ಶಿವಮೊಗ್ಗ | ಶಿಮುಲ್ ಡೇರಿ ಬಳಿ ಮತ್ತೆ ಭೂಕುಸಿತ; ವಾಹನ ಸಂಚಾರ ಅಸ್ತವ್ಯಸ್ತ

ಶಿವಮೊಗ್ಗ: ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕುಂಟುತ್ತಾ ಸಾಗುತ್ತಿರುವ ನಡುವೆಯೇ, ಮಾಚೇನಹಳ್ಳಿ ಶಿಮುಲ್ ಡೇರಿ ಬಳಿ ನಿರ್ಮಾಣವಾಗುತ್ತಿರುವ ಅಂಡರ್‌ಪಾಸ್ ಕಾಮಗಾರಿಯಲ್ಲಿ ಮತ್ತೊಮ್ಮೆ ಭೂಕುಸಿತ ಸಂಭವಿಸಿದ್ದು, ವಾಹನ ಸಂಚಾರ ತೀವ್ರ ಅಸ್ತವ್ಯಸ್ತಗೊಂಡಿದೆ.
ಈ ಭಾಗದಲ್ಲಿ ಒಂದು ಕಡೆ ಮಾತ್ರ ಸರ್ವೀಸ್ ರಸ್ತೆ ಲಭ್ಯವಿದ್ದು, ಅದೇ ಸ್ಥಳದಲ್ಲಿ ಮತ್ತೆ ಭೂಕುಸಿತ ಉಂಟಾಗಿದೆ. ಇನ್ನೊಂದು ಕಡೆ ಸರ್ವೀಸ್ ರಸ್ತೆಗೆ ಸಂಬಂಧಿಸಿದ ಭೂಸ್ವಾಧೀನ ಪ್ರಕ್ರಿಯೆ ವಿಳಂಬಗೊಂಡಿರುವುದರಿಂದ ಆ ಮಾರ್ಗ ಇನ್ನೂ ಸಂಚಾರಕ್ಕೆ ತೆರೆಯಲಾಗಿಲ್ಲ. ಅಪೂರ್ಣ ಕಾಮಗಾರಿಯ ನಡುವೆಯೇ ಕೆಲಸ ಮುಂದುವರಿಸಿರುವುದೇ ಈ ಸಮಸ್ಯೆಗೆ ಕಾರಣವಾಗಿದೆ ಎಂದು ಆರೋಪಿಸಲಾಗಿದೆ.
ಶಿವಮೊಗ್ಗ–ಬೆಂಗಳೂರು ಮಾರ್ಗದ ಬಹುತೇಕ ವಾಹನಗಳು ಇದೇ ರಸ್ತೆಯನ್ನು ಅವಲಂಬಿಸಿರುವುದರಿಂದ ಇಲ್ಲಿ ವಾಹನ ದಟ್ಟಣೆ ಹೆಚ್ಚಿದ್ದು, ಅಂಡರ್‌ಪಾಸ್ ಬಳಿ ಮುಂದೆ ಸಾಗಲಾಗದೆ, ಹಿಂದೆ ತಿರುಗಲಾಗದೆ ವಾಹನ ಸವಾರರು ಪರದಾಡುವಂತಾಗಿದೆ. ನಾಲ್ಕು ವರ್ಷಗಳ ಹಿಂದೆ ಆರಂಭಗೊಂಡ ಅಂಡರ್‌ಪಾಸ್ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಮುಂದಿನ ಮಳೆಗಾಲದೊಳಗೂ ಕಾಮಗಾರಿ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.
ಈಗಾಗಲೇ ಒಮ್ಮೆ ಭೂಕುಸಿತ ಸಂಭವಿಸಿದ್ದ ಸ್ಥಳದಲ್ಲಿ ಕಲ್ಲು–ಮಣ್ಣು ತುಂಬಿ ತಾತ್ಕಾಲಿಕವಾಗಿ ಬಿಗಿಗೊಳಿಸಲಾಗಿತ್ತು. ಇದೀಗ ಮತ್ತೆ ಭೂಕುಸಿತ ಉಂಟಾಗಿರುವುದರಿಂದ ದೊಡ್ಡ ವಾಹನಗಳು ಬಂದರೆ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ನಾಲ್ಕು ವರ್ಷಗಳಿಂದ ವಿಳಂಬವಾಗುತ್ತಿರುವ ಕಾಮಗಾರಿಯಿಂದ ಬೇಸತ್ತ ಸಾರ್ವಜನಿಕರು ಗುತ್ತಿಗೆದಾರರು ಹಾಗೂ ಸಂಬಂಧಪಟ್ಟ ಇಲಾಖೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.







