Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ನಿಧಿಯ ಹೆಸರಿನಲ್ಲಿ ಕರಾಳ ದಂಧೆಗೆ ಕೊನೆ...

ನಿಧಿಯ ಹೆಸರಿನಲ್ಲಿ ಕರಾಳ ದಂಧೆಗೆ ಕೊನೆ ಎಂದು?

ವಾರ್ತಾಭಾರತಿವಾರ್ತಾಭಾರತಿ27 March 2024 9:04 AM IST
share
ನಿಧಿಯ ಹೆಸರಿನಲ್ಲಿ ಕರಾಳ ದಂಧೆಗೆ ಕೊನೆ ಎಂದು?

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

‘ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರೂ ಇರುತ್ತಾರೆ’ ಎನ್ನುವ ಮಾತೊಂದಿದೆ. ಮೋಸವೇ ಡಿಜಿಟಲೀಕರಣಗೊಂಡಿರುವ ಕಾಲ ಇದು. ಡಿಜಿಟಲ್ ಯುಗದಲ್ಲಿ ಮೋಸ ಬೇರೆ ಬೇರೆ ಆಯಾಮಗಳನ್ನು ಪಡೆದುಕೊಂಡಿದೆ. ಇಂದು ಬ್ಯಾಂಕ್ ದರೋಡೆ ಮಾಡಬೇಕಾದರೆ ಬ್ಯಾಂಕ್‌ನೊಳಗೇ ನುಗ್ಗಬೇಕು, ತಿಜೋರಿ ಮುರಿಯಬೇಕು ಎಂದೇನಿಲ್ಲ. ಎಲ್ಲೋ ಕುಳಿತು ಯಾರದೋ ಖಾತೆಗೆ ಕನ್ನ ಹಾಕಿ ಲಕ್ಷಾಂತರ ರೂಪಾಯಿ ದೋಚಬಹುದು. ಮೊಬೈಲ್ ಮೂಲಕ ಸುಳ್ಳು ಸಂದೇಶ ಕಳುಹಿಸಿ ಗುಪ್ತ ಸಂಖ್ಯೆಯನ್ನು ಪಡೆದು ದಿನ ನಿತ್ಯ ಲಕ್ಷಾಂತರ ರೂಪಾಯಿ ವಂಚನೆಗಳು ನಡೆಯುತ್ತವೆ. ದೊಡ್ಡ ಪ್ರಮಾಣದ ಹಣದ ಆಮಿಷ ತೋರಿಸಿ ಜನರಿಂದ ಹಣ ವಸೂಲಿ ಮಾಡುವ ಬೇರೆ ಬೇರೆ ಕಳ್ಳ ದಂಧೆಗಳು ಇವೆ. ಇಂತಹ ಡಿಜಿಟಲ್ ವಂಚನೆಯ ಕಾಲದಲ್ಲಿ, ನಿಧಿಯ ಆಸೆಯನ್ನು ತೋರಿಸಿ ಮೂವರು ಅಮಾಯಕರನ್ನು ಬರ್ಬರವಾಗಿ ಕೊಂದು ಹಣವನ್ನು ದೋಚಿದ ಆಘಾತಕಾರಿ ಘಟನೆ ತುಮಕೂರು ಸಮೀಪ ನಡೆದಿದೆ.

‘ನಮಗೆ ಚಿನ್ನದ ನಾಣ್ಯಗಳಿರುವ ಮಡಕೆಯೊಂದು ಸಿಕ್ಕಿದೆ. ಪೊಲೀಸರ ಭಯದಿಂದ ಮಾರಾಟ ಮಾಡಲು ಹೆದರುತ್ತಿದ್ದೇವೆ. ನೀವು ಕೊಳ್ಳುವುದಿದ್ದರೆ ನಿಮಗೆ ಕಡಿಮೆ ಬೆಲೆಯಲ್ಲಿ ಕೊಡುತ್ತೇವೆ. ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಚಿನ್ನ’ ಎಂದು ಆಮಿಷ ತೋರಿಸಿ ಅವರನ್ನು ಗ್ರಾಮೀಣ ಪ್ರದೇಶಕ್ಕೆ ಕರೆಸಿ ನಕಲಿ ಚಿನ್ನವನ್ನು ಕೊಟ್ಟು ಏಮಾರಿಸುವ ಅಥವಾ ಹಣದ ಜೊತೆಗೆ ಬಂದವರನ್ನು ದೋಚುವ ಜಾಲ ಹಲವು ದಶಕಗಳಿಂದ ದೇಶಾದ್ಯಂತ ಕಾರ್ಯಾಚರಿಸುತ್ತಿವೆ. ಇಂತಹ ಪ್ರಕರಣಗಳು ಆಗಾಗ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತವೆ. ಇಲ್ಲಿ ಹಣ ಕಳೆದುಕೊಂಡ ಸಂತ್ರಸ್ತರು ದೂರು ನೀಡುವುದು ಕಡಿಮೆ. ಅಕ್ರಮವಾಗಿ ನಿಧಿಯನ್ನು ಖರೀದಿಸುವುದು ಕೂಡ ಅಪರಾಧವಾಗಿರುವುದರಿಂದ ದರೋಡೆಗೊಳಗಾದರೂ ದೂರು ಸಲ್ಲಿಸುವ ಸಂದರ್ಭದಲ್ಲಿ ಅಸಹಾಯಕರಾಗುತ್ತಾರೆ. ದೂರು ಸಲ್ಲಿಸಿದರೂ, ಆರೋಪಿಗಳನ್ನು ಹುಡುಕುವುದು ಸುಲಭವೇನೂ ಇಲ್ಲ. ಯಾಕೆಂದರೆ ಈ ದರೋಡೆಯ ಹಿಂದೆ ದೊಡ್ಡ ಮಟ್ಟದ ಪೂರ್ವತಯಾರಿ ಇರುತ್ತದೆ. ಇವರು ವಂಚನೆಯಲ್ಲಿ ನುರಿತವರಾಗಿರುತ್ತಾರೆ. ಚಿನ್ನದ ಆಸೆಯಿಂದ ದುಡ್ಡು ಹಿಡಿದುಕೊಂಡು ಬಂದವರು ಕೊನೆಯ ಕ್ಷಣದಲ್ಲಿ ವಂಚನೆಯ ಅರಿವಾಗಿ ದುಡ್ಡು ಕೊಡಲು ಹಿಂದೇಟು ಹಾಕಿದರೆ, ಕೊಲ್ಲುವುದಕ್ಕೂ ಹೇಸುವುದಿಲ್ಲ. ತುಮಕೂರಿನಲ್ಲಿ ಬೆಳ್ತಂಗಡಿ ಮೂಲದ ಮೂವರ ಕೊಲೆ ಈ ಕಾರಣದಿಂದಲೇ ನಡೆದಿದೆ ಎಂದು ಪೊಲೀಸರು ಭಾವಿಸಿದ್ದಾರೆ. ಈಗಾಗಲೇ ಇಬ್ಬರನ್ನು ಬಂಧಿಸಿದ್ದು, ಉಳಿದ ಆರು ಮಂದಿಗೆ ಬಲೆ ಬೀಸಿದ್ದಾರೆ.

ನೋಟು ನಿಷೇಧ ಮತ್ತು ಕೊರೋನನಂತರ ಆರ್ಥಿಕ ಬಿಕ್ಕಟ್ಟು ತೀವ್ರವಾಗಿದೆ. ಸಣ್ಣ, ಮಧ್ಯಮ ಗಾತ್ರದ ಉದ್ಯಮಗಳು ನಷ್ಟಕ್ಕೀಡಾಗುತ್ತಿವೆ. ಹೂಡಿಕೆ ಮಾಡಿದ ಜನರು ಸಾಲಸೋಲಗಳಿಂದ ಕಂಗೆಟ್ಟಿದ್ದಾರೆ. ಇಂತಹ ಸಂದರ್ಭದಲ್ಲಿ ಜನರೂ ಸುಲಭದಲ್ಲಿ ಹಣ ಮಾಡುವ ದಾರಿಯನ್ನು ಹುಡುಕುತ್ತಿರುತ್ತಾರೆ. ಇವರ ದೌರ್ಬಲ್ಯವನ್ನು ಬಳಸಿಕೊಂಡು ದುಷ್ಕರ್ಮಿಗಳು ಮೋಸದ ಜಾಲವನ್ನು ಬೀಸುತ್ತಾರೆ. ತುಮಕೂರಿನಲ್ಲಿ ಈ ಮೋಸದ ಜಾಲಕ್ಕೆ ಬಲಿಯಾದವರು ಶ್ರೀಮಂತರೇನೂ ಅಲ್ಲ. ಆರ್ಥಿಕವಾಗಿ ತೀರಾ ಕಂಗೆಟ್ಟು ಮನೆಮಠ ಮಾರಿ ನಿಧಿಯ ಬೆನ್ನು ಬಿದ್ದಿದ್ದಾರೆ. ಆತಂಕದ ವಿಷಯವೆಂದರೆ ಇಲ್ಲಿ ನಡೆದಿರುವುದು ಬರೇ ದರೋಡೆಯಲ್ಲ. ದುಷ್ಕರ್ಮಿಗಳು ಹಣಕ್ಕಾಗಿ ಬರ್ಬರವಾಗಿ ಕೊಲೆಗೈದಿದ್ದಾರೆ. ಆದುದರಿಂದ, ಈ ವಂಚನಾ ಜಾಲವನ್ನು ತೀರಾ ಹಗುರವಾಗಿ ತೆಗೆದುಕೊಳ್ಳುವಂತಿಲ್ಲ. ಇವರು ಕೊಲೆಗೈದ ರೀತಿ ನೋಡಿದರೆ, ಈ ಹಿಂದೆಯೂ ಇವರಿಂದ ಕೊಲೆಗಳು ನಡೆದಿರುವ ಸಾಧ್ಯತೆಗಳು ಕಾಣುತ್ತವೆ. ಆದುದರಿಂದ, ತನಿಖೆ ಕೇವಲ ಈ ಪ್ರಕರಣಕ್ಕಷ್ಟೇ ಸೀಮಿತಗೊಳ್ಳಬಾರದು. ‘ನಿಧಿಯನ್ನು ತೋರಿಸಿ ದರೋಡೆ ಮಾಡುವ ಜಾಲ’ ಕರ್ನಾಟಕಕ್ಕೆ ಹೊಸತಲ್ಲ. ಎರಡು ದಶಕಗಳ ಹಿಂದೆ ಹಿರಿಯ ಪತ್ರಕರ್ತರೊಬ್ಬರು ಈ ನಿಧಿಯ ಬೆನ್ನು ಹತ್ತಿ, ಪ್ರಾಣಾಪಾಯದಿಂದ ಕೂದಲೆಳೆಯ ಅಂತರದಿಂದ ಪಾರಾಗಿದ್ದರು. ಇದು ದರೋಡೆಕೋರರ ತಂಡ ಮಾತ್ರವಲ್ಲ, ನರಹಂತಕರ ತಂಡವೂ ಹೌದು. ಇಂತಹ ವಂಚನಾ ಪ್ರಕರಣಗಳು ಪದೇ ಪದೇ ಬಹಿರಂಗವಾಗುತ್ತಿದ್ದರೂ, ಮತ್ತೆ ಹಣದ ಮೋಹಕ್ಕೆ ಬಿದ್ದು ವಂಚಕರು ಬೀಸಿದ ಜಾಲದಲ್ಲಿ ಸಿಕ್ಕಿ ಹಾಕಿಕೊಳ್ಳುವುದು ಆಘಾತಕಾರಿಯಾಗಿದೆ. ಈ ಅಪರಾಧದಲ್ಲಿ ಮೋಸ ಹೋಗುವವರ ಪಾತ್ರವೂ ಇರುವುದನ್ನು ನಾವು ನಿರಾಕರಿಸಲಾಗುವುದಿಲ್ಲ.

ನಿಧಿಯ ಹೆಸರಿನಲ್ಲಿ ನಮ್ಮ ನಡುವೆ ಬೇರೆ ಬೇರೆ ರೀತಿಯ ದರೋಡೆಗಳು ನಡೆಯುತ್ತವೆ. ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ‘ನಿಧಿ ಇರುವ ಜಾಗವನ್ನು ತೋರಿಸುತ್ತೇವೆ’ ಎಂದು ಹೇಳಿ ಅಮಾಯಕರಿಂದ ಲಕ್ಷಾಂತರ ರೂಪಾಯಿ ವಂಚಿಸುವ ಮಂತ್ರವಾದಿಗಳಿದ್ದಾರೆ. ಇಂತಹ ವಂಚಕರು ಎಲ್ಲ ಧರ್ಮಗಳಲ್ಲೂ ಸೇರಿಕೊಂಡಿದ್ದಾರೆ. ಇವರ ಮಾತುಗಳನ್ನು ನಂಬಿ ಮಂತ್ರವಾದಿಗಳಿಗೆ ಲಕ್ಷಾಂತರ ರೂಪಾಯಿ ನೀಡಿ, ರಾತ್ರೋರಾತ್ರಿ ಗುಡ್ಡ, ಸ್ಮಶಾನ, ದೇವಸ್ಥಾನ ಆವರಣಗಳನ್ನು ಅಗೆದು ಹಲವರು ಮೋಸ ಹೋಗಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲು ಸಾಧ್ಯವಿಲ್ಲದ ಕಾರಣ, ಪ್ರಕರಣ ಮುಚ್ಚಿ ಹೋಗುತ್ತದೆ. ಈ ನಿಧಿ ಅನ್ವೇಷಣೆ ಮೌಢ್ಯದ ಅತಿರೇಕಕ್ಕೆ ಹೋದಾಗ ನರಬಲಿ, ಮಕ್ಕಳ ಬಲಿಯಂತಹ ಕೃತ್ಯಗಳು ನಡೆಯುತ್ತವೆ. ವಾಮಾಚಾರ, ಮಾಟ ಮಂತ್ರ, ನಿಧಿ ಶೋಧನೆ ಇತ್ಯಾದಿಗಳ ಹೆಸರಿನಲ್ಲಿ ಜನರನ್ನು ವಂಚಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಕಠಿಣವಾದ ಮೌಢ್ಯ ನಿಷೇಧ ಕಾನೂನನ್ನು ಸರಕಾರ ಜಾರಿಗೊಳಿಸುವುದು ಅತ್ಯಗತ್ಯವಾಗಿದೆ. ವಿಪರ್ಯಾಸವೆಂದರೆ, ಇಂದು ಸರಕಾರದೊಳಗಿರುವವರೇ ಇಂತಹ ಮಂತ್ರವಾದಿಗಳ ಮೇಲೆ ಗಾಢವಾದ ನಂಬಿಕೆಯನ್ನು ಹೊಂದಿದ್ದಾರೆ. ಆದುದರಿಂದಲೇ, ಇದರ ವಿರುದ್ಧ ಕಠಿಣ ಕಾನೂನು ಜಾರಿಗೊಳಿಸಲು ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ.

ಹತ್ತು ವರ್ಷಗಳ ಹಿಂದೆ ಉತ್ತರ ಪ್ರದೇಶ ಸರಕಾರವೇ ಇಂತಹದೊಂದು ನಿಧಿಯ ಬೆನ್ನು ಬಿದ್ದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಉತ್ತರ ಪ್ರದೇಶದ ದೌಂಡಿಯಾ ಖೇಡಾ ಎನ್ನುವ ಪ್ರದೇಶದಲ್ಲಿ ಸಾವಿರಾರು ಟನ್ ಚಿನ್ನದ ನಿಧಿ ಅಡಗಿದೆ ಎಂದು ಒಬ್ಬ ಸಾಧುವಿಗೆ ಕನಸು ಬಿತ್ತಂತೆ. ಅದನ್ನು ಹೊರ ತೆಗೆದು ದೇಶದ ಅಭಿವೃದ್ಧಿಗೆ ಬಳಸಿ ಎಂದು ಆತ ಸಲಹೆ ನೀಡಿದ. ಇದನ್ನು ನಂಬಿದ ಸ್ಥಳೀಯ ಆಡಳಿತ ಚಿನ್ನ ಹುಡುಕುವುದಕ್ಕೆ ಹೊರಟೇ ಬಿಟ್ಟಿತು. ಪುರಾತತ್ವ ಇಲಾಖೆಗೆ ಚಿನ್ನ ಅಗೆಯಲು ಸರಕಾರ ಅನುಮತಿ ನೀಡಿತು. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಸುಮಾರು ಒಂದು ತಿಂಗಳ ಕಾಲ ಈ ಚಿನ್ನ ಅಗೆಯುವ ಪ್ರಹಸನ ನಡೆಯಿತು. ಕೊನೆಗೂ ತಾವು ಮೋಸ ಹೋಗಿದ್ದೇವೆ ಎನ್ನುವುದು ಅಧಿಕಾರಿಗಳಿಗೆ ಅರಿವಾಯಿತು. ಸಾವಿರ ಟನ್ ಚಿನ್ನವಿದೆ ಎಂದಾಕ್ಷಣ ಸರಕಾರವೇ ಭೂಮಿ ಅಗೆಯಲು ಹೊರಡುತ್ತದೆ ಎಂದ ಮೇಲೆ, ಜನಸಾಮಾನ್ಯರು ನಿಧಿಯ ಆಸೆಗೆ ಬೀಳುವುದು ಈ ದೇಶದಲ್ಲಿ ದೊಡ್ಡ ವಿಷಯವೇನೂ ಅಲ್ಲ.

ಬೆಳ್ತಂಗಡಿ ಮೂಲದ ಯುವಕರ ದುರಂತದಿಂದ ನಮಗೆ ಹಲವು ಪಾಠಗಳಿವೆ. ಅದರಲ್ಲಿ ಮುಖ್ಯವಾದದ್ದು, ಹಣದ ಮೋಹಕ್ಕೆ ಬಿದ್ದು ಯಾವತ್ತೂ ವಿವೇಕವನ್ನು ಕಳೆದುಕೊಳ್ಳಬಾರದು ಎನ್ನುವುದು. ತನ್ನದಲ್ಲದ ಹಣದ ಹಿಂದೆ ಬೀಳುವುದು ಅಪಾಯವನ್ನು ಸ್ವತಃ ಆಹ್ವಾನಿಸಿಕೊಂಡಂತೆ. ಯಾರೋ ದೊಡ್ಡ ಮಟ್ಟದಲ್ಲಿ ಹಣವನ್ನು ನಮಗೆ ನೀಡಲು ಬಂದಿದ್ದಾರೆ ಎಂದಾಗ ನಮ್ಮಲ್ಲಿ ಪ್ರಶ್ನೆಗಳು ಹುಟ್ಟಬೇಕು. ಆ ಬಗ್ಗೆ ತಿಳಿದವರಲ್ಲಿ ವಿಚಾರಿಸಬೇಕು. ಅನುಮಾನ ಬಂದರೆ ಕಾನೂನಿನ ಮೊರೆ ಹೋಗಬೇಕು. ನಿಧಿಯ ಬೆನ್ನು ಹತ್ತುವವರಿಗೆ ತಾವೂ ವಂಚನೆಯೊಂದರಲ್ಲಿ ಶಾಮೀಲಾಗುತ್ತಿದ್ದೇವೆ ಎನ್ನುವ ಎಚ್ಚರಿಕೆ ಬೇಕು. ತುಮಕೂರಿನ ಘಟನೆಯನ್ನು ಸರಕಾರ ಗಂಭೀರ ತನಿಖೆಗೆ ಒಳಪಡಿಸಿ, ದುಷ್ಕರ್ಮಿಗಳ ಈ ವ್ಯವಸ್ಥಿತ ಜಾಲವನ್ನು ಸಂಪೂರ್ಣವಾಗಿ ಮಟ್ಟ ಹಾಕುವುದಕ್ಕೆ ಕ್ರಮ ತೆಗೆದುಕೊಳ್ಳಬೇಕು. ಈ ಹಿಂದೆ ಈ ರೀತಿಯಲ್ಲಿ ಮೋಸ ಹೋದವರು ಧೈರ್ಯದಿಂದ ಪೊಲೀಸರಿಗೆ ದೂರು ನೀಡುವಂತಾಗಬೇಕು. ಈ ಜಾಲಕ್ಕಿರುವ ಅಂತರ್‌ರ್ರಾಜ್ಯ ಸಂಬಂಧದ ಬಗ್ಗೆಯೂ ತನಿಖೆಯಾಗಬೇಕು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X