ಶಿವಮೊಗ್ಗ ದಸರಾ ಅವಘಡ ಹಿನ್ನೆಲೆ: ಇಂದಿನಿಂದ 4 ದಿನ ಪ್ರಾಯಶ್ಚಿತ್ತಾದಿ ಧಾರ್ಮಿಕ ಅನುಷ್ಠಾನ

ಶಿವಮೊಗ್ಗ: ಕಳೆದ ವಿಜಯದಶಮಿಯಂದು ಶಿವಮೊಗ್ಗ ದಸರಾ ಅಂಬಾರಿ ಮೆರವಣಿಗೆಯ ಸಂದರ್ಭದಲ್ಲಿ ನಡೆದ ಅವಘಡದ ಹಿನ್ನೆಲೆಯಲ್ಲಿ ನ.3ರಿಂದ ನಾಲ್ಕು ದಿನಗಳ ಕಾಲ ಪ್ರಾಯಶ್ಚಿತ್ತಾದಿ ಧಾರ್ಮಿಕ ಅನುಷ್ಠಾನಗಳನ್ನು ನಡೆಸಲಾಗುತ್ತಿದೆ.
ನಗರದ ಕೋಟೆ ರಸ್ತೆಯಲ್ಲಿರುವ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಈ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟನೆ ತಿಳಿಸಿದೆ.
ನ.3ರ ಬೆಳಗ್ಗೆ 9 ಗಂಟೆಗೆ ಮಹಾಗಣಪತಿ ಪೂಜೆ, ಮಹಾಸಂಕಲ್ಪ, ಪುಣ್ಯಾಹವಾಚನ, ಋತ್ವಿಗ್ವರಣೆ, ಕೂಷ್ಮಾಂಡಪ್ರಾಯಶ್ಚಿತ್ತ ಹೋಮ, ಷಣ್ಣಾರಿಕೇಲ ಅಷ್ಟದ್ರವ್ಯ ಮಹಾಗಣಪತಿ ಹೋಮ, ಮಧ್ಯಾಹ್ನ 1 ಕ್ಕೆ ಪೂರ್ಣಾಹುತಿ ಬಳಿಕ ಪ್ರಸಾದ ವಿನಿಯೋಗವಿರುತ್ತದೆ. ಸಂಜೆ 5:30ಕ್ಕೆ ದಶಾವರ್ತನ ಚಂಡಿಕಾ ಪಾರಾಯಣ ನಡೆಯಲಿದೆ.
ನ.4ರ ಬೆಳಗ್ಗೆ 9ಕ್ಕೆ ಗುರು ಗಣಪತಿ ಪ್ರಾರ್ಥನೆ, ಸಂಕಲ್ಪ, ನವಚಂಡಿಕಾಹೋಮ, ಮಧ್ಯಾಹ್ನ 1ಕ್ಕೆ ಪೂರ್ಣಾಹುತಿ ನಡೆಯಲಿದೆ.
ನ.5ರ ಬೆಳಗ್ಗೆ 9:30ಕ್ಕೆ ಗುರು ಗಣಪತಿ ಪ್ರಾರ್ಥನೆ, ಸಂಕಲ್ಪ, ರಾಕ್ಷೋಘ್ನ ಅಘೋರಾಸ್ತ್ರ ಮಂತ್ರ ಜಪ. ಪ್ರಸಾದ ವಿನಿಯೋಗವಿದೆ. ಸಂಜೆ 7ಕ್ಕೆ ವಾಸ್ತು ರಾಕ್ಷೋಘ್ನ ಅಘೋರಾಸ್ತ್ರ ಹೋಮ ರಾತ್ರಿ 9ಕ್ಕೆ ಪೂರ್ಣಾಹುತಿ ಇರುತ್ತದೆ.
ನ.6ರ ಬೆಳಗ್ಗೆ 9:30ಕ್ಕೆ ಗುರು ಗಣಪತಿ ಪ್ರಾರ್ಥನೆ, ಸಂಕಲ್ಪ, ದುರ್ಗಾಸೂಕ್ತ ಜಪಹೋಮ, ಮಧ್ಯಾನ್ಹ 1ಕ್ಕೆ ಪೂರ್ಣಾಹುತಿ ನಡೆಯಲಿವೆ ಎಂದು ಪ್ರಕಟನೆ ತಿಳಿಸಿದೆ.






