2028ರಲ್ಲಿ ಕಾಂಗ್ರೆಸ್ ಸ್ಥಾನಗಳು 50-60ಕ್ಕೆ ಕುಸಿತ : ಬಿ.ವೈ.ವಿಜಯೇಂದ್ರ ಭವಿಷ್ಯ

ಶಿವಮೊಗ್ಗ: ಕಾವೇರಿ ನದಿ ನೀರಿನ ವಿಚಾರದಲ್ಲಿ ರಾಜ್ಯ ಸರಕಾರದ ವೈಫಲ್ಯವನ್ನು ಖಂಡಿಸಿ ಇದೇ 31ರಂದು ಮಂಡ್ಯದಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.
ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ರಾಜ್ಯಾಧ್ಯಕ್ಷನಾದ ನಾನು ಮತ್ತು ವಿಪಕ್ಷ ನಾಯಕ ಆರ್.ಅಶೋಕ್ ಅವರ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಸಲಾಗುತ್ತದೆ. ರೈತ ಸಂಘಟನೆಗಳು ಮತ್ತು ಇತರ ಸಂಘ ಸಂಸ್ಥೆಗಳು ಹೋರಾಟದಲ್ಲಿ ಭಾಗವಹಿಸಿ, ರೈತರ ಈ ಸಂಕಷ್ಟಕ್ಕೆ ಸ್ಪಂದಿಸಬೇಕೆಂದು ಮನವಿ ಮಾಡಿದರು.
ಮೊದಲೇ ನೀರು ಬಿಟ್ಟಿದ್ದ ಕರ್ನಾಟಕ :
ಕಾವೇರಿ ನದಿ ನೀರಿನ ವಿಚಾರದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಂಪೂರ್ಣವಾಗಿ ವಿಫಲವಾಗಿದ್ದಾರೆ ಎಂದು ಆಕ್ಷೇಪಿಸಿದ ಅವರು, ಸಿಡಬ್ಲ್ಯುಆರ್‍ಸಿಯಲ್ಲಿ ವಾದ ಮಾಡುವ ನಮ್ಮ ವಕೀಲರು ಮತ್ತು ನ್ಯಾಯವಾದಿಗಳು ಇಲ್ಲಿನ ನೀರಿನ ಲಭ್ಯತೆ ವಿಚಾರದಲ್ಲಿ ಸಮಗ್ರ ಮಾಹಿತಿ ಕೊಡುವಲ್ಲಿ ವಿಫಲವಾಗಿದ್ದಾರೆ. ಕರ್ನಾಟಕದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಕಾವೇರಿ ಕೊಳ್ಳದ ರೈತರು ಮಳೆಯ ಕೊರತೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ರಾಜ್ಯ ಸರಕಾರವು ಸಿಡಬ್ಲ್ಯುಆರ್‍ಸಿ ಸೂಚನೆಗೂ ಮೊದಲೇ ತಮಿಳುನಾಡಿಗೆ ನೀರು ಬಿಡುಗಡೆ ಮಾಡಿದೆ. ಸಿಡಬ್ಲ್ಯುಆರ್‍ಸಿ ತೀರ್ಪಿನ ಕಾರಣ ರಾಜ್ಯವು ಹೆಚ್ಚು ನೀರನ್ನು ಬಿಡಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ವಾಸ್ತವಾಂಶವನ್ನು ರಾಜ್ಯ ಸರಕಾರವು ತಿಳಿಸಬೇಕಿತ್ತಲ್ಲವೇ?
ಕಾವೇರಿ ಜನಾನಯನ ಪ್ರದೇಶದ ರೈತರು ಕುಡಿಯುವ ನೀರಿಗೂ ತೊಂದರೆ ಎದುರಿಸಬೇಕಾಗಿದೆ. ವಾಸ್ತವಾಂಶವನ್ನು ರಾಜ್ಯ ಸರಕಾರವು ಸಿಡಬ್ಲ್ಯುಆರ್‍ಸಿಗೆ ತಿಳಿಸಬೇಕಿತ್ತಲ್ಲವೇ ?. ಇದರ ಬದಲಾಗಿ ಮುಖ್ಯಮಂತ್ರಿಗಳು ಕಾವೇರಿ ಕೊಳ್ಳದ ರೈತರು ಯಾರೂ ಬಿತ್ತನೆ ಮಾಡಬಾರದೆಂದು ಹೇಳಿಕೆ ನೀಡಿದ್ದಾರೆ ಎಂದು ಟೀಕಿಸಿದರು. ಕಾಂಗ್ರೆಸ್ ಸರಕಾರವು ರಾಜ್ಯದ ರೈತರಿಗೆ ಮೋಸ ಮಾಡಿದೆ. ಯುಪಿಎ ಪಾಲುದಾರ ತಮಿಳುನಾಡು ಮುಖ್ಯಮಂತ್ರಿಯನ್ನು ಖುಷಿಯಿಂದಿಡಲು ಅದು ಕ್ರಮ ಕೈಗೊಂಡಿದೆ ಎಂದು ಆಕ್ಷೇಪಿಸಿದರು.
50-60ಕ್ಕೆ ಇಳಿಯಲಿದೆ :
ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯುವುದಾಗಿ ಸಿದ್ದರಾಮಯ್ಯನವರು ತಿಳಿಸಿದ್ದಾರೆ. ಸಿದ್ದರಾಮಯ್ಯನವರ ಈ ನಿರ್ಧಾರದಿಂದ 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸ್ಥಾನಗಳು 50-60ಕ್ಕೆ ಇಳಿಯಲಿದೆ ಎಂದು ಭವಿಷ್ಯ ನುಡಿದರು






