ಶಿವಮೊಗ್ಗ | ಶರಾವತಿ ಪಂಪ್ಡ್ ಸ್ಟೋರೇಜ್ ಗೆ ಒಕ್ಕೊರಲ ವಿರೋಧ

ಶಿವಮೊಗ್ಗ(ಸೆ.16): ರಾಜ್ಯ ಸರ್ಕಾರದ ಬಹುನಿರೀಕ್ಷಿತ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಗೆ ಸಾರ್ವಜನಿಕರು, ಇತಿಹಾಸ ತಜ್ಞರು, ಪರಿಸರವಾದಿಗಳಿಂದ ತೀವ್ರ ವಿರೋಧ ವ್ಯಕ್ತವಾಯಿತು.
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮಂಗಳವಾರ ಕಾರ್ಗಲ್ ನ ಭಟ್ಕಳ ವೃತ್ತದಲ್ಲಿರುವ ಕರ್ನಾಟಕ ವಿದ್ಯುತ್ ನಿಗಮದ (ಕೆಪಿಸಿ) ರಿಕ್ರಿಯೇಶನ್ ಕ್ಲಬ್‌ನ ಸಭಾಂಗಣದಲ್ಲಿ ಸಾರ್ವಜನಿಕರ ಅಹವಾಲು ಆಲಿಕೆ ಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು.
10,500 ಕೋಟಿ ರೂ, ವೆಚ್ಚದಲ್ಲಿ 2,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಿ ಶೇಖರಣೆ ಮಾಡುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಅನುಷ್ಠಾನಗೊಳಿಸಲು ಕರ್ನಾಟಕ ವಿದ್ಯುತ್ ನಿಗಮ ಮುಂದಾಗಿದೆ. ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳು ಯೋಜನೆಯ ಬಾಧಿತ ಪ್ರದೇಶವಾಗಿವೆ.
ಸಾರ್ವಜನಿಕರ ಅಹವಾಲು ಆಲಿಕೆ ಸಭೆಯಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಇವರಲ್ಲಿ ಅನೇಕರು, ಪ್ರಸ್ತಾವಿತ ಯೋಜನೆಯ ಬಗ್ಗೆ ಡಿಪಿಆರ್ ಇಂಗ್ಲಿಷಿನಲ್ಲಿದ್ದು, ಸ್ಥಳೀಯ ಭಾಷೆಯಲ್ಲಿ ಪ್ರಕಟಿಸಿ ಸಾರ್ವಜನಿಕರಿಗೆ ವಿತರಿಸಬೇಕಾಗಿತ್ತು. ಆದರೆ ಆ ಕೆಲಸವನ್ನು ಸಂಬಂಧಿಸಿದವರು ಮಾಡಲಿಲ್ಲ. ಇನ್ನಾದರೂ ಡಿಪಿಆರ್ ನ್ನು ಕನ್ನಡದಲ್ಲಿ ಅನುವಾದಿಸಿ ಸಾರ್ವಜನಿಕರಿಗೆ ತಲುಪಿಸಿ 45ದಿನ ಮುಂದೂಡಿ ಎಂಬ ಒತ್ತಾಯವನ್ನು ಮಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಪ್ರಸ್ತಾವಿತ ಯೋಜನೆ ಕುರಿತು ವಿವರವಾದ ಪವರ್ ಪಾಯಿಂಟ್ ಪ್ರದರ್ಶಿಸಿ(ಪಿಪಿಟಿ)ಯೋಜನೆಯ ವಿವಿಧ ಆಯಾಮಗಳ ವಿವರ ನೀಡಿದರು. ಆದರೆ ಅದರಲ್ಲಿ ಅನೇಕ ಇಂಗ್ಲಿಷ್, ಲ್ಯಾಟಿನ್ ಭಾಷೆಯಲ್ಲಿರುವುದರಿಂದ ಸಾರ್ವಜನಿಕರಿಗೆ ಏನೂ ಅರ್ಥವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಸ್ತಾವಿತ ಯೋಜನೆಯು ಪರಿಸರ, ಐತಿಹಾಸಿಕ ಸ್ಮಾರಕ, ಜನ ಜಾನುವಾರುಗಳಿಗೆ ಮಾರಕವಾಗಿದ್ದು, ಯೋಜನೆಯನ್ನು ಸಂಪೂರ್ಣ ಕೈಬಿಡಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸಿದರು.
ಯೋಜನೆಯಲ್ಲಿ ಹೇಳಿದ ವಿಷಯಗಳೆಲ್ಲ ಸುಳ್ಳಿನ ಕಂತೆಯಿಂದ ಕೂಡಿದೆ. ಸಾರ್ವಜನಿಕರಿಗೆ ಮೋಸ ಮಾಡುವ ಹಿಡನ್ ಅಜೆಂಡಾ ಇದರಲ್ಲಿ ಅಡಗಿದೆ. ಈ ಸಾರ್ವಜನಿಕ ಅಹವಾಲು ಸಭೆ ಎನ್ನುವುದು ಕೇವಲ ಕಣ್ಣಿಗೆ ಮಣ್ಣೆರೆಚುವ ತಂತ್ರವಾಗಿದೆ. ದಟ್ಟಾರಣ್ಯ ಕತ್ಲೆಕಾನು, ಐತಿಹಾಸಿಕ ಮಹತ್ವದ ಗೇರುಸೊಪ್ಪ, ನಗರಬಸ್ತಿಕೇರಿ ಮೊದಲಾದೆಡೆ ಇರುವ ಐತಿಹಾಸಿಕ ಸ್ಥಳಗಳು ಸಂಪೂರ್ಣ ನಾಶವಾಗುತ್ತದೆ ಎಂದು ಯೋಜನೆ ವಿರುದ್ಧ ಹರಿಹಾಯ್ದರು.
ಯಾವುದೇ ಕಾರಣಕ್ಕೂ ಸದರಿ ಸಭೆಯನ್ನು ಮುಂದೂಡಲು ಸಾಧ್ಯವಿಲ್ಲ. ನೀವು ಕೊಡುವ ಅಭಿಪ್ರಾಯ, ಸಲಹೆ ಸೂಚನೆಗಳನ್ನು ಸರ್ಕಾರಕ್ಕೆ ಕಳುಹಿಸುವುದಾಗಿ ಸಭೆಯಲ್ಲಿ ಭಾಗಿಯಾದ ಅಧಿಕಾರಿಗಳು ಸಮಜಾಯಿಷಿ ನೀಡಲು ಪ್ರಯತ್ನಿಸಿದರೂ ಸಾರ್ವಜನಿಕರು ಒಪ್ಪಲಿಲ್ಲ.
ಮಾಜಿ ಶಾಸಕ ಹರತಾಳು ಹಾಲಪ್ಪ, ಪರಿಸರವಾದಿಗಳಾದ ಪ್ರೊ.ಕುಮಾರಸ್ವಾಮಿ, ಅಖಿಲೇಶ್ ಚಿಪ್ಪಳಿ, ಅನಂತ ಹೆಗಡೆ ಅಶೀಸರ, ಡಾ.ಎಲ್.ಕೆ.ಶ್ರೀಪತಿ, ಇತಿಹಾಸತಜ್ಞ ಡಾ.ಬಾಲಕೃಷ್ಣ ಹೆಗಡೆ, ಶಿವಾನಂದ ಕಳವೆ, ತಳಕಳಲೆ, ಹೆನ್ನಿ ಮೊದಲಾದ ಮುಳುಗಡೆ ಸಂತ್ರಸ್ತರು ಮಾತನಾಡಿ ಯೋಜನೆಯನ್ನು ಪ್ರಬಲವಾಗಿ ವಿರೋಧಿಸಿದರು.
ಸಭೆಯಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹಾಗೂ ಅರಣ್ಯ ಇಲಾಖೆ ಶಿವಮೊಗ್ಗ ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಸನ್ನ ಕೃಷ್ಣ ಪಟಗಾರ, ಮಾಲಿನ್ಯ ನಿಯಂತ್ರಣ ಮಂಡಳಿ ಹಿರಿಯ ಪರಿಸರ ಅಧಿಕಾರಿ ರಮೇಶ ನಾಯಕ್, ಶಿವಮೊಗ್ಗ ಜಿಲ್ಲಾ ಪರಿಸರ ಅಧಿಕಾರಿ ಶಿಲ್ಪಾ,ಕೆಪಿಸಿಎಲ್ ಅಧಿಕಾರಿ ವಿಜಯ್ ಮೊದಲಾದವರು ಉಪಸ್ಥಿತರಿದ್ದರು.
ಕೆಪಿಸಿ ವಿರುದ್ದ ಆಕ್ರೋಶ :
ಸಾಗರ ತಾಲ್ಲೂಕಿನ ಕಾರ್ಗಲ್‌ನ ಶರಾವತಿ ಕಣಿವೆಯಲ್ಲಿ ಉದ್ದೇಶಿತ ಪಂಪ್ ಸ್ಟೋರೇಜ್ ಯೋಜನೆ ಬಾಧಿತ ಪ್ರದೇಶದಲ್ಲಿ ಕಾಣಸಿಗುವ ಸಸ್ತನಿ, ಸರೀಸೃಪ ಹಾಗೂ ಜಲಚರಗಳ ಮಾಹಿತಿಯನ್ನು ಅವುಗಳ ವೈಜ್ಞಾನಿಕ ಹೆಸರಲ್ಲಿ ಕರ್ನಾಟಕ ವಿದ್ಯುತ್ ನಿಗಮ ನೀಡಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು.
ಸಭೆಯಲ್ಲಿ ಕೆಪಿಸಿ ನೀಡಿದ ಮಾಹಿತಿಗೆ ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು ಸಸ್ತನಿ, ಸರೀಸೃಪ ಹಾಗೂ ಜಲಚರಗಳಿಗೆ ಸ್ಥಳೀಯವಾಗಿ ರೂಢಿಗತ ಹೆಸರನ್ನು ಒಳಗೊಂಡ ಮಾಹಿತಿ ನೀಡುವಂತೆ ಆಗ್ರಹಿಸಿದರು. ಅದಕ್ಕೆ ಸಭೆಯಲ್ಲಿದ್ದ ಮಾಜಿ ಶಾಸಕ ಹರತಾಳು ಹಾಲಪ್ಪ, ಪರಿಸರ ಹೋರಾಟಗಾರರಾದ ಅನಂತ ಹೆಗಡೆ ಆಶೀಸರ, ಪ್ರೊ.ಬಿ.ಎಂ.ಕುಮಾರಸ್ವಾಮಿ, ಅಖಿಲೇಶ ಚಿಪ್ಪಳಿ, ಜೋಸೆಫ್ ಹೂವರ್ ದನಿಗೂಡಿಸಿದರು. ಈ ವೇಳೆ ಗದ್ದಲ ಉಂಟಾಯಿತು.
ಆಗ ಮಧ್ಯ ಪ್ರವೇಶಿಸಿದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು, ಅರ್ಧ ಗಂಟೆ ಸಮಯಾವಕಾಶ ನೀಡಿದಲ್ಲಿ ವೈಜ್ಞಾನಿಕ ಹೆಸರನ್ನು ಸ್ಥಳೀಯ ಹೆಸರಿಗೆ ತರ್ಜುಮೆ ಮಾಡಿಸಿ ಮಾಹಿತಿ ಒದಗಿಸುವುದಾಗಿ ಭರವಸೆ ನೀಡಿ ಸಭೆ ಮುಂದುವರೆಸಿದರು.







