ವಿಕಸಿತ ಭಾರತದ ಸಂಕಲ್ಪಕ್ಕೆ ಪೂರಕ ಬಜೆಟ್ : ಬಿ.ವೈ.ವಿಜಯೇಂದ್ರ

ಶಿವಮೊಗ್ಗ : ಪ್ರಧಾನಮಂತ್ರಿಗಳ ವಿಕಸಿತ ಭಾರತದ ಸಂಕಲ್ಪಕ್ಕೆ ಪೂರಕವಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್ ಮಂಡಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ವಿಶ್ಲೇಷಿಸಿದ್ದಾರೆ.
ಕೇಂದ್ರದ ಆಯವ್ಯಯಪತ್ರ ಮಂಡನೆಯನ್ನು ಇಂದು ವೀಕ್ಷಿಸಿದ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.
3 ಕರ್ತವ್ಯಶಕ್ತಿಗಳ ಆಧಾರದ ಮೇಲೆ ಮಂಡಿಸಲ್ಪಟ್ಟ ಬಜೆಟ್ ಇದಾಗಿದೆ. ಉತ್ಪಾದನಾ ಹೆಚ್ಚಳ, ಜನರ ಆಶೋತ್ತರಗಳ ಈಡೇರಿಕೆ ಹಾಗೂ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ತಮ್ಮ ಬಜೆಟ್ ಮಂಡಿಸಿದ್ದಾರೆ ಎಂದು ವಿವರಿಸಿದರು.
ಕೈಗಾರಿಕೆ, ಪ್ರವಾಸೋದ್ಯಮ, ಐಟಿ, ಬಿಟಿ, ವಿಶೇಷವಾಗಿ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಘೋಷಿಸಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು. ಎಲ್ಲ ಕ್ಷೇತ್ರಗಳಿಗೆ ಅವರು ಆದ್ಯತೆ ನೀಡಿದ್ದಾರೆ. ಯುವ ಶಕ್ತಿಗೂ ಪೂರಕ ಬಜೆಟ್ ಮಂಡಿಸಿದ್ದಾರೆ. ಕ್ರೀಡಾ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಪ್ರಕಟಿಸಿದ್ದಾರೆ ಎಂದು ತಿಳಿಸಿದರು.
ನಾರಿ ಶಕ್ತಿಗೆ ಆದ್ಯತೆ ಕೊಟ್ಟಿದ್ದು, ಎಲ್ಲಕ್ಕಿಂತ ಪ್ರಮುಖವಾಗಿ ಹೊಸ ತೆರಿಗೆಗೆ ಅವಕಾಶ ನೀಡದೇ, ಹೊಸ ತೆರಿಗೆ ಹೇರದೇ ಸರ್ವಸ್ಪರ್ಶಿ, ಸರ್ವವ್ಯಾಪ್ತಿಯಡಿ ಎಲ್ಲ ಕ್ಷೇತ್ರಗಳಿಗೂ ಆದ್ಯತೆ ನೀಡಿದ್ದಾರೆ. ಈ ದೇಶದ ಸರ್ವತೋಮುಖ ಅಭಿವೃದ್ಧಿಗೆ, ಮುಂದಿನ ದಿನಗಳಲ್ಲಿ ಭಾರತವು ಆರ್ಥಿಕವಾಗಿ ಇನ್ನಷ್ಟು ಸದೃಢವಾಗುವ ನಿಟ್ಟಿನಲ್ಲಿ, ಭಾರತವು ವಿಶ್ವಗುರು ಆಗುವ ನಿಟ್ಟಿನಲ್ಲಿ ಒಂದು ಉತ್ತಮ ಬಜೆಟ್ ಅನ್ನು ಮಂಡಿಸಿದ್ದಾರೆ ಎಂದು ಶ್ಲಾಘಿಸಿದರು.
ಈ ದೇಶದ ಪ್ರತಿಯೊಬ್ಬರೂ ಈ ಬಜೆಟ್ ವೀಕ್ಷಿಸಿದ್ದಾರೆ. ರೈತಾಪಿವರ್ಗ, ಮಹಿಳೆಯರು, ಯುವಕರು, ಬಡವರು ಸೇರಿ ಪ್ರತಿಯೊಬ್ಬರೂ ಈ ಬಜೆಟ್ ಸ್ವಾಗತಿಸುತ್ತಿದ್ದಾರೆ. ನಾವೆಲ್ಲರೂ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ 9ನೇ ಬಜೆಟ್ ಅನ್ನು ಸಂತೋಷದಿಂದ ಸ್ವಾಗತ ಮಾಡುತ್ತೇವೆ ಎಂದರು.
ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಅನ್ಯಾಯ ಆಗಿದೆಯೇ ಅಥವಾ ಅನುಕೂಲ ಆಗಿದೆಯೇ ಎಂಬ ಕುರಿತು ನಾಳೆ ಮಾತನಾಡುವುದಾಗಿ ಅವರು ಪ್ರಶ್ನೆಗೆ ಉತ್ತರಿಸಿದರು. ಟೀಕೆ ಮಾಡುವುದೇ ಸಿದ್ದರಾಮಯ್ಯರ ಸರಕಾರದ ಸಾಧನೆ ಎಂದು ಆಕ್ಷೇಪಿಸಿದರು.







