Bhadravathi | ನೇಣು ಬಿಗಿದು ಮಹಿಳೆ ಆತ್ಮಹತ್ಯೆ

ಸಾಂದರ್ಭಿಕ ಚಿತ್ರ
ಶಿವಮೊಗ್ಗ : ಪತಿ ಮೃತಪಟ್ಟು ವಾರ ಕಳೆಯುವುದರೊಳಗೆ ಪತ್ನಿಯೂ ನೇಣು ಬಿಗಿದು ಆತ್ಮಹತ್ಯೆ ಮಾಡಿದ ಘಟನೆ ಭದ್ರಾವತಿ ನಗರದ ಹೊಸ ಸಿದ್ದಾಪುರದಲ್ಲಿ ಶನಿವಾರ ನಡೆದಿದೆ.
ಭದ್ರಾವತಿ ತಾಲೂಕಿನ ಗೋಣಿಬೀಡು ಗ್ರಾಮದ ಸ್ವಾತಿ ಮೃತ ಮಹಿಳೆ.
ಆತ್ಮಹತ್ಯೆಗೂ ಮುನ್ನ ತನ್ನ ತಾಯಿಗೆ ಮೆಸೇಜ್ ಮಾಡಿದ್ದ ಸ್ವಾತಿ, ‘ಫೇಸ್ಬುಕ್ನಲ್ಲಿ ಪೊಲೀಸ್ ಸಿಬ್ಬಂದಿ ಮೋಹನ್ ಎಂಬವರು ತನಗೆ ಮೆಸೇಜ್ ಮಾಡಿದ್ದರು. ಬ್ಲಾಕ್ ಮಾಡಿದ್ದಕ್ಕೆ ಅವರು ತನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಅವರನ್ನು ಸುಮ್ಮನೆ ಬಿಡಬೇಡಿ’ ಎಂದು ತಿಳಿಸಿದ್ದಾರೆ.
ಸ್ವಾತಿ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಭದ್ರಾವತಿ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಸಂಬಂಧ ಮೃತ ಮಹಿಳೆಯ ತಾಯಿ ನೀಡಿದ ದೂರಿನ ಮೇರೆಗೆ ಭದ್ರಾವತಿಯ ನ್ಯೂ ಟೌನ್ ಪೊಲೀಸ್ ಠಾಣೆಗೆ ಪ್ರಕರಣ ದಾಖಲಾಗಿದೆ.
ಕೆಎಸ್ಐಎಸ್ಎಫ್ ಶಿವಮೊಗ್ಗ ಘಟಕದಲ್ಲಿ ದಲಾಯತ್ ಆಗಿ ಕೆಲಸ ಮಾಡುತ್ತಿದ್ದ ಸ್ವಾತಿ ಪತಿ ಜಗದೀಶ್ ಅವರು ಫೆ.14ರಂದು ಹೊಸ ಸಿದ್ದಾಪುರದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಭದ್ರಾವತಿಯ ನ್ಯೂಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.






