ಶಿಕಾರಿಪುರದಲ್ಲಿ ಕಾಂಗ್ರೆಸ್‌ನ ಬೃಹತ್ ಪಾದಯಾತ್ರೆ; ‘ಭಾರತ್ ಜೋಡೋ 2.0’ಗೆ ಅಧಿಕೃತ ಚಾಲನೆ

ಶಿವಮೊಗ್ಗ: ಬಿಜೆಪಿಯ ಭದ್ರಕೋಟೆ ಶಿಕಾರಿಪುರದಲ್ಲಿ ಕಾಂಗ್ರೆಸ್ ಪಕ್ಷವು ಬೃಹತ್ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದು, 'ಭಾರತ್ ಜೋಡೋ 2.0' ಪಾದಯಾತ್ರೆಗೆ ಅಧಿಕೃತ ಚಾಲನೆ ಸಿಕ್ಕಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಹಾಗೂ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವರ ತವರು ಕ್ಷೇತ್ರದಲ್ಲಿಯೇ ತಿರುಗೇಟು ನೀಡಲು ಕಾಂಗ್ರೆಸ್ ಈ ಬೃಹತ್ ಪಾದಯಾತ್ರೆಯನ್ನು ಹಮ್ಮಿಕೊಂಡಿದೆ.
ಶಿಕಾರಿಪುರ ತಾಲೂಕಿನ ಕಿಟ್ಟದಹಳ್ಳಿಯಿಂದ ಪಾದಯಾತ್ರೆ ಆರಂಭಗೊಂಡಿದ್ದು, ಸೇವಾದಳದ ಬಾವುಟವನ್ನು ಹಾರಿಸುವ ಮೂಲಕ ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಯಾತ್ರೆಗೆ ಚಾಲನೆ ನೀಡಿದರು.
ಬಿಜೆಪಿಯ ಬಳ್ಳಾರಿ ಪಾದಯಾತ್ರೆಗೆ ಪ್ರತಿಯಾಗಿ ಶಿಕಾರಿಪುರದಿಂದಲೇ ಈ ಭಾರತ್ ಜೋಡೋ 2.0 ಯಾತ್ರೆಯನ್ನು ಆರಂಭಿಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಈ ಪಾದಯಾತ್ರೆಯು ಕಿಟ್ಟದಹಳ್ಳಿಯಿಂದ ಆರಂಭವಾಗಿ ಕೋಟೆ, ಹೊಸನಗರ ಕ್ರಾಸ್ ಹಾಗೂ ನೆಲವೊಡ್ಲು ಮಾರ್ಗವಾಗಿ ಒಟ್ಟು 9 ಕಿಲೋಮೀಟರ್ ಸಾಗಲಿದೆ. ಪಾದಯಾತ್ರೆ ಮುಕ್ತಾಯಗೊಂಡ ಬಳಿಕ ಶಿಕಾರಿಪುರದ ಎಪಿಎಂಸಿ ಆವರಣದಲ್ಲಿ ಬೃಹತ್ ಬಹಿರಂಗ ಸಮಾವೇಶ ನಡೆಯಲಿದೆ.
ಈ ಬೃಹತ್ ಪಾದಯಾತ್ರೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ. ಕೆ. ಹರಿಪ್ರಸಾದ್, ಶಾಸಕ ಕೆ. ಎಸ್. ಬಸವಂತಪ್ಪ ಹಾಗೂ ಡಾ. ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಹಲವು ಪ್ರಮುಖ ನಾಯಕರು ಭಾಗವಹಿಸಿದ್ದಾರೆ.
ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ದೆಹಲಿಯಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭಾಗಿಯಾಗಿರುವ ಹಿನ್ನಲೆಯಲ್ಲಿ ತಡವಾಗಿ ಪಾದಯಾತ್ರೆಯಲ್ಲಿ ಭಾಗಿಯಾದರು.
ಶಿಕಾರಿಪುರದಂತಹ ಬಿಜೆಪಿ ಭದ್ರಕೋಟೆಯಲ್ಲೇ ಕಾಂಗ್ರೆಸ್ ಈ ಮಟ್ಟದ ಬೃಹತ್ ಶಕ್ತಿ ಪ್ರದರ್ಶನಕ್ಕೆ ಇಳಿದಿರುವುದು ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ.






