ಮೋದಿಯವರು ರಾಜೀನಾಮೆ ನೀಡಿದರೆ, ನಿತಿನ್ ಗಡ್ಕರಿ ಪ್ರಧಾನಿಯಾಗಲಿ : ಬೇಳೂರು ಗೋಪಾಲಕೃಷ್ಣ

ಶಿವಮೊಗ್ಗ: 75 ವರ್ಷ ತುಂಬಿದ ಬಳಿಕ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದ ಬಿಜೆಪಿ, ಈಗ ನರೇಂದ್ರ ಮೋದಿ ವಿಚಾರದಲ್ಲೂ ಮೋಹನ್ ಭಾಗವತ್ ಅವರ ಆಶಯದಂತೆ ನಡೆದುಕೊಳ್ಳಲಿ. ಪ್ರಧಾನಿ ಮೋದಿ ಅವರು 75 ವರ್ಷ ತುಂಬಿದ ನಂತರ ರಾಜೀನಾಮೆ ನೀಡಿದರೆ, ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರಧಾನಿಯಾಗಲಿ ಎಂದು ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 75 ವರ್ಷ ತುಂಬಿದವರು ಅಧಿಕಾರದಿಂದ ಕೆಳಗಿಳಿಯಬೇಕು ಎನ್ನುವ ಮೋಹನ್ ಭಾಗವತ್ ಅವರ ನಿಲುವನ್ನು ಸ್ವಾಗತಿಸುತ್ತೇನೆ. ಪ್ರಧಾನಿ ಮೋದಿ ಅಧಿಕಾರದಿಂದ ಕೆಳಗಿಳಿದರೆ, ಸಚಿವ ನಿತಿನ್ ಗಡ್ಕರಿ ದೇಶದ ಮುಂದಿನ ಪ್ರಧಾನಿಯಾಗಬೇಕು. ಏಕೆಂದರೆ ಗಡ್ಕರಿ ಅವರಿಗೆ ದೇಶದ ಸಾಮಾನ್ಯ ಜನರ ಬಗ್ಗೆ ಕಾಳಜಿ ಇದೆ ಎಂದು ಹೇಳಿದರು.
ʼದೇಶದಲ್ಲಿ ಬಡವರ ಸಂಖ್ಯೆ ಹೆಚ್ಚುತ್ತಿದೆ. ಶ್ರೀಮಂತರು ಶ್ರೀಮಂತರಾಗುತ್ತಿದ್ದಾರೆ. ದೇಶದ ಸಂಪತ್ತು ಕೆಲವೇ ಜನರ ಪಾಲಾಗುತ್ತಿದೆ' ಎಂದು ಗಡ್ಕರಿ ಅವರು ಹೇಳಿರುವುದೇ ಇದಕ್ಕೆ ಸಾಕ್ಷಿ. ಹೀಗಾಗಿ, ಪ್ರಧಾನಿ ಹುದ್ದೆಗೆ ಅವರೇ ಅರ್ಹರು. ಅವರ ಸೇವೆ ಮತ್ತು ಅವರು ಎಂತಹ ವ್ಯಕ್ತಿ ಎಂದು ದೇಶದ ಜನರಿಗೆ ತಿಳಿದಿದೆ ಎಂದರು.





