ರಷ್ಯಾ ವಿವಿ ಸೇರಲು ಸಜ್ಜಾಗಿದ್ದ ಉತ್ತರಾಖಂಡದ ಯುವಕ ಉಕ್ರೇನ್ ವಿರುದ್ಧದ ಯುದ್ಧ ಕಣಕ್ಕೆ!

PC: x.com/meevkt
ರುದ್ರಾಪುರ: ಉನ್ನತ ಶಿಕ್ಷಣಕ್ಕಾಗಿ ರಷ್ಯಾಗೆ ತೆರಳಿದ್ದ ಉಧಾಂಸಿಂಗ್ ನಗರದ ಯುವಕನನ್ನು ಬಲವಂತವಾಗಿ ರಷ್ಯಾದ ಸೇನೆಗೆ ಸೇರಿಸಿ ಉಕ್ರೇನ್ ವಿರುದ್ಧದ ಯುದ್ಧಕಣಕ್ಕೆ ಕಳುಹಿಸಲಾಗಿದೆ ಎಂದು ಆತನ ಕುಟುಂಬ ಆರೋಪಿಸಿದೆ. ಸೆಪ್ಟೆಂಬರ್ ಆರಂಭದಿಂದಲೇ ಯುವಕ ಸಂಪರ್ಕಕ್ಕೆ ಸಿಗುತ್ತಿಲ್ಲ; ಇದೀಗ ಕುಟುಂಬದ ಎಲ್ಲರೂ ಹತಾಶರಾಗಿದ್ದೇವೆ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.
ನಾಪತ್ತೆಯಾಗಿರುವ ಯುವ ರಾಕೇಶ್ ಕುಮಾರ್ (30) ಅವರ ಕುಟುಂಬ ಈ ಸಂಬಂಧ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದಿದ್ದು, ಮಾಸ್ಕೊದಲ್ಲಿರುವ ಭಾರತೀಯ ರಾಜಭಾರ ಕಚೇರಿ ನೆರವಾಗಬೇಕು ಎಂದು ಕೋರಿದೆ. ಜತೆಗೆ ಯುವಕನನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆ ತರಲು ಅಗತ್ಯ ನೆರವು ನೀಡುವಂತೆ ಸ್ಥಳೀಯ ಅಧಿಕಾರಿಗಳಿಗೂ ಮನವಿ ಸಲ್ಲಿಸಿದೆ.
ಸಿತಾರ್ಗಂಜ್ ತಾಲೂಕಿನ ಕುಶ್ಮತ್ ಗ್ರಾಮದ ನಿವಾಸಿಯಾಗಿದ್ದ ರಾಕೇಶ್ ಆಗಸ್ಟ್ 7ರಂದು ರಷ್ಯಾಗೆ ತೆರಳಿದ್ದರು. ಅಧ್ಯಯನ ವೀಸಾದಲ್ಲಿ ತೆರಳಿದ್ದ ಇವರು ಸೆಂಟ್ ಪೀಟರ್ಸ್ ಬರ್ಗ್ ವಿವಿಯಲ್ಲಿ ಪ್ರವೇಶ ಪಡೆಯಬೇಕಿತ್ತು. ಆದರೆ ಕೆಲವೇ ದಿನಗಳಲ್ಲಿ ತ್ರಾಸದಾಯಕ ಪರಿಸ್ಥಿತಿ ಬಗ್ಗೆ ಸುಳಿವು ನೀಡಿದ್ದು, ಎಲ್ಲವೂ ಯೋಜನೆಯಂತೆ ಸಾಗುತ್ತಿಲ್ಲ ಎಂದು ಹೇಳಿದ್ದರು.
ಆಗಸ್ಟ್ 30ರಂದು ಕೊನೆಯದಾಗಿ ರಾಕೇಶ್ ಸಂಪರ್ಕಕ್ಕೆ ಸಿಕ್ಕಿದ್ದು, ಬಲವಂತವಾಗಿ ತಮ್ಮನ್ನು ರಷ್ಯನ್ ಸೇನೆಗೆ ಸೇರಿಸಲಾಗಿದೆ ಹಾಗೂ ಶೀಘ್ರವೇ ಉಕ್ರೇನ್ ವಿರುದ್ಧದ ಯುದ್ಧಕಣಕ್ಕೆ ನಿಯೋಜಿಸಲಾಗುತ್ತದೆ ಎಂಬ ಮಾಹಿತಿ ನೀಡಿದ್ದಾಗಿ ಅಣ್ಣ ದೀಪು ಮೌರ್ಯ ವಿವರಿಸಿದ್ದಾರೆ. ಆ ಬಳಿಕ ಫೋನ್ ಸಂಪರ್ಕಕ್ಕೆ ಸಿಗುತ್ತಿಲ್ಲ. ಬಳಿಕ ರಷ್ಯಾದ ಸೇನಾ ಸಮವಸ್ತ್ರದಲ್ಲಿದ್ದ ರಾಕೇಶ್ ನ ಫೋಟೊ ಲಭ್ಯವಾಗಿದೆ. ಇದು ಆತಂಕವನ್ನು ಹೆಚ್ಚಿಸಿದ್ದು, ಆತಂಕವನ್ನು ನಿಜವಾಗಿಸಿದೆ ಎಂದು ಕುಟುಂಬದವರು ವಿವರಿಸಿದ್ದಾರೆ.
ಕೆಲ ದಿನಗಳ ಬಳಿಕ ಅಪರಿಚಿತ ರಷ್ಯನ್ ಸಂಖ್ಯೆಯಿಂದ ರಾಕೇಶ್ ಕರೆ ಮಾಡಿದ್ದರು. ಅಲ್ಪಕಾಲ ಮಾತ್ರ ಮಾತನಾಡಿದ್ದ ಆತ ತನ್ನ ವೈಯಕ್ತಿಕ ದಾಖಲೆಗಳು ಮತ್ತು ಪಾಸ್ಪೋರ್ಟನ್ನು ವಶಪಡಿಸಿಕೊಂಡಿರುವುದಾಗಿ ಹೇಳಿದ್ದರು. ಅವರ ಅಧಿಕೃತ ಇ-ಮೇಲ್ ಖಾತೆಯನ್ನೂ ಡಿಲೀಟ್ ಮಾಡಲಾಗಿದೆ. ಯುದ್ಧರಂಗಕ್ಕೆ ಹೋಗುವ ಮುನ್ನ ಡಾನ್ಬಾಸ್ ಪ್ರದೇಶದಲ್ಲಿ ಸೇನಾ ತರಬೇತಿ ನೀಡಲಾಗುತ್ತಿದೆ ಎಂಬ ಮಾಹಿತಿ ಕೊನೆಯದಾಗಿ ಲಭ್ಯವಾಗಿದೆ.







