Shivamogga | ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಮಗು ಮೃತ್ಯು: ವ್ಯರ್ಥವಾದ ಝೀರೋ ಟ್ರಾಫಿಕ್ ವ್ಯವಸ್ಥೆ

ಶಿವಮೊಗ್ಗ: ತೀವ್ರ ಉಸಿರಾಟ ಹಾಗೂ ಜ್ವರದ ಸಮಸ್ಯೆಯಿಂದ ಬಳಲುತ್ತಿದ್ದ ಮೂರೂವರೆ ತಿಂಗಳ ಹೆಣ್ಣುಮಗು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಗುರುವಾರ ರಾತ್ರಿ ಶಿವಮೊಗ್ಗದಲ್ಲಿ ನಡೆದಿದೆ.
ಕೊಪ್ಪಳ ಜಿಲ್ಲೆಯ ಯಲಬುರಗಿಯ ಪವಿತ್ರಾ ಮತ್ತು ಹನುಮೇಶ್ ದಂಪತಿಯ ಮೊದಲ ಮಗು ಅನ್ವಿಕಾ ಮೃತಪಟ್ಟ ಮಗು.
ಕೆಲ ದಿನಗಳಿಂದ ಅನ್ವಿಕಾ ಜ್ವರ ಮತ್ತು ಕಫದಿಂದಾಗಿ ತೀವ್ರ ಉಸಿರಾಟದಿಂದ ಬಳಲುತ್ತಿದ್ದಳು. ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ಝೀರೋ ಟ್ರಾಫಿಕ್ ವ್ಯವಸ್ಥೆಯ ಮೂಲಕ ರವಾನಿಸಲಾಗುತ್ತಿತ್ತು.
ಝೀರೋ ಟ್ರಾಫಿಕ್ ವ್ಯವಸ್ಥೆ:
ಮಗುವಿನ ತುರ್ತು ಚಿಕಿತ್ಸೆಗಾಗಿ ದಾವಣಗೆರೆ, ಶಿವಮೊಗ್ಗ ಹಾಗೂ ಉಡುಪಿ ಜಿಲ್ಲಾ ಪೊಲೀಸರು ಗುರುವಾರ ರಾತ್ರಿ ಝೀರೋ ಟ್ರಾಫಿಕ್ ವ್ಯವಸ್ಥೆಗೆ ಸಿದ್ಧತೆ ಮಾಡಿಕೊಂಡಿದ್ದರು. ಹೊನ್ನಾಳಿಯಿಂದ ಶಿವಮೊಗ್ಗದ ವರೆಗೆ ಸಂಚಾರ ಪೊಲೀಸರು ಆಂಬುಲೆನ್ಸ್ ಗೆ ದಾರಿ ಮಾಡಿಕೊಟ್ಟರು. ಆದರೆ ದಾವಣಗೆರೆಯಿಂದ ಹೊರಟ ಆಂಬುಲೆನ್ಸ್ ಅರ್ಧ ದಾರಿ ತಲುಪಿದಾಗ ಟೈರ್ ಪಂಕ್ಚರ್ ಆಯಿತು. ಚಕ್ರ ಬದಲಿಸಲು ಸುಮಾರು 20 ನಿಮಿಷ ತಡವಾಗಿದ್ದರಿಂದ ಮಗುವಿನ ಉಸಿರಾಟದ ಸಮಸ್ಯೆ ಮತ್ತಷ್ಟು ಗಂಭೀರವಾಯಿತು. ಇದರಿಂದ ಶಿವಮೊಗ್ಗದ ಸರ್ಜಿ ಆಸ್ಪತ್ರೆಗೆ ಕರೆತರಲು ನಿರ್ಧರಿಸಲಾಯಿತು. ಮೊದಲೇ ಮಾಹಿತಿ ಪಡೆದಿದ್ದ ಶಿವಮೊಗ್ಗದ ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಸಿಬ್ಬಂದಿ ತುರ್ತು ಚಿಕಿತ್ಸೆಗೆ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಆಸ್ಪತ್ರೆಗೆ ತಲುಪಿ ಚಿಕಿತ್ಸೆ ಆರಂಭವಾಗುವಷ್ಟರಲ್ಲಿ ಅನ್ವಿಕಾ ಕೊನೆಯುಸಿರೆಳೆದಿದ್ದಳು.
ಮಗುವನ್ನು ಉಳಿಸಲು ಪೊಲೀಸರು ಮತ್ತು ಸಾರ್ವಜನಿಕರು ಪಟ್ಟ ಶ್ರಮ ಫಲ ನೀಡಿಲಿಲ್ಲ. ರಾತ್ರಿಯೇ ಪೋಷಕರು ಮಗುವಿನ ಮೃತದೇಹವನ್ನು ತಮ್ಮೂರಿಗೆ ಕೊಂಡೊಯ್ದಿದ್ದಾರೆಂದು ಮೂಲಗಳು ತಿಳಿಸಿವೆ.






