ಮರ್ಯಾದೆಗೇಡು ಹತ್ಯೆ ತಡೆಗೆ ಕಠಿಣ ಕಾಯ್ದೆ: ಸಚಿವ ಎಚ್.ಕೆ.ಪಾಟೀಲ್

ಶಿವಮೊಗ್ಗ : ಮರ್ಯಾದೆಗೇಡು ಹತ್ಯೆ ತಡೆಗೆ ಕಠಿಣ ಹಾಗೂ ರಚನಾತ್ಮಕ ಕಾಯ್ದೆ ತರುತ್ತೇವೆ ಎಂದು ಕಾನೂನು ಸಚಿವ ಎಚ್.ಕೆ ಪಾಟೀಲ್ ಹೇಳಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಮರ್ಯಾದೆಗೇಡು ಹತ್ಯೆ ನಡೆದಿದ್ದನ್ನು ಗಮನಿಸಿದ್ದೇವೆ. ಇದು ನಾಗರಿಕ ಸಮಾಜ ತಲೆ ತಗ್ಗಿಸಲೇಬೇಕಾದ ಘಟನೆ ಎಂದು ಪ್ರತಿಕ್ರಿಯಿಸಿದರು.
ಇದು ಬಸವಣ್ಣರ ನಾಡು. 800 ವರ್ಷದ ಹಿಂದೆಯೇ ಬಸವಣ್ಣ ಇವನಮ್ಮವ ಇವನಮ್ಮವ ಎಂದು ಅಂತರ್ಜಾತಿ ವಿವಾಹ ಮಾಡಿ, ಸಮಾಜದಲ್ಲಿ ಕ್ರಾಂತಿ ಮಾಡಿದರು. ಈ ಜಾಗದಲ್ಲಿ ಮರ್ಯಾದೆಗೇಡು ಹತ್ಯೆ ಆಗೋದು ನಾಚಿಕಗೇಡು ಎಂದ ಸಚಿವರು, ಇದನ್ನು ತಡೆಯಬೇಕೆಂದು ಹೇಳಿದರು.
ದ್ವೇಷ ಭಾಷಣ ತಡೆ ಕಾಯ್ದೆ ವಿರೋಧ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಇದಕ್ಕೆ ಯಾರಾದರೂ ಯಾಕೆ ವಿರೋಧ ಮಾಡಬೇಕು?. ದ್ವೇಷ ಭಾಷಣಕ್ಕೆ ಅವಕಾಶ ಕೊಡಬೇಕಾ?. ಕಾಯ್ದೆಯಿಂದ ಸಂವಿಧಾನ ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಯಾವುದೇ ಧಕ್ಕೆ ಬರಲ್ಲ. ಯಾವುದೇ ತೊಂದರೆ ಬರಲ್ಲ ಎಂದರು.
ಕೋಗಿಲು ಬಡಾವಣೆ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಅವರದ್ದು ಅನಗತ್ಯ ರಾಜಕಾರಣ. ಬೇರೆನೂ ಇಲ್ಲ ಎಂದ ಎಚ್.ಕೆ.ಪಾಟೀಲ್, ಸಿಎಂ ಸಿದ್ದರಾಮಯ್ಯ ಅತೀ ಹೆಚ್ಚು ಕಾಲ ಸಿಎಂ ಆಗಿ ಸೇವೆ ಮಾಡುತ್ತಿದ್ದಾರೆ. ನಾಳೆ ಸಿಎಂ ಆ ದಾಖಲೆಯ ಸಾಲಿಗೆ ಸೇರುತ್ತಿದ್ದಾರೆ. ದೇವರಾಜು ಅರಸು ಅವರ ದಾಖಲೆ ಮುರಿದು ಸಿದ್ದರಾಮಯ್ಯ ಬರುತ್ತಿರುವುದು ನಮಗೆ ಹೆಮ್ಮೆಯ ವಿಷಯ ಎಂದು ಹೇಳಿದರು.







