ಶರಾವತಿ ಪಂಪ್ಡ್ ಸ್ಟೋರೇಜ್ ಕಾಮಗಾರಿ | ರೈತರ ಒಪ್ಪಿಗೆ, 8.32 ಎಕರೆ ಭೂಮಿ ಸ್ವಾಧೀನ : ಶಾಸಕ ಗೋಪಾಲಕೃಷ್ಣ

ಸಾಗರ : ಶರಾವತಿ ಪಂಪ್ಡ್ ಸ್ಟೋರೇಜ್ ಕಾಮಗಾರಿಗೆ ಸ್ಥಳೀಯ ರೈತರು ಒಪ್ಪಿಕೊಂಡಿದ್ದು, ಭೂಮಿ ಬಿಟ್ಟುಕೊಡಲು ಒಪ್ಪಿದ್ದಾರೆ. ಪಂಪ್ಡ್ ಸ್ಟೋರೇಜ್‌ಗಾಗಿ ರೈತರ 8.32 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗುತ್ತದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ.
ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಶರಾವತಿ ಅಂತರ್ಗತ ಭೂ ವಿದ್ಯುತ್ ಯೋಜನೆ ವ್ಯಾಪ್ತಿಗೆ ಬರುವ ಹೆನ್ನಿ ಭಾಗದ ರೈತರ ಸಭೆಯ ಅಧ್ಯಕ್ಷತೆ ವಹಿಸಿ ರೈತರ ಅಹವಾಲು ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಪಂಪ್ಡ್ ಸ್ಟೋರೇಜ್‌ನಿಂದ ದೊಡ್ಡ ಪ್ರಮಾಣದ ಕಾಡು ನಾಶವಾಗುತ್ತದೆ ಎನ್ನುವ ಸುಳ್ಳು ಸುದ್ದಿಯನ್ನು ಹಬ್ಬಿಸಲಾಗುತ್ತಿದೆ. ವಾಸ್ತವದಲ್ಲಿ 11 ರೈತ ಕುಟುಂಬಗಳ 8.32 ಎಕರೆ ಕೃಷಿಭೂಮಿ ಜೊತೆಗೆ 54 ಹೆಕ್ಟೇರ್ ಅರಣ್ಯಭೂಮಿಯನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಲಾಗುತ್ತದೆ. ರೈತರು ಸಭೆಯಲ್ಲಿ ತಮ್ಮ ಬೇಡಿಕೆಗಳನ್ನು ಮಂಡಿಸಿದ್ದಾರೆ. ರೈತರ ಪರವಾಗಿ ನಾವಿದ್ದೇವೆ. ಸುಮಾರು 2 ಸಾವಿರ ಮೆ.ವ್ಯಾ. ವಿದ್ಯುತ್ ಯೋಜನೆಯಡಿ ಅಣೆಕಟ್ಟು ನಿರ್ಮಿಸದೆ ಉತ್ಪಾದನೆ ಮಾಡುವ ಅಪರೂಪದ ಯೋಜನೆ ಇದಾಗಿದೆ ಎಂದು ಶಾಸಕರು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ಪಂಪ್ಡ್ ಸ್ಟೋರೇಜ್‌ಗೆ ಸಂಬಂಧಪಟ್ಟಂತೆ ಸ್ಥಾನಿಕ ರೈತರ ಜೊತೆ ಸಭೆ ನಡೆಸಲಾಗಿದೆ. ಕಾನೂನು ಪ್ರಕಾರವೇ ಎಲ್ಲ ಚಟುವಟಿಕೆ ನಡೆಯುತ್ತಿದ್ದು, ಪರಿಸರ ನಾಶ ತಪ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ರೈತರು ತಮ್ಮ ಸಮಸ್ಯೆ ಹಾಗೂ ಬೇಡಿಕೆಗಳನ್ನು ಸಲ್ಲಿಸಿದ್ದಾರೆ. ಅದಕ್ಕೆ ಪೂರಕವಾಗಿ ಸ್ಪಂದಿಸುತ್ತೇವೆ. ಜಿಲ್ಲಾ ಮತ್ತು ತಾಲೂಕು ಆಡಳಿತದಿಂದ ರೈತರಿಗೆ ಎಲ್ಲ ರೀತಿಯ ಸಹಾಯ ನೀಡಲಾಗುತ್ತದೆ. ರೈತರಿಗೆ ಪರ್ಯಾಯ ಭೂಮಿ ಕೊಡುವ ಜೊತೆಗೆ ಉದ್ಯೋಗ ನೀಡುವ ಬಗ್ಗೆಯೂ ಗಮನ ಹರಿಸಲಾಗುತ್ತದೆ ಎಂದರು.
ಸಭೆಯಲ್ಲಿ ಪ್ರೊಬೇಷನರಿ ಜಿಲ್ಲಾಧಿಕಾರಿ ನಾಗೇಂದ್ರ ಕುಮಾರ್, ಉಪವಿಭಾಗಾಧಿಕಾರಿ ವಿರೇಶ್ ಕುಮಾರ್, ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್, ಅರಣ್ಯ ಇಲಾಖೆಯ ರವಿಕುಮಾರ್ ಇತರರು ಉಪಸ್ಥಿತರಿದ್ದರು.
‘ಪರಿಸರ ವಿರೋಧಿ ಯೋಜನೆ’
ಶರಾವತಿ ಪಂಪ್ಡ್ ಸ್ಟೋರೇಜ್ ಪರಿಸರ ವಿರೋಧಿ ಯೋಜನೆಯಾಗಿದೆ. ಯಾವುದೇ ಕಾರಣಕ್ಕೂ ಯೋಜನೆ ಅನುಷ್ಠಾನ ಸಲ್ಲದು ಎಂದು ಪರಿಸರವಾದಿ ಅಖಿಲೇಶ್ ಚಿಪ್ಳಿ ಒತ್ತಾಯಿಸಿದ್ದಾರೆ.
ಸಭೆ ನಡೆಯುವುದಕ್ಕೆ ಮೊದಲು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಸ್ಥಳಕ್ಕೆ ಬಂದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಯೋಜನೆ ದೊಡ್ಡ ಭ್ರಷ್ಟಾಚಾರದಿಂದ ಕೂಡಿದೆ. ರಾಜ್ಯದ ಜನರ ತೆರಿಗೆ ಹಣ ಅಪವ್ಯಯವಾಗುತ್ತದೆ. ವಿದ್ಯುತ್ ಉತ್ಪಾದನೆಗೆ ಬೇರೆಬೇರೆ ಮಾರ್ಗವಿದೆ. ಆದರೆ, ಹಣ ಹೊಡೆಯಲಿಕ್ಕಾಗಿಯೇ ಈ ಯೋಜನೆ ಅನುಷ್ಠಾನಕ್ಕೆ ತೆಗೆದುಕೊಂಡಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ. ಕೇಂದ್ರ ಸರಕಾರದ ಯಾವ ಇಲಾಖೆಯ ಅನುಮತಿಯೂ ಈತನಕ ಯೋಜನೆಗೆ ಸಿಕ್ಕಿಲ್ಲ. ಯೋಜನೆ ಹೆಸರಿನಲ್ಲಿ ರೈತರನ್ನು ನಿರ್ದಯವಾಗಿ ಒಕ್ಕಲೆಬ್ಬಿಸುವ ಪ್ರಯತ್ನ ನಡೆಸಲಾಗುತ್ತಿದೆ. ಯೋಜನೆ ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ತಿಳಿಸಿದರು.
ಸುಮಾರು 8,644 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಮುಂದಿನ ಪೀಳಿಗೆ ವಿದ್ಯುತ್ ಸಮಸ್ಯೆ ಅನುಭವಿಸಬಾರದು ಎನ್ನುವ ಉದ್ದೇಶದಿಂದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಇಂಧನ ಸಚಿವ ಕೆ.ಜೆ.ಜಾರ್ಜ್ ಯೋಜನೆ ಮಂಜೂರು ಮಾಡಿದ್ದಾರೆ. ಅರಣ್ಯ ನಾಶವಾದರೆ ಅದಕ್ಕೆ ಪರ್ಯಾಯ ಅರಣ್ಯ ಬೆಳೆಸುವ ನಿಟ್ಟಿನಲ್ಲಿ ಗಮನ ಹರಿಸಲಾಗಿದೆ. ಹೆದ್ದಾರಿ ಸೇರಿದಂತೆ ಬೇರೆಬೇರೆ ಯೋಜನೆ ಸಂದರ್ಭದಲ್ಲಿ ಅಲ್ಪಸ್ವಲ್ಪ ಅರಣ್ಯ ನಾಶವಾಗುತ್ತದೆ. ಅಂದಮಾತ್ರಕ್ಕೆ ಉತ್ತಮ ಯೋಜನೆ ಕೈಬಿಡಲು ಸಾಧ್ಯವಿಲ್ಲ. ಭೂಮಿ ಬಿಟ್ಟುಕೊಡುವ ರೈತರಿಗೆ ಸೂಕ್ತ ಪರಿಹಾರದ ಜೊತೆಗೆ ಕುಟುಂಬಕ್ಕೊಂದು ಉದ್ಯೋಗವನ್ನು ಕೊಡುವ ಭರವಸೆ ನೀಡಿದ್ದೇವೆ. ಅತಿ ಶೀಘ್ರದಲ್ಲಿ ಯೋಜನೆ ಅನುಷ್ಠಾನಕ್ಕೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ.
ಗೋಪಾಲಕೃಷ್ಣ ಬೇಳೂರು, ಶಾಸಕ







