ಶಿವಮೊಗ್ಗ ಜಿಲ್ಲೆಯ ಮೂವರಿಗೆ ʼರಾಜ್ಯೋತ್ಸವ ಪ್ರಶಸ್ತಿʼ ಗರಿ

ಕೋಣಂದೂರು ಲಿಂಗಪ್ಪ/ರಾಜೇಂದ್ರ ಚೆನ್ನಿ/ಟಾಕಪ್ಪ ಕಣ್ಣೂರು
ಶಿವಮೊಗ್ಗ: ರಾಜ್ಯ ಸರಕಾರವು 2025ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದ್ದು, ಶಿವಮೊಗ್ಗ ಜಿಲ್ಲೆಯ ಮೂವರು ಸಾಧಕರಿಗೆ ಪ್ರಶಸ್ತಿ ದೊರಕಿದೆ.
ಸಮಾಜ ಸೇವೆ ಕ್ಷೇತ್ರದಿಂದ ಹಿರಿಯ ಸಮಾಜವಾದಿ ನಾಯಕರು, ಮಾಜಿ ಶಾಸಕರಾದ ಕೋಣಂದೂರು ಲಿಂಗಪ್ಪ, ಜಾನಪದ ಕ್ಷೇತ್ರದಿಂದ ಹಿರಿಯ ಜಾನಪದ ಕಲಾವಿದ ಟಾಕಪ್ಪ ಕಣ್ಣೂರು ಹಾಗೂ ಸಾಹಿತ್ಯ ಕ್ಷೇತ್ರದಿಂದ ಪ್ರೊ.ರಾಜೇಂದ್ರ ಚೆನ್ನಿ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕೋಣಂದೂರು ಲಿಂಗಪ್ಪ:
ರಾಮಪ್ಪ ಮತ್ತು ಗೌರಮ್ಮ ದಂಪತಿಗಳ ಪುತ್ರನಾಗಿ 1934 -ಫೆಬ್ರವರಿ 24ರಂದು ಜನಿಸಿದರು. ವಿದ್ಯಾರ್ಥಿ ಜೀವನದಲ್ಲೇ ಮೈಸೂರು ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದ ಕೋಣಂದೂರು ಲಿಂಗಪ್ಪ ಅವರು ಕನ್ನಡ ಯುವಜನ ಸಭಾ ಎಂಬ ಸಂಘಟನೆ ಸ್ಥಾಪಿಸಿ ಕನ್ನಡ ಚಳವಳಿಯಲ್ಲಿ ತೊಡಗಿದ್ದರು.
ದೇವರಾಜ ಅರಸು ಅವರ ಉಳುವವನೇ ಭೂಮಿಯ ಒಡೆಯ ಘೋಷವಾಕ್ಯದಡಿ ಭೂ ಸುಧಾರಣೆ ಪರ ಹೋರಾಟ ಮಾಡಿದ್ದರು. ಶಾಂತವೇರಿ ಗೋಪಾಲಗೌಡರ ಗರಡಿಯಲ್ಲಿ ಪಳಗಿದ್ದ ಅವರು ಅದಕ್ಕೂ ಮುನ್ನವೇ ಕಾಗೋಡು ತಿಮ್ಮಪ್ಪ, ಎಸ್. ಬಂಗಾರಪ್ಪ ಅವರ ಜತೆಗೂಡಿ ಗೇಣಿದಾರರ ಪರ ಹೋರಾಟದಲ್ಲಿ ತೊಡಗಿದ್ದರು. 1972ರಿಂದ 78ರವರೆಗೆ ಎರಡು ಅವಧಿಯಲ್ಲಿ ಶಾಸಕರಾಗಿದ್ದ ಲಿಂಗಪ್ಪ ಅವರು ಉತ್ತಮ ಸಂಸದೀಯ ಪಟುವೂ ಆಗಿದ್ದರು. ಹಾವನೂರು ವರದಿ ಜಾರಿಗೆ ಹೋರಾಟ ಮಾಡಿದ್ದರು.
ಪ್ರೊ.ರಾಜೇಂದ್ರ ಚೆನ್ನಿ:
ಪ್ರೊ.ರಾಜೇಂದ್ರ ಚೆನ್ನಿ ಅವರು ಪ್ರಾಧ್ಯಾಪಕರಾಗಿ, ಚಿಂತಕರಾಗಿ ಮತ್ತು ಬರಹಗಾರರಾಗಿ ಹೆಸರಾದವರು. ರಾಜೇಂದ್ರ ಚೆನ್ನಿ ಅವರು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಾಗರಗಾಳಿ ಗ್ರಾಮದವರು. ಇವರು 1955ರ ಅಕ್ಟೋಬರ್ 21ರಂದು ಜನಿಸಿದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ.ಪದವಿ ಹಾಗೂ ಮೈಸೂರು ವಿ.ವಿ.ಯಿಂದ ಪಿಎಚ್.ಡಿ ಪಡೆದರು.
ರಾಜೇಂದ್ರ ಚೆನ್ನಿ ಅವರು ಸಂಡೂರು, ಬೆಳಗಾವಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಹೀಗೆ ವಿವಿಧೆಡೆ ಬೋಧನೆಯ ಸೇವೆ ಸಲ್ಲಿಸಿ, 1981ರಿಂದ 1991ರವರೆಗೆ ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜಿನಲ್ಲಿ ಅಧ್ಯಾಪಕರಾಗಿ, ನಂತರ, ಕುವೆಂಪು ವಿ.ವಿ.ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಹಾಗೂ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ರಾಜೇಂದ್ರ ಚೆನ್ನಿ ಅವರು ಕನ್ನಡ-ಇಂಗ್ಲಿಷ್ ಎರಡೂ ಭಾಷೆಯಲ್ಲಿ ವಿಮರ್ಶೆ, ಲೇಖನ ಹಾಗೂ ಕತೆಗಳನ್ನು ಬರೆಯುತ್ತಲೇ ಜನಪರ ಚಳವಳಿಗಳಲ್ಲಿ ಭಾಗಿಯಾದವರು.
ದೇಶೀವಾದ, ಬೇಂದ್ರೆ ಕಾವ್ಯ ಸಂಪ್ರದಾಯ ಮತ್ತು ಸ್ವಂತಿಕೆ, ಸಾಹಿತ್ಯ ವಿಮರ್ಶೆ (ಸಂಪಾದಿತ ಕೃತಿ-1989), ಮಾಸ್ತಿ ಕತೆಗಳು: ಒಂದು ಅಧ್ಯಯನ, ದೊಡ್ಡ ಮರ (ಕಥಾ ಸಂಕಲನ-1991), ಕರುಳ ಬಳ್ಳಿಯ ಸೊಲ್ಲು, ನಡುಹಗಲಿನಲ್ಲಿ ಕಂದೀಲುಗಳು (ವಿಮರ್ಶೆ -2004), ಅಮೂರ್ತತೆ ಮತ್ತು ಪರಿಸರ (ವಿಮರ್ಶೆ-2003) , ಜಾಗತೀಕರಣ: ಒಂದು ಸಮಗ್ರ ಮಂಥನ (ಎಸ್.ಸಿರಾಜ್ ಅಹಮದ್ ಅವರೊಂದಿಗೆ ಸಂಪಾದಿತ) (2014), ಮಳೆಯಲ್ಲಿ ಬಂದಾತ (ಕಥಾ ಸಂಕಲನ-1999), ಎಂದಿಗೂ ಹೊಸದು, ಲೋಕವಿಮರ್ಶೆ, ಅರಿವಿನ ನೆಲೆಗಳು, ಸದ್ಯದ ಹಂಗು, ಅಸಮಗ್ರ, ಧಾರವಾಡದ ಪಡ್ಡೆ ದಿನಗಳು, ಯಶವಂತ ಚಿತ್ತಾಲರ ಸಾಹಿತ್ಯಲೋಕ (ಸಂಪಾದನೆ), ನಾನು ಕಲಬುರ್ಗಿ (ಸಂಪಾದನೆ ರಹಮತ್ ತರೀಕೆರೆ ಮತ್ತು ಮೀನಾಕ್ಷಿ ಬಾಳಿ ಅವರೊಂದಿಗೆ); ಇಂಗ್ಲಿಷಿನಲ್ಲಿ: ಸ್ಟೀಕಿಂಗ್ ಫಾರ್ ಸಮ್ಒನ್ (ವಿಮರ್ಶೆ- 2004), ಆಫ್ ಮೆನಿ ವಲ್ಡ್9 (ವಿಮರ್ಶೆ- 2007), ಮಡ್ ಟೌನ್ (ಕಾದಂಬರಿ-2007), ಟ್ರೆಡಿಷನ್ಸ್ ಆಫ್ ಮಾಡರ್ನಿಟಿ: ಎ ಕಂಪಾರೇಟೀವ್ ಸ್ಟಡಿಸ್ ಆಫ್ ಟಿ.ಎಸ್. ಎಲಿಯೆಟ್ ಆಂಡ್ ಗೋಪಾಲಕೃಷ್ಣ ಅಡಿಗ, ಸಾಹಿತ್ಯ ಮತ್ತು ಸಿದ್ಧಾಂತಗಳು ಇವರ ಕೃತಿಗಳಲ್ಲಿ ಸೇರಿವೆ.
ಡಾ. ರಾಜೇಂದ್ರ ಚೆನ್ನಿ ಅವರಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಜೀವಮಾನ ಸಾಧನೆ ಪ್ರಶಸ್ತಿ (2012), ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1987 ಮತ್ತು 2003), ಜಿಎಸ್ಎಸ್ ಪ್ರಶಸ್ತಿ (2009), ಬಿಎ ಶ್ರೀಧರ ಪ್ರಶಸ್ತಿ (2012), ವರ್ಧಮಾನ ಉದಯೋನ್ಮುಖ ಪ್ರಶಸ್ತಿ (1992), ಕಾವ್ಯಾನಂದ ಪ್ರಶಸ್ತಿ, ವಿ.ಎಂ.ಇನಾಂದಾರ್ ಪ್ರಶಸ್ತಿ, ದ.ರಾ.ಬೇಂದ್ರೆ ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಹಲವಾರು ಗೌರವಗಳು ಸಂದಿವೆ.
ಟಾಕಪ್ಪ ಕಣ್ಣೂರು:
ಬಿ.ಟಾಕಪ್ಪ ಕಣ್ಣೂರು ಅವರು ಮೂಲತಃ ಡೊಳ್ಳು ಕುಣಿತದ ಕಲಾವಿದರು. 1949 ರ ಸೆಪ್ಟೆಂಬರ್ 4 ರಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕಣ್ಣೂರಿನಲ್ಲಿ ಜನಿಸಿದ ಟಾಕಪ್ಪನವರು 1978 ರಿಂದಲೂ ಜಾನಪದ ಕಲಾವಿದರ ಕೂಟವನ್ನು ಕಟ್ಟಿಕೊಂಡು ಡೊಳ್ಳು ಕುಣಿತದ ಅಭ್ಯಾಸ ಪ್ರಾರಂಭಿಸಿದವರು. ಕಲಾವಿದರಾಗಿ, ಸಂಘಟಕರಾಗಿ, ತರಬೇತುದಾರರಾಗಿ ಸ್ಥಳೀಕದಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ಖ್ಯಾತಿಯನ್ನು ಎತ್ತಿಹಿಡಿದು ಸಾಧನೆಯನ್ನು ಮಾಡಿದವರು.
ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ಸಮಾರಂಭದಲ್ಲಿ, ವೇದಿಕೆಗಳಲ್ಲಿ ಡೊಳ್ಳು ಕುಣಿತವನ್ನು ಪ್ರಸ್ತುತಪಡಿಸಿರುವ ಇವರು ರಷ್ಯಾದ ಭಾರತೋತ್ಸವ, ಇಂಗ್ಲೆಂಡಿನ ಕನ್ನಡ ಸಮ್ಮೇಳನ, ಅಮೇರಿಕಾದ ವಿಶ್ವ ಕನ್ನಡ ಸಮ್ಮೇಳನಗಳಲ್ಲಿ ಭಾಗವಹಿಸಿ ಪ್ರದರ್ಶನ ನೀಡುವ ಮೂಲಕ ನೆಲದ ಸೊಗಡಾದ ಡೊಳ್ಳು ಕುಣಿತವನ್ನು ಅಂತರಾಷ್ಟ್ರೀಯವಾಗಿ ಪ್ರಚುರಪಡಿಸಿದ್ದಾರೆ.
ಇದಲ್ಲದೆ 56ಕ್ಕೂ ಹೆಚ್ಚು ರಾಷ್ಟ್ರಮಟ್ಟದ ಕಾರ್ಯಕ್ರಮಗಳಲ್ಲೂ ತಮ್ಮ ತಂಡದೊಂದಿಗೆ ಡೊಳ್ಳು ಪ್ರದರ್ಶನಗಳನ್ನು ನೀಡಿದ ದಾಖಲೆಯೂ ಟಾಕಪ್ಪ ಅವರ ಬೆನ್ನಿಗಿದೆ.







