ಅಮ್ಜದ್ ಕೊಲೆ ಪ್ರಕರಣ | ಆರೋಪಿ ಕಾಲಿಗೆ ಗುಂಡು ಹೊಡೆದು ಬಂಧಿಸಿದ ಪೊಲೀಸರು

ಆರೋಪಿ
ಶಿವಮೊಗ್ಗ,ಅ.8 : ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಕಾಲಿಗೆ ಪೊಲೀಸರು ಗುಂಡು ಹೊಡೆದ ಘಟನೆ ನಗರದ ಹೊರವಲಯದ ಪುರಲೆ ಬಳಿ ನಡೆದಿದೆ.
ನಗರದಲ್ಲಿ ಇತ್ತೀಚೆಗೆ ನಡೆದ ಅಮ್ಜದ್ ಕೊಲೆ ಪ್ರಕರಣ ಸಂಬಂಧ ರೌಡಿಶೀಟರ್ ಅಕ್ಬರ್(21) ಎಂಬಾತನನ್ನು ಬಂಧಿಸಲು ತೆರಳಿದ್ದಾಗ ಆತ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಕಾರಣ ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದ್ದಾರೆ.
ನ್ಯೂಮಂಡ್ಲಿಯ ನಿವಾಸಿ ಅಕ್ಬರ್ ಮೇಲೆ ಈಗಾಗಲೇ ನಾಲ್ಕಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಅಮ್ಜದ್ ಕೊಲೆ ಪ್ರಕರಣದಲ್ಲಿ ಸಹ ಆತ ಆರೋಪಿಯಾಗಿದ್ದಾನೆ.
ದೊಡ್ಡಪೇಟೆ ಠಾಣೆ ಪಿಎಸ್ಸೈ ಮಂಜುನಾಥ್ ನೇತೃತ್ವದಲ್ಲಿ ಬಂಧಿಸಲು ತೆರಳಿದ್ದಾಗ ಅಕ್ಬರ್ ಪೊಲೀಸ್ ಸಿಬ್ಬಂದಿ ಚಂದ್ರನಾಯ್ಕ್ ಅವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ ಎನ್ನಲಾಗಿದೆ.ಪಿಎಸ್ಸೈ ಮಂಜುನಾಥ್ ಅವರು ಮೊದಲು ಗಾಳಿಯಲ್ಲಿ ಗುಂಡು ಹಾರಿಸಿ ಅಕ್ಬರ್ಗೆ ಶರಣಾಗುವಂತೆ ಸೂಚಿಸಿದ್ದಾರೆ.
ಪಿಎಸ್ಸೈ ಮಾತು ಧಿಕ್ಕರಿಸಿದ ಅಕ್ಬರ್ ಪರಾರಿಯಾಗಲು ಯತ್ನಿಸಿದ್ದಾನೆ. ಆಗ ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ ಎಂದು ತಿಳಿದು ಬಂದಿದೆ.
ಗಾಯಗೊಂಡ ರೌಡಿಶೀಟರ್ ಅಕ್ಬರ್ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸ್ ಸಿಬ್ಬಂದಿ ಚಂದ್ರನಾಯ್ಕ್ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಎನ್.ಎಚ್.ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ಬರ್ ಸೇರಿ ಆರು ಜನರ ಬಂಧನ: ಎಸ್ಪಿ
ಶಿವಮೊಗ್ಗ,ಅ.8: ಅಮ್ಜದ್ ಕೊಲೆ ಪ್ರಕರಣ ಸಂಬಂಧ ಆರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕೆಲ ದಿನಗಳ ಹಿಂದೆ ದೊಡ್ಡಪೇಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಅಮ್ಜದ್ ಕೊಲೆ ಪ್ರಕರಣದಲ್ಲೂ ಅಕ್ಬರ್ ಆರೋಪಿಯಾಗಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಐದು ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನಮ್ಮ ಅಧಿಕಾರಿಗಳು ಅಕ್ಬರ್ಗಾಗಿ ಸಾಕಷ್ಟು ಹುಡುಕಾಟ ನಡೆಸಿದ್ದರು. ಖಚಿತ ಮಾಹಿತಿ ಮೇರೆಗೆ ಆತನನ್ನು ಬಂಧಿಸಲು ತೆರಳಿದಾಗ, ನಮ್ಮ ಸಿಬ್ಬಂದಿ ಮೇಲೆ ಆತ ಹಲ್ಲೆಗೆ ಮುಂದಾಗಿದ್ದಾನೆ. ಪರಿಸ್ಥಿತಿ ಕೈಮೀರುತ್ತಿದ್ದಂತೆ, ಪಿಎಸ್ಸೈ ಮಂಜುನಾಥ್ ಅವರು ಆತ್ಮರಕ್ಷಣೆಗಾಗಿ ರೌಡಿಶೀಟರ್ ಅಕ್ಬರ್ನ ಎಡಗಾಲಿಗೆ ಫೈರ್ ಮಾಡಿ ಬಂಧಿಸಿದ್ದಾರೆ. ಅಕ್ಬರ್ ಒಬ್ಬ ರೌಡಿಶೀಟರ್ ಆಗಿದ್ದು, ಈತನ ಮೇಲೆ ಗಂಭೀರ ಪ್ರಕರಣಗಳಿವೆ. ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ







