಲ್ನಂತಹ ಸಂಸ್ಥೆಗಳೂ ಸೇರಿವೆ. ಇವುಗಳಲ್ಲಿ ಹೆಚ್ಚಿನವು ಮಾನವ ಹಕ್ಕು, ಪರಿಸರ, ಹೆಚ್ಚುತ್ತಿರುವ ಅಪೌಷ್ಟಿಕತೆ ಇವುಗಳಿಗಾಗಿ ಧ್ವನಿಯೆತ್ತುತ್ತಿದ್ದ ಸಂಸ್ಥೆಗಳಾಗಿದ್ದವು. ಇದರಿಂದಾಗಿ ಸಾವಿರಾರು ಜನರು ದೇಶದಲ್ಲಿ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ಹಾಗೆಯೇ ಇಂತಹ ಸಂಘಟನೆಗಳ ಫಲಾನುಭವಿಗಳಾಗಿದ್ದ ಲಕ್ಷಾಂತರ ಜನರು ಸವಲತ್ತುಗಳಿಂದ ವಂಚಿತರಾಗಿದ್ದಾರೆ. ತನ್ನ ಮೂಗಿನ ನೇರಕ್ಕೆ ಇಲ್ಲದೇ ಇದ್ದರೆ ಅಂತಹ ಸಂಘಟನೆಗಳ ಪರವಾನಿಗೆಯನ್ನು ಸರಕಾರ ಯಾವಾಗ ಬೇಕಾದರೂ ರದ್ದುಗೊಳಿಸಬಹುದಾಗಿದೆ. ಈಗ ಹೊರಡಿಸಿರುವ ಅಧಿಸೂಚನೆ ವಿದೇಶಿ ದೇಣಿಗೆಯ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸುವ ಉದ್ದೇಶ ಹೊಂದಿದೆ. ಇದೇ ಸಂದರ್ಭದಲ್ಲಿ ಹಲವು ಗೊಂದಲಗಳೂ ಈ ನಿಯಮಗಳಲ್ಲಿವೆ. ಭಾರತದ ಮೂಲದವರನ್ನು ಹೊರತು ಪಡಿಸಿ ವಿದೇಶಿ ಪ್ರಜೆಗಳನ್ನು ಕಾರ್ಯನಿರ್ವಾಹಕರನ್ನಾಗಿ ಹೊಂದಿರುವ ಸಂಸ್ಥೆ ದೇಣಿಗೆ ಪಡೆಯುವ ಅಧಿಕಾರ ಕಳೆದುಕೊಳ್ಳುತ್ತದೆ. ಆದರೆ ವಿಶೇಷ ಸಂದರ್ಭದಲ್ಲಿ ಸರಕಾರ ಇದನ್ನು ಪರಿಗಣಿಸುತ್ತದೆಯಂತೆ. ಆದರೆ ಆ ವಿಶೇಷ ಸಂದರ್ಭ ಯಾವುದು? ಎನ್ನುವುದು ಸ್ಪಷ್ಟವಿಲ್ಲ. ಈ ಮೂಲಕ ಸರಕಾರ ಯಾರಿಗೆ ಅವಕಾಶ ನೀಡಬೇಕು, ನೀಡಬಾರದು ಎನ್ನುವುದನ್ನು ತನ್ನಲ್ಲೇ ಉಳಿಸಿಕೊಂಡಂತಾಗಿದೆ.
ನೇರವಾಗಿ ಮತಾಂತರಕ್ಕಾಗಿ ಯಾರು ದೇಣಿಗೆಯನ್ನು ಕಳುಹಿಸುವುದಿಲ್ಲ ಅಥವಾ ಸಂಗ್ರಹಿಸುವುದೂ ಇಲ್ಲ. ಯಾವುದು ಮತಾಂತರ? ಎನ್ನುವುದಕ್ಕೆ ಸ್ಪಷ್ಟ ವ್ಯಾಖ್ಯಾನವೂ ಇಲ್ಲ. ಕ್ರೈಸ್ತ ಸಂಘಟನೆಗಳು ತಮ್ಮ ಸೇವೆಯ ಮೂಲಕವೇ ದೇಶಾದ್ಯಂತ ಬಡಬಗ್ಗರನ್ನು ತಲುಪಿವೆ. ಇವರ ಸೇವೆಗೆ ಮನಸೋತು ಈ ದೇಶದಲ್ಲಿ ಲಕ್ಷಾಂತರ ಜನರು ಮತಾಂತರವಾಗಿದ್ದಾರೆ. ಆದರೆ, ಇವರನ್ನು ಸಂಘಪರಿವಾರ ‘ಆಮಿಷಕ್ಕೆ ಮತಾಂತರಗೊಂಡವರು’ ಎಂದು ಕರೆಯುತ್ತದೆ. ಧಾರ್ಮಿಕ ಉದ್ದೇಶಕ್ಕಾಗಿ 16 ಕಾರ್ಯಚಟುವಟಿಕೆಗಳಿಗಾಗಿ ಹಣವನ್ನು ಸಂಗ್ರಹಿಸಬಹುದಾಗಿದೆ. ಈ ದೇಶದಲ್ಲಿರುವ ಸಂಘಪರಿವಾರ ಸಂಘಟನೆಗಳು ಅಥವಾ ಯಾವುದೇ ಧಾರ್ಮಿಕ ಸತ್ಸಂಗ ಗುಂಪುಗಳು ದೇಣಿಗೆ ಸಂಗ್ರಹಿಸಿದಾಗ ಮತಾಂತರ ಸಮಸ್ಯೆ ಉದ್ಭವಿಸುವುದಿಲ್ಲ. ಆದರೆ, ಕ್ರೈಸ್ತ ಸೇವಾ ಸಂಘಟನೆಗಳು ದೇಣಿಗೆಯನ್ನು ಸಂಗ್ರಹಿಸಿದ ಸಂದರ್ಭಲ್ಲಿ, ಅವರು ನಡೆಸುವ ಯಾವುದೇ ಸೇವೆಯನ್ನು ಯಾವಾಗಬೇಕಾದರೂ ‘ಮತಾಂತರ’ದ ಆರೋಪ ಹೊರಿಸಿ ಶಿಲುಬೆಗೇರಿಸಬಹುದಾಗಿದೆ. ಗೋಹತ್ಯೆ ನಿಷೇಧ ಕಾನೂನು, ಮತಾಂತರ ಕಾನೂನು ದುರ್ಬಳಕೆಯಾದಂತೆಯೇ, ವಿದೇಶಿ ದೇಣಿಗೆಗೆ ಸಂಬಂಧಿಸಿದ ಕಾಯ್ದೆಯನ್ನು ಸರಕಾರ ತನಗೆ ಬೇಕಾದಂತೆ ದುರ್ಬಳಕೆ ಮಾಡಬಹುದು.
ನಿಜಕ್ಕೂ ವಿದೇಶದಿಂದ ಬರುವ ಅಕ್ರಮ ಹಣಗಳ ಬಗ್ಗೆ ಸರಕಾರ ಕಾಳಜಿಯನ್ನು ವಹಿಸಿದೆ ಎಂದಾದರೆ, ಮೊತ್ತ ಮೊದಲು ಈ ದೇಶದ ಬೃಹತ್ ಸರಕಾರೇತರ ಸಂಸ್ಥೆಯಾಗಿರುವ ಆರೆಸ್ಸೆಸ್ಗೆ ಮೂಗುದಾರ ಹಾಕಲು ಮುಂದಾಗಬೇಕಾಗಿದೆ. ಮುಖ್ಯವಾಗಿ ಆರೆಸ್ಸೆಸ್ನ್ನು ನೋಂದಣಿ ಮಾಡಿಸಿ, ಅದರ ವಿದೇಶಿ ದೇಣಿಗೆಗಳ ಲೆಕ್ಕಗಳನ್ನು ಕೇಳಬೇಕು. ಗುರುದಕ್ಷಿಣೆಯ ಹೆಸರಿನಲ್ಲಿ ಅದು ಸಂಗ್ರಹಿಸುವ ಕೋಟ್ಯಂತರ ಹಣ ಎಲ್ಲೆಲ್ಲಿಂದ ಬರುತ್ತದೆ? ಅನಿವಾಸಿ ಭಾರತೀಯರು ಅದಕ್ಕೆ ನೀಡಿದ ಕೊಡುಗೆಗಳೆಷ್ಟು? ಇತ್ಯಾದಿ ವಿವರಗಳ ಬಗ್ಗೆ ಮಾಹಿತಿ ಕಲೆ ಹಾಕಬೇಕು. ಈ ನಿಟ್ಟಿನಲ್ಲಿ ಎಫ್ಸಿಆರ್ಎ ನೀತಿ ಆರೆಸ್ಸೆಸ್ಗೆ ಯಾವ ರೀತಿಯಲ್ಲಿ ಅನ್ವಯವಾಗುತ್ತದೆ? ಅನ್ವಯವಾಗದೇ ಇದ್ದರೆ ಅನ್ವಯವಾಗುವಂತೆ ಸರಕಾರ ಯಾವ ರೀತಿಯ ಕ್ರಮ ತೆಗೆದುಕೊಳ್ಳುತ್ತದೆ ಎನ್ನುವ ವಿವರಗಳನ್ನು ದೇಶಕ್ಕೆ ನೀಡಬೇಕಾಗಿದೆ. ಆರೆಸ್ಸೆಸ್ ಅನಿವಾಸಿ ಭಾರತೀಯರಿಂದ ಸಂಗ್ರಹಿಸಿದ ಹಣವನ್ನು ದೇಶದಲ್ಲಿ ಬುಡಕಟ್ಟು, ಆದಿವಾಸಿ ಜನರನ್ನು ವೈದಿಕೀಕರಣಗೊಳಿಸಲು ಬಳಸುತ್ತಿದೆ ಎನ್ನುವ ಆರೋಪಗಳಿವೆ. ಇದು ಪರೋಕ್ಷವಾಗಿ ಮತಾಂತರವೇ ಅಲ್ಲವೆ? ದೇಶದಲ್ಲಿ ಗುರುದಕ್ಷಿಣೆಯ ಹೆಸರಿನಲ್ಲಿ ಆರೆಸ್ಸೆಸ್ ಸಂಗ್ರಹಿಸುವ ಕೋಟ್ಯಂತರ ಅಕ್ರಮ ಹಣಕ್ಕೆ ಕಡಿವಾಣ ಹಾಕಲು ಇದು ಸರಿಯಾದ ಸಮಯವಾಗಿದೆ.






