ಬಳ್ಳಾರಿ ಗುಂಪು ಘರ್ಷಣೆ| ಕಾನೂನು ಕೈಗೆತ್ತಿಕೊಂಡವರಿಗೆ ಶಿಕ್ಷೆಯಾಗಲಿ: ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ(ಜ.2):ಬಳ್ಳಾರಿಯಲ್ಲಿ ನಡೆದ ಗಲಾಟೆ ವಿಚಾರದಲ್ಲಿ ಯಾರು ಕಾನೂನು ಕೈಗೆ ತೆಗೆದುಕೊಂಡಿದ್ದಾರೋ ಅವರಿಗೆ ಶಿಕ್ಷೆಯಾಗಲಿ ಎಂದು ಸಚಿವ ಮಧುಬಂಗಾರಪ್ಪ ಹೇಳಿದರು.
ಬಳ್ಳಾರಿಯಲ್ಲಿ ನಡೆದ ಗಲಾಟೆ ವಿಚಾರವಾಗಿ ಶಿವಮೊಗ್ಗದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ಮಧುಬಂಗಾರಪ್ಪ, ಬಳ್ಳಾರಿಯಲ್ಲಿ ನಡೆದ ಘಟನೆಯ ಬಗ್ಗೆ ಮಾಧ್ಯಮದಲ್ಲಿ ನೋಡಿದೆ. ನನಗೂ ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಬ್ಯಾನರ್ ಕಟೌಟ್ ವಿಚಾರದಲ್ಲಿ ಜಗಳವಾಗಿ ಕಾಂಗ್ರೆಸ್ ಕಾರ್ಯಕರ್ತನೋರ್ವ ಮೃತಪಟ್ಟಿದ್ದಾನೆ ಎಂದು ಮಾಧ್ಯಮದಲ್ಲಿ ಸುದ್ದಿ ಪ್ರಸಾರವಾಗುತ್ತಿದೆ. ಯಾರೇ ಆದರೂ ಈ ಹಂತಕ್ಕೆ ಹೋಗಬಾರದು. ನಾನು ಯಾರನ್ನು ದೂರಲು ಹೋಗುವುದಿಲ್ಲ. ಈ ವಿಚಾರದಲ್ಲಿ ಯಾರು ಕಾನೂನು ಕೈ ತೆಗೆದುಕೊಂಡಿದ್ದಾರೋ ಅವರಿಗೆ ಶಿಕ್ಷೆಯಾಗಬೇಕು ಎಂದು ಹೇಳಿದರು.
ಯಾವಾಗಲೂ ನ್ಯಾಯ ಗೆಲ್ಲಬೇಕು. ಅಮಾಯಕರಿಗೆ ತೊಂದರೆಯಾಗಬಾರದು. ಹೀಗಾದಾಗ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗುತ್ತದೆ. ಈ ಬಗ್ಗೆ ಬಹಳ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು. ಈ ಸಂದರ್ಭದಲ್ಲಿ ನಾನು ಏನೇ ಹೇಳಿದರೂ ತಪ್ಪಾಗಲಿದೆ ಎಂದರು.
ಕೋಗಿಲು ಬಡಾವಣೆಯಲ್ಲಿ ಅಕ್ರಮ ವಲಸಿಗರಿಗೆ ಮನೆ ಹಂಚಿಕೆ ವಿಚಾರವಾಗಿ ಪ್ರತಿಕ್ರಿಯಿಸಿ,ಅವರು ಯಾವ ದೇಶದವರು, ರಾಜ್ಯದವರು ಆಗಿರಲಿ. ಕಾನೂನಿನಲ್ಲಿ ಅವಕಾಶ ಇದ್ದರೆ ಅರ್ಹತೆ ಇದ್ದರೆ ಕೊಡಬಹುದು. ಈಗಾಗಲೇ ಸಿಎಂ, ಡಿಸಿಎಂ ಈ ವಿಚಾರದಲ್ಲಿ ಮಾತನಾಡಿದ್ದಾರೆ. ಈ ಬಗ್ಗೆ ಸಿಎಂ ತೀರ್ಮಾನ ಮಾಡುತ್ತಾರೆ ಎಂದರು.







