ವಿಶೇಷ ಚೇತನ, ಕ್ಯಾನ್ಸರ್ ಬಾಧಿತ ಮಕ್ಕಳ ಆರೈಕೆ, ಶಿಕ್ಷಣಕ್ಕಾಗಿ ಪ್ರತ್ಯೇಕ ಶಾಲೆ : ಮಧು ಬಂಗಾರಪ್ಪ

ಶಿವಮೊಗ್ಗ, ಅ.11: ವಿಶೇಷ ಚೇತನ ಮಕ್ಕಳು ಮತ್ತು ಕ್ಯಾನ್ಸರ್ ಬಾಧಿತ ಮಕ್ಕಳ ಆರೈಕೆ ಹಾಗೂ ಶಿಕ್ಷಣಕ್ಕಾಗಿ ಪ್ರತ್ಯೇಕ ಶಾಲೆಗಳನ್ನು ತೆರೆಯಬೇಕು ಎಂಬುದು ನನ್ನ ಕನಸು. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಇದು ಜಾರಿಯಾಗಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಶನಿವಾರ ಶಿವಮೊಗ್ಗ ಪತ್ರಿಕಾ ಭವನದಲ್ಲಿ ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಆಯೋಜಿಸಿದ್ದ ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಣ ಸಚಿವನಾಗಿ ಕೆಲಸ ಮಾಡಿದ ಸವಿನೆನಪಿಗಾಗಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಇವೆರಡು ಮಾದರಿ ಶಾಲೆಗಳನ್ನು ಆರಂಭಿಸುತ್ತೇನೆ ಎಂದರು. ತೀರ್ಥಹಳ್ಳಿಯಲ್ಲಿ ಶಾಲೆಯೊಂದರಲ್ಲಿ ವಿಶೇಷ ಚೇತನರಿಗೆ ವಿಶೇಷ ಆರೈಕೆ ನೀಡಲಾಗುತ್ತಿದೆ. ಅಲ್ಲಿಗೆ ಹೋದಾಗ ನನಗೆ ಕಣ್ಣೀರು ಬಂತು. ಶಿಕ್ಷಕ ಕುಮಾರ್ ಅವರು ತಮ್ಮ ಜೀವನವನ್ನೇ ಆ ಮಕ್ಕಳಿಗಾಗಿ ಮೀಸಲಿಟ್ಟಿದ್ದಾರೆ. ಇಂತಹ ಮಕ್ಕಳ ಆರೈಕೆಗಾಗಿ ಅಲ್ಲಿ ವಸತಿ ಶಾಲೆ ತೆರೆಯುವ ಉದ್ದೇಶವಿದೆ ಎಂದರು.
ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಶಾಲೆ ತೆರೆಯುವ ಉದ್ದೇಶ ಇದೆ. ಕ್ಯಾನ್ಸರ್ ಗುಣ ಮಾಡಬಹುದಾದ ಕಾಯಿಲೆ. ನಟ ಶಿವರಾಜ ಕುಮಾರ್ ಸೇರಿ ಹಲವರು ಇದಕ್ಕೆ ಉದಾಹರಣೆ. ಇಂತಹ ಮಕ್ಕಳಿಗೆ ಒಂದರಿಂದ ಹತ್ತನೆ ತರಗತಿವರೆಗೆ ವಸತಿ ಶಾಲೆ ನಿರ್ಮಿಸಲಾಗುತ್ತದೆ. ಇದಕ್ಕಾಗಿ ಸರಕಾರೇತರ ಸಂಸ್ಥೆ ಮುಂದೆ ಬಂದಿದೆ. ಕಿದ್ವಾಯಿ ಬಳಿ ಶಾಲೆ ಆರಂಭಿಸಲಾಗುತ್ತದೆ ಎಂದರು.
ಬಡವರ ಮಕ್ಕಳು ಶಿಕ್ಷಣವನ್ನು ಅರ್ಧಕ್ಕೇ ನಿಲ್ಲಿಸಬಾರದೆಂಬ ಕಾರಣಕ್ಕೆ ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿಯ ಪಬ್ಲಿಕ್ ಪರೀಕ್ಷೆಗಳನ್ನು ಮೂರು ಹಂತದಲ್ಲಿ ನಡೆಸಿದ್ದೇವೆ. ಆರಂಭದಲ್ಲಿ ಕೆಲವರು ಟೀಕೆ ಮಾಡಿದ್ದರು. ಆದರೆ ಇದರಿಂದ ಬಡವರ, ಕೂಲಿ ಕಾರ್ಮಿಕರ ಮಕ್ಕಳು ಉನ್ನತ ವ್ಯಾಸಂಗ ಮಾಡಲು ಅನುಕೂಲವಾಯಿತು. ಸರಕಾರಿ ಕಾಲೇಜುಗಳಲ್ಲಿ ಸಿಇಟಿ ತರಬೇತಿ ನೀಡುವಂತಹ ಕ್ರಾಂತಿಕಾರಿ ನಿರ್ಣಯ ಕೈಗೊಂಡು ಬಡವರ ಮಕ್ಕಳು ತಾಂತ್ರಿಕ ಶಿಕ್ಷಣ ಪಡೆಯಲು ನೆರವಾದೆವು. ಹತ್ತನೇ ತರಗತಿಯ ಪೂರಕ ಪರೀಕ್ಷಾ ಶುಲ್ಕವನ್ನೇ ಪಡೆಯದೆ ಅನುಕೂಲ ಮಾಡಿಕೊಡಲಾಯಿತು ಎಂದು ಹೇಳಿದರು.
ಕೆಲವು ಪ್ರದೇಶಗಳಲ್ಲಿ ಪಬ್ಲಿಕ್ ಪರೀಕ್ಷೆಗಳಲ್ಲಿ ನಕಲು ಮಾಡುವ ಆರೋಪ ಇತ್ತು. ಪರೀಕ್ಷಾ ಪದ್ಧತಿಯಲ್ಲಿ ಸಾಕಷ್ಟು ಸುಧಾರಣೆ ತರಲಾಯಿತು. ವೆಬ್‌ಕಾಸ್ಟಿಂಗ್ ವ್ಯವಸ್ಥೆ ಜಾರಿಗೆ ತಂದು ಪರೀಕ್ಷೆಗಳು ಪಾರದರ್ಶಕವಾಗಿ ನಡೆಯುವಂತೆ ಕ್ರಮ ಕೈಗೊಳ್ಳಲಾಗಿದೆ. ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಹಾಗೂ ವಿಕಲಚೇತನ ಮಕ್ಕಳಿಗಾಗಿ ಪ್ರತ್ಯೇಕ ಶಾಲೆ ಆರಂಭಿಸುವ ಬಗ್ಗೆ ಪ್ರಸ್ತಾವ ಸಲ್ಲಿಸಿದ್ದು, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಇದು ಜಾರಿಯಾಗಲಿದೆ ಎಂದು ಮಧು ಬಂಗಾರಪ್ಪ ಹೇಳಿದರು.
ಸಂವಾದದಲ್ಲಿ ಟ್ರಸ್ಟ್ ಅಧ್ಯಕ್ಷರಾದ ಮಂಜುನಾಥ್, ಕಾರ್ಯದರ್ಶಿ ನಾಗರಾಜ್ ನೇರಿಗೆ, ಹೊನ್ನಾಳಿ ಚಂದ್ರಶೇಖರ್ ಉಪಸ್ಥಿತರಿದ್ದರು.







