ಶಿವಮೊಗ್ಗ | ಯುವಕನ ಮೇಲೆ ಹಲ್ಲೆ ಪ್ರಕರಣ; ಮೂವರು ಆರೋಪಿಗಳ ಬಂಧನ

ಸಾಂದರ್ಭಿಕ ಚಿತ್ರ | PC : freepik
ಶಿವಮೊಗ್ಗ : ನಗರದ ಆರ್ಎಂಎಲ್ ನಗರದ ಮಾರ್ನಮಿಬೈಲ್ನಲ್ಲಿ ಯುವಕನ ಮೇಲೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ದೊಡ್ಡಪೇಟೆ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬುದ್ದನಗರದ ನಿವಾಸಿ ಅರ್ಮಾನ್ (21), ಸಿಗೇಹಟ್ಟಿ ಬಡಾವಣೆ ನಿವಾಸಿ ನಿರಂಜನ್ (20) ಮತ್ತು 17 ವರ್ಷದ ಬಾಲಕ ಬಂಧಿತ ಆರೋಪಿಗಳಾಗಿದ್ದಾರೆ.
ಹರೀಶ್ (35) ಮೇಲೆ ನಡೆದಿದ್ದ ಹಲ್ಲೆ ಪ್ರಕರಣವು ರಾಜಕೀಯ ತಿರುವು ಪಡೆದುಕೊಂಡಿತ್ತು.ಒಂದು ಸಮುದಾಯದವರು ಹಲ್ಲೆ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಶಾಸಕ ಚನ್ನಬಸಪ್ಪಅವರು ದೊಡ್ಡಪೇಟೆ ಠಾಣೆಗೆ ಭೇಟಿ ನೀಡಿ ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಮತ್ತೊಂದೆಡೆ, ರಾಷ್ಟ್ರಭಕ್ತರ ಬಳಗ ಸಂಘಟನೆ ಕೂಡ ಎಸ್ಪಿಯನ್ನು ಭೇಟಿ ಮಾಡಿ ಆರೋಪಿಗಳ ಬಂಧನಕ್ಕೆ ಆಗ್ರಹಿಸಿತ್ತು.
ಹರೀಶ್ ಮೇಲೆ ನಡೆದಿದ್ದ ಹಲ್ಲೆಯ ಸಿಸಿ ಕ್ಯಾಮರಾ ದೃಶ್ಯಾವಳಿ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ನಡುವೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಗುರಾಯಿಸಿ ನೋಡಿದ್ದೇ ಹಲ್ಲೆಗೆ ಕಾರಣ ಎಂದು ಬಂಧಿತ ಆರೋಪಿಗಳು ಪೊಲೀಸ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.





