Bhadravati | ತಂದೆಯ ಕತ್ತು ಹಿಸುಕಿ ಕೊಲೆ: ಆರೋಪಿ ಪುತ್ರನ ಬಂಧನ

ಶಿವಮೊಗ್ಗ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಸ್ವಂತ ಮಗನೇ ತಂದೆಯ ಕತ್ತು ಹಿಸುಕಿ ಕೊಲೆಗೈದ ಘಟನೆ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಸಮೀಪದ ಅರಣಿನಘಟ್ಟ ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ.
ಶಿವಾಗ ನಾಯ್ಕ (55) ಕೊಲೆಯಾದವರು. ಅವರ ಹಿರಿಯ ಪುತ್ರ ಮಂಜುನಾಥ ನಾಯ್ಕ ಕೊಲೆ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ರವಿವಾರ ರಾತ್ರಿ ಈ ಕೊಲೆ ನಡೆದಿದೆ ಎನ್ನಲಾಗಿದೆ.
ಘಟನೆಯ ಹಿನ್ನೆಲೆ: ಶಿವಾಗ ನಾಯ್ಕ ಎರಡು ವರ್ಷಗಳ ಹಿಂದೆ ಹೊಸ ಮನೆ ನಿರ್ಮಿಸಿದ್ದರು. ಮನೆ ಕಟ್ಟಲು ಹಾಗೂ ಇಬ್ಬರು ಮಕ್ಕಳ ಮದುವೆಗೆಂದು ಅವರು ತುಂಬಾ ಸಾಲ ಮಾಡಿದ್ದರು. ಸಾಲದ ವಿಚಾರವಾಗಿ ಮನೆಯಲ್ಲಿ ಪದೇಪದೇ ಜಗಳ ನಡೆಯುತ್ತಿತ್ತು. ಇದೇ ಕಾರಣಕ್ಕೆ ಇಬ್ಬರು ಮಕ್ಕಳು, ಸೊಸೆಯಂದಿರು ಹಾಗೂ ಪತ್ನಿಯನ್ನು ಶಿವಾಗ ನಾಯ್ಕ ಹೊಸ ಮನೆಯಿಂದ ಹೊರಹಾಕಿ ಹಳೆಯ ಮನೆಗೆ ಕಳುಹಿಸಿದ್ದರು. ಹೊಸ ಮನೆಯಲ್ಲಿ ಒಬ್ಬರೇ ವಾಸವಿದ್ದರೆನ್ನಲಾಗಿದೆ.
ರವಿವಾರ ರಾತ್ರಿ ಮದ್ಯಪಾನ ಮಾಡಿದ್ದ ಶಿವಾಗ ನಾಯ್ಕ ಹಳೆಯ ಮನೆಗೆ ತೆರಳಿ ಪತ್ನಿಯೊಂದಿಗೆ ಜಗಳವಾಡಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಹಿರಿಯ ಪುತ್ರ ಮಂಜುನಾಥ ನಾಯ್ಕ ತಂದೆಯನ್ನು ತಡೆಯಲು ಯತ್ನಿಸಿದ್ದಾನೆ. ಇಬ್ಬರ ನಡುವೆ ವಾಗ್ವಾದ ನಡೆದು ಕೈಕೈ ಮಿಲಾಯಿಸಿದ್ದಾರೆ. ಈ ವೇಳೆ ಶಿವಾಗ ನಾಯ್ಕರ ಕುತ್ತಿಗೆಯನ್ನು ಆರೋಪಿ ಮಂಜುನಾಥ್ ಬಿಗಿಯಾಗಿ ಹಿಸುಕಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ತನಿಖೆ ವೇಳೆ ಬಯಲಿಗೆ ಬಂದಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಹೊಳೆಹೊನ್ನೂರು ಠಾಣೆಯ ಪೊಲೀಸರು ಆರೋಪಿ ಮಂಜುನಾಥ್ ನನ್ನು ಬಂಧಿಸಿದ್ದಾರೆ.






