ಸಾಗರ ನಗರಸಭೆ ಸದಸ್ಯ ಟಿಪ್ ಟಾಪ್ ಬಶೀರ್ ಮನೆ ಮೇಲೆ ಈ.ಡಿ. ದಾಳಿ

ಸಾಗರ: ಉದ್ಯಮಿ ಹಾಗೂ ಸಾಗರ ನಗರಸಭಾ ಸದಸ್ಯ ಟಿಪ್ ಟಾಪ್ ಬಶೀರ್ ಅವರ ಕೆಳದಿ ರಸ್ತೆಯಲ್ಲಿರುವ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ(ಈಡಿ)ದ ಅಧಿಕಾರಿಗಳು ಶುಕ್ರವಾರ ಮುಂಜಾನೆ ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಮುಖಂಡರಾಗಿರುವ ಬಶೀರ್ ಮನೆಗೆ ಒಟ್ಟು ಏಳು ಜನ ಅಧಿಕಾರಿಗಳ ನೇತೃತ್ವದ ತಂಡ ಶುಕ್ರವಾರ ಬೆಳಗ್ಗೆ ದಾಳಿ ನಡೆಸಿದೆ. ತಂಡವು ಸತತ 18 ಗಂಟೆಗೂ ಹೆಚ್ಚು ಕಾಲ ದಾಖಲೆಗಳ ಪರಿಶೀಲನೆ ನಡೆಸಿದೆ ಎಂದು ತಿಳಿದುಬಂದಿದೆ.
ಈ ದಾಳಿ ಹೋಟೆಲ್ ವ್ಯವಹಾರಕ್ಕೆ ಸಂಬಂಧಿಸಿದ್ದಾಗಿರಬಹುದು ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಟಿಪ್ ಟಾಪ್ ಬಶೀರ್, "ಶುಕ್ರವಾರ ಬೆಳಗ್ಗೆ ಏಳು ಮಂದಿ ಈ.ಡಿ. ಅಧಿಕಾರಿಗಳು ನನ್ನ ಮನೆಗೆ ಬಂದಿದ್ದು, ಹೋಟೆಲ್ ವ್ಯವಹಾರದ ಬಗ್ಗೆ ಹಾಗೂ ಪಾಲುದಾರಿಕೆ ಹೊಂದಿದ್ದ ನಾವುಂದ ಇಕ್ಬಾಲ್ ರ ಹೇಳಿಕೆ ಮೇರೆಗೆ ಕೆಲವು ದಾಖಲಾತಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿದ ಮೇರೆಗೆ ಅವರು ತೆರಳಿದ್ದಾರೆ'' ಎಂದು ಹೇಳಿದ್ದಾರೆ.
Next Story





