ಶಿವಮೊಗ್ಗ | ಕೊಲೆ ಪ್ರಕರಣದಲ್ಲಿ ನಾಲ್ವರು ಯುವಕರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

ಸಾಂದರ್ಭಿಕ ಚಿತ್ರ
ಶಿವಮೊಗ್ಗ: ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಯುವಕರಿಗೆ ಜೀವಾವಧಿ ಶಿಕ್ಷೆ ವಿಧಿಸಿ, ಶಿವಮೊಗ್ಗ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜ. 16 ರಂದು ತೀರ್ಪು ನೀಡಿದೆ.
ಶಿವಮೊಗ್ಗ ನಗರದ ಮಿಳಘಟ್ಟದ ನಿವಾಸಿ ಶಹಬಾಜ್ ಷರೀಫ್ (20), ಟೆಂಪೋ ಸ್ಟ್ಯಾಂಡ್ ನಿವಾಸಿ ವಸೀಂ ಅಕ್ರಂ ಯಾನೆ ಚೆ ಉಂಗ್ಲಿ (20), ಬುದ್ದ ನಗರದ ನಿವಾಸಿ ವಸೀಂ ಅಕ್ರಮ್ ಯಾನೆ ಕಾಲಾ ವಾಸೀಂ (20) ಹಾಗೂ ಮುರಾದ್ ನಗರದ ನಿವಾಸಿ ಫಯಾಜ್ ಉಲ್ಲಾ ರೆಹಮಾನ್ ಯಾನೆ ರುಮಾನ್ (23) ಶಿಕ್ಷೆಗೊಳಗಾದ ಆರೋಪಿಗಳು.
ಶಿವಮೊಗ್ಗ ತಾಲೂಕು ಹೊಸಳ್ಳಿ ನಿವಾಸಿ, ಮೆಕಾನಿಕ್ ಕೆಲಸ ಮಾಡುತ್ತಿದ್ದ ಜಿಕ್ರುಲ್ಲಾ (28) ಎಂಬ ಯುವಕನು, ಬುದ್ದ ನಗರದಲ್ಲಿ ಕಾರ್ ಪಾರ್ಕಿಂಗ್ ವಿಚಾರದಲ್ಲಿ ಗ್ಯಾಸ್ ಇಮ್ರಾನ್ ನೊಂದಿಗೆ ಗಲಾಟೆ ಮಾಡಿಕೊಂಡಿದ್ದನು. ಹಾಗೆಯೇ ಈ ಹಿಂದೆ ಟ್ವಿಸ್ಟ್ ಇಮ್ರಾನ್ ಎಂಬುವನೊಂದಿಗೆ ಜಗಳ ಮಾಡಿಕೊಂಡಿದ್ದ.ಈ ಹಿನ್ನೆಲೆಯಲ್ಲಿ 19-3-2022 ರಂದು ಎನ್ ಟಿ ರಸ್ತೆಯ ಫಲಕ್ ಶಾದಿ ಮಹಲ್ ಪಕ್ಕದ ರಸ್ತೆಯಲ್ಲಿ ಜಿಕ್ರುಲ್ಲಾ ನನ್ನು ಶಹಬಾಜ್, ರುಮಾನ್, ವಸೀಂ, ಕಾಲಾ ವಸೀಂ ಹಾಗೂ ಇತರರು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು.
ತಕ್ಷಣವೇ ಜಿಕ್ರುಲ್ಲಾನನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ 20-3-2022 ರಂದು ಮೃತಪಟ್ಟಿದ್ದ. ಈ ಸಂಬಂಧ ಮೃತನ ಸಹೋದರ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಅಂದಿನ ತನಿಖಾಧಿಕಾರಿಯಾದ ಇನ್ಸ್ಪೆಕ್ಟರ್ ಅಂಜನ್ ಕುಮಾರ್ ಅವರು ಪ್ರಕರಣದ ತನಿಖೆ ನಡೆಸಿದ್ದರು. ಆರೋಪಿಗಳನ್ನು ಬಂಧಿಸಿದ್ದರು. ನ್ಯಾಯಾಲಯಕ್ಕೆ ಆರೋಪಪಟ್ಟಿ ದಾಖಲಿಸಿದ್ದರು
ಜೀವಾವಧಿ ಶಿಕ್ಷೆಯ ಜೊತೆಗೆ ನಾಲ್ವರು ಅಪರಾಧಿಗಳಿಗೆ ತಲಾ 30 ಸಾವಿರ ರೂಪಾಯಿ ದಂಡ ವಿಧಿಸಿ ನ್ಯಾಯಾಧೀಶರಾದ ಪಲ್ಲವಿ ಬಿ ಆರ್ ಅವರು ಆದೇಶ ಹೊರಡಿಸಿದ್ದಾರೆ. ಸರ್ಕಾರಿ ಪರವಾಗಿ ಸರ್ಕಾರಿ ಅಭಿಯೋಜಕರಾದ ಪಿ ಓ ಪುಷ್ಪಾ ಅವರು ವಾದ ಮಂಡಿಸಿದ್ದರು.







