ಕಸ್ತೂರಿ ರಂಗನ್ ವರದಿಗೆ ವಿರೋಧ; ಆವಿನಹಳ್ಳಿಯಿಂದ ಸಾಗರದವರೆಗೆ ಬೃಹತ್ ಪಾದಯಾತ್ರೆ

ಸಾಗರ : ಕೇಂದ್ರ ಸರಕಾರ ಹೊರಡಿಸಿರುವ ಕಸ್ತೂರಿ ರಂಗನ್ ವರದಿಯ 7ನೇ ಕರಡು ಅಧಿಸೂಚನೆ ವಿರೋಧಿಸಿ ಗುರುವಾರ ಪಶ್ಚಿಮಘಟ್ಟ ರೈತ ಸಹಕಾರಿ ವೇದಿಕೆ ವತಿಯಿಂದ ಆವಿನಹಳ್ಳಿಯಿಂದ ಸಾಗರದವರೆಗೆ 11 ಕಿ.ಮೀ. ಬೃಹತ್ ಪಾದಯಾತ್ರೆ ನಡೆಯಿತು.
ನಗರಸಭೆ ರಂಗಮಂದಿರದಲ್ಲಿ ನಡೆದ ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು, ಮಲೆನಾಡು ರೈತರಿಗೆ ಮರಣ ಶಾಸನವಾಗಲಿರುವ ಕಸ್ತೂರಿ ರಂಗನ್ ವರದಿ ಯಾವುದೇ ಕಾರಣಕ್ಕೂ ಜಾರಿಯಾಗಲು ಬಿಡಬಾರದು. ಮಲೆನಾಡು ಭಾಗದ ರೈತರು ಅರಣ್ಯ ಇಲಾಖೆಯ ಕಠಿಣ ಕಾನೂನು, ಕೊಳೆರೋಗ, ಎಲೆಚುಕ್ಕಿ ರೋಗ, ಕಾಡು ಪ್ರಾಣಿಗಳ ಹಾವಳಿ ಇನ್ನಿತರೆಗಳಿಂದ ಸತ್ತು ಬದುಕುತ್ತಿದ್ದಾರೆ. ಇದೀಗ ಕಸ್ತೂರಿ ರಂಗನ್ ವರದಿ ಜಾರಿಗೆ ಬಂದರೆ ಇನ್ನಷ್ಟು ಸಂಕಷ್ಟಕ್ಕೆ ಸಿಲುಕುತ್ತಾರೆ. ಸೆಟ್‌ಲೈಟ್ ಮೂಲಕ ಸರ್ವೇ ಮಾಡಿ ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಿರುವುದೇ ಅವೈಜ್ಞಾನಿಕವಾಗಿದೆ. ಗ್ರಾಮಗಳಿಗೆ ಖುದ್ದು ಭೇಟಿ ನೀಡಿದ್ದರೆ ಮಲೆನಾಡು ಜನರ ಪರಿಸ್ಥಿತಿ ವಿಜ್ಞಾನಿಗಳಿಗೆ ತಿಳಿಯುತಿತ್ತು ಎಂದು ತಿಳಿಸಿದರು.
ಈಗಾಗಲೆ ರಾಜ್ಯ ಸರಕಾರ ಕಸ್ತೂರಿ ರಂಗನ್ ವರದಿ ತಿರಸ್ಕರಿಸುವ ಅಗತ್ಯ ಸಿದ್ದತೆ ಮಾಡಿಕೊಂಡಿದೆ. ಸದ್ಯದಲ್ಲಿ ವಿಶೇಷ ಅಧಿವೇಶನ ಕರೆದು ಕಸ್ತೂರಿ ರಂಗನ್ ವರದಿ ವಿರುದ್ಧ ನಿರ್ಣಯ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ವರದಿ ವಜಾಗೊಳಿಸುವ ತನಕ ನಮ್ಮ ಹೋರಾಟ ನಿಲ್ಲುವುದಿಲ್ಲ. ಈಗಾಗಲೆ ಬೇಸೂರು ಅಣು ವಿದ್ಯುತ್ ಸ್ಥಾವರ ವಿರುದ್ಧದ ನಮ್ಮ ಹೋರಾಟ ಯಶಸ್ವಿಯಾಗಿದೆ. ಶೀಘ್ರದಲ್ಲಿಯೆ ರದ್ದುಗೊಳಿಸಿದ ವರದಿಯನ್ನು ಬಿಡುಗಡೆ ಮಾಡುತ್ತೇವೆ ಎಂದರು.
ಮಾಜಿ ಸಚಿವ ಹರತಾಳು ಹಾಲಪ್ಪಮಾತನಾಡಿ, ಕಳೆದ 16 ವರ್ಷಗಳಿಂದ ಮಲೆನಾಡು ಭಾಗದ ಜನರ ನೆತ್ತಿಯ ಮೇಲೆ ಕಸ್ತೂರಿ ರಂಗನ್ ತೂಗು ಕತ್ತಿ ಇದೆ. ಮಲೆನಾಡಿನಲ್ಲಿ ಅರಣ್ಯ ಉಳಿಸಿದ್ದು ಸರಕಾರ ಅಥವಾ ಅರಣ್ಯ ಇಲಾಖೆಯಲ್ಲ. ಜನರು ಸ್ವಯಂ ಪ್ರೇರಣೆಯಿಂದ ಅರಣ್ಯ ಉಳಿಸಿದ್ದಾರೆ. ಬೇರೆಬೇರೆ ಯೋಜನೆಗಳಿಂದ ಮಲೆನಾಡು ಭಾಗದ ರೈತರ ಸಂಕಷ್ಟದಲ್ಲಿದ್ದಾರೆ. ಇಂತಹ ಹೊತ್ತಿನಲ್ಲಿ ಕಸ್ತೂರಿ ರಂಗನ್ 7ನೇ ಅಧಿಸೂಚನೆ ಇನ್ನಷ್ಟು ಆತಂಕ ಸೃಷ್ಟಿಸುತ್ತಿದೆ. ಮುಖ್ಯಮಂತ್ರಿ ಅವರು ಇದಕ್ಕಾಗಿ ವಿಶೇಷ ಅಧಿವೇಶನ ಕರೆಯುತ್ತಿರುವುದನ್ನು ನಾವು ಸ್ವಾಗತಿಸುತ್ತೇವೆ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಮಾತನಾಡಿ, ಕಸ್ತೂರಿ ರಂಗನ್ ವರದಿ ವಿರೋಧಿಸಿ ಜನರ ಚಳುವಳಿ ಪ್ರಾರಂಭವಾಗಿದೆ. ನಮ್ಮ ಕಾಡನ್ನು ಸರಕಾರ ಅಕೇಶಿಯಾ, ನೀಲಗಿರಿ ಇನ್ನಿತರ ಏಕಜಾತಿ ಸಸ್ಯಗಳನ್ನು ಬೆಳೆಸಿ ಹಾಳು ಮಾಡಿದೆಯೆ ವಿನಃ ನಾವು ಅದನ್ನು ರಕ್ಷಣೆ ಮಾಡಿಕೊಂಡು ಬಂದವರು. ನಮ್ಮ ಸಂಸ್ಕೃತಿಗೆ ಧಕ್ಕೆ ತರುವ ಇಂತಹ ವರದಿಗಳು ಯಾವುದೇ ಕಾರಣಕ್ಕೂ ಅನುಪ್ಠಾನಕ್ಕೆ ಬರಲು ಬಿಡಬಾರದು. ಈ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಬೃಹತ್ ಹೋರಾಟ ರೂಪಿಸಿ, ಅಲ್ಲಿಗೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುತ್ತದೆ ಎಂದು ಹೇಳಿದರು.
ಶಿಮುಲ್ ಅಧ್ಯಕ್ಷ ವಿದ್ಯಾಧರ, ವೇದಿಕೆ ಸಂಚಾಲಕ ಬಿ.ಆರ್.ಜಯಂತ್ ಮಾತನಾಡಿದರು.
ಇದೇ ವೇಳೆ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಸಾರ್ವಜನಿಕರು ಹಾಗೂ ರೈತರು ಸುಲಭವಾಗಿ ಆಕ್ಷೇಪ ಸಲ್ಲಿಸುವ ನಿಟ್ಟಿನಲ್ಲಿ ರಚಿಸಲಾದ ವೆಬ್ ಸೈಟ್ ರೂವಾರಿ ತಸ್ರೀಫ್ ಇಬ್ರಾಹಿಂ ಅವರನ್ನು ಶ್ಲಾಘಿಸಲಾಯಿತು.
ಈ ಸಂದರ್ಭ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಬಿ.ಎ.ಇಂದೂಧರ ಬೇಸೂರು, ತಸ್ರೀಫ್ ಇಬ್ರಾಹಿಂ,ಚೇತನರಾಜ್ ಕಣ್ಣೂರು, ಸಿಗಂದೂರು ರವಿಕುಮಾರ್, ರವಿ ಲಿಂಗನಮಕ್ಕಿ, ಪ್ರಸನ್ನ ಕೆರೆಕೈ, ಗಿರೀಶ್ ಕೋವಿ, ಅನ್ವರ್ ಭಾಷಾ, ಆನಂದ ಭೀಮನೇರಿ, ಮಹಾಬಲ ಕೌತಿ ಉಪಸ್ಥಿತರಿದ್ದರು.






