ಶಿಕಾರಿಪುರದಲ್ಲಿ ಸೆ.30ರಂದು ಭಾರತ್ ಜೋಡೋ ಪಾದಯಾತ್ರೆ: ಸಚಿವ ಮಧು ಬಂಗಾರಪ್ಪ
ರಾಹುಲ್ ಗಾಂಧಿ ಅವರ ಪಾದಯಾತ್ರೆ ಸ್ಮರಣೆಗೆ ರಾಜ್ಯಮಟ್ಟದ ಕಾರ್ಯಕ್ರಮ ಆಯೋಜನೆ

ಶಿಕಾರಿಪುರ, ಸೆ.28: ನಾಲ್ಕು ವರ್ಷಗಳ ಹಿಂದೆ ಮಾನ್ಯ ಶ್ರೀ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆದ ʻಭಾರತ್ ಜೋಡೋʼ ಪಾದಯಾತ್ರೆ ಒಂದು ಪುಣ್ಯದ ಪಾದಯಾತ್ರೆ. ದ್ವೇಷದ ರಾಜಕೀಯಕ್ಕೆ ಸೆಡ್ಡು ಹೊಡೆದು ಭಾರತವನ್ನು ಒಗ್ಗೂಡಿಸಲು ನಡೆದಿದ್ದ ಈ ಪಾದಯಾತ್ರೆ ಕರ್ನಾಟಕಕ್ಕೆ ಕಾಲಿಟ್ಟು 4 ವರ್ಷಗಳಾದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 30ರಂದು ಶಿಕಾರಿಪುರದಲ್ಲಿ ರಾಜ್ಯಮಟ್ಟದ ‘ಭಾರತ್ ಜೋಡೋ 2.0’ ಪಾದಯಾತ್ರೆ ಆಯೋಜಿಸಲಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.
ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಪಾದಯಾತ್ರೆಯನ್ನು ಸ್ಮರಿಸುವ ಹಿನ್ನೆಲೆಯಲ್ಲಿ ಈ ಪಾದಯಾತ್ರೆ ನಡೆಸಲಾಗುತ್ತಿದೆ. ಕಿಟ್ಟದಹಳ್ಳಿಯಿಂದ ಪಾದಯಾತ್ರೆ ಆರಂಭವಾಗಲಿದ್ದು, ಶಿಕಾರಿಪುರದ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಕೆಪಿಸಿಸಿಯ ಅಧ್ಯಕ್ಷ ಶ್ರೀ ಬಿ.ಕೆ. ಹರಿಪ್ರಸಾದ್ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಬೃಹತ್ ಸಮಾವೇಶ ನಡೆಯುವ ಸಂತೆ ಮೈದಾನದಲ್ಲಿನ ಸಿದ್ಧತೆಗಳನ್ನು ಪರಿಶೀಲಿಸಿ, ಹೊಸ ಸಂತೆ ಮೈದಾನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2022ರ ಸೆಪ್ಟೆಂಬರ್ 30ರಂದು ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಕರ್ನಾಟಕವನ್ನು ಗುಂಡ್ಲುಪೇಟೆ ಮೂಲಕ ಪ್ರವೇಶಿಸಿತ್ತು. ಇದು ಕೇವಲ ಪಾದಯಾತ್ರೆಯಾಗಿರಲಿಲ್ಲ, ಜಾತಿ, ಧರ್ಮದ ಹೆಸರಲ್ಲಿ ಛಿದ್ರಗೊಂಡಿರುವ ಹೃದಯಗಳನ್ನು ಮತ್ತೆ ಬೆಸೆಯಲು ನಡೆಸಿದ್ದ ಪ್ರೀತಿಯ, ಸಾಮರಸ್ಯದ ಯಾತ್ರೆಯಾಗಿತ್ತು ಎಂದು ಮಧು ಬಂಗಾರಪ್ಪ ಹೇಳಿದರು.
“ಭಾರತ್ ಜೋಡೊ ನಮ್ಮ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ. ಪಕ್ಷದ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ಅವರ ನೇತೃತ್ವದಲ್ಲಿ ಪಾದಯಾತ್ರೆ ನಡೆಯಲಿದೆ. ನಾನೂ ಪಾದಯಾತ್ರೆಯಲ್ಲಿ ಭಾಗವಹಿಸುತ್ತೇನೆ. ಶಿವಮೊಗ್ಗ ಜಿಲ್ಲೆಯ ಕಾಂಗ್ರೆಸ್‌ನ ಎಲ್ಲ ನಾಯಕರು ಸಹ ಭಾಗವಹಿಸಲಿದ್ದಾರೆ,” ಎಂದು ಮಧು ಬಂಗಾರಪ್ಪ ತಿಳಿಸಿದರು.
10 ಕಿ.ಮೀ. ಪಾದಯಾತ್ರೆ
ಸೆಪ್ಟೆಂಬರ್ 30ರಂದು ಬೆಳಗ್ಗೆ 10 ಗಂಟೆಗೆ ಪಾದಯಾತ್ರೆ ಆರಂಭವಾಗಲಿದೆ. ಕಿಟ್ಟದಹಳ್ಳಿಯಿಂದ ಆರಂಭವಾಗಿ ಮಡ್ಡಿ ಕೋಟೆ ಕ್ರಾಸ್, ಹೊಸನಗರ ಕ್ರಾಸ್, ನೆಲವಾಗಿಲು ಕ್ರಾಸ್ ಮೂಲಕ ಸುಮಾರು 10 ಕಿ.ಮೀ. ಕ್ರಮಿಸಿ ಶಿಕಾರಿಪುರ ನಗರವನ್ನು ಪ್ರವೇಶಿಸಲಿದೆ ಎಂದು ಸಚಿವರು ವಿವರಿಸಿದರು.
“2022ರ ಸೆಪ್ಟೆಂಬರ್ 30ರಂದು ರಾಹುಲ್ ಗಾಂಧಿ ಅವರು ಕರ್ನಾಟಕದ ಗುಂಡ್ಲುಪೇಟೆಗೆ ಪಾದಯಾತ್ರೆ ಮೂಲಕ ಪಾದಾರ್ಪಣೆ ಮಾಡಿದ ದಿನ. ಅದನ್ನು ದೊಡ್ಡ ಮಟ್ಟದಲ್ಲಿ ಸಂಭ್ರಮಿಸಬೇಕು. ಹೀಗಾಗಿ ರಾಜ್ಯಮಟ್ಟದ ಕಾರ್ಯಕ್ರಮವನ್ನು ಶಿಕಾರಿಪುರದಿಂದಲೇ ಆರಂಭಿಸುತ್ತಿದ್ದೇವೆ,” ಎಂದರು.
“ಇದೊಂದು ರಾಜಕೀಯ ಸಂದೇಶ ಸಾರುವ ಕಾರ್ಯಕ್ರಮ. ರಾಜ್ಯದಲ್ಲಿ ಮರಳಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡುವ ದಿನ. ಶಿಕಾರಿಪುರದಲ್ಲಿ ಕಾಂಗ್ರೆಸ್ ಗೆಲ್ಲಿಸಿಕೊಂಡು ಬರುವುದಕ್ಕೆ ನಾವೆಲ್ಲರೂ ಪಣ ತೊಡುವ ದಿನ,” ಎಂದು ಹೇಳಿದರು.
‘ರಾಹುಲ್ ಗಾಂಧಿ ಅವರೊಂದಿಗೆ ಹೆಜ್ಜೆ ಹಾಕಿದ್ದು ನಮ್ಮ ಪುಣ್ಯ’
“ರಾಹುಲ್ ಗಾಂಧಿ ಅವರ ಜೊತೆ ನಾವೆಲ್ಲ ಹೆಜ್ಜೆ ಹಾಕಿದ್ದು ನಮ್ಮ ಪುಣ್ಯ. ಜನಸಾಮಾನ್ಯರ ಜೊತೆಯಲ್ಲಿ ರಾಹುಲ್ ಗಾಂಧಿ ಅವರು ಹೆಜ್ಜೆ ಹಾಕಿದ್ದು ದೇಶವನ್ನು ಒಗ್ಗೂಡಿಸಲು ಮತ್ತು ಸಂವಿಧಾನವನ್ನು ರಕ್ಷಿಸಲು. ರಾಹುಲ್ ಗಾಂಧಿ ಅವರ ಪುಣ್ಯದ ಹೆಜ್ಜೆಗಳ ಫಲವಾಗಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಇದನ್ನು ನಾವು ಹೆಮ್ಮೆಯಿಂದ ಹಾಗೂ ಗೌರವದಿಂದ ಸ್ಮರಿಸುತ್ತೇವೆ,” ಎಂದು ಮಧು ಬಂಗಾರಪ್ಪ ಹೇಳಿದರು.
ಶಿಕಾರಿಪುರದಲ್ಲೇ ಪಾದಯಾತ್ರೆ ಆಯೋಜಿಸಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಭಾರತ್ ಜೋಡೋ ಪಾದಯಾತ್ರೆ ಸಂಬಂಧ ಪಕ್ಷದೊಳಗೆ ಕಾರ್ಯಕಾರಿ ಸಮಿತಿ ಸಭೆ ನಡೆದಿದ್ದು, ರಾಜ್ಯದಲ್ಲಿ ಎರಡು ಕಡೆ ರಾಜ್ಯಮಟ್ಟದ ಕಾರ್ಯಕ್ರಮಗಳನ್ನು ನಡೆಸುವ ಕುರಿತು ಚರ್ಚೆಯಾಗಿತ್ತು. ಶಿಕಾರಿಪುರ ನಮಗೆ ಮುಖ್ಯವಾಗಿದ್ದು, ಇಲ್ಲಿಂದಲೇ ರಣಕಹಳೆ ಮೊಳಗಿಸೋಣ ಎಂದು ನಿರ್ಧರಿಸಲಾಗಿದೆ ಎಂದರು.
ವಿಜಯೇಂದ್ರ ಪಾದಯಾತ್ರೆ ಕುರಿತು ಮಧು ಬಂಗಾರಪ್ಪ ತಿರುಗೇಟು
ತಮ್ಮ ಕಾರ್ಯಕ್ರಮದ ದಿನವೇ ಬಿ.ವೈ. ವಿಜಯೇಂದ್ರ ಅವರು ಪಾದಯಾತ್ರೆ ನಡೆಸಲಿದ್ದಾರೆ ಎಂಬ ಮಾಹಿತಿ ಇದೆ ಎಂದು ಹೇಳಿದ ಮಧು ಬಂಗಾರಪ್ಪ, “ಅವರು ಭ್ರಷ್ಟಾಚಾರದ ವಿರುದ್ಧ ಪಾದಯಾತ್ರೆ ಮಾಡಬೇಕು. ಅವರ ತಂದೆ ಬಿ.ಎಸ್. ಯಡಿಯೂರಪ್ಪ ಅವರು ಯಾವ ಕಾರಣಕ್ಕೆ ಜೈಲಿಗೆ ಹೋಗಿ ಬಂದಿದ್ದಾರೆ ಎಂಬುದು ರಾಜ್ಯಕ್ಕೆ ಗೊತ್ತಿದೆ. ಅವರದ್ದೇ ಪಕ್ಷದ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಯಡಿಯೂರಪ್ಪ ಕುಟುಂಬದ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದು ಸಾಕಾಗಿಲ್ಲವೇ?” ಎಂದು ಪ್ರಶ್ನಿಸಿದರು.
“ಜಿಲ್ಲೆಯಲ್ಲಿ 500 ಎಕರೆ ಲೂಟಿ ಕತೆ ಬಿಚ್ಚಿಡಬೇಕಾ? ನಮ್ಮ ತಂಟೆಗೆ ಬಂದರೆ ನಾವು ಸುಮ್ಮನೆ ಬಿಡುವುದಿಲ್ಲ,” ಎಂದು ಎಚ್ಚರಿಕೆ ನೀಡಿದರು.
ಬಿ.ವೈ. ವಿಜಯೇಂದ್ರ ಅವರನ್ನು ಉದ್ದೇಶಿಸಿ ಮಾತನಾಡಿದ ಅವರು, “ನಮ್ಮ ತಂದೆ ಎಸ್. ಬಂಗಾರಪ್ಪ ಅವರು ಯಡಿಯೂರಪ್ಪ ಅವರನ್ನು ಹೇಗೆ ಸೋಲಿಸಿದರು ಗೊತ್ತಿಲ್ಲವೇ? ಸೊರಬದಲ್ಲಿ ನಾನು ಎಷ್ಟು ಅಂತರದಿಂದ ಗೆದ್ದಿದ್ದೇನೆ ಎಂಬುದನ್ನು ನೋಡಲಿ. ವಿಜಯೇಂದ್ರ ಕೊನೆಯ ಕ್ಷಣದಲ್ಲಿ ಹೇಗೋ ಬಚಾವಾಗಿದ್ದಾರೆ. ಈ ಸಲ ಅವರನ್ನು ಸೋಲಿಸುವುದೇ ನಮ್ಮ ಗುರಿ,” ಎಂದರು.
“ಸೊರಬದಲ್ಲಿ ಗೆದ್ದು ಬನ್ನಿ ಎಂದು ಅವರ ಸಹೋದರ ರಾಘವೇಂದ್ರ ಹೇಳುತ್ತಾರೆ. ತಾವು ಹೇಗೆ ಗೆದ್ದು ಬಂದಿದ್ದೀರಿ? ಚುನಾವಣೆಯಲ್ಲಿ ಪೊಲೀಸ್ ವಾಹನಗಳನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬುದು ನಮಗೆ ಗೊತ್ತಿಲ್ಲವೇ?” ಎಂದು ತಿರುಗೇಟು ನೀಡಿದರು.
ರಾಘವೇಂದ್ರ ವಿರುದ್ಧವೂ ವಾಗ್ದಾಳಿ
ಪ್ರಜಾಸೇವೆ ಕುರಿತು ಟೀಕಿಸಿದ್ದ ಬಿ.ವೈ. ರಾಘವೇಂದ್ರ ಅವರು ಇತ್ತೀಚೆಗೆ ಶಿಕಾರಿಪುರದಲ್ಲಿ ನಡೆದ ಕಾರ್ಯಕ್ರಮಕ್ಕೆ ಬಂದು ಹೋಗಿದ್ದಾರೆ ಎಂದು ಹೇಳಿದ ಸಚಿವರು, ಅವರನ್ನು “ಒಂದು ತರಹ ಶಕುನಿ” ಎಂದು ಟೀಕಿಸಿದರು.
ವಿಜಯೇಂದ್ರ ಅವರ ಬಳ್ಳಾರಿ ಪಾದಯಾತ್ರೆಯನ್ನು ಉಲ್ಲೇಖಿಸಿದ ಅವರು, “ಅದು ಮಾಧ್ಯಮಗಳನ್ನು ಬಳಸಿಕೊಂಡು ಪ್ರಚಾರ ಮಾಡಿದ ಪಾದಯಾತ್ರೆ” ಎಂದು ಆರೋಪಿಸಿದರು.
“ಮಾಧ್ಯಮಗಳಲ್ಲಿ ಸತ್ಯ ಬರೆಯಿರಿ. ಮಾಧ್ಯಮದ ಶಕ್ತಿಯೇ ಸತ್ಯ ಬರೆಯುವುದು. ಪ್ರಜಾಪ್ರಭುತ್ವದ ಆಶಯವನ್ನು ಎತ್ತಿಹಿಡಿಯಿರಿ,” ಎಂದು ಪತ್ರಕರ್ತರಿಗೆ ಸಚಿವರು ಕಿವಿಮಾತು ಹೇಳಿದರು.
‘13 ಕೋಟಿ ಮತದಾರರನ್ನು ಕೈಬಿಡುವುದು ಎಂದರೆ ಏನು?’
ದೇಶದ ಚುನಾವಣಾ ವ್ಯವಸ್ಥೆ ಮತ್ತು ಮತದಾರರ ಪಟ್ಟಿಗೆ ಸಂಬಂಧಿಸಿದ ಬೆಳವಣಿಗೆಗಳ ಕುರಿತು ಆತಂಕ ವ್ಯಕ್ತಪಡಿಸಿದ ಮಧು ಬಂಗಾರಪ್ಪ, “ಒಂದು ದೇಶದಲ್ಲಿ ಎಂತಹ ದೊಡ್ಡ ಆತಂಕ ಎದುರಾಗಿದೆ. 13 ಕೋಟಿ ಮತದಾರರನ್ನು ಕೈಬಿಡುವುದು ಎಂದರೆ ಏನು? ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನಕ್ಕೆ ಬೆಲೆಯೇ ಇಲ್ಲವೇ?” ಎಂದು ಪ್ರಶ್ನಿಸಿದರು.
“ನಾಳೆ ನಿಮ್ಮ ಹೆಸರು ಕೂಡ ಡಿಲೀಟ್ ಆಗಬಹುದು. ಸತ್ಯ ಮಾತನಾಡಿ, ದೇಶ ಉಳಿಸಿ,” ಎಂದು ಪತ್ರಕರ್ತರಿಗೆ ಮನವಿ ಮಾಡಿದರು.
“ಶಿಕ್ಷಣ ಸಚಿವನಾಗಿ ನಮ್ಮ ಶಾಲೆಯ ಮಕ್ಕಳಿಗೆ ಸಂವಿಧಾನದ ಪೀಠಿಕೆ ಓದಿಸುತ್ತಿರುವುದು, ನಾಳೆ ನಮ್ಮನ್ನೆಲ್ಲ ಪ್ರಶ್ನಿಸಬೇಕು ಎಂಬ ಕಾರಣಕ್ಕಾಗಿ,” ಎಂದು ಹೇಳಿದರು.
‘ಮುಖ್ಯ ಚುನಾವಣಾ ಆಯುಕ್ತರು ರಾಜೀನಾಮೆ ನೀಡಬೇಕು’
“ಜೆನ್-ಜಿ ಯುವಕರು ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆ ಕೇಳುತ್ತಿದ್ದಾರೆ. ಮೊದಲು ಅವರು ರಾಜೀನಾಮೆ ನೀಡಬೇಕು. ಭಾರತದ ಚುನಾವಣಾ ವ್ಯವಸ್ಥೆಯ ಮೇಲೆ ಮುಂದೆ ಎಲ್ಲರೂ ನಂಬಿಕೆ ಕಳೆದುಕೊಳ್ಳುವ ದಿನಗಳು ಬರಬಹುದು ಎಂಬ ಆತಂಕ ನಮಗಿದೆ. ಮುಂದೆ ಚುನಾವಣೆಗಳು ಹೇಗೆ ನಡೆಯುತ್ತವೆಯೋ ಎಂಬುದರ ಬಗ್ಗೆ ಆತಂಕವಾಗುತ್ತಿದೆ,” ಎಂದು ಮಧು ಬಂಗಾರಪ್ಪ ಹೇಳಿದರು.
ಪ್ರಧಾನಿ ವಿರುದ್ಧವೂ ಟೀಕೆ
ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ವಾಗ್ದಾಳಿ ನಡೆಸಿದ ಸಚಿವರು, “ಪ್ರಧಾನಿ ನರೇಂದ್ರ ಮೋದಿ ಅವರು ಬರೀ ಸುಳ್ಳುಗಳನ್ನು ಹೇಳಿ ರಾಜಕೀಯ ಮಾಡುತ್ತಿದ್ದಾರೆ. ಅವರು ನೀಡಿದ ಯಾವ ಭರವಸೆಯನ್ನು ಈಡೇರಿಸಿದ್ದಾರೆ? ಯುವಕರಿಗೆ ಉದ್ಯೋಗ ನೀಡಿದರೇ? ಎಲ್ಲಿ ಹೋಯಿತು ಆ ಭರವಸೆ?” ಎಂದು ಪ್ರಶ್ನಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಸಿ. ಯೋಗೇಶ್, ಕೃಷಿಕ ಸಮಾಜದ ಅಧ್ಯಕ್ಷ ಮಹಾದೇವಪ್ಪ, ಗ್ಯಾರಂಟಿ ಸಮಿತಿ ಅಧ್ಯಕ್ಷ ನಾಗರಾಜಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಲತೇಶ್ ಭಂಡಾರಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ಶಿವಕುಮಾರ್, ಶಿಕಾರಿಪುರ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜು ನಾಯ್ಕ್, ಪ್ರಧಾನ ಕಾರ್ಯದರ್ಶಿ ದರ್ಶನ್ ಉಳ್ಳಿ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಕಲಗೋಡು ರತ್ನಾಕರ್, ಗೋಣಿ ಮಾಲತೇಶ್, ಈರೇಶ್ ಎನ್.ವಿ., ರಾಘವೇಂದ್ರ ನಾಯ್ಕ್ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.






