ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ 3 ತಿಂಗಳು ವಿಮಾನ ಹಾರಾಟ ಸ್ಥಗಿತ: ನಂಜಯ್ಯನಮಠ್

ಶಿವಮೊಗ್ಗ: ಉಡಾನ್ ಯೋಜನೆ (UDAN - Ude Desh ka Aam Nagrik)) ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣದಲ್ಲಿ ಮುಂದಿನ ಮೂರು ತಿಂಗಳುಗಳ ಕಾಲ ವಿಮಾನ ಹಾರಾಟ ಇರುವುದಿಲ್ಲ ಎಂದು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ನಂಜಯ್ಯನಮಠ್ ಹೇಳಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2026ಕ್ಕೆ ಉಡಾನ್ ಯೋಜನೆ ಮುಗಿಯಲಿದ್ದು, ನ.21ರಿಂದ ವಿಮಾನ ಹಾರಾಟ ಸ್ಥಗಿತಗೊಳ್ಳಲಿದೆ ಎಂದರು.
ಉಡಾನ್ ಯೋಜನೆಯನ್ನು ಮುಂದುವರೆಸುವಂತೆ ರಾಜ್ಯದ ಅಧಿಕಾರಿಗಳು ದಿಲ್ಲಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಲಾಗಿದೆ. ಇದರಿಂದ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಪುನಃ ವಿಮಾನ ಪ್ರಾರಂಭವಾಗಬೇಕಾದರೆ ಅಂದಾಜು ಕನಿಷ್ಠ ಮೂರು ತಿಂಗಳು ಬೇಕಾಗುತ್ತದೆ. ವಿಮಾನ ನಿಲ್ದಾಣವನ್ನು ಮತ್ತೆ ಸುಸ್ಥಿತಿಗೆ ತರಲು ಎಲ್ಲಾ ರೀತಿಯಿಂದ ಪ್ರಯತ್ನಿಸಲಾಗುತ್ತಿದೆ ಎಂದರು.
ಕೆಎಸ್ಐಐಡಿಸಿ ವತಿಯಿಂದ ಶಿವಮೊಗ್ಗದಿಂದ 13 ಮಾರ್ಗಗಳ ವಿಮಾನ ಹಾರಾಟಕ್ಕೆ ವಿನಂತಿಸಿಕೊಂಡಿದ್ದೇವೆ. ಶಿವಮೊಗ್ಗ- ಬೆಂಗಳೂರು, ಹೈದರಾಬಾದ್, ಗೋವಾ, ತಿರುಪತಿ, ಮುಂಬೈ, ಪುಣೆ, ಮೈಸೂರು, ಸೂರತ್, ಕೊಲ್ಲಾಪುರ, ಕೊಚ್ಚಿ, ಮಂಗಳೂರು, ಅಹ್ಮದಾಬಾದ್, ಚೆನ್ನೈ ಸೇರಿದಂತೆ ಇತರ ಮಾರ್ಗಗಳಿಗೆ ಮನವಿ ಮಾಡಲಾಗಿದೆ ಎಂದವರು ವಿರವರಿಸಿದರು.
ವಿಮಾನಯಾನ ಪ್ರಾರಂಭಿಸಲು ಸಂಸದ ರಾಘವೇಂದ್ರರನ್ನು ನಾನು ಸಂಪರ್ಕ ಮಾಡಿದ್ದೇನೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಈ ವಿಚಾರವನ್ನು ಅವರ ಪ್ರಯತ್ನಕ್ಕೆ ಬಿಡಲಾಗಿದೆ. ಉಡಾನ್ ಯೋಜನೆ ಜಾರಿ ಮಾಡಲು ವಿನಂತಿಸಿಕೊಂಡಿದ್ದೇನೆ ಎಂದು ಹೇಳಿದರು.
ನೈಟ್ ಲ್ಯಾಂಡಿಂಗ್ ಸಂಬಂಧ ಈಗಾಗಲೇ ಶೇ.95ರಷ್ಟು ಕಾಮಗಾರಿ ಮುಗಿದಿದೆ. ಇದರಿಂದ ಡಿಜಿಸಿಎ ಅವರು ಬಂದು ನೋಡಿ, ಅವರದ್ದೇ ಆದ ವಿಮಾನದ ಮೂಲಕ ಪರೀಕ್ಷೆ ನಡೆಸಿದ ನಂತರ ವರದಿ ನೀಡುತ್ತಾರೆ. ಅವರು ಕೊಟ್ಟ ಸರ್ಟಿಫಿಕೆಟ್ ಬಳಿಕ ಲ್ಯಾಂಡಿಂಗ್ ಗೆ ಅವಕಾಶ ನೀಡಲಾಗುತ್ತದೆ ಎಂದರು.
ಇದೇ ವೇಳೆ, ಬೆಂಗಳೂರು-ಶಿವಮೊಗ್ಗ ವಿಮಾನ ಹಾರಾಟವು ರಾಜ್ಯ ಸರ್ಕಾರ ವಿಜಿಎಫ್ ಯೋಜನೆಯಡಿ ಬರುತ್ತಿತ್ತು. ಇದಕ್ಕೆ ಹಣ ನೀಡಲು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶಿವಮೊಗ್ಗ ಏರ್ಪೋರ್ಟ್ ನಿರ್ದೇಶಕ ಶಂಮತ್, ಕೆಎಸ್ಐಐಡಿಸಿ ಡಿವೈಎಸ್ಪಿ ಚಂದ್ರಶೇಖರ್ ಹಾಜರಿದ್ದರು
ವಿಮಾನ ನಿಲ್ದಾಣದಲ್ಲಿ ಮೂರು ತಿಂಗಳುಗಳ ವಿಮಾನ ಹಾರಾಟ ನಿಲ್ಲಿಸಿದರೂ ಸಹ 80 ಮಂದಿ ನೌಕರರನ್ನು ಹಾಗೆಯೇ ಮುಂದುವರಿಸಿಕೊಂಡು ಹೋಗಲಾಗುತ್ತದೆ. ಮೂರು ತಿಂಗಳುಗಳ ನಂತರ ಪುನಃ ವಿಮಾನಯಾನ ಪ್ರಾರಂಭವಾಗುವ ನಿರೀಕ್ಷೆ ಇದೆ. ಇವರಿಗೆ ಪ್ರತಿ ತಿಂಗಳು 95 ಲಕ್ಷ ರೂ. ಸಂಬಳ ನೀಡಲಾಗುತ್ತದೆ. ಉಡಾನ್ ಯೋಜನೆಯಲ್ಲಿ ಶೇ.80ರಷ್ಟು ಕೇಂದ್ರ, ಶೇ.20ರಷ್ಟು ರಾಜ್ಯ ಸರ್ಕಾರ ನೀಡುತ್ತದೆ. ರಾಜ್ಯ ಸರಕಾರದ ಆರ್ಥಿಕ ನೀತಿಗಳ ಅನುಗುಣವಾಗಿ ನಡೆಸಬೇಕಾಗುತ್ತದೆ.
-ನಂಜಯ್ಯನಮಠ್






