ಶಿವಮೊಗ್ಗ: ಸ್ವಾಮೀಜಿ ಹೆಸರಿನಲ್ಲಿ 61 ಗ್ರಾಂ ಚಿನ್ನ ಪಡೆದು ಮಹಿಳೆಗೆ ವಂಚನೆ

ಸಾಂದರ್ಭಿಕ ಚಿತ್ರ
ಶಿವಮೊಗ್ಗ: ವಶೀಕರಣ ಪೂಜೆ ಮಾಡಿ ಸಮಸ್ಯೆಯನ್ನು ಬಗೆಹರಿಸುವುದಾಗಿ ನಂಬಿಸಿ ಸ್ವಾಮೀಜಿ ಎಂದು ಹೇಳಿಕೊಂಡ ವ್ಯಕ್ತಿಯೋರ್ವ ಮಹಿಳೆಯೊಬ್ಬರಿಂದ 61 ಗ್ರಾಂ ಚಿನ್ನವನ್ನು ಪಡೆದು ವಂಚಿಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಪತಿಯ ಸಮಸ್ಯೆಯಿಂದ ಕಂಗೆಟ್ಟಿದ್ದ ಶಿವಮೊಗ್ಗದ ನಿವಾಸಿಯೊಬ್ಬರು ಪರಿಹಾರ ಕಂಡುಕೊಳ್ಳಲು ಜ್ಯೋತಿಷ್ಯಾಲಯವೊಂದಕ್ಕೆ ಹೋಗಿದ್ದಾರೆ. ಅಲ್ಲಿನ ವ್ಯಕ್ತಿಯೊಬ್ಬರ ಬಳಿ ತಮ್ಮ ಸಂಕಷ್ಟವನ್ನು ಹೇಳಿಕೊಂಡಾಗ, ಆತ ವಶೀಕರಣ ಪೂಜೆಯನ್ನು ಮಾಡಲು ಹೇಳಿ, ಪ್ರಥಮವಾಗಿ 3,500ರೂ. ಯನ್ನು ಫೋನ್ ಪೇ ಮೂಲಕ ಪಡೆದಿದ್ದಾನೆ. ಮಾರನೇ ದಿನ, ಆತ ಪೂಜೆಗಾಗಿ ದಂಪತಿಯ ಜೋಡಿ ಫೊಟೊದೊಂದಿಗೆ 61 ಗ್ರಾಂ ಬಂಗಾರವನ್ನು ತರುವಂತೆ ಮಹಿಳೆಗೆ ಸೂಚಿಸಿದ್ದಾನೆ. ಮಹಿಳೆ ತನ್ನ ಬಳಿ 51 ಗ್ರಾಂ ಚಿನ್ನ, ಮಾಂಗಲ್ಯ ಸರ ಮತ್ತು ಎರಡು ಉಂಗುರ ಮಾತ್ರ ಇರುವುದಾಗಿ ತಿಳಿಸಿದಾಗ, ಇನ್ನೂ 10 ಗ್ರಾಂ ಚಿನ್ನವನ್ನು ತರುವಂತೆ ಆತ ಒತ್ತಾಯಿಸಿದ್ದಾನೆ. ಅದರಂತೆ ಮಹಿಳೆ ತಮ್ಮ ಸ್ನೇಹಿತೆಯೊಬ್ಬರಿಂದ 10 ಗ್ರಾಂ ಚಿನ್ನ ಪಡೆದು ಒಟ್ಟು 61 ಗ್ರಾಂ ಚಿನ್ನಾಭರಣಗಳನ್ನು ಅ.23ರಂದು ತಂದು ಕೊಟ್ಟಿದ್ದಾರೆ. ವಂಚಕ ಈ ಎಲ್ಲ ಆಭರಣಗಳು ಮತ್ತು ಜೋಡಿ ಫೋಟೊವನ್ನು ಒಂದು ಮಡಿಕೆಯಲ್ಲಿ ಇಟ್ಟು, ಕೆಂಪು ದಾರದಿಂದ ಕಟ್ಟಿ, ಮಂತ್ರ ಪಠಿಸಿ ಮುಚ್ಚಿಟ್ಟಿದ್ದಾನೆ. ಈ ಮಡಕೆಯನ್ನು ರಹಸ್ಯವಾದ ಜಾಗದಲ್ಲಿ ಇಡುವಂತೆ ಹಾಗೂ ಈ ವಿಚಾರವನ್ನು ಪತಿಗೆ ತಿಳಿಸಬಾರದೆಂದು, ತಿಳಿಸಿದರೆ ಪೂಜೆಯ ಶಕ್ತಿ ಫಲಿಸುವುದಿಲ್ಲವೆಂದು ಹೇಳಿದ್ದಾನೆ. ಅಲ್ಲದೆ, ಐದು ದಿನಗಳ ಕಾಲ ಪೂಜೆ ಮಾಡಿದ ನಂತರ ಅಂದರೆ ಅ.28ರಂದು ಮಡಕೆಯನ್ನು ತೆರೆದರೆ ಕೆಲಸ ಖಚಿತವಾಗಿ ಆಗುತ್ತದೆ ಎಂದು ನಂಬಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಅದೇ ರೀತಿ ಮಹಿಳೆ ಮಡಕೆಯನ್ನು ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ಆದರೆ, ಅ.25ರಂದು ಮಹಿಳೆಗೆ ಅನುಮಾನ ಬಂದು ಮಡಕೆಯನ್ನು ತೆರೆದು ನೋಡಿದಾಗ, ಒಳಗಡೆ ಚಿನ್ನಾಭರಣದ ಬದಲಿಗೆ ಮಣ್ಣಿನ ತುಂಡುಗಳು ಇರುವುದು ಕಂಡುಬಂದಿದೆ. ಇದರಿಂದ ಗಾಬರಿಗೊಂಡ ಮಹಿಳೆ ತಕ್ಷಣ ಜ್ಯೋತಿಷ್ಯಾಲಯಕ್ಕೆ ಫೋನ್ ಮಾಡಿದ್ದಾರೆ ಆದರೆ ವಂಚಕನ ಫೋನ್ ಸ್ವಿಚ್ ಆಫ್ ಆಗಿದೆ ಎಂದು ಹೇಳಲಾಗಿದೆ.
ಮಾಟ, ಮಂತ್ರ, ಮಕ್ಕಳಿಲ್ಲದಿರುವ ಸಮಸ್ಯೆ, ಶತ್ರುಗಳಿಂದ ತೊಂದರೆ, ಗಂಡ-ಹೆಂಡತಿ ಕಲಹ, ವಶೀಕರಣ ಇತ್ಯಾದಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವುದಾಗಿ ಸಾರ್ವಜನಿಕರನ್ನು ನಂಬಿಸಿ ಈ ವ್ಯಕ್ತಿ ಹಣ ಮತ್ತು ಒಡವೆಗಳನ್ನು ಪಡೆದು ವಂಚನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ವಂಚನೆಗೊಳಗಾದ ಮಹಿಳೆ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.







