ರೈತನಿಗೆ ಪರಿಹಾರ ನೀಡಲು ವಿಳಂಬ; ಶಿವಮೊಗ್ಗ ಜಿಲ್ಲಾಧಿಕಾರಿ ಕಾರು ಜಪ್ತಿಗೆ ನ್ಯಾಯಾಲಯ ಆದೇಶ

ಸಾಂದರ್ಭಿಕ ಚಿತ್ರ
ಶಿವಮೊಗ್ಗ : ರೈತರೊಬ್ಬರಿಗೆ ಪರಿಹಾರ ನೀಡಲು ವಿಳಂಬ ಮಾಡಿದ್ದಕ್ಕಾಗಿ ಶಿವಮೊಗ್ಗ ಜಿಲ್ಲಾಧಿಕಾರಿಯ ಕಾರು ಜಪ್ತಿ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ.
ವಸತಿ ಯೋಜನೆಗಾಗಿ ಹರಮಘಟ್ಟದ ಕೃಷಿಕ ನಂದಾಯಪ್ಪ ಎಂಬವರ ಒಂದು ಎಕರೆ ಜಮೀನನ್ನು 1992ರಲ್ಲಿ ಸರಕಾರ ವಶಕ್ಕೆ ಪಡೆದಿತ್ತು. ಇದಕ್ಕೆ 22 ಲಕ್ಷ ರೂ. ಪರಿಹಾರ ನೀಡುವುದಾಗಿ ತಿಳಿಸಿದ್ದ ಸರಕಾರ ಕೇವಲ 9 ಲಕ್ಷ ರೂ. ನೀಡಿತ್ತು. ಬಾಕಿ ಹಣಕ್ಕಾಗಿ ರೈತ ನಂದಾಯಪ್ಪ ಕಚೇರಿಗೆ ಅಲೆದಾಡಿದರೂ ಫಲ ಸಿಕ್ಕಿರಲಿಲ್ಲ. ಕೊನೆಗೆ ನಂದಾಯಪ್ಪ ಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಎರಡನೇ ಹಿರಿಯ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯ 95,88,283 ರೂ. ಪರಿಹಾರವನ್ನು ಪಾವತಿಸುವಂತೆ ಸೂಚಿಸಿತ್ತು.
ನ್ಯಾಯಾಲಯದ ಆದೇಶವಾಗಿದ್ದರೂ ಪರಿಹಾರ ನೀಡದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಬಳಸುತ್ತಿರುವ ಕಾರು ಜಪ್ತಿ ಮಾಡುವಂತೆ ಶಿವಮೊಗ್ಗದ ಎರಡನೇ ಹಿರಿಯ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯ ಆದೇಶಿಸಿದೆ.
ಒಳಗಡೆ ಸಚಿವರ ಸಭೆ: ಜಪ್ತಿಗೆ ಬಂದ ಕೋರ್ಟ್ ಅಮೀನರು
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅಧ್ಯಕ್ಷತೆಯಲ್ಲಿ ಅಡಿಕೆ ಬೆಳೆಗೆ ಕೊಳೆ ರೋಗ, ಎಲೆ ಚುಕ್ಕಿ ರೋಗಗಳ ಕುರಿತಂತೆ ಸಂಬಂಧಿಸಿದ ಇಲಾಖೆಗಳ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಹಾಗೂ ಸುದ್ದಿಗೋಷ್ಠಿ ನಡೆಯುತ್ತಿತ್ತು. ಅದೇ ಸಂದರ್ಭದಲ್ಲಿ ಕೋರ್ಟ್ ಅಮೀನರು ನ್ಯಾಯಾಲಯದ ಆದೇಶ ಪ್ರತಿ ಹಿಡಿದುಕೊಂಡು ಜಿಲ್ಲಾಧಿಕಾರಿ ಕಾರು ಜಪ್ತಿಗೆ ಬಂದಿದ್ದರು.
ಸಂತ್ರಸ್ತ ನಂದಾಯಪ್ಪನವರು ಮಾತನಾಡಿ, ಪರಿಹಾರಕ್ಕಾಗಿ, ನ್ಯಾಯಾಲಯದ ಹೋರಾಟಕ್ಕಾಗಿ ನಾನು ನನ್ನ ಇನ್ನೊಂದು ಎಕರೆ ಜಮೀನನ್ನೂ ಕಳೆದುಕೊಳ್ಳಬೇಕಾಯಿತು. ನನಗೆ ವಯಸ್ಸಾಗಿದ್ದು, ಕಾಯಿಲೆಯಿಂದ ಬಳಲುತ್ತಿದ್ದೇನೆ. ಬೆಂಗಳೂರು, ಶಿವಮೊಗ್ಗ ಮತ್ತು ನ್ಯಾಯಾಲಯಕ್ಕೆ ಓಡಾಡಿ ಸುಸ್ತಾಗಿದ್ದು, ಆದರೂ ಅಧಿಕಾರಿಗಳು ಕರುಣೆ ತೋರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅಂತಿಮವಾಗಿ ಜಿಲ್ಲಾಧಿಕಾರಿಯವರು, ನ್ಯಾಯಾಲಯಕ್ಕೆ ಮತ್ತೊಮ್ಮೆ ಪರಿಹಾರ ವಿತರಣೆಗೆ ಗಡುವು ಮುಂದುವರಿಸುವಂತೆ ಪತ್ರನೀಡಿದರು.







