ರೈತರು ಕೃಷಿ ಮೇಳದ ಸದುಪಯೋಗ ಪಡೆದುಕೊಳ್ಳಲಿ : ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ : ಕೃಷಿ ಮೇಳದಲ್ಲಿ ಲಕ್ಷಾಂತರ ರೈತರು, ಮಹಿಳೆಯರು ಹಾಗೂ ಯುವಕರು ಭಾಗವಹಿಸುತ್ತಿರುವುದು ಮೇಳದ ಬೃಹತ್ ಯಶಸ್ಸಿಗೆ ಸಾಕ್ಷಿಯಾಗಿದೆ. ಮೇಳದಲ್ಲಿ ರೈತರು ಬರ ನಿರ್ವಹಣೆ, ಆಧುನಿಕ ಕೃಷಿ ಪದ್ಧತಿ ಬಗ್ಗೆ ಮಾಹಿತಿ ಪಡೆದು ಅಳವಡಿಸಿಕೊಳ್ಳಬೇಕೆಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ‘ಬರ ನಿರ್ವಹಣೆಗಾಗಿ ನಾವೀನ್ಯತಾ ಕೃಷಿ’ ಎಂಬ ಧ್ಯೇಯವಾಕ್ಯದೊಂದಿಗೆ ನವುಲೆ ಕೃಷಿ ಕಾಲೇಜು ಆವರಣದಲ್ಲಿ ಅ.31ರಿಂದ ನ.2ರವರೆಗೆ ಆಯೋಜಿಸಲಾಗಿರುವ ‘ಕೃಷಿ ಮತ್ತು ತೋಟಗಾರಿಕೆ ಮೇಳ-2026’ ಕಾರ್ಯಕ್ರಮದಲ್ಲಿ ಶನಿವಾರ ಪಾಲ್ಗೊಂಡು ರೈತರ ಯಶೋಗಾಥೆ, ಡಿಜಿಟಲ್ ಕೃಷಿ ಪುಸ್ತಕ ಮತ್ತು ಕೃಷಿ ಆ್ಯಪ್ಸ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕೃಷಿ ಮತ್ತು ತೋಟಗಾರಿಕಾ ಮೇಳಕ್ಕೆ 5-6 ಲಕ್ಷ ಜನ ಭೇಟಿ ನೀಡುತ್ತಿದ್ದು, ಮೇಳದ ಯಶಸ್ಸಿಗೆ ಜನರೇ ಸಾಕ್ಷಿಯಾಗಿದ್ದಾರೆ. ಈ ವಿಶ್ವವಿದ್ಯಾಲಯದಲ್ಲಿ ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾವೇರಿ ಹಾಗೂ ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಿಂದ ಬರುವ ರೈತರಿಗೆ ಮತ್ತು ವಿದ್ಯಾರ್ಥಿಗಳಿಗೆ ಉತ್ತಮ ವ್ಯವಸ್ಥೆಗಳನ್ನು ಮಾಡಲಾಗಿದ್ದು, ರೈತರು ಇದರ ಸದುಪಯೋಗ ಪಡೆಯಬೇಕೆಂದರು.
ಸಚಿವ ಕೆ. ಎಸ್. ಬಸವಂತಪ್ಪಮಾತನಾಡಿ, ಕೃಷಿ ಕ್ಷೇತ್ರದಲ್ಲಿ ಬದಲಾವಣೆಗಳನ್ನು ತರುವ ಮೂಲಕ ರೈತರ ಜೀವನೋಪಾಯವನ್ನು ಸುಧಾರಿಸಲು ಮತ್ತು ಕೃಷಿಯನ್ನು ಉದ್ಯಮವನ್ನಾಗಿ ಪರಿವರ್ತಿಸಲು ಸರಕಾರ ಹಾಗೂ ವಿಜ್ಞಾನಿಗಳು ಜಂಟಿಯಾಗಿ ಶ್ರಮಿಸಬೇಕಿದೆ ಎಂದರು.
ಕುಲಸಚಿವ ಡಾ.ಶಾಮರಾವ ಜಹಾಗೀರದಾರ ಸ್ವಾಗತ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಸೂಡಾ ಅಧ್ಯಕ್ಷ ಜಿ.ಸಿ.ಮಧುಸೂದನ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್, ಶಿವಮೊಗ್ಗ ಕುಲಪತಿಗಳಾದ ಡಾ. ಎಮ್. ವಿ. ಧನಂಜಯ, ಕೃಷಿಕ ಸಮಾಜದ ಅಧ್ಯಕ್ಷ ನಗರ ಮಹಾದೇವಪ್ಪ, ಪ್ರಗತಿಪರ ರೈತರು ಮತ್ತು ವ್ಯವಸ್ಥಾಪನಾ ಮಂಡಳಿ ಸದಸ್ಯ ದೇವಿಕುಮಾರ್ ಶಶಾಂಕ್, ಉದ್ದಿಮೆದಾರ ಯೋಗೇಶ್ವರ್, ಶಿಕ್ಷಣ ತಜ್ಞರು, ಡಾ.ಬಸವರಾಜ್ ಶಿಕ್ಷಣ ನಿರ್ದೇಶಕರು, ವಿಜ್ಞಾನಿಗಳು, ಅಧಿಕಾರಿಗಳು, ವಿದ್ಯಾರ್ಥಿಗಳು ಹಾಜರಿದ್ದರು.
‘ಬಿಜೆಪಿ ಹೋರಾಟ ರೈತರ ವಿರುದ್ಧವೇ?’ :
ಹಾಲಿನ ದರವನ್ನು 8 ರೂ. ಹೆಚ್ಚಳ ಮಾಡಲಾಗಿದ್ದು, ಇದರಲ್ಲಿ 7 ರೂ. ರೈತರಿಗೆ ತಲುಪುತ್ತದೆ. ಹಾಗಿದ್ದ ಮೇಲೆ ಬಿಜೆಪಿ ಹೋರಾಟ ಯಾರ ವಿರುದ್ಧ. ರೈತರ ವಿರುದ್ಧವೇ ಎಂದು ಸಚಿವ ಮಧು ಬಂಗಾರಪ್ಪ ಪ್ರಶ್ನಿಸಿದ್ದಾರೆ.
ಶನಿವಾರ ಆಯುಷ್ ಇಲಾಖೆಯ ಆಡಳಿತ ಕಚೇರಿಯನ್ನು ಉದ್ಘಾಟಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ನನಗೆ ತಿಳಿದಿರುವ ಪ್ರಕಾರ 10 ವರ್ಷಗಳ ಹಿಂದೆ ಹಾಲಿನ ದರ ಹೆಚ್ಚಳ ಮಾಡಿದ್ದು, ಅದರ ಹೊರತಾಗಿ ಈಗ ಹೆಚ್ಚಳ ಆಗಿದೆ. ಇದರಿಂದ ಗ್ರಾಹಕರಿಗೆ ಸ್ವಲ್ಪ ಮಟ್ಟಿಗೆ ಹೊರೆ ಆಗಬಹುದು. ಆದರೆ ರೈತರಿಗೆ ಹೆಚ್ಚು ಅನುಕೂಲ ಆಗಲಿದೆ. ಹೀಗಿರುವಾಗ ಬಿಜೆಪಿಯವರು ದರ ಹೆಚ್ಚಳ ಸಂಬಂಧಿಸಿದಂತೆ ಹೋರಾಟ ಮಾಡುತ್ತಿಲ್ಲ, ರೈತರ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂದು ಕುಟುಕಿದರು.
ಕಬ್ಬು ಬೆಳೆಗೆ ಎಂಎಸ್‌ಪಿಕೊಡಬೇಕು. ರಾಜ್ಯ ಹಾಗೂ ಕೇಂದ್ರ ಸರಕಾರ ಇಬ್ಬರು ಸೇರಿ ಬೆಲೆಯನ್ನು ಕೊಡಬೇಕಾಗುತ್ತದೆ. ಈ ಕುರಿತು ಸಿಎಂ ರೈತರ ಜೊತೆ ಮಾತನಾಡಿದ್ದಾರೆ. ಆದಷ್ಟು ಬೇಗ ಕಬ್ಬು ಬೆಳೆಗಾರರ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ.
-ಮಧು ಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವ






