ಮೆಗ್ಗಾನ್ ಸೇವೆ ಉನ್ನತೀಕರಣಕ್ಕೆ ಕ್ರಮ : ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್

ಶಿವಮೊಗ್ಗ : ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಖಾಲಿ ಇರುವ ವೈದ್ಯರ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಆರೋಗ್ಯ ಇಲಾಖೆಗೆ ಮನವಿ ಮಾಡಿದ್ದೇವೆ. ಬಡವರೇ ಹೆಚ್ಚಾಗಿ ಬರುವ ಈ ಆಸ್ಪತ್ರೆಯಲ್ಲಿ ಆರೋಗ್ಯ ಸೇವೆಯನ್ನು ಉನ್ನತೀಕರಿಸಲು ಇಲಾಖೆ ಕ್ರಮ ಕೈಗೊಂಡಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಮತ್ತೊಂದು ಆಸ್ಪತ್ರೆ ನಿರ್ಮಾಣ ಮಾಡುವುದು ಕಷ್ಟವಾಗುತ್ತಿದೆ. ಆರೋಗ್ಯ ಇಲಾಖೆಯಿಂದ ಮತ್ತೊಂದು ಆಸ್ಪತ್ರೆ ನಿರ್ಮಾಣ ಮಾಡಿಕೊಂಡರೆ ಅಡ್ಡಿಯಿಲ್ಲ. ಈಗ ಇರುವ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಲು ಮತ್ತು ಸಿ.ಟಿ., ಎಂ.ಆರ್.ಐ. ಯಂತ್ರಗಳನ್ನು ಹೆಚ್ಚುವರಿಯಾಗಿ ನೀಡಲು ಇಲಾಖೆ ಸಿದ್ಧವಿದೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗುತ್ತದೆ. ಕ್ಯಾನ್ಸರ್ ಆಸ್ಪತ್ರೆ ಕಾಮಗಾರಿಯೂ ನಡೆಯುತ್ತಿದೆ. ಹಂತಹಂತವಾಗಿ ಎಲ್ಲ ಸೇವೆ ನೀಡಲಾಗುವುದು ಎಂದು ಅವರು ಹೇಳಿದರು.
ಸರಕಾರಿ ಆಸ್ಪತ್ರೆಯ ವೈದ್ಯರ ಖಾಸಗಿ ಸೇವೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ವೈದ್ಯರು ಸಂಜೆ ತನಕ ಆಸ್ಪತ್ರೆಯಲ್ಲಿಯೇ ಇರಬೇಕು. ಆ ಬಳಿಕ ಅವರು ಹೋಗಲು ಅವಕಾಶವಿದೆ. ಕೆಲಸದ ವೇಳೆ ಖಾಸಗಿ ಕ್ಲಿನಿಕ್ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮೆಗ್ಗಾನ್‌ನಲ್ಲಿ ಪೇಪರ್ ಲೆಸ್ ಆಡಳಿತ ಮಾಡಲಾಗುತ್ತಿದೆ. ಎಲ್ಲವೂ ಆನ್‌ಲೈನ್‌ನಲ್ಲಿ ನಡೆಯುತ್ತಿರುವ ಕಾರಣ ಪಾರದರ್ಶಕತೆಗೆ ಅವಕಾಶವಾಗಲಿದೆ. ಇಲ್ಲಿಯೂ ಕ್ರಿಟಿಕಲ್ ಕೇರ್ ವಿಭಾಗ ಆರಂಭವಾಗಲಿದೆ ಎಂದು ಶರಣಪ್ರಕಾಶ್ ಪಾಟೀಲ್ ಹೇಳಿದರು.







