ಆಟಕ್ಕುಂಟು, ಲೆಕ್ಕಕ್ಕೆ ಇಲ್ಲ ಎನ್ನುವಂತೆ ಕೆಲಸ ಮಾಡುತ್ತಿರುವ ಬಿಜೆಪಿ ಸಂಸದರು: ಡಿಸಿಎಂ ಡಿ.ಕೆ. ಶಿವಕುಮಾರ್

ಶಿವಮೊಗ್ಗ, ಜ.30: ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಕರ್ನಾಟಕದ ವಿರುದ್ಧ ಮಲತಾಯಿ ಧೋರಣೆ ಮುಂದುವರಿದಿದ್ದರೂ ಬಿಜೆಪಿ ಸಂಸದರು ಹಾಗೂ ಕೇಂದ್ರ ಸಚಿವರು ಯಾರೂ ದನಿ ಎತ್ತಿಲ್ಲ. ಆಟಕ್ಕುಂಟು, ಲೆಕ್ಕಕ್ಕೆ ಇಲ್ಲ ಎನ್ನುವಂತೆ ಅವರು ಕೆಲಸ ಮಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಿಜೆಪಿ ವಿರುದ್ಧ ತೀವ್ರ ವ್ಯಂಗ್ಯವಾಡಿದರು.
ಶಿವಮೊಗ್ಗದ ಸರ್ಕಿಟ್ ಹೌಸ್ ಬಳಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಕೇಂದ್ರ ಬಜೆಟ್ ಕುರಿತು ತಮ್ಮ ಅಸಮಾಧಾನ ವ್ಯಕ್ತಪಡಿಸಿದ ಅವರು “ಕೇಂದ್ರ ಬಜೆಟ್‌ನಲ್ಲಿ ಕೊಟ್ಟ ಮಾತನ್ನೇ ಉಳಿಸಿಕೊಂಡಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ನೀಡುವುದಾಗಿ ಹೇಳಿ ಇನ್ನೂ ಅನುದಾನ ಬಿಡುಗಡೆ ಮಾಡಿಲ್ಲ” ಎಂದರು.
ಕಾಂಗ್ರೆಸ್ ಭ್ರಷ್ಟಾಚಾರ ಎಂದು ಆರೋಪಿಸಿ ಬಿಜೆಪಿ ಪೋಸ್ಟರ್ ಅಭಿಯಾನ ನಡೆಸುತ್ತಿರುವುದು ಹಾಗೂ ತಿಮ್ಮಾಪುರ ಅವರ ರಾಜಿನಾಮೆಗೆ ಪಟ್ಟು ಹಿಡಿದಿರುವ ಕುರಿತು ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್, “ಬಿಜೆಪಿಯವರ ಹಗರಣಗಳನ್ನು ನಾವು ಸಹ ಸಾಕಷ್ಟು ಬಿಚ್ಚಿದ್ದೇವೆ. ಕೋವಿಡ್ ಸೇರಿದಂತೆ ಹಿಂದಿನ ಅವಧಿಯ ಅನೇಕ ಆರೋಪಗಳಿವೆ. ಅವುಗಳನ್ನು ಬಯಲು ಮಾಡೋಣ. ರಾಜಕೀಯ ಮಾಡಬೇಕಲ್ಲ ಎಂದು ಮಾಡುತ್ತಿದ್ದಾರೆ. ಏನೋ ಒಂದು ಬೇಕಲ್ಲ ಅವರಿಗೆ. ಇದರ ಬಗ್ಗೆ ತನಿಖೆ ಮುಗಿಯಲಿ” ಎಂದರು.
ಮನರೇಗಾ ಕುರಿತು ವಿಶೇಷ ಅಧಿವೇಶನ ವಿಸ್ತರಿಸಿರುವ ಬಗ್ಗೆ ಮಾತನಾಡಿದ ಅವರು, “ಮನರೇಗಾ ವಿಚಾರವನ್ನು ಕಾರ್ಯಕಲಾಪ ಸಲಹಾ ಸಮಿತಿ ಮುಂದೆ ಇಟ್ಟು ಚರ್ಚಿಸಲಾಗಿದೆ. ವಿಬಿ ಗ್ರಾಮ ಜಿ ಕಾಯ್ದೆಯನ್ನು ಏಕೆ ರದ್ದು ಮಾಡಬೇಕು ಎಂಬುದನ್ನು ವಿವರಿಸುತ್ತೇವೆ. ಈಗಿರುವ ಪರಿಸ್ಥಿತಿಯಲ್ಲಿ ಯಾವುದೇ ರಾಜ್ಯದಲ್ಲಿಯೂ ಇದನ್ನು ಜಾರಿಗೆ ತರುವುದು ಸಾಧ್ಯವಿಲ್ಲ. ನಾಲ್ಕೈದು ತಿಂಗಳು ಕೃಷಿ ಕೆಲಸದ ಕಾಲವಾಗಿದ್ದು, ಈ ಸಮಯದಲ್ಲಿ ರೈತರು ತಮ್ಮ ಕೂಲಿಯನ್ನು ಪಡೆಯುತ್ತಾರೆ. ಇಂತಹ ಸಂದರ್ಭದಲ್ಲಿ ನರೇಗಾ ಯೋಜನೆ ಕೈಬಿಟ್ಟರೆ ಯಾರಿಗೂ ಪ್ರಯೋಜನವಿಲ್ಲ” ಎಂದು ಹೇಳಿದರು.
ಮಾನವ ದಿನಗಳನ್ನು 125 ದಿನಗಳಿಗೆ ಹೆಚ್ಚಳ ಮಾಡಿದ್ದೇವೆ ಎಂದು ಹೇಳಲಾಗುತ್ತಿದೆಯಾದರೂ, ಇತರ ಸಮಯದಲ್ಲಿ ಅಷ್ಟೊಂದು ದಿನಗಳ ಕಾಲ ಕೆಲಸ ನೀಡಲು ಸಾಧ್ಯವಿಲ್ಲ. ಇದರಿಂದ ಪ್ರತಿಯೊಂದು ಪಂಚಾಯತಿಗೆ ತಲಾ 1 ರಿಂದ 1.5 ಕೋಟಿ ರೂ. ಅನುದಾನ ನಷ್ಟವಾಗುತ್ತಿದ್ದು, ಜಾಬ್ ಕಾರ್ಡ್ ಹೊಂದಿರುವವರಿಗೂ ಹಾನಿಯಾಗಿದೆ ಎಂದು ಅವರು ತಿಳಿಸಿದರು.
ಮಂಗನ ಕಾಯಿಲೆಯಿಂದ ಮೃತಪಟ್ಟವರಿಗೆ ಸರ್ಕಾರದಿಂದ ಪರಿಹಾರ ನೀಡಲಾಗುವುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಈ ಕುರಿತು ಪರಿಶೀಲಿಸಿ ಮಾಹಿತಿ ನೀಡುತ್ತೇನೆ” ಎಂದು ಹೇಳಿದರು.







