ಭದ್ರಾವತಿ | ಪ್ರೇಮಿಗಳಿಗೆ ಸಹಕರಿಸಿದ ಆರೋಪ: ಚಾಕುವಿನಿಂದ ಇರಿದು ಇಬ್ಬರ ಹತ್ಯೆ

ಶಿವಮೊಗ್ಗ: ಪ್ರೀತಿಗೆ ಸಹಕರಿಸಿದ್ದಾರೆಂದು ಆರೋಪಿಸಿ ಇಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಭದ್ರಾವತಿಯ ಜೈಭೀಮ್ ನಗರದಲ್ಲಿ ಶುಕ್ರವಾರ ರಾತ್ರಿ ನಡೆದಿರುವುದಾಗಿ ವರದಿಯಾಗಿದೆ.
ಕಿರಣ್ (25)ಮತ್ತು ಮಂಜುನಾಥ್( 65) ಮೃತಪಟ್ಟವರು.
ಏನಿದು ಘಟನೆ:
ಜೈಭೀಮ್ ನಗರದ ನಿವಾಸಿಯಾಗಿರುವ ಶೃತಿ ಮತ್ತು ನಂದೀಶ್ ಎಂಬವರು ಪ್ರೀತಿಸುತ್ತಿದ್ದು, ಎರಡು ದಿನಗಳ ಹಿಂದೆ ಈ ಜೋಡಿ ನಾಪತ್ತೆಯಾಗಿದ್ದರು ಎನ್ನಲಾಗಿದೆ. ಶುಕ್ರವಾರ ಭದ್ರಾವತಿಗೆ ವಾಪಾಸ್ ಆದ ಈ ಜೋಡಿ ನೇರವಾಗಿ ಭದ್ರಾವತಿ ಹಳೇನಗರ ಪೊಲೀಸ್ ಠಾಣೆಗೆ ಹೋಗಿದ್ದರು.
ಈ ವೇಳೆ ನಂದೀಶ್ ಜೊತೆ ಹೋಗುವುದಾಗಿ ಯುವತಿ ಹೇಳಿದ್ದಾಳೆ ಎನ್ನಲಾಗಿದೆ.
ಈ ಜೋಡಿಗೆ ಮನೆ ಬಿಟ್ಟು ಹೋಗಲು ಸಹಕರಿಸಿದ್ದರು ಎಂದು ಆರೋಪಿಸಿ ಯುವತಿಯ ಸಹೋದರ ಹಾಗೂ ಆತನ ಸ್ನೇಹಿತರು ನಂದೀಶ್ ಸ್ನೇಹಿತ ಕಿರಣ್ ಜೊತೆ ಜಗಳವಾಡಿದ್ದಾರೆ. ಈ ವೇಳೆ ಕಿರಣ್ ಗೆ ಚಾಕು ಇರಿಯಲಾಗಿದ್ದು, ತೀವ್ರ ಗಾಯಗೊಂಡ ಕಿರಣ್ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಜಗಳ ಬಿಡಿಸಲು ಬಂದ ಸ್ಥಳೀಯರಾದ ಮಂಜುನಾಥ ಅವರಿಗೂ ಇರಿಯಲಾಗಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಭದ್ರಾವತಿಯ ಹಳೇ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.







