ರೋಗಿಗಳ ಲೈಂಗಿಕ ಶೋಷಣೆ ಆರೋಪ: ಭಾರತ ಮೂಲದ ವೈದ್ಯನ ವಿರುದ್ಧ ಪ್ರಕರಣ ದಾಖಲು

ಸಾಂದರ್ಭಿಕ ಚಿತ್ರ
ವಾಷಿಂಗ್ಟನ್: ಗಂಭೀರ ವೈದ್ಯಕೀಯ ವಂಚನೆ, ಕಾನೂನುಬಾಹಿರವಾಗಿ ನೋವು ನಿವಾರಕ ಮಾದಕ ಔಷಧಿಗಳ ವಿತರಣೆ ಮತ್ತು ರೋಗಿಗಳ ಲೈಂಗಿಕ ಶೋಷಣೆ ಆರೋಪದಲ್ಲಿ ಭಾರತ ಮೂಲದ ವೈದ್ಯನೊಬ್ಬನ ವಿರುದ್ಧ ಅಮೆರಿಕದಲ್ಲಿ ಪ್ರಕರಣ ದಾಖಲಾಗಿದೆ.
ನ್ಯೂಜೆರ್ಸಿಯ ಸೆಕಾಕಸ್ ನಿವಾಸಿ, 51 ವರ್ಷ ವಯಸ್ಸಿನ ವೈದ್ಯನನ್ನು ರಿತೇಶ್ ಕಲ್ರಾ ಎಂದು ಗುರುತಿಸಲಾಗಿದೆ. ನ್ಯಾಯಾಲಯದ ವಿಚಾರಣೆ ಬಳಿಕ ಆರೋಪಿಯನ್ನು ಗೃಹಬಂಧನದಲ್ಲಿ ಇರಿಸಲಾಗಿದೆ.
ಫೇರ್ ಲಾನ್ ಕ್ಲಿನಿಕ್ ನ ಹೊರಗೆ ಈತ "ಪಿಲ್ ಮಿಲ್" ನಿರ್ವಹಿಸುತ್ತಿದ್ದ ಎಂದು ಅಮೆರಿಕದ ಅಟಾರ್ನಿ ಕಚೇರಿ ಆಪಾದಿಸಿದ್ದು, ಯಾವುದೇ ವೈದ್ಯಕೀಯ ಸಮರ್ಥನೆ ಇಲ್ಲದೇ ಆಕ್ಸಿಕೊಡೋನ್ ನಂಥ ಪ್ರಬಲ ನೋವು ನಿವಾರಕ ಮಾದಕ ಔಷಧಿಗಳನ್ನು ನೀಡುತ್ತಿದ್ದ ಎನ್ನಲಾಗಿದೆ. ವೈದ್ಯನ ವಿರುದ್ಧ ಮೂರು ಅಕ್ರಮ ಔಷಧ ವಿತರಣೆ ಮತ್ತು ಎರಡು ಆರೋಗ್ಯ ಸೇವಾ ವಂಚನೆ ಪ್ರಕರಣಗಳು ದಾಖಲಾಗಿವೆ.
ಕಲ್ರಾ ತನ್ನ ಲೈಸನ್ಸನ್ನು ರೋಗಶಮನಕ್ಕೆ ಬಳಸದೇ ರೋಗಿಗಳನ್ನು ವ್ಯಸನಿಗಳನ್ನಾಗಿ ಮಾಡಲು ಬಳಸಿಕೊಳ್ಳುತ್ತಿದ್ದ ಎಂಧು ಆಪಾದಿಸಲಾಗಿದೆ. 2019ರ ಜನವರಿಯಿಂದ 2015ರ ಫೆಬ್ರುವರಿವರೆಗೆ ಕಲ್ರಾ 31 ಸಾವಿರ ಆಕ್ರಿಕೊಡೋನ್ ಪ್ರಿಸ್ಕ್ರಿಪ್ಷನ್ ನೀಡಿದ್ದ ಎಂದು ನ್ಯಾಯಾಲಯದ ದಾಖಲೆಗಳು ಹೇಳುತ್ತವೆ. ಕೆಲ ದಿನಗಳಲ್ಲಿ ಒಂದೇ ದಿನ 50ಕ್ಕೂ ಹೆಚ್ಚು ಮಂದಿಗೆ ನೀಡಿದ್ದ ನಿರ್ದಶನಗಳಿವೆ.
ಡಾ.ಕಲ್ರಾ ಮಾದಕ ವ್ಯಸನ ಬೆಳೆಸುವ ಜತೆಗೆ ರೋಗಿಗಳನ್ನು ಲೈಂಗಿಕವಾಗಿಯೂ ಶೋಷಿಸುತ್ತಿದ್ದ ಮತ್ತು ನ್ಯೂಜೆರ್ಸಿಯ ಸಾರ್ವಜನಿಕ ಆರೋಗ್ಯಸೇವೆ ಯೋಜನೆಯಡಿ ವಂಚಿಸುತ್ತಿದ್ದ ಎಂದು ಅಟಾರ್ನಿ ಅಲಿನಾ ಹಬ್ಬಾ ಹೇಳಿದ್ದಾರೆ.







