ಹಿರಿಯ ಸಾಹಿತಿ ಯೋಗೇಶ್ ಮಾಸ್ಟರ್ ಅವರ ‘ನನ್ನ ಅರಿವಿನ ಪ್ರವಾದಿ’ ಕೃತಿ ಲೋಕಾರ್ಪಣೆ

ಬೆಂಗಳೂರು, ಸೆ. 28: ‘ನಮ್ಮ ದೇಶದ ಪರಂಪರೆಯೇ ಬಣ್ಣ ಬಣ್ಣದ ತೋಟವಾಗಿದೆ. ಸರ್ವರಿಗೂ ಪ್ರಾಶಸ್ತ್ಯ ನೀಡುವುದರ ಜತೆಗೆ ಎಲ್ಲರಿಗೂ ಸಮಪಾಲು, ಸಮಬಾಳು ಎಂಬ ತತ್ವ ಅಳವಡಿಸಿಕೊಂಡಿರುವ ಏಕೈಕ ರಾಷ್ಟ್ರವಾಗಿದೆ’ ಎಂದು ರಾಜ್ಯ ಸರಕಾರದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಚಿರಂಜೀವಿ ಸಿಂಗ್ ಅಭಿಪ್ರಾಯಪಟ್ಟರು.
ಗುರುವಾರ ನಗರದ ದಾರುಸ್ಸಲಾಮ್ ಕಟ್ಟಡದ ಸಭಾಂಗಣದಲ್ಲಿ ಶಾಂತಿ ಪ್ರಕಾಶನ ಮಂಗಳೂರು ಹಮ್ಮಿಕೊಂಡಿದ್ದ ಹಿರಿಯ ಸಾಹಿತಿ ಯೋಗೇಶ್ ಮಾಸ್ಟರ್ ಅವರ ‘ನನ್ನ ಅರಿವಿನ ಪ್ರವಾದಿ’ ಕೃಷಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಏಕ ಸಂಸ್ಕೃತಿ ಹೇರಿಕೆ ಸಾಧ್ಯವೇ ಇಲ್ಲ. ಇದೊಂದು ಬಹುಸಂಸ್ಕೃತಿಯ ದೇಶವಾಗಿದ್ದು, ಈ ಹಿಂದೆಯೇ ಹಲವು ಮಹನೀಯರು ಉದಾಹಣೆಗಳ ಸಹಿತ ಉಲ್ಲೇಖ ಮಾಡಿದ್ದಾರೆ ಎಂದು ನುಡಿದರು.
ನಮ್ಮ ದೇಶ, ನಾಡು ಸರ್ವ ಜನಾಂಗದ ಶಾಂತಿಯ ತೋಟದಂತೆ ಇರಬೇಕೆನ್ನುವುದೇ ‘ನನ್ನ ಅರಿವಿನ ಪ್ರವಾದಿ’ ಕೃತಿಯ ಮೂಲ ಆಶಯವಾಗಿದೆ. ಸಾಹಿತಿ ಯೋಗೇಶ್ ಮಾಸ್ಟರ್ ಅವರು ಕಂಡುಕೊಂಡ ಇಸ್ಲಾಮ್ ಧರ್ಮವನ್ನು ಕೃತಿಯ ಮೂಲಕ ಪರಿಚಯ ಮಾಡಿದ್ದು, ಇದನ್ನು ಪ್ರತಿಯೊಬ್ಬರು ಓದುವ, ತಿಳಿದುಕೊಳ್ಳುವ ಅವಶ್ಯಕತೆ ಇದೆ ಎಂದು ಅವರು ಹೇಳಿದರು.
ಹಿರಿಯ ಪತ್ರಕರ್ತ ರಘುನಾಥ ಚ.ಹ ಮಾತನಾಡಿ, ‘ಪ್ರವಾದಿ ಮುಹಮ್ಮದ್(ಸ) ಅವರು ತಮ್ಮ ಬದುಕಿನಲ್ಲಿ ಅಳವಡಿಕೊಂಡ ತತ್ವ ಸಿದ್ದಾಂತಗಳನ್ನು ಇಸ್ಲಾಮ್‍ಯೇತರರಿಗೆ ಮಟ್ಟಿಸಬೇಕಾಗಿದೆ. ಈ ನಿಟ್ಟಿನಲ್ಲಿ ಯೋಗೇಶ್ ಮಾಸ್ಟರ್ ಅವರ ಪ್ರಯತ್ನವೂ ಮುಖ್ಯವಾಗಿದ್ದು, ಅವರ ಈ ಕೃತಿಯಲ್ಲಿ ಅಧ್ಯಯನ ರೂಪ ಕಾಣಬಹುದಾಗಿದೆ’ ಎಂದು ನುಡಿದರು.
ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞ ಮಾತನಾಡಿ, ‘ಶಾಂತಿ ಪ್ರಕಾಶನ ಸಾಹಿತ್ಯದಲ್ಲಿ ಕಟ್ಟು ಕತೆಗಳಿಲ್ಲ. ಜನರ ಭಾವನೆಗಳನ್ನು ಕೆರಳಿಸುವ, ಪ್ರಚೋದಿಸುವ ಒಂದೇ ಒಂದು ಅಕ್ಷರ ಇಲ್ಲವೆಂದು ಅಧಿಕೃತವಾಗಿಯೇ ಹೇಳುತ್ತೇನೆ. ಆದರೆ ವೈಚಾರಿಕ ಅಂಶ, ಜನರನ್ನು ಒಗ್ಗೂಡಿಸುವ ಸಾಹಿತ್ಯ ಮಾತ್ರವೇ ಇಲ್ಲಿ ಅಡಗಿದೆ.ಹೀಗಾಗಿ, ಕನ್ನಡ ಜನತೆ, ಧಾರ್ಮಿಕ ಗುರುಗಳು, ಸಾಹಿತಿಗಳು, ಅಧಿಕಾರಿ ವರ್ಗವೂ ಈ ಪ್ರಕಾಶನವನ್ನು ಅಪ್ಪಿಕೊಂದ್ದಾರೆ’ ಎಂದು ಬಣ್ಣಿಸಿದರು.
ಪ್ರಕಾಶನದ 270ನೆ ಕೃತಿಯೂ ಯೋಗೇಶ್ ಮಾಸ್ಟರ್ ಅವರ ‘ನನ್ನ ಅರಿವಿನ ಪ್ರವಾದಿ’ ಆಗಿದೆ ಎಂದ ಅವರು, ಪ್ರವಾದಿ ಮುಹಮ್ಮದ್(ಸ) ಅವರು ಮಾನವ ಕುಲದ ವಿಮೋಚಕ. ಸಮಾನತೆ, ಮಾನವ ಹಕ್ಕುಗಳು, ಸಹೋದರತೆಯನ್ನು ಪರಿಚಯ ಮಾಡಿಸಿದವರು. ಅವರ ತತ್ವ ಸಿದ್ದಾಂತಗಳು ಜಾತಿ, ಧರ್ಮದ ಗಡಿ ಮೀರಿ ತಲುಪಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯಾಧ್ಯಕ್ಷ ಡಾ.ಮುಹಮ್ಮದ್ ಸಾದ್ ಬೆಳಗಾಮಿ, ವಿಶ್ವ ಬಾಂಧವ್ಯ ಮತ್ತು ಮಾನವ ಸಮಾನತೆಯ ಸಂದೇಶವು ಮಾನವ ಕುಲದ ಉದ್ದಾರಕ್ಕೆ ಪ್ರವಾದಿ ಮುಹಮ್ಮದ್(ಸ) ನೀಡಿದ ಅಮೂಲ್ಯ ಕೊಡುಗೆಯಾಗಿದೆ. ಲೋಕದ ಅನೇಕ ಪ್ರಮುಖ ಧರ್ಮಗಳು ಮತ್ತು ಸಿದ್ಧಾಂತಗಳು ಈ ಸಂದೇಶವನ್ನು ಪ್ರತಿಪಾದಿಸಿದೆ. ಆದರೆ, ಪ್ರವಾದಿ ಮುಹಮ್ಮದ್(ಸ)ರ ವಿಶೇಷತೆ ಅಂದರೆ ಅವರದನ್ನು ಕಾರ್ಯರೂಪಕ್ಕೆ ತಂದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ಸಾಹಿತಿ ಯೋಗೇಶ್ ಮಾಸ್ಟರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
‘ಎಲ್ಲರಿಗೂ ಆಪ್ತರಾಗಿದ್ದ ಪ್ರವಾದಿ ಮುಹಮ್ಮದ್(ಸ) ಅವರ ಮುಗುಳ್ನಗು, ಸವಿನುಡಿಗಳೇ ಹೆಗ್ಗುರುತಾಗಿತ್ತು. ತನ್ನನ್ನು ಪೀಡಿಸಿದವರನ್ನು ಕ್ಷಮಿಸಿದರು. ಪ್ರೀತಿಯಿಂದ ಸಮಾಜವನ್ನು ತಿದ್ದಿ ತೀಡಿ ಬೆಳೆಸಿದರು. ಪ್ರೀತಿ ಎಲ್ಲವನ್ನೂ ಸೋಲಿಸುತ್ತದೆ, ಸಹಿಸುತ್ತದೆ ಮತ್ತು ಕ್ಷಮಿಸುತ್ತದೆ ಎಂಬಂತೆ ಅವರು ಮಾಡಿದ ಕ್ರಾಂತಿಯು ಇಡೀ ಜಗತ್ತನ್ನು ಗೆದ್ದಿದೆ’
-ಯೋಗೇಶ್ ಮಾಸ್ಟರ್, ಹಿರಿಯ ಸಾಹಿತಿ







