ಸಂವಿಧಾನದ ಬಿಕ್ಕಳಿಕೆ ಝಕಿಯಾ ಜಾಫ್ರಿ

PC: x.com/Pawankhera
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ತನ್ನ ಬದುಕಿನ ಕಟ್ಟಕಡೆಯವರೆಗೂ ಸಂವಿಧಾನದ ಮೇಲೆ ನಂಬಿಕೆಯಿಟ್ಟು ನ್ಯಾಯಕ್ಕಾಗಿ ಹೋರಾಡಿದ ಝಕಿಯಾ ಜಾಫ್ರಿ ನಿಧನರಾಗಿದ್ದಾರೆ. ಅವರು ಕೇವಲ ತನಗಾದ ವೈಯಕ್ತಿಕ ಅನ್ಯಾಯಕ್ಕಾಗಿ ಹೋರಾಡಲಿಲ್ಲ. ಅವರ ಹೋರಾಟ ಸಾರ್ವತ್ರಿಕ ರೂಪವನ್ನು ಪಡೆದು, ಅಂತಿಮವಾಗಿ ಅದು ಈ ದೇಶದಸಂವಿಧಾನ ಮತ್ತು ಪ್ರಜಾಸತ್ತೆಯ ಅಳಿವು ಉಳಿವಿನ ಪ್ರಶ್ನೆಯಾಗಿ ಬದಲಾಯಿತು. 2002ರಲ್ಲಿ ನಡೆದ ಗುಜರಾತ್ ಹತ್ಯಾಕಾಂಡದ ಸಂದರ್ಭದಲ್ಲಿ, ಗುಲ್ಬರ್ಗ್ ಹೌಸಿಂಗ್ ಸೊಸೈಟಿಯ ಮೇಲೆ ಹಿಂದುತ್ವವಾದಿ ಗೂಂಡಾಗಳಿಂದ ಬರ್ಬರ ದಾಳಿ ನಡೆಯಿತು. ಈ ಸಂದರ್ಭದಲ್ಲಿ ಅಲ್ಲಿದ್ದ ಮಾಜಿ ಸಂಸದ, ಕವಿ ಎಹ್ಸಾನ್ ಜಾಫ್ರಿ ಮತ್ತು 68 ಮಂದಿ ಭೀಕರವಾಗಿ ಕೊಲ್ಲಲ್ಪಟ್ಟರು.
ಆ ಭಯಾನಕ ಗಾಯಗಳನ್ನು ತನ್ನ ಎದೆಯೊಳಗೆ ಇಟ್ಟುಕೊಂಡು ವೃದ್ಧೆ ಝಕಿಯಾ ಜಾಫ್ರಿ ಅವರು ನ್ಯಾಯಕ್ಕಾಗಿ ಸುಮಾರು 20 ವರ್ಷಗಳಿಗೂ ಅಧಿಕ ಕಾಲ ಸಂವಿಧಾನ ಬದ್ಧ ಹೋರಾಟವನ್ನು ನಡೆಸಿದರು. 2022ರಲ್ಲಿ ಅವರ ಹೋರಾಟಕ್ಕೆ ಸುಪ್ರೀಂಕೋರ್ಟ್ನಿಂದ ಪೂರ್ಣ ಪ್ರಮಾಣದ ಹಿನ್ನಡೆಯಾಯಿತು. ಆದರೂ ಅವರು ಸೋಲೊಪ್ಪಿಕೊಳ್ಳಲಿಲ್ಲ. ಆ ಬಳಿಕವೂ ತನಗಾದ ಅನ್ಯಾಯವನ್ನು ದೇಶದ ಮುಂದಿಡುತ್ತಾ, ಸಂವಿಧಾನ ವಿರೋಧಿಗಳ ವಿರುದ್ಧ ಹೋರಾಟವನ್ನು ಮುಂದುವರಿಸಿದ್ದರು. ಫೆಬ್ರವರಿ 1ರಂದು ಅವರು ಕಣ್ಮುಚ್ಚುವ ಮೂಲಕ, ಗುಜರಾತ್ ಹತ್ಯಾಕಾಂಡದ ವಿರುದ್ಧದ ಸುದೀರ್ಘ ಹೋರಾಟ ತಾತ್ಕಾಲಿಕವಾಗಿ ವಿಶ್ರಮಿಸಿದಂತಾಗಿದೆ.
ಗುಜರಾತ್ ಹತ್ಯಾಕಾಂಡದ ಮೂಲಕ ನಮ್ಮನ್ನಾಳುವವರೇ ಈ ದೇಶದ ಸಂವಿಧಾನದ ಬೆನ್ನಿಗೆ ಇರಿದರು. ಅಂದು ಸಂಭವಿಸಿದ ಸಾವು ನೋವಿನ ವಿರುದ್ಧ ನಡೆದ ಪ್ರತಿ ಹೋರಾಟವೂ ಸಂವಿಧಾನಕ್ಕಾದ ಅನ್ಯಾಯದ ವಿರುದ್ಧ ನಡೆದ ಹೋರಾಟವೂ ಆಗಿದೆ. ಗುಲ್ಬರ್ಗ್ ಸೊಸೈಟಿಗೆ ನುಗ್ಗಿ ಬರ್ಬರ ಕೊಲೆಗಳನ್ನು ಮಾಡಿದ ದುಷ್ಕರ್ಮಿಗಳ ವಿರುದ್ಧ ಮಾತ್ರವೇ ಝಕಿಯಾ ಜಾಫ್ರಿ ಹೋರಾಡಲಿಲ್ಲ. ಅವರಿಂದ ಆ ಕೃತ್ಯವನ್ನು ಮಾಡಿಸಿದ ದ್ವೇಷ ಸಿದ್ಧಾಂತದ ವಿರುದ್ಧ ಮತ್ತು ಆ ಸಿದ್ಧಾಂತದ ಬೆನ್ನಿಗೆ ನಿಂತ ಸರಕಾರದ ವಿರುದ್ಧ ಹೋರಾಟ ನಡೆಸಿದರು. ಆ ಹಾದಿಯಲ್ಲಿ ಅವರ ಮೇಲೆ ನಡೆದ ಪರೋಕ್ಷ ದಾಳಿಗಳು ಗುಜರಾತ್ ಹತ್ಯಾಕಾಂಡದ ಸಂದರ್ಭದ ದಾಳಿಗಿಂತ ಭಿನ್ನವಾಗಿಯೇನೂ ಇರಲಿಲ್ಲ. ತನ್ನ ಕುಟುಂಬಸ್ಥರನ್ನು ಕಳೆದುಕೊಂಡು ಅಸಹಾಯಕರಾಗಿ ನಿಂತಿದ್ದ ಅವರ ಜೊತೆಗೆ ಬೆರಳೆಣಿಕೆಯ ಮಾನವ ಹಕ್ಕು ಹೋರಾಟಗಾರರನ್ನು ಹೊರತು ಪಡಿಸಿ ಇನ್ನಾರೂ ಇದ್ದಿರಲಿಲ್ಲ. ಆದರೆ ಹತ್ಯಾಕಾಂಡದ ಆರೋಪಿಗಳ ಪರವಾಗಿ ಇಡೀ ವ್ಯವಸ್ಥೆಯೇ ನಿಂತಿತ್ತು.
ಗುಜರಾತ್ ಹತ್ಯಾಕಾಂಡದ ಸಂದರ್ಭದಲ್ಲಿ ಮಾಜಿ ಸಂಸದ ಎಹ್ಸಾನ್ ಜಾಫ್ರಿ ಮತ್ತು ಸ್ಥಳೀಯರ ಹತ್ಯೆಗಳನ್ನು ತಪ್ಪಿಸುವ ಎಲ್ಲ ಅವಕಾಶ ಸರಕಾರಕ್ಕಿತ್ತು. ದುಷ್ಕರ್ಮಿಗಳು ತಮ್ಮ ನಿವಾಸವನ್ನು ಮುತ್ತಿದ ಸಂದರ್ಭದಲ್ಲಿ ಎಹ್ಸಾನ್ ಜಾಫ್ರಿ ಸಹಾಯಕ್ಕಾಗಿ ಪೊಲೀಸ್ ಇಲಾಖೆಗಷ್ಟೇ ಅಲ್ಲ, ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೂ ಕರೆ ಮಾಡಿದ್ದರು. ಆದರೆ ಯಾವುದೇ ಸಹಾಯ ಅವರಿಗೆ ದೊರಕಲಿಲ್ಲ. ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿಗೂ ದೂರವಾಣಿಯಲ್ಲಿ ವಿಷಯ ತಿಳಿಸಿದ್ದರಾದರೂ ಅವರಿಂದಲೂ ನಿರೀಕ್ಷಿತ ಸಹಾಯ ದೊರಕಲಿಲ್ಲ. ಪೊಲೀಸ್ ಇಲಾಖೆಯ ಕೈಗಳನ್ನು ಅಂದಿನ ಗುಜರಾತ್ ಗೃಹ ಸಚಿವರು ಕಟ್ಟಿ ಹಾಕಿದ್ದರು ಎನ್ನುವುದು ಝಕಿಯಾ ಅವರ ಆರೋಪವಾಗಿದೆ. ಈ ಹಿನ್ನೆಲೆಯಲ್ಲಿ, ಗುಜರಾತ್ ಹತ್ಯಾಕಾಂಡದಲ್ಲಿ ಆಂದಿನ ಗುಜರಾತ್ನ ಮುಖ್ಯಮಂತ್ರಿ ನರೇಂದ್ರಮೋದಿ, ಬಿಜೆಪಿ ನಾಯಕ ಅಮಿತ್ ಶಾ ಅವರ ಪಾತ್ರಗಳ ಬಗ್ಗೆ ಝಕಿಯಾ ದೂರಿನಲ್ಲಿ ಉಲ್ಲೇಖಿಸಿದ್ದರು.
ವಿಶೇಷ ತನಿಖಾ ತಂಡವು ಹತ್ಯಾಕಾಂಡಕ್ಕೆ ಸಂಬಂಧಿಸಿದ ವರದಿಯಲ್ಲಿ ನರೇಂದ್ರಮೋದಿ ಮತ್ತು ಆರೋಪಪಟ್ಟಿಯಲ್ಲಿದ್ದ 63 ಮಂದಿಗೆ ಕ್ಲೀನ್ಚಿಟ್ ಕೊಟ್ಟಾಗ ಅದನ್ನು ವಿವಿಧ ನ್ಯಾಯಾಲಯಗಳಲ್ಲಿ ಝಕಿಯಾ ಅವರು ಪ್ರಶ್ನಿಸಿದರು. ಕೆಳ ನ್ಯಾಯಾಲಯಗಳಿಂದ ಹೈಕೋರ್ಟ್, ಸುಪ್ರೀಂಕೋರ್ಟ್ ವರೆಗೆ ಅವರ ಹೋರಾಟ ನಿರಂತರವಾಗಿ ಮುಂದುವರಿಯಿತು. ವಿಪರ್ಯಾಸವೆಂದರೆ, ಝಕಿಯಾ ಹೋರಾಟ ಮುಂದುವರಿಯುತ್ತಿದ್ದಂತೆಯೇ ನರೇಂದ್ರ ಮೋದಿಯವರು ಈ ದೇಶದ ಪ್ರಧಾನಮಂತ್ರಿಯಾದರು. ಗುಜರಾತ್ ಹತ್ಯಾಕಾಂಡದಲ್ಲಿ ಪಾತ್ರವಿದೆ ಎಂಬ ಆರೋಪ ಹೊತ್ತ ಇನ್ನೋರ್ವ ನಾಯಕ ಈ ದೇಶದ ಗೃಹಸಚಿವರಾದರು. ತಾನು ಹೋರಾಡುತ್ತಿರುವುದು ಈ ದೇಶದ ಪ್ರಧಾನಿಯ ವಿರುದ್ಧ ಎನ್ನುವುದು ಗೊತ್ತಿದ್ದೂ ಅದಾಗಲೇ ದೈಹಿಕವಾಗಿ ಕ್ಷೀಣವಾಗಿದ್ದ ಝಕಿಯಾ ತನ್ನ ಹೋರಾಟವನ್ನು ನಿಲ್ಲಿಸಲಿಲ್ಲ. 2022ರಲ್ಲಿ ಸುಪ್ರೀಂಕೋರ್ಟ್ ಕೂಡ ಜಾಫ್ರಿ ಅವರ ಅರ್ಜಿಯನ್ನು ವಜಾಗೊಳಿಸಿತು ಮಾತ್ರವಲ್ಲ, ಸಿಟ್ ನೀಡಿದ ಕ್ಲೀನ್ಚಿಟ್ನ್ನು ಅಂಗೀಕರಿಸಿತು. ದೊಡ್ಡ ದುರಂತವೆಂದರೆ, ಝಕಿಯಾ ಅವರ ಹೋರಾಟಕ್ಕೆ ಬೆಂಬಲವಾಗಿ ನಿಂತ ತೀಸ್ತಾ ಸೆಟಲ್ವಾಡ್ ಅವರೇ ಆರೋಪಿ ಸ್ಥಾನದಲ್ಲಿ ನಿಲ್ಲಬೇಕಾಯಿತು. ಪ್ರಧಾನಿ ಮೋದಿಯವರ ವಿರುದ್ಧ ಸಂಚು ನಡೆಸಿದ ಆರೋಪದಲ್ಲಿ ಪೊಲೀಸರು ಅವರನ್ನು ಬಂಧಿಸಿ ಜೈಲಿಗೆ ತಳ್ಳಿದರು. ಗುಜರಾತ್ ಹತ್ಯಾಕಾಂಡದ ವಿರುದ್ಧ ಧ್ವನಿಯೆತ್ತಿದ್ದ, ವ್ಯವಸ್ಥೆಯ ವಿರುದ್ಧ ಮಾತನಾಡಿದ್ದ ಪೊಲೀಸ್ ಅಧಿಕಾರಿ ಸಂಜೀವ್ ಭಟ್ ಅದಾಗಲೇ ಜೈಲು ಪಾಲಾಗಿದ್ದರು. ಇನ್ನೋರ್ವ ಹಿರಿಯ ನಿವೃತ್ತ ಪೊಲೀಸ್ ಅಧಿಕಾರಿ ಶ್ರೀಕುಮಾರ್ ಅವರೂ ಬಂಧನಕ್ಕೊಳಗಾಗಬೇಕಾಯಿತು. ವಿಪರ್ಯಾಸವೆಂದರೆ, ಸ್ವತಃ ಸರಕಾರದ ನೇತೃತ್ವದಲ್ಲಿ ಗುಜರಾತ್ ಹತ್ಯಾಕಾಂಡದಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಗಳಲ್ಲಿ ಭಾಗಿಯಾದ ಅಪರಾದಿ ಗಳನ್ನು ಸರಕಾರವೇ ಬಿಡುಗಡೆ ಮಾಡಿತು. ಇದು ಇಡೀ ಭಾರತದ ನ್ಯಾಯ ವ್ಯವಸ್ಥೆಯನ್ನು ವಿಶ್ವದ ಮುಂದೆ ನಗೆಪಾಟಲಿಗೀಡು ಮಾಡಿತು. ಸರಕಾರದ ಈ ಪ್ರಯತ್ನ, ಗುಜರಾತ್ ಹತ್ಯಾಕಾಂಡದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಪಾತ್ರವೇನು ಎನ್ನುವುದನ್ನು ವಿಶ್ವದ ಮುಂದೆ ಮತ್ತೊಮ್ಮೆ ತೆರೆದಿಟ್ಟಿತು. ಇಷ್ಟಾದರೂ ಝಕಿಯಾ ಅವರಿಗೆ ನ್ಯಾಯ ಮರೀಚಿಕೆಯಾಯಿತು. ಆದರೆ ಝಕಿಯಾ ಅವರು ಬೆದರಲಿಲ್ಲ, ತನ್ನ ಹೋರಾಟದಿಂದ ಹಿಂದೆ ಸರಿಯಲಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ, ಮೋದಿಯವರನ್ನು ಪ್ರಧಾನಿ ಮಾಡದಂತೆ ಬಹಿರಂಗವಾಗಿಯೇ ಕರೆ ನೀಡಿದರು.
ನ್ಯಾಯಕ್ಕಾಗಿ ಹೋರಾಡುತ್ತಾ ಜೈಲಿನಲ್ಲಿ ಪ್ರಾಣ ಬಿಟ್ಟ ಫಾದರ್ ಸ್ಟ್ಯಾನ್ ಸ್ವಾಮಿ, ಜೈಲಿನಲ್ಲಿ ಅನಾರೋಗ್ಯದಿಂದ ನರಳಿ, ಬಳಿಕ ದೋಷ ಮುಕ್ತರಾಗಿ ಬಿಡುಗಡೆಗೊಂಡು ಮೃತಪಟ್ಟ ಮಾನವಹಕ್ಕು ಹೋರಾಟಗಾರ ಸಾಯಿಬಾಬಾ ಇವರಿಗಿಂತ ಝಕಿಯಾ ಜಾಫ್ರಿ ಭಿನ್ನರೇನೂ ಅಲ್ಲ. 2002ರಲ್ಲಿ ಸಂವಿಧಾನದ ಮೇಲೆ ನಂಬಿಕೆಯಿಲ್ಲದ ಜನರು ಆಕೆಯ ಕುಟುಂಬವನ್ನು ಹತ್ಯೆಗೈದರೆ, 2022ರಲ್ಲಿ ಅವರು ಸಂವಿಧಾನವನ್ನು ರಕ್ಷಿಸಬೇಕಾದ ಸುಪ್ರೀಂಕೋರ್ಟ್ನಿಂದಲೇ ಆಘಾತವನ್ನು ಎದುರಿಸಬೇಕಾಗಿ ಬಂತು. ಇಷ್ಟಾದರೂ ಸಂವಿಧಾನದ ಮೇಲೆ ಕೊನೆಯವರೆಗೂ ನಂಬಿಕೆಯನ್ನು ಉಳಿಸಿಕೊಂಡಿದ್ದರು. ಸಂವಿಧಾನದ ನಿಜವಾದ ಕಾಲಾಳುವಾಗಿ ನಮ್ಮನ್ನು ಅಗಲಿದ್ದಾರೆ. ಆದರೆ ಅವರ ಒಳಗಿನ ಬಿಕ್ಕಳಿಕೆ, ಈ ದೇಶದ ಸಂವಿಧಾನದ ಬಿಕ್ಕಳಿಕೆಯಾಗಿ ನಮ್ಮೆಲ್ಲರ ಎದೆಯಲ್ಲಿ ಶಾಶ್ವತವಾಗಿ ಉಳಿಯಲಿದೆ. ಜಾಫ್ರಿಯ ಹೋರಾಟ ಈ ದೇಶದ ಮಹಿಳೆಯರೂ ಸೇರಿದಂತೆ ಎಲ್ಲ ಸಂವಿಧಾನಪರ ಜನರ ಎದೆಯೊಳಗೆ ಮರು ಹುಟ್ಟು ಪಡೆಯಬೇಕಾಗಿದೆ. ಈ ದೇಶದ ಸಂವಿಧಾನವನ್ನು ಇನ್ನಷ್ಟು ಬಲಿಷ್ಟಗೊಳಿಸಲು ಅದು ನೆರವಾಗಬೇಕಾಗಿದೆ.